ಸಂಘಕಾರ್ಯ ನಿಧಾನವಾಗಿ ಬೆಳೆಯುತ್ತಿತ್ತು. ಆಗಲೇ ಸಂಕಟಗಳ ಕಪ್ಪು ಮೋಡಗಳು ಸಹ ಕವಿಯತೊಡಗಿದವು. ಡಾಕ್ಟರ್‌ಜಿಯವರ ಒಂದೊಂದು ಮಾತನ್ನೂ ತಪ್ಪದೇ ನಡೆಸುವ ನೂರಾರು ಯುವಕರನ್ನು ಕಂಡು ಅನೇಕ ನಾಯಕರ ಮನದಲ್ಲಿ ಮತ್ಸರ ಮೂಡಿತು. ಗರಡಿ ಮನೆ ನಡೆಸುವವರ ಮನದಲ್ಲಿ ತಮ್ಮ ಬಳಿ ಇರುವ ಯುವಕರನ್ನೆಲ್ಲ ಸಂಘದವರು ತಮ್ಮತ್ತ ಸೆಳೆದುಕೊಳ್ಳುವರು ಎನಿಸಿ, ಇವರು ತಮ್ಮ ಶತ್ರುಗಳು ಎಂಬ ಭಾವ ಮೂಡಿತು. ತಾವೇ ಉಗ್ರ ಹಿಂದುತ್ವವಾದಿಗಳೆಂದು ಭಾವಿಸುವವರೂ ಅನೇಕರಿದ್ದರು. ತಾವೆ ಪಂಡಿತರು. ತಮ್ಮನ್ನು ಬಿಟ್ಟರೆ ಬೇರೆ ಇಲ್ಲ. ಅದಕ್ಕಾಗಿ ಸಂಘ ತಮ್ಮ ಅಧೀನದಲ್ಲಿರಬೇಕೆಂಬುದು ಅವರ ಮತ. ತಮ್ಮ ಸಭೆಗಳನ್ನು ಸ್ವಯಂಸೇವಕರು ವ್ಯವಸ್ಥೆ ಮಾಡಬೇಕು. ತಮ್ಮ ಆಜ್ಞೆ ಅವರು ನಡೆಸಬೇಕು. - ಹೀಗಿತ್ತು ಅವರೆಲ್ಲರ ವಿಚಾರ. ಆದರೆ ತಾನು ಯಾರ ಅಧೀನವೂ ಅಲ್ಲ. ತನಗೆಲ್ಲರೂ ಸಮಾನ ಎನ್ನುವುದು ಸಂಘದ ನಿಲುಮೆ. ಹೀಗಾಗಿ ಸಂಘ ವಿರೋಧಿ ಅಲೆ ಏಳತೊಡಗಿತು.
ಮುಸಲ್ಮಾನರ ಮನದಲ್ಲಿ ತಮಗೆ ಹೊಡೆಯಲೆಂದೇ ಇವರು ದಂಡ ತಿರುಗಿಸುವರು ಎಂಬ ಭಾವನೆ ಮೂಡಿತು. ಆದ್ದರಿಂದ ಸಂಘ ತಮ್ಮ ಶತ್ರು ಎಂದು ಅವರಿಗನಿಸಿತು. ಕೆಲವು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಘದ ಕುರಿತು ವಿಶೇಷ ಆಕರ್ಷಣೆ. ಆದರೆ ಮುಸಲ್ಮಾನ ಸಹಾಯದ ವಿನಃ ಯಾವುದೇ ಸತ್ಕಾರ್ಯ, ರಾಷ್ಟ್ರಕಾರ್ಯ ಮಾಡಲು ಸಾಧ್ಯವಾಗದೆಂದು ಅವರ ನಂಬಿಕೆ. ಕೇವಲ ಹಿಂದುಗಳ ಸಂಘಟನೆ ಮಾಡುವುದು ಅಂದರೆ ಮುಸಲ್ಮಾನರ ವಿರೋಧ ಮಾಡಿದಂತೆ ಎಂದು ಭಾವಿಸಿದ ಅವರು ಸಹ ಸಂಘವನ್ನು ವಿರೋಧಿಸುತ್ತಿದ್ದರು. ಸಂಘ ಉತ್ತಮ ರಾಷ್ಟ್ರೀಯ ಭಾವನೆಯ ಹರಿಕಾರ ಎಂಬುದು ಇಂಗ್ಲಿಷ್ ಅಧಿಕಾರಿಗಳಿಗೆ ತಿಳಿದಿತ್ತು. ಅಂಥ ಭಾವನೆ ಇಲ್ಲಿ ಬೆಳೆಯಗೊಡಬಾರದು ಎಂಬುದು ಅವರ ಪ್ರಯತ್ನ. ಆದ್ದರಿಂದ ಅವರಿಗೂ ಸಂಘ ವು ಶತ್ರುವಾಗಿಯೇ ಕಂಡುದರಲ್ಲಿ ಆಶ್ಚರ್ಯವೇನೂ ಇಲ್ಲ.
