Friday, 16 June 2017

ವಿಚಾರ-ಮಂಥನ



    ಸೆರೆಯಲ್ಲಿ ಇದ್ದಾಗಲೂ ಡಾಕ್ಟರ್‌ಜಿ ಸುಮ್ಮನೆ ಕಾಲಕಳೆಯುತ್ತಿರಲಿಲ್ಲ. ಬದಲಾಗಿ ದೇಶದ ವಿವಿಧ ಸಮಸ್ಯೆಗಳ ಕುರಿತು ಗಹನವಾದ ಚಿಂತನೆ ನಡೆಸಿದರು. ದೊಡ್ಡವರು ಚಿಕ್ಕವರೆನ್ನದೆ ಎಲ್ಲಾ ಕಾರ್ಯಕರ್ತರೊಡನೆ ವಿಚಾರ ವಿನಿಮಯ ನಡೆಸಿದರು. ರಾತ್ರಿ ಸೆರೆಮನೆ ಬಾಗಿಲು ಮುಚ್ಚಿದಾಗ ಹಲವರು ಸುಸ್ತಾಗಿ ಅಥವಾ ದುಃಖದಿಂದ ಮಲಗಿಬಿಡುತ್ತಿದ್ದರು. ಆದರೆ ಡಾಕ್ಟರ್‌ಜಿಯವರಿಗೆ ಹಾಸಿಗೆಯ ಮೇಲೆ ಮಲಗಿದಾಗಲೂ ನಿದ್ರೆ ಬರುತ್ತಿರಲಿಲ್ಲ. ಭಾರತವರ್ಷದ ಸಮಗ್ರ ಇತಿಹಾಸ ಕಣ್ಣ ಮುಂದೆ ತೆರೆತೆರೆಯಾಗಿ ಕಾಣುತ್ತಿತ್ತು. ನಿದ್ರೆ ಬರುವುದಾದರೂ ಹೇಗೆ? ದಿನವಿಡೀ ಯಾರ‍್ಯಾರು ಏನು ಹೇಳಿದರು? ಯಾರ ವಿಚಾರ ಏನು? ಯಾರ ಮಾತಿನಲ್ಲಿ ಸತ್ಯವಿದೆ? ದೇಶದ ಉದ್ಧಾರಕ್ಕಾಗಿ ಯಾವ ಮಾರ್ಗ ಅನುಸರಿಸಬೇಕು? ಈ ಪ್ರಶ್ನೆಗಳೇ ಅವರ ತಲೆ ತುಂಬಾ. ಕೆಲವೊಮ್ಮೆ ರಾತ್ರಿಯಿಡೀ ಹೀಗೆಯೇ ಕಳೆಯುತ್ತಿತ್ತು. ಅವರ ಮನಸ್ಸಿನಲ್ಲಿ ಸದಾ ಭಾವನೆಗಳದೇ ತುಮುಲ.

    "..... ನಮ್ಮ ನಾಡಿನ ಪರಿಸ್ಥಿತಿ ಅದೆಷ್ಟು ದಯನೀಯ? ಎತ್ತ ನೋಡಿದರತ್ತ ದುಃಖ, ದೈನ್ಯತೆ. ಹೀಗೇಕೆ? ನಮ್ಮ ದೇಶ ವಿಶಾಲವಾದುದು. ಜನರು ಜಾಣರು. ಶೂರರು. ಶ್ರೇಷ್ಠ ಧರ್ಮ. ಪ್ರಾಚೀನ ಗೌರವಶಾಲಿ ಇತಿಹಾಸ ನಮ್ಮದು. ಇಷ್ಟಾದರೂ ನಾವೇಕೆ ಗುಲಾಮರಾದೆವು? ಸಹಸ್ರಾರು ವರ್ಷಗಳ ಈ ದಾಸ್ಯವೇಕೆ? ಖೈಬರ್, ಬೋಲನ್ ಕಣಿವೆಗಳ ಮೂಲಕ ಆಕ್ರಮಣ ಮಾಡಿದ ಅಪಘಾನ್, ಪಠಾಣ, ಮೊಗಲರ ಸೇನೆಗಳು ಸಣ್ಣ ಸಣ್ಣವು. ಇಂಗ್ಲೀಷರಾದರೋ ವ್ಯಾಪಾರಕ್ಕಾಗಿ ನಮ್ಮ ದೇಶಕ್ಕೆ ಬಂದರು.....

