Friday, 16 June 2017

ಇದೇ ಕಣ್ಣುಗಳಿಂದ ನೋಡಬಯಸುವೆ



    ;"ನಮ್ಮ ಕಾರ್ಯ ಬೇಗನೆ ಬೆಳಯಬೇಕಾಗಿದೆ. ೧೯೪೦ನೇ ವರ್ಷವೂ ವ್ಯರ್ಥವಾಗಿ ಕಳೆಯುವುದೇನು?"

    ಅಪ್ಪಾಜಿ ಜೋಷಿ ಹೌಹಾರಿ ಡಾಕ್ಟರ್‌ಜಿಯವರೆಡೆಗೆ ನೋಡಿದರು. ಗಾಢ ನಿದ್ರೆಯಲ್ಲಿದ್ದ ಡಾಕ್ಟರ್‌ಜಿ ಬಡಬಡಿಸುತ್ತಿದ್ದರು. ಕನಸಿನಲ್ಲಿಯೂ ಆ ಮಹಾಪುರುಷನಿಗೆ ಸಂಘ ಕಾರ್ಯದ ವಿಸ್ತಾರದ್ದೇ ಚಿಂತೆ. "ಇದೇ ದೇಹದಿಂದ ನಾನು ನನ್ನ ಧ್ಯೇಯ ಸಾಧಿಸಬೇಕು. ಇದೇ ಕಣ್ಣುಗಳಿಂದ ಸುಸಂಘಟಿತ ಭಾರತ ನೋಡಬೇಕು". ಇದು ಅವರಿಗಿದ್ದ ಉತ್ಕಟ ಹಂಬಲ. ಆದರೆ ನಿಲ್ಲದ ಕಾಯಿಲೆ, ದುರ್ಬಲಗೊಳ್ಳುತ್ತಿದ್ದ ಶರೀರ ಬೇರೊಂದು ಆಟ ಹೂಡಿದ್ದವು.

    ತನ್ನಂತೆಯೇ ಇನ್ನೂ ಅನೇಕ ಕಾರ್ಯಕರ್ತರನ್ನು ನಿರ್ಮಿಸಿದ್ದು ಅವರ ವೈಶಿಷ್ಟ್ಯ. ಕಾಲೇಜು ವಿದ್ಯಾರ್ಥಿಯಾಗಿ ಲಖ್ನೋಗೆ ಬಂದ ಭಾವುರಾವ್ ದೇವರಸ್ ಡಾಕ್ಟರ್‌ಜಿಯವರ ಪ್ರೇರಣೆಯಂತೆ ಲಖ್ನೋ, ಕಾನಪುರ ಹಾಗೂ ಉತ್ತರಪ್ರದೇಶದ ಹಲವಾರು ನಗರಗಳಲ್ಲಿ ಶಾಖೆ ಆರಂಭಿಸಿದ್ದರು. ಅದೇ ರೀತಿ ರಾಜಾಭಾವು ಪಾತುರಕರ್ ಪಂಜಾಬಿಗೆ ಹೋಗಿದ್ದರು. ಮಾಲವಾ ಹಾಗೂ ಮಹಾಕೋಶಲಗಳಲ್ಲಿ ಏಕನಾಥಜಿರಾನಡೆ ಸಂಚಾರ ಮಾಡುತ್ತಿದ್ದರು. ವಸಂತರಾವ್ ಓಕ್ ದಿಲ್ಲಿ ಹಾಗೂ ಸುತ್ತಮುತ್ತ ಸಂಘ ಕಾರ್ಯದ ವಿಸ್ತಾರ ಕೈಗೊಂಡಿದ್ದರು.

    "ಕೊಂಕಣದಲ್ಲಿ ಮಾಧವರಾವ್ ಮುಳೆ, ದಕ್ಷಿಣದಲ್ಲಿ ದಾದಾರಾವ್ ಪರಮಾರ್ಥ್, ಕಲ್ಕತ್ತೆಯಲ್ಲಿ ಬಾಳಾಸಾಹೇಬ ದೇವರಸ್, ಬಿಹಾರದಲ್ಲಿ ನರಹರಿ ಪಾರಖಿ, ಬಾಪುರಾವ್ ದಿವಾಕರ್ ಹೀಗೆ ಒಬ್ಬೊಬ್ಬ ಘಟಾನುಘಾಟಿಗೂ ಒಂದೊಂದು ಕ್ಷೇತ್ರ. ಶಾಂತ ಸೌಮ್ಯ ಆದರೆ ಅಷ್ಟೇ ಕಠೋರವ್ರತಿ ಬಾಬಾಸಾಹೇಬ ಆಪಟೆ ಅವರಿಗೆ ದೇಶವಿಡೀ ಪ್ರವಾಸದ ಹೊಣೆ. ಹೊಸ ಹೊಸ ಪ್ರಚಾರಕರನ್ನು ಹೊರಡಿಸುವ, ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುವ ಕೆಲಸ ಅವರದು.