ಆಳರಸರ ಗುಪ್ತಚರ ವಿಭಾಗಕ್ಕೆ ಡಾಕ್ಟರ್‌ಜಿಯವರ ಪೂರ್ವವೃತ್ತ ಚೆನ್ನಾಗಿ ತಿಳಿದಿತ್ತು. ಆದರೆ ಅವರನ್ನು ತಡೆಯಲು ಬೇಕಾದ ಯಾವುದೇ ಆಧಾರ ಅವರಲ್ಲಿರಲಿಲ್ಲ. ಡಾಕ್ಟರ್‌ಜಿಯವರನ್ನು ಹೇಗಾದರೂ ಮಾಡಿ ಸೆರೆಗೆ ತಳ್ಳಬೇಕೆನ್ನುವುದು ಅವರಿಗಿದ್ದ ಯೋಚನೆ. ಹಾಗಾದಲ್ಲಿ ಸಂಘ ತನ್ನಿಂತಾನೇ ಇಲ್ಲವಾಗುತ್ತದೆ ಎಂದು ನಂಬಿದ್ದರು ಅವರು.
ನಾಲೂ ನಿಟ್ಟಿನಿಂದ ಸಂಕಟಗಳದ್ದೇ ಕಾರ್ಮೋಡಗಳು. ಆದರೆ ಡಾಕ್ಟರ್‌ಜಿ ಒಂದಿನಿತೂ ವಿಚಲಿತರಾಗಲಿಲ್ಲ. ಕೆಲವೊಮ್ಮೆ ಬುದ್ಧಿವಂತಿಕೆಯಿಂದ, ಇನ್ನೂ ಕೆಲವೊಮ್ಮೆ ಶಾಂತವಾಗಿದ್ದುಕೊಂಡೇ, ಹಾಗೂ ಕೆಲವೊಮ್ಮೆ ಆಕ್ರಮಣಕಾರಿ ಮನೋವೃತ್ತಿಯಿಂದ ಪರಿಸ್ಥಿತಿಯನ್ನು ಎದುರಿಸಿ ತಮ್ಮ ಪ್ರಿಯತಮ ಸಂಘ ಕಾರ್ಯವನ್ನು ಶತ್ರುಗಳಿಂದ ಉಳಿಸಿದರು. ವಿರೋಧದ ಬಿಸಿ ಸಂಘಕ್ಕೆ ತಟ್ಟಿದಂತೆ ನೋಡಿಕೊಂಡರು.
ಭಾರತದ ಚಿರಕಾಲಿಕ ಉನ್ನತಿಗೆ ಶಸ್ತ್ರಕ್ರಾಂತಿ ಮದ್ದಲ್ಲ ಎನ್ನಿಸಿತ್ತು ಡಾಕ್ಟರ್‌ಜಿಗೆ. ಅದರೊಳಗಿನ ದೋಷಗಳನ್ನು ಮನಗಂಡ ಅವರು ತಾವು ಹಿಂದೆ ಕೈಗೊಂಡಿದ್ದ ಕ್ರಾಂತಿಕಾರಿ ಜೀವನದ ಎಲ್ಲ ಸಂಗತಿಗಳಿಂದ ಕೈ ತೊಳೆದುಕೊಂಡರು. ಅಷ್ಟಾದರೂ ಒಮ್ಮೆ ಆಪತ್ತೊಂದು ಬಂದೆರಗಿತು.
ಕೆಲವೊಮ್ಮೆ ಅಡಿಗೆ ಮನೆಯಲ್ಲಿ ಬೆಂಕಿ ಆರಿಸಿದ ಮೇಲೂ ಒಂದೆರಡು ಕಿಡಿ ಉಳಿಯುವ ಸಂಭವವಿದೆ. ಅಂತಹ ಕಿಡಿಯೇ ಬೆಳೆದು ಉರಿದಾಗ ಮನೆಯೇ ಸುಟ್ಟು ಹೋಗುವುದೂ ಅಸಾಧ್ಯವೇನಲ್ಲ. ಆದರೆ ಕ್ಲಪ್ತ ಸಮಯದಲ್ಲೆ ಅಂತಹ ಬೆಂಕಿಯನ್ನು ಆರಿಸಿ ಮನೆಯನ್ನು ಉಳಿಸಿದಂತೆ, ಡಾಕ್ಟರ್‌ಜಿ ಸಂಘವನ್ನು ಸಹ ಉಳಿಸಿದುದು ಅವರ ಚುರುಕುತನಕ್ಕೆ ಒಂದು ಸಾಕ್ಷಿ.