    ..... ನಮ್ಮ ನಾಡಿನ ಜನಸಂಖ್ಯೆಯೂ ಅಪಾರ. ನಮ್ಮಲ್ಲಿ ರಾಜರಿದ್ದರು. ಸೇನಾಪತಿಗಳಿದ್ದರು. ಅವರ ಬಳಿ ಸೈನ್ಯಗಳಿದ್ದವು. ಅವರು ಶೂರರಾಗಿದ್ದರು. ಶಸ್ತ್ರಗಳಿಗೇನೂ ಕೊರತೆಯಿರಲಿಲ್ಲ. ಆದರೂ ಏಕೆ ಸೋತರು? ಉತ್ತರದ ಆಕ್ರಮಣಕಾರರಿಂದಲೇ ಹೀಗಾಯಿತೇನು? ಆಂಗ್ಲರಿಂದಾಗಿಯೇ ನಮ್ಮದೆಲ್ಲವನ್ನೂ ನಾವು ಕಳೆದುಕೊಂಡೆವೇನು? ಇಲ್ಲ. ಖಂಡಿತ ಇಲ್ಲ. ನಮ್ಮ ದುರ್ಗತಿಗೆ ನಾವೇ ಕಾರಣರು. ನಾವೇ ಅದಕ್ಕೆ ಹೊಣೆ. ನಮ್ಮೊಳಗಿನ ಆಲಸ್ಯವೇ ನಮ್ಮನ್ನು ದಾಸ್ಯಕ್ಕೆ ತಳ್ಳಿತು. ನಮ್ಮ ನಡುವಿನ ಜಗಳವೇ ನಮ್ಮ ದಾಸ್ಯಕ್ಕೆ ಕಾರಣ. ನಮ್ಮನ್ನು ನಾವೇ ಚಿಕ್ಕಪುಟ್ಟ ಪಂಗಡಗಳಾಗಿ ಒಡೆದುಕೊಂಡೆವು. ನಮ್ಮ ದೇಶವನ್ನು ನಾವೇ ತುಂಡು ತುಂಡು ಮಾಡಿದೆವು. ಸಮಗ್ರ ದೇಶದ ವಿಚಾರವನ್ನೇ ನಾವು ಮಾಡಲಿಲ್ಲ. ಮನಸ್ಸು ಚಿಕ್ಕದಾಯಿತು. ಪಕ್ಕದ ಮನೆ ಉರಿಯುತ್ತಿದ್ದರೂ ನನಗೇನು ಎಂಬ ಭಾವ ಬೆಳೆಯಿತು. ಸಮೀಪದ ಹಳ್ಳಿಯನ್ನು ದರೋಡೆ ಮಾಡುತ್ತಿದ್ದರೂ ಮಾಡಲಿ ಬಿಡು ಎಂಬ ಸ್ಥಿತಿ. ನಮ್ಮದಾಯಿತು. ನನ್ನ ಮನೆ, ನನ್ನ ಜಮೀನು, ನನ್ನ ಹೆಂಡತಿ ಮಕ್ಕಳು, ನನ್ನ ರಾಜ್ಯ ಇವೇ ವಿಚಾರ ಎಲ್ಲರ ಮನದಲ್ಲಿ. ನನ್ನ ದೇಶ, ನನ್ನ ಧರ್ಮ, ನನ್ನ ಸಂಸ್ಕೃತಿ, ನನ್ನ ಸಮಾಜ ಈ ಚಿಂತೆಯೇ ಬಾರದಾಯಿತು. ಅದರ ಪರಿಣಾಮ..... ನಾವು ದಾಸ್ಯಕ್ಕೊಳಗಾದೆವು. ನನ್ನ ಹಾಗೂ ಈ ನಾಡಿನ ಸಂಬಂಧ ನನ್ನ ದೈನಂದಿನ ಕಾರ್ಯಗಳಲ್ಲಿ ಪ್ರಕಟವಾಗಬೇಕು. ನನ್ನದೆಲ್ಲವೂ ಈ ಸಮಾಜದ ಕೃಪೆಯಿಂದಲೇ ನಡೆಯುತ್ತಿದೆ. ನಾನದಕ್ಕೆ ಕೃತಜ್ಞನಾಗಿರಬೇಕು. ಸರಿಯಾದ ಪ್ರತ್ಯುಪಕಾರ ಮಾಡಬೇಕು..... ಈ ವಿಷಯವನ್ನೇ ನಾವು ಮರೆತೆವು. ಆದ್ದರಿಂದಲೇ ಪಾರತಂತ್ರ್ಯಕ್ಕೆ ಈಡಾದೆವು. ನಮ್ಮ ದೇಶದಲ್ಲಿ ಅನೇಕ ಪ್ರಾಂತಗಳಿವೆ. ಅನೇಕ ಭಾಷೆಗಳಿವೆ. ಅನೇಕ ಮತ, ಪಂಥಗಳಿವೆ. ಹಲವು ರೀತಿಯ ವೇಷ, ಆಹಾರ, ವಿಹಾರ. ಆದರೂ ಹೃದಯ ಒಂದೇ. ಎಲ್ಲರಲ್ಲಿಯೂ ಹರಿವ ರಕ್ತ ಒಂದೇ. ಈ ವಿಷಯ ಮರೆತೇಬಿಟ್ಟೆವು. ಹಾಗೆಂದೇ ನಾವು ದಾಸ್ಯಕ್ಕೆ ಒಳಗಾದೆವು.