    ಇವರೆಲ್ಲರೂ ಸುಶಿಕ್ಷಿತ ತರುಣರು. ಪದವೀಧರರು. ಕಾರ್ಯತತ್ಪರರು. ಧ್ಯೇಯನಿಷ್ಥರು. ಡಾಕ್ಟರ್‌ಜಿಯವರ ಆದೇಶದಂತೆ ತಮ್ಮೆಲ್ಲ ಸುಖಸ್ವಾರ್ಥಗಳನ್ನು ತೊರೆದು ಹೊರಟವರು. ಹಗಲು ರಾತ್ರಿ ಸಂಘ ಕಾರ್ಯಕ್ಕಾಗಿಯೇ ದುಡಿಮೆಯಲ್ಲಿ ಉನ್ಮತ್ತರಾಗಿದ್ದವರು. ಇದೇ ವೇಳೆ ಇವರೆಲ್ಲರಿಗೂ ಮುಕುಟ ಮಣಿ ಎನಿಸುವ ಇನ್ನೋರ್ವ ವ್ಯಕ್ತಿಗೂ ಡಾಕ್ಟರ್‌ಜಿ ಸಂಘದೀಕ್ಷೆ ನೀಡಿದರು.

    ಅವರ ಹೆಸರು ಮಾಧವ ಸಾದಾಶಿವ ಗೋಳವಳಕರ್. ಎಂ.ಎಸ್‍ಸಿ ಪದವಿ ಪಡೆದ ನಂತರ ಕೆಲಕಾಲ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದವರು. ಅವರು ನಾಗಪುರದಲ್ಲಿ ಎರಡು ವರ್ಷ ವಕೀಲಿ ಸಹ ಮಾಡಿದ್ದರು. ಶ್ರೀ ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿ ಸಾರಗಾಛಿ ಆಶ್ರಮದಲ್ಲಿ ಸ್ವಾಮಿ ಅಖಂಡಾನಂದರಿಂದ ದೀಕ್ಷೆ ಪಡೆದು ತಮ್ಮ ಗುರುಗಳ ಮಹಾಸಮಾಧಿಯ ನಂತರ ಅವರು ನಾಗಪುರಕ್ಕೆ ಮರಳಿದರು. ಆಗ ಅವರನ್ನು ಕಂಡ ಡಾಕ್ಟರ್‌ಜಿಯವರು ದೇಶಸೇವೆಯೂ ಈಶ್ವರ ಸೇವೆಯದೇ ಇನ್ನೊಂದು ರೂಪ ಎಂದು ಅವರಿಗೆ ಮನಗಾಣಿಸಿದರು.

    ಡಾಕ್ಟರ್‌ಜಿಯವರ ವ್ಯಕ್ತಿತ್ವ ಶ್ರೀ ಗೋಳವಳಕರ ಗೂರೂಜಿಯವರ ಮೇಲೆ ಪ್ರಭಾವ ಬೀರಿತು. ಅವರೂ ಸಂಘ ಕಾರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಡಾಕ್ಟರ್‌ಜಿ ಅವರನ್ನು ಅಖಿಲ ಭಾರತೀಯ ಸರ ಕಾರ್ಯವಾಹರನ್ನಾಗಿ ನಿಯುಕ್ತಿಸಿದರು. ಆ ಹೊತ್ತಿಗಾಗಲೇ ಕೃಷ್ಣರಾವ್ ಮೊಹರೀಲ್, ರಾಮಭಾವು ಜಾಮಗಡೆ, ಯಾದವರಾವ್ ಜೋಷಿ, ಬಾಪುರಾವ್ ಭಿಶೀಕರ್ ಮೊದಲಾದ ಅನೇಕ ನವಯುವಕರು ಡಾಕ್ಟರ್‌ಜಿಯವರ ಕೈಗಳಲ್ಲಿ ತಮ್ಮ ಬದುಕನ್ನು ಒಪ್ಪಿಸಿದ್ದರು.

