Friday, 16 June 2017

ತಾಯಸೇವೆಯ ವ್ರತಧಾರಿ



   ಡಾ|| ಹೆಡಗೆವಾರರು ನಾಗಪುರಕ್ಕೆ ಬಂದರು. ಆದರೆ ಅವರು ಮನೆಯಲ್ಲಿರುತ್ತಿದ್ದುದೇ ಅಪರೂಪ. ಕಾರಣವಿತ್ತು. ಕೇಶವರಾಯರು ಮಾಡುತ್ತಿದ್ದ ಕೆಲಸವೆಲ್ಲ ಅಣ್ಣ ಮಹದೇವಶಾಸ್ತ್ರಿ ಅವರ ದೃಷ್ಟಿಯಲ್ಲಿ ತೀರ ಅಯೋಗ್ಯ ಹಾಗೂ ಮಾಡಬಾರದವುಗಳೇ. ಅವರು ತಮ್ಮನ ಗೆಳೆಯರ ಬಳಿ "ಅವನಿಗೆ ಸ್ವಲ್ಪ ಹೇಳಿ, ಎಲ್ಲಾದರೂ ನೌಕರಿ ಮಾಡಬೇಕು. ಮದುವೆ ಮಾಡಿಕೊಳ್ಳಬೇಕು. ಮನೆ ಮಾಡಿಕೊಂಡು ಸುಖವಾಗಿರಬೇಕು. ನೌಕರಿ ಇಷ್ಟವಿಲ್ಲದಿದ್ದರೆ ಸಣ್ಣದೊಂದು ದವಾಖಾನೆ ತೆರೆಯಲಿ. ಹಣವಿಲ್ಲದಿದ್ದರೆ ಎಲ್ಲಾದರೂ ಸಂಪಾದಿಸೋಣ. ಪ್ರಪಂಚದ್ದೆಲ್ಲ ಅನಾವಶ್ಯಕ ಕೆಲಸ ಮಾಡುವುದನ್ನು ಬಿಡಲು ಅವನಿಗೆ ಹೇಳಿ. ಯಾವುದಾದರೂ ಕಷ್ಟಕ್ಕೆ ಸಿಕ್ಕಿದಲ್ಲಿ ಆಗ ಗೊತ್ತಾದೀತು. ಆಗ ಆ ಗೆಳೆಯರಲ್ಲಿ ಯಾರೂ ಬರುವುದಿಲ್ಲ. ದೇಶ, ಸಮಾಜದ ಕೆಲಸ ದೊಡ್ಡವರಿಗೆ, ನಮ್ಮಂತಹವರು ಈ ಜಂಜಾಟಗಳಲ್ಲಿ ಸಿಕ್ಕಿ ಬೀಳಬಾರದು" ಇತ್ಯಾದಿ ಹೇಳುತ್ತಿದ್ದರು.

    ಮಹಾದೇವ ಶಾಸ್ತ್ರಿಗಳ ವಿಚಾರ - ಪ್ರತಿಯೊಬ್ಬನೂ ತನ್ನ ಕುಟುಂಬವನ್ನೇ ಮೊದಲು ಯೋಚಿಸಬೇಕು ಎಂದು. ಕೇಶವನೂ ಸ್ವಭಾವದಲ್ಲಿ ತನ್ನಂತೆಯೇ ಎಂದು ಚೆನ್ನಾಗಿ ತಿಳಿದಿದ್ದ. ಅವರು ತಮ್ಮನ ಬಳಿ ಮಾತ್ರ ಏನೂ ಹೇಳುತ್ತಿರಲಿಲ್ಲ. ಸದಾ ಸಂಬಂಧಿಕರ ಬಳಿ ’ನೀವಾದರೂ ಅವನಿಗೆ ಹೇಳಿ’ ಎನ್ನುತ್ತಿದ್ದರು. ಕೇಶವರಾವ್ ತಮ್ಮ ಅಣ್ಣನ ಹತ್ತಿರ ಬಹು ನಮ್ರತೆಯಿಂದಿರುತ್ತಿದ್ದರು. ಅನಾದರ ಎಂದೂ ತೋರುತ್ತಿರಲಿಲ್ಲ. ಪ್ರತಿವಾದ ಮಾಡುತ್ತಲೂ ಇರಲಿಲ್ಲ; ತಮ್ಮ ಕೆಲಸ ಬಿಡುತ್ತಲೂ ಇರಲಿಲ್ಲ. ಮಾತಿಗೆ ಮಾತು ಬೆಳೆಯಬಹುದೆಂದು ಅವರು ಮನೆಯಲ್ಲಿರುತ್ತಿದ್ದುದೇ ಕಡಿಮೆ.