    "ನಮ್ಮ ರಾಷ್ಟ್ರವಿಡೀ ಓರ್ವನೇ ಸಮಾಜ ಪುರುಷನಂತೆ. ಆತನಿಗೆ ಕೋಟಿ ಕೋಟಿ ಕೈ, ಕಾಲು, ತಲೆಗಳು. ನಮ್ಮ ಈ ನಾಡು ಪರಮೇಶ್ವರನ ಪ್ರತಿರೂಪ. ನಾವಿದನ್ನೆಲ್ಲ ಮರೆತೇಬಿಟ್ಟೆವು. ಆದ್ದರಿಂದಲೇ ನಾವು ಇನ್ನೊಬ್ಬರ ಆಳ್ವಿಕೆಗೆ ಒಳಗಾದೆವು. ನಮ್ಮ ಆಚರಣೆಯಲ್ಲಿ ಪ್ರೀತಿ, ನೀತಿ, ಆದರ, ವಿಶ್ವಾಸ, ಸ್ನೇಹ, ಅನುಶಾಸನ ಇಲ್ಲವಾದವು. ಹಾಗೆಂದೇ ನಾವು ಬೇರೆಯವರ ಕಾಲಿಗೆ ಬೀಳಬೇಕಾಯಿತು. ನಾವು ತಾಯಿ ಭಾರತಿಯ ಮಕ್ಕಳು. ಅಣ್ಣ ತಮ್ಮಂದಿರು ಎಂಬುದನ್ನೇ ಮರೆತೆವು. ಬಡವ-ಬಲ್ಲಿದ, ಹಳ್ಳಿಗ-ಪಟ್ಟಣಿಗ, ವಿವಿಧ ಜಾತಿ, ಮತ, ಪಂಥ, ಪ್ರಾಂತ, ಹಲವು ಉದ್ಯೋಗ ಇಷ್ಟೆಲ್ಲ ಇದ್ದರೂ ನಾವೆಲ್ಲ ಒಂದೇ ಎಂಬ ಸತ್ಯ ಮರೆತೆವು. ಅದಕ್ಕಾಗಿ ನಮ್ಮ ನಾಡು ಈ ದುರ್ದೆಶೆಗೆ ಇಳಿಯಿತು.

