ಡಾಕ್ಟರ್ ಜೀ ಸ್ವರ್ಗಸ್ಥರಾಗಿದ್ದು ೧೯೪೦ ಜೂನ್ ೨೧ ರಂದು. ಆನಂತರ ಸತತ ೩೩ ವರುಷಗಳ ಕಾಲ ಸಂಘದ ಸರಸಂಘಚಾಲಕರಾಗಿದ್ದವರು ಶ್ರೀ ಗುರೂಜಿಯವರು..
ತಮ್ಮ ೩೩ ವರುಷಗಳ ಸುಧೀರ್ಘ ಅವಧಿಯಲ್ಲಿ ಗುರೂಜಿಯವರು ಎದುರಿಸಿದ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯೆಂದರೆ ಅದು ಗಾಂಧೀಜಿಯವರ ಹತ್ಯೆಯ ನಂತರದ ಎರಡು ವರ್ಷಗಳು. ಬಿಳಿ ಚರ್ಮದ ಜನರಿಂದ ಕಂದು ಬಣ್ಣದ ಬ್ರಿಟೀಷರಿಗೆ ಅಧಿಕಾರ ಹಸ್ತಾಂತರವಾಗಿ ಒಂದೂವರೆ ವರ್ಷವಾಗಿತ್ತಷ್ಟೇ! ಕಲ್ಪನೆಯೇ ಮಾಡಿಕೊಳ್ಳಲಾಗದ ಘಟನೆಯಿಂದ ಗಾಂಧೀಜಿ ಅಸುನೀಗಿದರೆ, ಇತ್ತ ಸಂಘವನ್ನು ಉಸಿರುಗಟ್ಟಿಸಲು ಕೆಲವರು ಸೊಂಟ ಕಟ್ಟಿ ನಿಂತುಬಿಟ್ಟರು.. ಹೊರಗಿನವರ ವಿರೋಧ ಯಾವಗಲೂ ಇದ್ದದ್ದೇ! ಆದರೆ, ಸಂಘದ ಕಾರ್ಯವನ್ನು ೨೯ ವರುಷ ಮಾಡಿದ ಕೆಲವರಿಗೆ ನಮ್ಮ ಕಾರ್ಯಪದ್ಧತಿಯ ಮೇಲೆ ವಿಶ್ವಾಸ ಕಡಿಮೆಯಾಯಿತು. ಇಂತಹ ಚಿಂತನೆಗಳು ಬರಲು ಕಾರಣಗಳು ಇಲ್ಲದಿಲ್ಲ. ಸ್ವಾತಂತ್ರ್ಯವೆಂದರೆ ಬರಿಯ ಅಧಿಕಾರ ಹಸ್ತಾಂತರವಲ್ಲ, ಅದು ರಾಷ್ಟ್ರದ ಸಮಗ್ರ ಜನರ ದೃಷ್ಟಿಕೊನವನ್ನು ಬದಲಾಯಿಸುವ ಅಮೃತ ಘಳಿಗೆ. ಕೆಲವರು ಸ್ವಾತಂತ್ರ್ಯ ಬಂದದ್ದೇ ತಡ, ಎಲ್ಲಿಲ್ಲದ ಖುಷಿಯಿಂದ ಡಂಗೂರ ಬಾರಿಸಿದ್ದೋ ಬಾರಿಸಿದ್ದು ! ಒಂದು ಹನಿ ರಕ್ತವೂ ಚೆಲ್ಲದೆ ಸ್ವಾತಂತ್ರ್ಯ ಪಡೆದೆವೆಂಬ ಹುಂಬ ಮನಸ್ಥಿತಿಯದು! ಇಡೀ ದೇಶವೇ ಇಂಥ ಮನಸ್ಥಿತಿಯಲ್ಲಿ ತೇಲಾಡುತ್ತಿದ್ದಾಗ, ಸ್ವಯಂಸೇವಕರೂ ಕೊಂಚ ವಿಚಲಿತರಾದಂತೆ ಕಾಣುತ್ತದೆ.
ಇಂಥಹ ಸನ್ನಿವೇಷದಲ್ಲಿ ಸಂಘದ ಸ್ವಯಂಸೇವಕರಿಂದ, ಹಿತೈಷಿಗಳಿಂದ ಮತ್ತು ಸಾರ್ವಜನಿಕರಿಂದ ಹಲವಾರು ಸಲಹೆಗಳು ಬಂದಾಗ ಅದನ್ನು ಗುರೂಜಿಯವರು ಸಮರ್ಥವಾಗಿ ನಿರ್ವಹಿಸಿದ ರೀತಿ ನಿಜಕ್ಕೂ ಅದ್ಭುತ. ಆ ಸಂದರ್ಭದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆಯಾಗಿದೆ.. ಇಲ್ಲಿ ಅದರ ಸಣ್ಣ ಸಂಭಾಷಣೆಗಳನ್ನು ಮಾತ್ರ ದಾಖಲಿಸುತ್ತಿದ್ದೇನೆ.