    ಇದ್ದಕ್ಕಿದ್ದಂತೆ ನಾಗಪುರದಲ್ಲಿ ಇನ್ನೊಮ್ಮೆ ಪ್ಲೇಗ್ ಹರಡಿತು. ಹಲವಾರು ಸಂಸಾರಗಳು ಊರು ಬಿಟ್ಟು ದೂರ ಹೋದವು. ಮಹಾದೇವ ಶಾಸ್ತ್ರಿಗಳು ಮಾತ್ರ ತಮ್ಮ ಮನೆ ಬಿಡಲಿಲ್ಲ. ಯಾರ ಬುದ್ದಿವಾದವೂ ಅವರಿಗೆ ನಾಟಲಿಲ್ಲ. ’ಪ್ಲೇಗ್ ನಮ್ಮನ್ನೇನು ಮಾಡೀತು?’ ಎನ್ನುತ್ತಿದ್ದರು. ಕೇಶವರಾವ್ ಸಹ ಹೇಳಿದರು. ಆಗಲೂ ಅವರು ಊರು ಬಿಡಲು ಒಪ್ಪಲಿಲ್ಲ. ಕೊನೆಗೆ ಅವರ ತೊಡೆಯಲ್ಲಿಯೂ ಗೆಡ್ಡೆ ಕಾಣಿಸಿತು. ಭಾರಿ ಜ್ವರ ಬಂದೇಬಿಟ್ಟಿತು. ಕೇಶವರಾವ ತುಂಬಾ ಕಾಳಜಿ ವಹಿಸಿ ಆರೈಕೆ ಮಾಡಿದರು. ಆದರೂ ಪ್ರಯೋಜನ ದೊರೆಯಲಿಲ್ಲ. ಮಹಾದೇವ ಶಾಸ್ತ್ರಿಗಳು ಪರಲೋಕ ಸೇರಿದರು.

