ಒಮ್ಮೆ ಜವಹರಲಾಲ ನೆಹರುರವರು ಪ್ರಧಾನಮಂತ್ರಿಯಾಗಿದ್ದಾಗ, ಒಬ್ಬ ಸ್ವಯಂಸೇವಕ ಐ.ಎ.ಎಸ್. ಅಧಿಕಾರಿಯಾಗಲು ಪರೀಕ್ಷೆ ಬರೆದ. ಅದರಲ್ಲಿ ಪಾಸಾದ. ಆ ಪರೀಕ್ಷೆಯ ಕೊನೆಯಲ್ಲಿ ಸಂದರ್ಶನವಿರುತ್ತದೆ. ಆ ಸಂದರ್ಶನದಲ್ಲಿ ಅವನು ಅರ್.ಎಸ್.ಎಸ್ ಸ್ವಯಂಸೇವಕ ಎನ್ನುವುದು ಎಲ್ಲರಿಗೂ ಗೊತ್ತಾಯಿತು. ಆ ಸಮಯದಲ್ಲಿ ಅರ್.ಎಸ್.ಎಸ್.ನವರು ಗಾಂಧಿ ಹತ್ಯೆ ಮಾಡಿದವರು ಎನ್ನುವ ಆರೋಪವಿತ್ತು. ಆ ಕಾರಣದಿಂದ ಅವನ್ನು ಐ.ಎ.ಎಸ್.ಗೆ ಆಯ್ಕೆ ಮಾಡಲಿಲ್ಲ. ಈ ಸ್ವಯಂಸೇವಕನ ದೂರದ ಸಂಬಂಧಿಯೊಬ್ಬರು ಕಾಂಗ್ರೆಸ್‍ನಲ್ಲಿದ್ದರು. ಅವರು ಲೋಕಸಭೆಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಈ ವಿಷಯ ಗೊತ್ತಾಯಿತು. ಅವರು ಈ ಸ್ವಯಂಸೇವಕನನ್ನು ಕರೆದು ವಿಚಾರಿಸಿದರು. ಹೀಗಾಗಿರುವುದು ಸರಿಯಲ್ಲ ಎಂದು ಭಾವಿಸಿ ಅವರು ಅವನಿಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲು ಸಲಹೆಕೊಟ್ಟರು.
ಆ ಕಾಲದಲ್ಲಿ ಈಗಿನ ರೀತಿ ಅಷ್ಟು ಸೆಕ್ಯೂರಿಟಿಯ ಕಷ್ಟವಿರಲಿಲ್ಲ. ಎಷ್ಟಾದರೂ ಲೋಕಸಭಾ ಉಪಾಧ್ಯಕ್ಷರು ಹೇಳಿಕಳಿಸಿದ್ದ ವ್ಯಕ್ತಿ ಎನ್ನುವ ಕಾರಣಕ್ಕಾಗಿ ನೆಹರುರವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಈ ಸ್ವಯಂಸೇವಕ ನೆಹರುರವರನ್ನು ಹೋಗಿ ಭೇಟಿ ಮಾಡಿದ. ಅವನ ಸಂಬಂಧಿಯಾದ ಲೋಕಸಭಾ ಉಪಾಧ್ಯಕ್ಷರೂ ನೆಹರುರವರ ಜೊತೆಯಲ್ಲಿ ಕುಳಿತಿದ್ದರು. ಆಗ ನೆಹರುರವರು ಕೇಳಿದರು ’ಈಗ ನಾನು ನಿನ್ನನ್ನು ಐ.ಎ.ಎಸ್.ಗೆ ಆಯ್ಕೆ ಮಾಡದೇ ಇದ್ದರೆ ಏನಾಗುತ್ತದೆ?’ ಎಂದು ಕೇಳಿದರು. ಆಗ ಈ ಸ್ವಯಂಸೇವಕ ಹೇಳಿದ 'The Government of India will lose an honest officer(ಸರ್ಕಾರವು ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಳ್ಳುತ್ತದೆ)'. ಒಬ್ಬ ೨೨ ವರ್ಷದ ಯುವಕ ದೇಶದ ಪ್ರಧಾನಮಂತ್ರಿಯ ಎದುರು ಎಷ್ಟು ಧೈರ್ಯದಿಂದ ಹೇಳಿದ! ಅವನಿಗೆ ಎಂಥ ನಂಬಿಕೆ! ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ, ಎರಡೂ ಅವನಲ್ಲಿತ್ತು. ನೆಹರುರವರು ಅವನ ಮಾತನ್ನು ಕೇಳಿ ಅವನನ್ನು ಐ.ಎ.ಎಸ್. ಅಧಿಕಾರಿಯಾಗಿ ನೇಮಿಸಿದರು ಮತ್ತು ಐ. ಮಹಾದೇವನ್ ಎನ್ನುವ ಈ ಸ್ವಯಂಸೇವಕರು ಐ.ಎ.ಎಸ್. ಅಧಿಕಾರಿಯಾಗಿ ಕೆಲಸ ಮಾಡಿದರು.
No comments:
Post a Comment