Friday, 16 June 2017

ಜಂಗಲ್ ಸತ್ಯಾಗ್ರಹ



    ೧೯೩೦ ಮಾರ್ಚ್ ೧೨. ಅಂದೇ ಮಹಾತ್ಮಾ ಗಾಂಧಿಜಿ ಉಪ್ಪಿನ ಸತ್ಯಾಗ್ರಹಕ್ಕಾಗಿ ಅಹಮದಾಬಾದಿನಿಂದ ಹೊರಟರು. ಏಪ್ರಿಲ್ ೫ರಂದು ಅವರು ದಂಡಿ ತಲುಪಿದರು. ಅಲ್ಲಿ ಕಾನೂನು ಭಂಗ ಮಾಡಿ ಉಪ್ಪು ತಯಾರಿಸಿದರು. ಕಾನೂನು ಭಂಗ ಚಳವಳಿ ಆರಂಭ ಆದುದು ಹೀಗೆ. ದೇಶದ ತುಂಬ ಈ ಚಳವಳಿಯ ಅಲೆ ಹರಡಿತು. ಆದರೆ ಸಮುದ್ರವೇ ಇಲ್ಲದಿರುವಲ್ಲಿ ಉಪ್ಪಿನ ಕಾಯದೆ ಮುರಿಯಲು ಹೇಗೆ ಸಾಧ್ಯ? ಅಂತಹ ಕಡೆಗಳಲ್ಲಿ ಬೇರೆ ಕಾನೂನು ಮುರಿಯತೊಡಗಿದರು ಜನ. ಬಾಪೂಜಿ ಆಣೆ ಮಧ್ಯಪ್ರದೇಶದಲ್ಲಿ ಜಂಗಲ್ ಸತ್ಯಾಗ್ರಹ ಆರಂಭಿಸಿದರು. ಡಾಕ್ಟರ್‌ಜಿ ಅದರಲ್ಲಿ ಭಾಗವಹಿಸಿದರು.

    ಸತ್ಯಾಗ್ರಗದಲ್ಲಿ ಭಾಗವಹಿಸುವ ಮೊದಲು ಸ್ವಯಂಸೇವಕರನ್ನೆಲ್ಲಾ ಒಂದೆಡೆ ಸೇರಿಸಿದರು. ಸತ್ಯಾಗ್ರಹ ಏಕೆ ನಡೆಯುತ್ತಿದೆ? ಅದರಲ್ಲಿ ಏಕೆ ಭಾಗವಹಿಸಬೇಕು? ದೇಶದ ಪರಿಸ್ಥಿತಿ ಹೇಗಿದೆ? ಅದನ್ನೆಂತು ಬದಲಿಸಬಹುದು? ಈ ವಿಷಯಗಳ ಕುರಿತು ತಮ್ಮ ವಿಚಾರವನ್ನು ಸ್ವಯಂಸೇವಕರೆದುರು ಡಾಕ್ಟರ್‌ಜಿ ಇರಿಸಿದರು. ಯೋಜನೆಯಂತೆ ಜುಲೈ ೧೪, ೧೯೩೦ರಂದು ತಮ್ಮ ಗುಂಪಿನೊಡನೆ ನಾಗಪುರದಿಂದ ಅವರು ಹೊರಟರು. ಅವರನ್ನು ಬೀಳ್ಕೊಡಲು ನೂರಾರು ನಾಗರಿಕರು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ರೈಲು ಹೊರಡುತ್ತಿದ್ದಂತೆಯೇ "ಭಾರತ್ ಮಾತಾಕೀ ಜಯ್" ಘೋಷಣೆಯಿಂದ ಆಕಾಶ ಪ್ರತಿಧ್ವನಿಸಿತು.