ಗಂಗಾಪ್ರಸಾದ ಪಾಂಡೆ ಡಾಕ್ಟರ್‌ಜಿಯವರ ಓರ್ವ ಹಳೆಯ ಕ್ರಾಂತಿಕಾರಿ ಮಿತ್ರ. ಆತ ಸನ್ಯಾಸಿಯಾಗಿ ಒಂದು ದೇವಾಲಯದಲ್ಲಿ ಇರುತ್ತಿದ್ದ. ಕಾಯಿಲೆಗೊಂಡಿದ ಆತ ವರ್ಧಾದಲ್ಲಿದ್ದ ತನ್ನ ಅಣ್ಣನ ಮನೆಗೆ ಬಂದ. ತಮ್ಮ ಬಳಿ ಯಾವುದೇ ಶಸ್ತ್ರ ಇರಿಸಿಕೊಳ್ಳಬಾರದೆಂಬ ಸ್ಪಷ್ಟ ಸೂಚನೆ ಇದ್ದರೂ ಸಹ ಪಾಂಡೆ ತನ್ನ ಪಿಸ್ತೂಲನ್ನು ಉಳಿಸಿಕೊಂಡಿದ್ದ. ಅವನು ಕಾಯಿಲೆ ಮಲಗಿದ್ದ ಅವಕಾಶ ಉಪಯೋಗಿಸಿ ಅವನ ಅನುಯಾಯಿಯೊಬ್ಬ ಆ ಪಿಸ್ತೂಲ್ಲಿನೊಂದಿಗೆ ಒಂದು ಸ್ಟೇಷನನ್ನು ಲೂಟಿ ಮಾಡಲು ತನ್ನ ಕೆಲವು ಮಿತ್ರರೊಡಗೂಡಿ ಪ್ರಯತ್ನಿಸಿದ.
ಡಾಕ್ಟರ್‌ಜಿಯವರಿಗೆ ಈ ಘಟನೆ ತಿಳಿಯಿತು. ಅದರ ಗಂಭೀರತೆ ಅವರು ಗ್ರಹಿಸಿದರು. ತಕ್ಷಣವೇ ವರ್ಧಾದಲ್ಲಿದ್ದ ತಮ್ಮ ಮಿತ್ರ ಅಪ್ಪಾಜಿ ಜೋಷಿಯವರ ಬಳಿ ಹೋದರು. "ನಾನೀಗ ಗಂಗಾಪ್ರಸಾದರ ಕುಟೀರಕ್ಕೆ ಹೋಗಬೇಕಿದೆ. ಅಲ್ಲಿರುವ ಶಸ್ತ್ರಾಸ್ತ್ರಗಳ ದುರುಪಯೋಗ ಆಗುತ್ತಿದೆ. ಅದು ಪೊಲೀಸರ ವಶವಾದಲ್ಲಿ ಭಾರೀ ಅಪಾಯ ಕಾದಿದೆ" ಡಾಕ್ಟರ್‌ಜಿಯವರೆಂದರು.
"ಡಾಕ್ಟರ್‌ಜಿ, ನಮ್ಮಿಬ್ಬರ ಮೇಲೂ ಗುಪ್ತಚರರ ಕಣ್ಣಿರುವುದು ತಮಗೆ ಗೊತ್ತಿದೆ. ಆ ಕುಟೀರದ ಸುತ್ತಲೂ ಈಗ ಪೊಲೀಸರಿದ್ದಾರೆ. ನಾವಲ್ಲಿ ಹೋಗುವುದು ಉಚಿತವಲ್ಲ" ಅಪ್ಪಾಜಿ ನುಡಿದರು.
"ನಿಮ್ಮ ಮಾತೇನೋ ಸತ್ಯವೇ. ಆದರೆ ನಾವೀಗ ಹೋಗದಿದ್ದಲ್ಲಿ ಭಾರೀ ಅಪಾಯ ಸಂಭವಿಸಬಹುದು. ನಡೆಯಿರಿ. ಬೇಗ ಹೋಗೋಣ". ಡಾಕ್ಟರ್‌ಜಿ ಅವಸರಿಸಿದರು.
ಮರುಮಾತಾಡದೇ ಅಪ್ಪಾಜಿ ಜೋಷಿ ಅವರೊಡನೆ ನಡೆದರು. ಮಧ್ಯರಾತ್ರಿ, ಸುತ್ತಲೂ ಕತ್ತಲು. ನೇರವಾಗಿ ಅವರಿಬ್ಬರೂ ಗಂಗಾಪ್ರಸಾದರ ಕುಟೀರ ತಲುಪಿದರು. ಡಾಕ್ಟರ್‌ಜಿ ಒಂದು ಮರದ ಬುಡದಲ್ಲಿ ನಿಂತರು. ಅಪ್ಪಾಜಿ ಮನೆಯೊಳಗೆ ಹೋಗಿ ಮಲಗಿದ್ದ ಗಂಗಾಪ್ರಸಾದರಿಗೆ ಸಂದೇಶ ತಲುಪಿಸಿದರು. ಗಂಗಾಪ್ರಸಾದರು ತಕ್ಷಣವೇ ಹೊರ ಬಂದು ತಮ್ಮೆಲ್ಲ ಆಯುಧಗಳನ್ನು ಡಾಕ್ಟರ್‌ಜಿಗೆ ಒಪ್ಪಿಸಿದರು.
