ನ್ಯಾಯಾಲಯದ ಹೊರಗೆ ಡಾಕ್ಟರ್‌ಜಿಯವರ ಮಿತ್ರರು ಸೇರಿದ್ದರು. ಹೊರಗೆ ಕರೆತರುತ್ತಿದ್ದಂತೆಯೇ ಅವರೆಲ್ಲ ಡಾಕ್ಟರ್‌ಜಿಯವರನ್ನು ಸುತ್ತುವರೆದರು. ಹಾರ ಹಾಕಿ ಜಯಜಯಕಾರ ಮಾಡಿದರು. ಅವರ ಸುತ್ತ ಸಣ್ಣ ಸಭೆಯೇ ಕೂಡಿತು. ಅವರನ್ನು ಕುರಿತು ಡಾಕ್ಟರ್‌ಜಿ ಪುಟ್ಟ ಭಾಷಣವನ್ನೇ ಮಾಡಿದರು.
"ಪ್ರಿಯ ಬಂಧುಗಳೇ, ನಾವೆಲ್ಲ ದೇಶ ಸೇವೆಯ ವ್ರತ ತೊಟ್ಟಿದ್ದೇವೆ. ಇದು ಕಠಿಣ ವ್ರತ. ಬಹು ದೊಡ್ಡ ಶತ್ರುವನ್ನು ನಾವೆದುರಿಸಬೇಕಾಗಿದೆ. ಬರುವ ಎಲ್ಲಾ ಕಷ್ಟಗಳನ್ನೂ ನಗು ನಗುತ್ತಲೇ ಸಹಿಸಬೇಕು.
ಸೆರೆಮನೆ ಅಷ್ಟೇ ಏನು, ಸಮಯ ಬಂದಲ್ಲಿ ಫಾಶೀ ಕಂಬವನ್ನೂ ಏರಬೇಕಾದೀತು. ಇವೆಲ್ಲವೂ ಸ್ವಾತಂತ್ರ್ಯದ ಸಂಪಾದನೆಗೆ ಸಾಧನಗಳು ಮಾತ್ರ. ನಾವು ಸ್ವರಾಜ್ಯ ಗಳಿಸಬೇಕಾದುದು ಮುಖ್ಯ. ಕೆಲವು ಬಾರಿ ಮನುಷ್ಯ ಸಾಧನಗಳನ್ನಷ್ಟೇ ಪ್ರೀತಿಸುತ್ತಾ ಸಾಧಿಸಬೇಕಾದ್ದನ್ನು ಮರೆತು ಬಿಡುವುದಿದೆ. ನಾವಂತೂ ಅಂತಹ ತಪ್ಪ ಮಾಡದಿರೋಣ. ಸೆರೆಯಲ್ಲಿರಲಿ, ಹೊರಗಿರಲಿ ನಮ್ಮ ಕಾರ್ಯ ಮಾತ್ರ ಅವಿರತವಾಗಿ ನಡೆಯುತ್ತಿರಬೇಕು.
ನಾವು ದೃಢವಾಗಿ ನಮ್ಮ ಕೆಲಸ ಮಾಡಿದಲ್ಲಿ ವಿದೇಶೀ ಶತ್ರುಗಳು ಇಲ್ಲಿಂದ ಕಾಲು ಕೀಳಬೇಕಾಗುವುದು. ನೀವೆಲ್ಲ ಇಲ್ಲಿನವರೆಗೆ ಬಂದು ನನ್ನ ಬಗ್ಗೆ ತೋರಿದ ಪ್ರೀತಿ ವಿಶ್ವಾಸಗಳಿಗೆ ಕೃತಜ್ಞತೆಗಳು. ಒಂದು ವರ್ಷದ ನಂತರ ಪುನಃ ಸೇರೋಣ".
ಉತ್ಸಾಹದಿಂದ ಎಲ್ಲರೂ ಚಪ್ಪಾಳೆ ತಟ್ಟಿ ಜಯಜಯಕಾರ ಮಾಡಿದರು. "ಭಾರತ ಮಾತಾಕೀ ಜಯ್". "ಡಾಕ್ಟರ್ ಹೆಡಗೆವಾರ್ ಕೀ ಜಯ್" ಘೋಷಣೆಗಳು ಮುಗಿಲು ಮುಟ್ಟಿದವು. ಡಾಕ್ಟರ್‌ಜಿ ಎಲ್ಲರಿಗೂ ಕೈ ಜೋಡಿಸಿ ವಂದಿಸಿದರು. ಕಾವಲು ಪೊಲೀಸರೊಡನೆ ಸೆರೆಗೆ ತೆರಳಿದರು.
No comments:
Post a Comment