    ಪ್ಲೇಗ್ ಮಾರಿ ಹಿಮ್ಮೆಟ್ಟಿತು. ಜನರು ಊರಿಗೆ ಹಿಂದಿರುಗತೊಡಗಿದರು. ಸೀತಾರಾಮ ಪಂತ್ ಹಾಗೂ ಕೇಶವರಾವ್ ಸಹ ಮನೆಗೆ ಮರಳಿದರು. ಮನೆಯಲ್ಲಿನ ಬಹಳ ಸಾಮಾನು ಕಳವುಗೊಂಡಿದ್ದವು. ಮಹಾದೇವ ಶಾಸ್ತ್ರಿಗಳು ಇಲ್ಲದೆ ಮನೆಯೆಲ್ಲಾ ಬಿಕೋ ಎನ್ನುತ್ತಿತ್ತು. ಸೀತಾರಾಮ ಪಂತರು ಪೌರೋಹಿತ್ಯ ಮಾಡತೊಡಗಿದರು. ಅವರ ಮದುವೆಯೂ ಆಯಿತು. ಆ ನಂತರ ಅನೇಕ ಕನ್ಯಾಪಿತೃಗಳು ಕೇಶವರಾಯರ ಕುರಿತು ಸೀತಾರಾಮ ಪಂತರನ್ನು ಕೇಳತೊಡಗಿದರು. ಮೊದ ಮೊದಲು "ಈಗ ಆ ಯೋಚನೆಯಿಲ್ಲ. ಬದುಕಲು ಏನಾದರೂ ಮಾರ್ಗವಾದಲ್ಲಿ ಮುಂದೆ ನೋಡೋಣ" ಎನ್ನುತ್ತಿದ್ದರು. ಕ್ರಮೇಣ ಕೇಳುವವರು ಹೆಚ್ಚಾದರು. ಕೆಲವರಂತೂ ರಾಮಪಾಯಲಿಯಲ್ಲಿನ ಅವರ ಚಿಕ್ಕಪ್ಪ ಆಬಾಜಿ ಹೆಡಗೆವಾರರ ಬಳಿ ಹೋದರು. ನಾವಷ್ಟು ವರದಕ್ಷಿಣೆ ಕೊಡುತ್ತೇವೆ, ಇಷ್ಟು ಕೊಡುತ್ತೇವೆ ಎಂದೆಲ್ಲಾ ಗಂಟು ಬೀಳತೊಡಗಿದರು. ಕೊನೆಯಲ್ಲಿ ಕೇಶವರಾಯರು ಚಿಕ್ಕಪ್ಪನಿಗೆ ಒಂದು ಪತ್ರ ಬರೆದು "ನಾನು ಆಜನ್ಮ ದೇಶಸೇವೆಯ ವ್ರತ ಹಿಡಿದಿರುವೆ, ಹೀಗಾಗಿ ನನ್ನ ಸುಖ, ಸಂಸಾರದ ಸುಖ ಇತ್ಯಾದಿ ವಿಚಾರ ನನಗಿಲ್ಲ. ರಾಷ್ಟ್ರಕಾರ್ಯ ಮಾಡುತ್ತಾ ಸೆರೆಮನೆಗೂ ಹೋಗಬೇಕಾಗಬಹುದು - ಜೀವವನ್ನೇ ತೆರಬೇಕಾಗಬಹುದು. ಇನ್ನೂ ಬೇರೆ ಬೇರೆ ಕಷ್ಟಗಳು ಬರಬಹುದು. ಹೀಗಿರುವಾಗ ತಿಳಿದೂ ತಿಳಿದೂ ಯಾವುದೇ ಹೆಣ್ಣಿನ ಜೀವನವನ್ನು ಕಷ್ಟಕ್ಕೆ ಸಿಕ್ಕಿಸುವುದು ತರವಲ್ಲ ಎಂಬುದು ನನ್ನ ಖಚಿತ ನಿಲುವು" ಎಂದು ಖಡಾಖಂಡಿತವಾಗಿ ತಿಳಿಸಿದರು.

    ಅಲ್ಲಿಗೆ ಮದುವೆಯ ವಿಚಾರ ಕೊನೆಗೊಂಡಿತು. ಸೀತಾರಾಮ ಪಂತರು ಸೌಮ್ಯ ಸ್ವಭಾವದವರು. ತಮ್ಮನ ಬಗ್ಗ ಅವರಿಗೆ ಅತೀವ ಪ್ರೀತಿ. ಪರಸ್ವರರಲ್ಲಿ ತುಂಬು ವಿಶ್ವಾಸ ಅವರಿಬ್ಬರದು. ಸಿಕ್ಕಿದ ಒಣರೊಟ್ಟಿಯನ್ನೇ ಪ್ರೀತಿಯಿಂದ ಹಂಚಿ ತಿನ್ನುತ್ತಿದ್ದರು. ಬರುಬರುತ್ತಾ ಕೇಶವರಾಯರ ಕೆಲಸ ಕಾರ್ಯಗಳ ಒತ್ತಡ ಇನ್ನಷ್ಟು ಹೆಚ್ಚಿತು ಅವರು ಮನೆಯಲ್ಲಿರುವುದೇ ಅಪರೂಪವಾಯಿತು.

No comments:

Post a Comment