Saturday, 27 May 2017

~~~ ಶಂಖನಾದ ~~~


~~~~ ಶಂಖನಾದ ~~~~~

ಶ್ರೀಕೃಷ್ಣನ ಶಂಖಕ್ಕೆ ಪಾಂಚಜನ್ಯ ಎಂದು ಹೆಸರು. ಈ ಶಂಖವು ಪಂಚಜನನೆಂಬ ರಾಕ್ಷಸನಿಂದ ಉದ್ಭವಿಸಿದ್ದರಿಂದ ಪಾಂಚಜನ್ಯವೆಂಬ ಹೆಸರುಂಟಾಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಾಂಡವರಲ್ಲಿ ಮೊದಲು ಶಂಖವನ್ನು ಊದಿದವನು ಶ್ರೀಕೃಷ್ಣ. ಕೌರವಪಕ್ಷದಲ್ಲಿ ಸೇನಾಧಿಪತಿಯಾದ ಭೀಷ್ಮನು ಮೊದಲು ಶಂಖನಾದ ಮಾಡಿದನು.ನಂತರ ಅವನನ್ನು ಅನುಸರಿಸಿ ಆ ಸೇನೆಯಲ್ಲಿರುವವರೆಲ್ಲಾ ತಮ್ಮ ತಮ್ಮ ವಾದ್ಯಗಳನ್ನು ನುಡಿಸಿದರು. ಸೇನಾಧಿಪತಿಯು ಪ್ರಥಮವಾಗಿ ಶಂಖವನ್ನು ಊದುವುದು ಪದ್ಧತಿ. ಹಾಗೆ ನೋಡಿದಲ್ಲಿ ಪಾಂಡವರ ಪಕ್ಷದಲ್ಲಿ ಧೃಷ್ಟದ್ಯುಮ್ನ ಊದಬೇಕಿತ್ತು. ಆದರೆ ಶ್ರೀಕೃಷ್ಣ ಊದಿದುದರ ಅರ್ಥವೇನು? ಅವನು ಶಸ್ತ್ರ ಹಿಡಿಯಲಿ, ಬಿಡಲಿ ಶ್ರೀಕೃಷ್ಣನೇ ಪಾಂಡವರ ಸೇನಾಧಿಪತಿಯು. ಧೃಷ್ಟದ್ಯುಮ್ನ ಪ್ರತ್ಯಕ್ಷ ಸೇನಾಧಿಪತಿಯಾದರೆ ಶ್ರೀಕೃಷ್ಣ ಪರೋಕ್ಷ ಸೇನಾಧಿಪತಿ. ಶ್ರೀಕೃಷ್ಣನಿಗೆ ಸಾಕ್ಷಾತ್ ಕರ್ತೃತ್ವ ಇಲ್ಲದಿದ್ದರೂ, ಸನ್ನಿಧಾನ ಕರ್ತೃತ್ವ ಇತ್ತು.
ಅವನನ್ನು ಇಲ್ಲಿ ಹೃಷಿಕೇಶ ಎಂದು ಕರೆಯಲ್ಪಟ್ಟಿದೆ. ಹೃಷೀಕ ಎಂದರೆ ಇಂದ್ರಿಯಗಳು. ಇಂದ್ರಿಯಗಳಿಗೆ ಅಧಿಪತಿ ಅಥವಾ ಈಶ, ಹೃಷೀಕೇಶ. ಅವನ ನಂತರ ಶಂಖ ಊದಿದವನು ಧನಂಜಯ. ಇದು ಅರ್ಜುನನ ಹೆಸರು. ಧನಂಜಯ ಎಂದರೆ ಧನವನ್ನು ಜಯಿಸಿದವನು ಎಂದರ್ಥ. ರಾಜಸೂಯ ಮಹಾಯಾಗದ ಸಮಯದಲ್ಲಿ ಎಲ್ಲಾ ರಾಜರನ್ನೂ ಗೆದ್ದು, ಧನವನ್ನು ರಾಶಿರಾಶಿಯಾಗಿ ಸುರಿದುದ್ದರಿಂದ ಅವನಿಗೆ ಈ ಹೆಸರು. ಇದಕ್ಕೆ ಇನ್ನೊಂದು ಅರ್ಥವನ್ನೂ ಹೇಳಬಹುದು. ಧನಂಜಯ ಎಂದರೆ ಜ್ಞಾನಿ. ' ವಿದ್ಯಾಧನಂ ಸರ್ವ ಧನ ಪ್ರಧಾನಂ'. ಎಲ್ಲಾ ಧನಗಳಲ್ಲೂ ಶ್ರೇಷ್ಠವಾದ ಧನವೆಂದರೆ, ವಿದ್ಯೆ ಅಥವಾ ಜ್ಞಾನ. ಆದುದರಿಂದ ಜ್ಞಾನಿ. ಅವನು ಊದಿದ ಶಂಖದ ಹೆಸರು ದೇವದತ್ತ. ಒಮ್ಮೆ ಇವನು ದೇವತೆಗಳಿಗೆ ತೊಂದರೆ ಕೊಡುತ್ತಿದ್ದಂತಹ ಕಾಲಕೇಯ, ನಿವಾತಕವಚ ಮುಂತಾದ ರಾಕ್ಷಸರನ್ನೆಲ್ಲಾ ಕೊಂದದ್ದರಿಂದ, ದೇವತೆಗಳು ತುಷ್ಟಗೊಂಡು ಅವನಿಗೆ ಈ ಶಂಖವನ್ನು ಕೊಟ್ಟಿದ್ದರು. ಇದರಿಂದ ಹೊರಬರುವ ಶಬ್ದವು ತುಂಬಾ ಜೋರಾಗಿಯೂ, ಭಯಂಕರವಾಗಿಯೂ ಇರುವುದು. ಇದರ ಶಬ್ದವನ್ನು ಕೇಳಿ ಯುದ್ಧಭೂಮಿಯಲ್ಲಿದ್ದ ವೀರರ ಎದೆಯೆಲ್ಲಾ ನಡುಗಿತು.

No comments:

Post a Comment