ಡಾಕ್ಟರ್‌ಜಿ ಅಲ್ಲಿಂದ ಹೊರಟರು. ಇದ್ದಕ್ಕಿದ್ದಂತೇ ಯಾರೋ ಬಲಿಷ್ಠರಿಬ್ಬರು ಅವರ ಮೇಲೆ ಬಿದ್ದರು. ಡಾಕ್ಟರ್‌ಜಿ ಎರಡು ಹೆಜ್ಜೆ ಹಿಂದೆ ಬಂದರು. ಆಯುಧಗಳನ್ನು ಅಪ್ಪಾಜಿಯವರಿಗೆ ಕೊಟ್ಟರು. ಅವರು ಕ್ಷಣಾರ್ಧದಲ್ಲಿ ಅಲ್ಲಿಂದ ಓಡಿ ಕತ್ತಲಲ್ಲಿ ಕರಗಿದರು. ಡಾಕ್ಟರ್‌ಜಿ ಆ ದಾಂಡಿಗರಿಬ್ಬರ ಮೇಲೆ ಬಿದ್ದರು. ಸ್ವಲ್ಪ ಹೊತ್ತು ಗುದ್ದಾಟ ನಡೆಯಿತು. ಅವರಿಬ್ಬರೂ ಚೆನ್ನಾಗಿ ಪೆಟ್ಟು ತಿಂದರು. ಅವರನ್ನು ಅಲ್ಲೆ ಬಿಟ್ಟು ಡಾಕ್ಟರ್‌ಜಿ ಸಹ ಕತ್ತಲ್ಲಲ್ಲಿ ಮಾಯವಾದರು.
ಮರುದಿನ ನಾಗಪುರಕ್ಕೆ ಬಂದ ಡಾಕ್ಟರ್‌ಜಿ ಎಂದಿನಂತೆ ಶಾಂತವಾಗಿ ತಮ್ಮ ಕಾರ್ಯದಲ್ಲಿ ಮಗ್ನರಾದರು. ಅವರ ಸಮಯೋಚಿತ ಬುದ್ಧಿವಂತಿಕೆ ಮತ್ತು ಧೈರ್ಯದ ಕಾರಣ ಬಂದ ಅಪಾಯ ದೂರವಾಯಿತು. ಇಲ್ಲದೆ ಹೋದಲ್ಲಿ ಏನಾಗುತ್ತಿತ್ತೋ ಊಹಿಸುವುದೂ ಕಠಿಣವೇ. ಡಾಕ್ಟರ್‌ಜಿ ಸದಾ ಎಚ್ಚರಿಕೆಯಿಂದ ಇರುತ್ತಿದ್ದರು. ಆಂಗ್ಲ ಅಧಿಕಾರಿಗಳು ಹಾಗೂ ಹಲವಾರು ಅನ್ಯ ಸಂಸ್ಥೆಯವರೂ ಸಂಘದ ಮೇಲೆ ಆಕ್ರಮಣ ಮಾಡುವ ಹವಣಿಕೆಯಲ್ಲಿದ್ದರು. ಆದರೆ ಡಾಕ್ಟರ್‌ಜಿ ಕೆಲವೊಮ್ಮೆ ಶಕ್ತಿಯಿಂದ, ಇನ್ನೂ ಕೆಲವೊಮ್ಮೆ ಯುಕ್ತಿಯಿಂದ, ಸಂಘವನ್ನು ಉಳಿಸಿದರು, ಬೆಳೆಸಿದರು. ತಮ್ಮೆಲ್ಲ ಕೆಲಸಗಳನ್ನೂ ಅವರು ಮಾಡುತ್ತಿದ್ದುದು ಬಹಿರಂಗವಾಗಿಯೇ. ಅವರ ವ್ಯವಹಾರವೆಲ್ಲ ತೆರೆದಿಟ್ಟ ಪುಸ್ತಕದಂತೆ. ಅವರ ಮನೆ ಬಾಗಿಲು ಸಹ ಅಷ್ಟೇ. ಎಲ್ಲ ಕಾಲಕ್ಕೂ ತೆರೆದೇ ಇರುತ್ತಿತ್ತು, ಅದು.
No comments:
Post a Comment