Wednesday, 3 October 2018

ಸರ್ಪ ಮತ್ತು ಮಿಂಚು ಹುಳು

ಒಂದಾನೊಂದು ಕಾಲದಲ್ಲಿ ಒಂದು ಸರ್ಪವು ಮಿಂಚುಹುಳುವೊಂದನ್ನು ತಿನ್ನಲಿಕ್ಕೆ ಹವಣಿಸುತ್ತಿತ್ತು. ಭಯಭೀತ ಮಿಂಚುಹುಳು ಸರ್ಪದಿಂದ ತಪ್ಪಿಸಿಕೊಳ್ಳಲಿಕ್ಕೆ ಅತ್ತಿಂದಿತ್ತ ಹಾರುತ್ತಿತ್ತು. ಸರ್ಪವು ಬೆಂಬಿಡದೆ ಅದನ್ನು ಹಿಂಬಾಲಿಸುತ್ತಿತ್ತು.  ಒಂದೆರಡು ದಿನಗಳ ನಿರಂತರ ಹಾರಾಟದ ನಂತರ ಮಿಂಚುಹುಳು ದಣಿಯಿತು. ಅದು ಸರ್ಪವನ್ನು ಕೇಳಿತು, ನಾನು ನಿನಗೆ ಮೂರು ಪ್ರಶ್ನೆ ಕೇಳಲೇ ಎಂದು. ಸರ್ಪವು ಸಿಟ್ಟಿನಿಂದಲೇ ‘ಸರಿ ಸರಿ. ಯಾರಿಗೂ ಉತ್ತರಿಸುವ ಅಗತ್ಯ ನನಗಿಲ್ಲ, ನಿನ್ನನ್ನು ಹೇಗೂ ತಿಂದು ಮುಗಿಸುವವನೇ. ಪ್ರಶ್ನೆ ಕೇಳು ಪರವಾಇಲ್ಲ’ ಎಂದಿತು. ಮಿಂಚುಹುಳು ಮೊದಲ ಪ್ರಶ್ನೆಯಾಗಿ ‘ನಾನು ನಿನ್ನ ಆಹಾರಸರಪಳಿಯಲ್ಲಿ ಇದ್ದೇನೆಯೇ?’ ಎಂದು ಕೇಳಿತು. ಇಲ್ಲವೆಂದಿತು ಸರ್ಪ. ‘ನಾನು ನಿನಗೇನಾದರೂ ತೊಂದರೆ ಮಾಡಿದೆನೇ ಅಥವಾ ಕೆಣಕಿದೆನೇ?’ ಮಿಂಚುಹುಳುವಿನ ಎರಡನೆಯ ಪ್ರಶ್ನೆ. ಇಲ್ಲ ಎಂದುತ್ತರಿಸಿತು ಸರ್ಪ. ‘ಮತ್ತೇಕೆ ನನ್ನನ್ನು ಕೊಂದು ತಿನ್ನಬೇಕೆಂದಿದ್ದೀ?’ ಮೂರನೆಯ ಪ್ರಶ್ನೆ ಕೇಳಿತು ಮಿಂಚುಹುಳು. ಆಗ ಸರ್ಪ ಹೇಳಿತು: ‘ಏಕೆಂದರೆ ನೀನು ಆ ರೀತಿ ಮಿನುಗುವುದನ್ನು ನೋಡಿ ನನ್ನಿಂದ ಸಹಿಸಲಾಗುತ್ತಿಲ್ಲ.’

ನಮ್ಮ ಬದುಕಿನಲ್ಲಿಯೂ ನಮಗೆ ಇಂಥ ಸರ್ಪಗಳು ಎದುರಾಗುತ್ತವೆ. ನಮ್ಮ ಬಾಳಿನ ಹೊಳಪನ್ನು ಕಂಡು ಹೊಟ್ಟೆಯುರಿಯುವ, ನಾಶ ಮಾಡಲೆತ್ನಿಸುವ ವಿಷಸರ್ಪಗಳು. ಅವುಗಳನ್ನು ಎದುರಿಸಲಿಕ್ಕೆ ನಮಗೆ ಎರಡು ಆಯ್ಕೆಗಳಿರುತ್ತವೆ. ಒಂದೋ ನಮ್ಮ ಹೊಳಪನ್ನು ನಿಲ್ಲಿಸಿಬಿಡುವುದು, ಆಗ ಯಾವ ಸರ್ಪವೂ ನಮ್ಮ ಬೆನ್ನಟ್ಟುವುದಿಲ್ಲ. ಎರಡನೆಯ ಆಯ್ಕೆಯೆಂದರೆ ನಮ್ಮ ಹೊಳಪನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಮತ್ತು ಆ ಹೊಳಪಿನಿಂದಲೇ ಸರ್ಪಗಳನ್ನು ಮಣಿಸುವುದು.

ಪ್ರತಿಯೊಬ್ಬರ ಜೀವನದ ಸಾಗಿಬರುವ ಹಾದಿಯಲ್ಲಿ ಕಲ್ಲುಮುಳ್ಳು ಸಾಮಾನ್ಯ ಮೆಟ್ಟಿನಿಂತು ಮುಂದೆ ಸಾಗೋಣ.

ಕೃಪೆ ವಾಟ್ಸಪ್