    "ನಮ್ಮ ಈ ದೀನ ಸ್ಥಿತಿಯನ್ನು ದೂರಗೊಳಿಸಲು ಮೊದಲು ನಮ್ಮೊಳಗಿನ ದುರ್ಗುಣಗಳನ್ನೇ ದೂರ ಮಾಡಬೇಕು. ಈ ಕಾರ್ಯ ಭಾಷಣ ಲೇಖನ ಅಥವಾ ಚಳವಳಿಗಳಿಂದ ಆಗದು. ಇಂಗ್ಲೀಷರನ್ನು, ಮುಸಲ್ಮಾನರನ್ನು ದೂರುವುದರಿಂದಲೂ ಆಗದು. ವ್ಯಾಪಕ ಸಾಮಾಜಿಕ ಭಾವನೆಯನ್ನು ಪುನಃ ಎಬ್ಬಿಸಬೇಕಾಗಿದೆ. ಮತ್ತೆ ಈ ರಾಷ್ಟ್ರಜೀವನದಲ್ಲಿ ಅನುಶಾಸನವನ್ನು ನಿರ್ಮಿಸಬೇಕಾಗಿದೆ. ಬಂಧುತ್ವದ ಭಾವನೆಯನ್ನು ಬೆಳಸಬೇಕಾಗಿದೆ. ಈ ಕಾರ್ಯಕ್ಕೆ ಯುವಕರನ್ನು ಜೋಡಿಸಬೇಕು. ಅವರಿಗೆ ಈ ಕಾರ್ಯದ ಮಹತ್ವವನ್ನು ಮನಗಾಣಿಸಬೇಕು. ನಿಯಮಬದ್ಧರಾಗಿರುವ ಚಿಕ್ಕ ಪುಟ್ಟ ಕಾರ್ಯಗಳನ್ನೂ ದಕ್ಷತೆಯಿಂದ ಮಾಡುವಂತಹ ತ್ಯಾಗಿಗಲು, ಸೇವಾವ್ರತಿಗಳು, ದೇಶ ಧರ್ಮಕ್ಕಾಗಿ ತಮ್ಮ ಮನೆ ಮಠ ಬಿಟ್ಟು, ಸುಖ ತ್ಯಜಿಸಿ, ದೇಶ ಕಾರ್ಯವನ್ನೇ ಹಿರಿದೆಂದು ಭಾವಿಸುವ ಕಾರ್ಯಕರ್ತರು, ಅಂತಹವರ ತಂಡ ನಿರ್ಮಿಸಬೇಕು. ಈ ಎಲ್ಲಾ ಕೆಲಸ ಮಾಡಬೇಕಾದವರು ಯಾರು? ನಾನೇ ಮಾಡುವೆ. ನನ್ನಿಂದಲೇ ಇದು ಆರಂಭವಾಗಲಿ. ಮಾತೃಭೂಮಿಯ ಸ್ವಯಂಸೇವಕನಾಗುವೆ. ಒಂದು ದೀಪ ಇನ್ನೊಂದು ದೀಪವನ್ನು ಹೊತ್ತಿಸುವುದು. ಅಂತೆಯೇ ಒಬ್ಬರಿಂದ ಇನ್ನೂ ಅನೇಕರು ತಯಾರಾಗುವರು. ಗ್ರಾಮ-ಗ್ರಾಮ, ನಗರ-ನಗರ, ಹಳ್ಳಿ-ಪಟ್ಟಣ. ದೇಶದ ಮೂಲೆ ಮೂಲೆಗಳಲ್ಲಿ ರಾತ್ರಿ ಹಗಲು ಸ್ವದೇಶ ಹಿತ ಚಿಂತಿಸುವ ಸ್ವಯಂಸೇವಕರ ತಂಡವೇ ಎದ್ದು ನಿಲ್ಲಬೇಕು. ಆಗ ಈ ನಾಡಿನ ಸಮಸ್ಯೆಗಳೆಲ್ಲ ಪರಿಹಾರವಾಗಬಲ್ಲವು. ನಮ್ಮ ದೇಶ ಪುನಃ ಉಜ್ವಲ ಪ್ರಭೆಯಿಂದ ಮೇಲೆದ್ದು ನಿಲ್ಲುವುದು. ಆಗ ನಮ್ಮ ಈ ನಾಡು ಸುಖೀ, ಸಮೃದ್ಧ, ವೈಭವಶಾಲಿ ಆಗುವುದು. ದೃಢಪ್ರತಿಜ್ಞೆಯ ಸಹಸ್ರಾರು ದೇಶಭಕ್ತರ ತರುಣರ ತಂಡ ಎದ್ದು ನಿಂತಾಗ ಮಾತ್ರ ಇದು ಸಾಧ್ಯ. ಇದು ಆಗುವುದಾದರೂ ಹೇಗೆ? ನಾನು ಇದೇ ದಿಕ್ಕಿನಲ್ಲಿ ಪ್ರಯತ್ನ ಆರಂಭಿಸುವೆ....."

    ಸೆರೆಮನೆಯಲ್ಲಿ ಡಾಕ್ಟರ್‌ಜಿ ಒಂಟಿಯಾಗಿದ್ದಾಗಲೆಲ್ಲಾ, ಅವರ ಮನದಲ್ಲಿ ಇಂಥವೇ ಸಾವಿರಾರು ಯೋಚನಾ ತರಂಗಗಳು, ಭಾವನೆಗಳ ತುಮುಲ. ಅಂತಹ ವಿಚಾರ ಮಂಥನದಿಂದ ಹೊರಬಂದ ನವನೀತವೇ ರಾಷ್ಟ್ರೀಯ ಸ್ವಯಂಸೇವಕ ಸಂಘ.

No comments:

Post a Comment