    ತಮ್ಮ ವ್ಯಕ್ತಿಗತ ಆಸೆ ಆಕಾಂಕ್ಷೆ ಸುಖ ಸಂತೋಷಗಳನ್ನೆಲ್ಲ ತ್ಯಜಿಸಿ ದೇಶ ಹಿತಕ್ಕಾಗಿ ಜೀವನಪರ್ಯಂತ ಸಂಘ ಕಾರ್ಯ ಮಾಡುವ ನೂರಾರು ಕಾರ್ಯಕರ್ತರನ್ನಂತೂ ಡಾಕ್ಟರ್‌ಜಿ ಒಂದು ಕಡೆ ನಿರ್ಮಿಸಿದ್ದರು. ಅದೇ ರೀತಿ ಇನ್ನೊಂದು ಕಡೆ ತಮ್ಮ ಕುಟುಂಬ, ಕೃಷಿ, ವ್ಯಾಪಾರ, ಉದ್ಯೋಗ ಇತ್ಯಾದಿ ನಡೆಸಿಕೊಂಡು ಸಹ ನಿಷ್ಠೆಯಿಂದ ತ್ರಿಕರಣಪೂರ್ವಕ ಸಂಘಕಾರ್ಯ ಮಾಡುವಂತಹ ಇನ್ನೂ ಅನೇಕ ಗೃಹಸ್ಥ ಕಾರ್ಯಕರ್ತರನ್ನೂ ಅವರು ತಮ್ಮೊಂದಿಗೆ ಸೇರಿಸಿಕೊಂಡಿದ್ದರು. ಉಮರೇಡನ ಭಯ್ಯಾಜಿ ದಾಣಿ, ಟಿರ್ಮನಿಯ ಸರದಾರ್ ಭಾವು ಸಾಹೇಬ ಭುಸ್ಕುಟೆ, ಪುಣೆಯ ವಕೀಲ ಬಾಬಾರಾವ್ ಭಿಡೆ ಮೊದಲಾದವರು ಇವರಲ್ಲಿ ಪ್ರಮುಖರು.

    ತ್ಯಾಗ, ಸೇವೆ, ಸ್ವಚ್ಛತೆ, ಪರಿಶ್ರಮಗಳ ಹೊಸ ಅಲೆಯೇ ದೇಶದಲ್ಲಿ ಹರಡಿತು. ಸಂಘದ ಪ್ರಗತಿ ಕಂಡು ಎಲ್ಲರಿಗೂ ಆಶ್ಚರ್ಯ. ಹಲವಾರು ನಗರಗಳಲ್ಲಿ ವಿಜಯದಶಮಿಯಂದು ಸ್ವಯಂಸೇವಕರ ಪಥಸಂಚಲನಗಳು ನಡೆದಾಗ "ಈವರೆಗೆ ಹಿಂದುಗಳ ಇಂತಹ ದೊಡ್ಡ ಸಂಘಟನೆಯನ್ನು ಯಾರೂ ಕಟ್ಟಿರಲಿಲ್ಲ. ಹಿಂದುಗಳು ಪರಸ್ಪರ ಜಗಳಾಡಲು ಮಾತ್ರವೇ ಹುಟ್ಟಿರುವರು. ಅವರು ಒಗ್ಗಟ್ಟಾಗುವುದು ಎಂದಿಗೂ ಸಾಧ್ಯವಿಲ್ಲ ಎಂದು ನಂಬಿದ್ದೆವು. ಆದರೆ ಡಾಕ್ಟರ್‌ಜಿ ಅಸಾಧ್ಯವನ್ನು ಸಾಧ್ಯಗೊಳಿಸಿದ್ದಾರೆ. ನಮ್ಮ ಕಣ್ಣುಗಳು ಧನ್ಯವಾದವು" ಎಂದು ಜನರು ಆಡಿಕೊಳ್ಳುವಂತಾಯಿತು.

