ತುರ್ತು ಪರಿಸ್ಥಿತಿಯ ಸಮಯ. ಅನೇಕ ಪ್ರಚಾರಕರು, ಸ್ವಯಂಸೇವಕರು ಭೂಗತರಾಗಿದ್ದರು. ಒಬ್ಬ ಸ್ವಯಂಸೇವಕರು ಮಂಗಳೂರಿನವರು. ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿ. ಅವರು ಮೂರು ತಿಂಗಳಿನಿಂದ ಬ್ಯಾಂಕಿಗೆ ಹೋಗಿರಲಿಲ್ಲ. ಕಾರಣ? ಅವರನ್ನು ಹಿಡಿದು ಪ್ರಶ್ನೆಗಳನ್ನು ಕೇಳಬೇಕೆಂದು ಪೊಲೀಸರು ಹುಡುಕುತ್ತಿದ್ದರು. ಮೂರು ತಿಂಗಳ ನಂತರ ಬ್ಯಾಂಕಿನಿಂದ ನೋಟಿಸ್ ಬಂತು - ’ನೀವು ಇನ್ನೊಂದು ವಾರದಲ್ಲಿ ಕೆಲಸಕ್ಕೆ ಬರದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತೇವೆ’ ಎಂದು. ಆಗ ಅವರು ಪ್ರಚಾರಕರೊಡನೆ ಸಮಾಲೋಚಿಸಿದರು. ಪ್ರಚಾರಕರು ಸಲಹೆ ಕೊಟ್ಟರು - ಅವರು ಬ್ಯಾಂಕಿಗೆ ಹೋಗಬೇಕು, ಪೊಲೀಸರು ಅವರನ್ನು ಬಂಧಿಸುತ್ತಾರೆ, ಇವರು ಜೈಲಿಗೆ ಹೋಗುತ್ತಾರೆ, ಆದರೆ ಅವರ ಕೆಲಸವಾದರೂ ಉಳಿಯುತ್ತದೆ.
ಸರಿ, ಅವರು ಕೆಲಸಕ್ಕೆ ಹೋದರು. ಮೊದಲನೇ ದಿನವೇ ಪೊಲೀಸರು ಬಂದು ಅವರನ್ನು ಬಂಧಿಸಿ ಕರೆದುಕೊಂಡು ಹೋದರು. ಬಂದರು ಪೊಲೀಸ್ ಸ್ಟೇಷನ್‍ಗೆ ಕರೆದುಕೊಂಡು ಹೋದರು. ಇನ್ನಿಲ್ಲದ ಚಿತ್ರ ಹಿಂಸೆ ಕೊಟ್ಟು ಅರ್ಧ ಜೀವ ಮಾಡಿದರು. ’ಲೋಕ ಸಂಘ ಸಮಿತಿಗೆ ಹಣ ಎಲ್ಲಿಂದ ಬರುತ್ತದೆ, ಆ ಪ್ರಚಾರಕರು ಎಲ್ಲಿ ಉಳಿದುಕೊಳ್ಳುತ್ತಾರೆ? ಈ ಪ್ರಚಾರಕರು ಎಲ್ಲಿರುತ್ತಾರೆ?’ ಈ ಪ್ರಶ್ನೆಗಳನ್ನು ಕೇಳಿದರು. ಈ ನಮ್ಮ ಸ್ವಯಂಸೇವಕರು ತಮಗೆ ಒಂದು ಲೋಟ ನೀರು ಕೊಟ್ಟರೆ ಎಲ್ಲವನ್ನೂ ಹೇಳುತ್ತೇನೆಂದರು. ಪೊಲೀಸರು ನೀರು ಕೊಟ್ಟರು. ಇವರು ಹತ್ತಿರದಲ್ಲಿದ್ದ ಕಿಟಕಿ ನೋಡಿದರು. ಇವರಿದ್ದುದು ಮೊದಲನೆ ಮಹಡಿಯ ಮೇಲೆ. ಪೊಲೀಸರು ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲೇ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಿಟಕಿ ಮೂಲಕ ಹಾರಿದರು. ಪುಣ್ಯಕ್ಕೆ ತಲೆಗೆ ಏಟು ಬೀಳದೆ ಕಾಲುಗಳ ಮೇಲಿ ಬಿದ್ದು ಪ್ರಾಣ ಉಳಿಯಿತು. ಆದರೆ ಕಾಲುಗಳೂ ಪುಡಿಪುಡಿಯಾದವು. ಇಂದಿಗೂ ಅವರಿಗೆ ಸರಿಯಾಗಿ ನಡೆಯಲಾಗುವುದಿಲ್ಲ.
ಈ ರೀತಿ ಸಾವಿರಾರು ಜನರು ನಷ್ಟ ಕಷ್ಟ ಅನುಭವಿಸಿದರು. ಅನೇಕರ ತಂದೆ, ತಾಯಿಗಳು ತೀರಿಕೊಂಡರೂ ಅವರನ್ನು ಮನೆಗೆ ಬಿಡದೆ ಜೈಲಿನಲ್ಲೇ ಇಟ್ಟಿದ್ದರು. ಒಂದೂವರೆ ಲಕ್ಷ ಜನ ಸತ್ಯಾಗ್ರಹ ಮಾಡಿದರು. ತುರ್ತು ಪರಿಸ್ಥಿತಿ ಕಳೆಯಿತು. ಈವತ್ತಿನವರೆಗೆ ಯಾರೂ ತಾವು ಮಾಡಿದ ಈ ಹೋರಾಟಕ್ಕೆ ತಮಗೆ ಪರಿಹಾರ ಬೇಕೆಂದು ಕೇಳಲಿಲ್ಲ. ಹೊರಗಿನವರು ಅವರ ಕಾರ್ಯವನ್ನು ತ್ಯಾಗವೆಂದು ಭಾವಿಸುತ್ತಾರಾದರೂ ಸ್ವಯಂಸೇವಕರು ತಾವು ದೇಶಕ್ಕಾಗಿ ಹೋರಾಟ ಮಾಡಿದೆವು, ಅದು ತಮ್ಮ ಕರ್ತವ್ಯ, ತ್ಯಾಗವಲ್ಲ ಎಂದು ಭಾವಿಸಿದರು.
No comments:
Post a Comment