೧. ಗಾಂಧೀಜಿಯವರ ಹತ್ಯೆಯ ನಂತರ ಕಾಂಗ್ರೆಸ್ನ ಅಂಹಿಸಾವಾದಿಗಳು.. ಸಂಘದ ಸ್ವಯಂಸೇವಕರನ್ನು ಹುಡುಕಿ ಹುಡುಕಿ ಕೊಲ್ಲಲಾರಂಭಿಸಿದರು. ಇದಕ್ಕೆ ಆಳುವ ದೊರೆಗಳ ಅಭಯಹಸ್ತವಿದ್ದದ್ದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಹಜವಾಗಿಯೇ ಸ್ವಯಂಸೇವಕರು ಪ್ರತೀಕಾರದ ಮಾತುಗಳನ್ನಾಡಿದರು ಮತ್ತು ಅಂಹಿಂಸಾವದಿಗಳ ಹಿಂಸೆಗೆ ತಕ್ಕ ಪ್ರತ್ಯುತ್ತರ ನೀಡಲು ಗುರೂಜಿಯವರ ಅನುಮತಿ ಕೇಳಿದರು. ಆಗ ಬಂಧನದಲ್ಲಿದ್ದ ಗುರೂಜಿಯವರು ಹೇಳಿದ್ದು ಒಂದೇ ಮಾತು. "Be Calm at all Costs" ! ಇದೊಂದೇ ಮಾತಿಗೆ ಸ್ವಯಂಸೇವಕರು ತಡೆದು ನಿಂತರು. ತಪ್ಪು ಮಾಡಿದರೂ ಅವರು ನಮ್ಮದೇ ಸಮಾಜದ ಬಂದುಗಳು, "ಹಿಂಸೆಗೆ ಹಿಂಸೆಯೇ ಉತ್ತರವಲ್ಲ" ಎಂಬ ಗಾಂಧೀಜಿಯವರ ಮಾತನ್ನು ಅಕ್ಷರಶಃ ಗುರೂಜಿಯವರು ಪಾಲಿಸಿ ತೋರಿಸಿದರು.
೨. ಸ್ವಾತಂತ್ರ್ಯ ಬಂದ ಮೇಲೆ ಹಲವರಿಗೆ ಇನ್ನು ಸಂಘದ ಅವಶ್ಯಕತೆಯಿಲ್ಲವೆಂದು ಅನಿಸಿದ್ದು ಸಹಜ. ಅದನ್ನು ಹಲವಾರು ಜನ ವ್ಯಕ್ತಪಡಿಸಿದರು ಕೂಡ.
ಗುರೂಜಿಯವರ ಸಮಾಧಾನ : ನಮ್ಮ ಕಾರ್ಯಪದ್ದತಿಯು ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲ, ಬದಲಾಗಿ ಈ ಪ್ರಾಚೀನ ಸಂಸ್ಕೃತಿಯ ಪುನರುತ್ಥಾನಕ್ಕಾಗಿ. ಸ್ವಾತಂತ್ರ್ಯ ಬಂದೊಡನೆ, ಬಡತನ, ಅನಕ್ಷರತೆ, ಆತ್ಮವಿಸ್ಮೃತಿಯೆಲ್ಲಾ ಮಾಯವಾಗುವುದಿಲ್ಲ. ಅದು ಶೀಘ್ರವಾಗಿ ಆಗುವ ಕೆಲಸವೂ ಅಲ್ಲ. ಬಂದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಅವಶ್ಯಕತೆಯೂ ಅಷ್ಟೇ ಇದೆ. ಹಾಗಾಗಿ ವ್ಯಕ್ತಿ ನಿರ್ಮಾಣದ ಕಾರ್ಯ ನಿರಂತರ ನಡೆಯಲೇಬೇಕು.
೩. ಸಂಘವು ದೈನಂದಿನ ಶಾಖೆಗಳನ್ನು ಬಿಟ್ಟು ರಾಜಕೀಯವಾಗಿ ಕೆಲಸ ಮಾಡಬೇಕು. ಸ್ವಯಂಸೇವಕರು ರಾಜನೈತಿಕ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಗತಿ ಸಾಧಿಸಬಲ್ಲರು. ಸ್ವಯಂಸೇವಕರಿಗಲ್ಲದೆ ಈ ಸಾಮರ್ಥ್ಯ ಬೇರಾರಿಗಿದೆ ? ಇಪ್ಪತೆಂಟು ವರುಷಗಳು ದುಡಿದ ಮೇಲೆ ನಾವು ಯಾಕೆ ಅಧಿಕಾರ ಗ್ರಹಣ ಮಾಡಬಾರದು?
ಗುರೂಜಿಯವರ ಸಮಾಧಾನ : ಆಳುವ ವ್ಯಕ್ತಿಗಳು ನಮ್ಮ ಕಾರ್ಯಕ್ಕೆ ಅಡ್ಡಿಯುಂಟು ಮಾಡುವರೆಂಬ ಕಾರಣಕ್ಕೆ ನಾವು ರಾಜನೈತಿಕೆ ಕೆಲಸಕ್ಕಿಳಿದರೆ ಸಂಘದ ಉದ್ದೇಶ ಸಫಲವಾಗುವುದಿಲ್ಲ. ಈಗ ನಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿಗೆ ಆಸ್ಪದವಿಲ್ಲವೆಂದೂ ಅನ್ನಿಸಬಹುದು. ಆದ್ದರಿಂದ ಬೀಗ ಜಡಿದು ನಮ್ಮ ಕಾರ್ಯ ನಿಲ್ಲಿಸಿಬಿಡೋಣವೇ ?
೧೯೪೮ರ ಪರಿಸ್ಥಿತಿಯಲ್ಲಿ ಇಂತಹ ಭಾವನೆಗಳ ಮೇಲಾಟದಲ್ಲಿ ಸಂಘವನ್ನು ರಕ್ಷಿಸಿದ ಅವರು ನಿಜವಾಗಿ ಒಬ್ಬ ಅಸಾಧಾರಣ ನೇತಾರ.
ವಿಷಯ ಸಂಗ್ರಹ : ಶ್ರೀ ಗುರೂಜಿ ಸಮಗ್ರ, ಸಂಪುಟ ೨.