    ಜನರು ಹೊಗಳುತ್ತಿದ್ದುದೇನೋ ನಿಜ. ಆದರೆ ಡಾಕ್ಟರ್‌ಜಿಯವರಿಗೆ ಮಾತ್ರ ಅದರಲ್ಲಿ ಸಮಾಧಾನ ಸ್ವಲ್ಪವೂ ಇರಲಿಲ್ಲ. ಅವರು ಹೇಳುತ್ತಿದ್ದುದೇ ಬೇರೆ. "ಇದು ಆರಂಭ ಮಾತ್ರ. ನಾಲ್ಕು ಮಂದಿ ಸಹ ಎಲ್ಲಿ ಒಂದಾಗುತ್ತಿರಲಿಲ್ಲವೋ ಅಂತಹ ಕಡೆ ಈಗ ನಲ್ವತ್ತು ಜನ ಸೇರುತ್ತಿದ್ದಾರೆ ಅಷ್ಟೇ. ನಾವಿದರಿಂದಲೇ ತೃಪ್ತರಾಗಬಾರದು. ಇನ್ನೂ ಅದೆಷ್ಟು ಸಮಾಜ ಬಾಂಧವರು ಸಂಘಟಿತರಾಗಿಲ್ಲ ಎಂಬುದನ್ನು ಗಮನಿಸೋಣ. ಸಾವಿರಾರು ಗ್ರಾಮಗಳಿನ್ನೂ ಬಾಕಿ ಉಳಿದಿವೆ. ನಗರಗಳಲ್ಲಿನ ನೂರಾರು ಸ್ಥಾನಗಳಿಗೆ ನಾವಿನ್ನೂ ತಲುಪಿಲ್ಲ. ಹಲವಾರು ಸಮಸ್ಯೆಗಳಿನ್ನೂ ಜೀವಂತವೇ ಇವೆ. ನಮ್ಮ ದೇಶದ ದಾಸ್ಯ ಇನ್ನೂ ತೊಲಗಿಲ್ಲ. ನಮ್ಮ ಸಮಾಜ ಈಗಲೂ ದುರ್ಬಲ, ಧ್ಯೇಯಹೀನವಾಗಿಯೇ ಉಳಿದಿದೆ".

    "ನಾನು ಯಾರು? ನನ್ನ ಕರ್ತವ್ಯ ಏನು? ಈ ಜ್ಞಾನ ನಮ್ಮ ಹಿಂದು ಸಮಾಜಕ್ಕಿನ್ನೂ ಬಂದಿಲ್ಲ. ನಾವು ಎಲ್ಲರನ್ನೂ ತಲುಪಬೇಕು. ಎಲ್ಲರ ಹೃದಯಗಳಲ್ಲಿ ದೇಶಭಕ್ತಿ ಹಾಗೂ ಸಾಮಾಜಿಕ ಭಾವನೆಗಳನ್ನು ನೆಲೆಗೊಳಿಸಬೇಕು. ಈ ಹಿಂದು ರಾಷ್ಟ್ರವನ್ನು ಬಲಶಾಲಿ, ವೈಭವಶಾಲಿಯನ್ನಾಗಿಸಬೇಕು". ಡಾಕ್ಟರ್‌ಜಿ ಕಾಣುತ್ತಿದ್ದ ಕನಸು ತುಂಬ ದೂರಗಾಮಿ.

    ಹಗಲು ರಾತ್ರಿ ಅವರಿಗೆ ಇದೊಂದೇ ಯೋಚನೆ. ಆದರೆ... ಅವರ ಶರೀರ ಸ್ವಾಸ್ಥ್ಯ ದಿನ ಕಳೆದಂತೆ ದುರ್ಬಲಗೊಳ್ಳುತ್ತಿತ್ತು. ರಾಜಗೀರ್‌ನಲ್ಲಿ ಅನೇಕ ದಿನಗಳ ಕಾಲ ಉಪಚಾರ ನಡೆದರೂ ಆವರ ದೇಹಸ್ಥಿತಿ ಸುಧಾರಿಸಲಿಲ್ಲ. ಡಾಕ್ಟರ್‌ಜಿ ತಮ್ಮ ಶರೀರದ ಚಿಂತೆಯನ್ನೇ ಬಿಟ್ಟರು. ಮೊದಲಿನಂತೆಯೇ ಸಂಘಕಾರ್ಯಕ್ಕಾಗಿ ಪ್ರವಾಸ ಆರಂಭಿಸಿದರು. ಹೊಸ ಹೊಸ ಸ್ಥಳಗಳಿಗೆ ಹೋಗುವ, ಅಲ್ಲಿ ಸ್ವಯಂಸೇವಕರ, ಗಣ್ಯರ ಭೇಟಿ ಮಾಡುವ, ಅವರಿಗೆ ಸಂಘ ಕಾರ್ಯದ ಮಹತ್ವ ತಿಳಿಸುವ ಇತ್ಯಾದಿ ಅನೇಕ ವಿಧ ಕೆಲಸಗಳನ್ನು ಇನ್ನೊಮ್ಮೆ ಭರದಿಂದ ನಡೆಸತೊಡಗಿದರು.

No comments:

Post a Comment