    ಪ್ರತಿ ನಿಲ್ದಾಣದಲ್ಲಿಯೂ ಡಾಕ್ಟರ್‌ಜಿಯವರ ಭೇಟಿಗಾಗಿ ಜನ ಬರುತ್ತಿದ್ದರು. ಪ್ರತಿಯೊಂದು ಕಡೆ ಅವರನ್ನು ಸತ್ಕರಿಸಲಾಗುತ್ತಿತ್ತು. ಸಂಘದ ಸ್ವಯಂಸೇವಕರೂ ಬರುತ್ತಿದ್ದರು. ಮೂರ್ತಿಜಾಪುರ್ ನಿಲ್ದಾಣಲ್ಲಿ ಭೇಟಿಯಾದ ಸ್ವಯಂಸೇವಕರಿಗೆ ’ನಮ್ಮೊಂದಿಗೆ ಬನ್ನಿ, ಮನೆಯಲ್ಲಿದ್ದೇನು ಮಾಡುವಿರಿ?’ ಎಂದರು ಡಾಕ್ಟರ್‌ಜಿ. ಅವರ ಮಾತಿಗೆ ಎದುರಾಡದೇ ಆ ಸ್ವಯಂಸೇವಕರು ಟಿಕೆಟ್ ತೆಗೆದು ರೈಲು ಗಾಡಿ ಹತ್ತಿಯೇ ಬಿಟ್ಟರು. ತಾವು ಹೋದಲ್ಲಿ ಮುಂದೇನಾಗಬಹುದು ಇತ್ಯಾದಿ ಚಿಂತೆ ಅವರನ್ನು ಕಾಡಲೇ ಇಲ್ಲ. ಡಾಕ್ಟರ್‌ಜಿ ಅವರ ಮಾತಿನ ಮೋಡಿ ಅಂತಹುದು.

    ೧೯೩೦ ಜುಲೈ ೨೨ರಂದು ಯವತಮಾಳದ ಸಮೀಪದ ಕಾಡಿನಲ್ಲಿ ಡಾಕ್ಟರ್‌ಜಿ ಸತ್ಯಾಗ್ರಹ ನಡೆಸಿದರು. ಅವರಿಗೆ ೯ ತಿಂಗಳ ಸಶ್ರಮ ಕಾರಾವಾಸ ಶಿಕ್ಷೆ ವಿಧಿಸಲ್ಪಟ್ಟಿತು. ಅಕೋಲಾ ಬಂಧಿಖಾನೆಗೆ ಅವರನ್ನು ಕಳಿಸಲಾಯಿತು.

    ಸ್ಪರ್ಶಮಣಿಯ ಹತ್ತಿರ ಬಂದ ಕಬ್ಬಿಣವೂ ಬಂಗಾರ ಆಗುತ್ತದೆ. ಸಂತರ ಸಂಪರ್ಕಕ್ಕೆ ಬಂದ ಜನಸಾಮಾನ್ಯರೂ ಸತ್ಪುರುಷರಾಗುವರು. ಈ ಮಾತು ಡಾಕ್ಟರ್‌ಜಿಯವರ ಸಹವಾಸಕ್ಕೆ ಬಂದವರ ಪಾಲಿಗೂ ಸತ್ಯವೇ. ಅವರದು ಅದ್ಭುತ ವ್ಯಕ್ತಿತ್ವ. ಅಕೋಲಾ ಸೆರೆಮನೆಯ ವಾತಾವರಣವನ್ನೇ ಅವರು ಬದಲಿಸಿಬಿಟ್ಟರು. ಅವರ ವ್ಯವಹಾರ ಕೌಶಲ್ಯ ಹಾಗೂ ಮೃದು ಮಧುರ ಮಾತಿಗೆ ವಶರಾಗಿ ಜೈಲಿನ ಅಧಿಕಾರಿಗಳೆಲ್ಲರೂ ಮಿತ್ರರಾದರು. ವಿದರ್ಭ ಪಾಂತದ ಹಲವೆಡೆಯಿಂದ ಸ್ವಯಂಸೇವಕರೂ ಅಲ್ಲಿ ಬಂದಿದ್ದರು. ಡಾಕ್ಟರ್‌ಜಿ ಅಲ್ಲಿರುವುದು ತಿಳಿದು ಅವರಿಗೆ ಅತ್ಯಂತ ಆನಂದವಾಯಿತು. ಅಕೋಲಾದ ಡಾ|| ಠೋಸರ್, ಮೆಹೆಕರ್‌ನ ದಾದಾಸಾಹೇಬ ಸೋಮಣ್, ವರ್ಧಾದ ಅಪ್ಪಾಜಿ ಜೋಶಿ, ಯವತಮಾಳದ ಸ.ಹ. ಬಲ್ಲಾಳ್, ಆಕೋಟಾದ ದಾಜಿಸಾಹೇಬ ಬೆದರ್‌ಕರ್ ಮುಂತಾದ ಅತಿರಥ ಮಹಾರಥರೆಲ್ಲ ಅಲ್ಲಿ ಸೇರಿದ್ದರು. ಅವರೆಲ್ಲರಿಗೆ ಅದು ಸೆರೆಮನೆ ಎನಿಸಲೇ ಇಲ್ಲ. ಬದಲಾಗಿ ಸಂಘ ಶಿಕ್ಷಾವರ್ಗವೇ ಆಯಿತು.

    ಡಾಕ್ಟರ್‌ಜಿ ನಿತ್ಯ ಅಲ್ಲೆ ಹೊಸಬರ ಸಂಪರ್ಕ ಮಾಡುತ್ತಿದ್ದರು. ಅವರೊಡನೆ ಆಪ್ತ ಸಂಬಂಧ ಬೆಳೆಸುತ್ತಿದ್ದರು. ಅಲ್ಲಿದ್ದ ಹಲವಾರು ಗಣ್ಯರಿಗೆ ಪ್ರತಿಜ್ಞೆ ನೀಡಿ ಸಂಘದ ಸ್ವಯಂಸೇವಕರನ್ನಾಗಿಸಿದರು. ಡಾಕ್ಟರ್‌ಜಿಯವರ ದೊಡ್ಡತನ ಅನೇಕರಿಗೆ ಆ ಕಾರಾಗೃಹ ಜೀವನದಲ್ಲಿ ಅನುಭವಕ್ಕೆ ಬಂತು. ಕೆಲವು ನಾಯಕರು ದೂರದಿಂದ ಮಾತ್ರ ಬಹು ಮಧುರ. ಆದರೆ ಡಾಕ್ಟರ್‌ಜಿ ಹಾಗಲ್ಲ. ಅವರ ನಿಕಟ ಸಹವಾಸ ಅತ್ಯಂತ ಸಂತೋಷಪ್ರದ. ಹೊಸ ಪ್ರೇರಣೆಯ ಕಿರಣ ಅದು. ಹೊಸ ಹೊಸ ಸಲಹೆಯ ಬೆಳಕು ನೀಡುವಂತಹದು. ಡಾಕ್ಟರ್‌ಜಿಯವರ ಅಂತರ್ಬಾಹ್ಯ ಶುದ್ಧ. ಮನೋಭಾವ ನಿಷ್ಕಪಟ. ನಡವಳಿಕೆ ಪ್ರೇಮಮಯ. ಈ ಕಾರಣ ಅವರ ಸಹವಾಸವೇ ಅತ್ಯಂತ ಆಪ್ಯಯಮಾನ.

    ೧೯೩೧ ಫೆಬ್ರವರಿ ೧೪ರಂದು ಅವರು ಬಿಡುಗಡೆ ಹೊಂದಿ ನಾಗಪುರಕ್ಕೆ ಬಂದರು. ಇನ್ನೊಮ್ಮೆ ಅವರ ಶಕ್ತಿ ಸಾಮರ್ಥ್ಯಗಳೆಲ್ಲ ಸಂಘಕಾರ್ಯಕ್ಕೆ ಮುಡಿಪಾದವು. ನಿಧಾನವಾಗಿ ಬೇರೆ ಕೆಲಸಗಳಿಂದ ಅವರು ದೂರಾದರು.

No comments:

Post a Comment