ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ
ರಾಮಕೃಷ್ಣರ ಭೀಮಶಿಷ್ಯನೆ ವೀರವೇದಾಂತಿ
ಭಾರತಾಂಬೆಯ ಧೀರಪುತ್ರನೆ ಸಾಧುಭೈರವನೇ
ಸ್ಥೈರ್ಯದಚಲನೆ ಧೈರ್ಯದಂಬುದಿ ಜಯತು ಜಯ ಜಯತು ||ಪ||
ಮೊರೆದು ಗರ್ಜಿಪ ಕಡಲವಾಣಿಯು ನಿನ್ನ ವರವಾಣಿ
ತಾರಮಿಂಚನು ನಗುವ ತೇಜವು ನಿನ್ನ ಮೈಕಾಂತಿ
ಆಳವಂಬುಧಿ ಆಳಮೇರೆಯು ನಭದ ವಿಸ್ತಾರ
ಮಂದರಾಗ್ನಿಯ ಮೀರದಚಲನು ನೀನು ಯೋಗೀಂದ್ರ ||೧||
ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರ ಮಂತ್ರ
ನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ
ನಮ್ಮ ಹೃದಯಕೆ ಹೃದಯ ನೀಡೈ ಶಕ್ತಿಸಾಗರನೇ
ಯಮನ ನುಂಗಿದ ರಾಜಯೋಗಿಯೆ ರುದ್ರಸನ್ಯಾಸಿ ||೨||
ನಿನ್ನ ಧೈರ್ಯ ಸ್ಥೈರ್ಯ ದೃಢತೆಯು ನಿನ್ನ ಸವಿಶಕ್ತಿ
ಭಾರತೀಯರಿಗಿಂದು ಬೇಕಾಗಿಹುದು ದಿವ್ಯಾತ್ಮ
ರುದ್ರ ನರ್ತನವೆಸಗು ಹೃದಯದಿ ಬುದ್ಧಿ ಭೈರವನೇ
ರುದ್ರಭೂಮಿಗಳಾಗಲೆಮ್ಮೀ ಕ್ಷುದ್ರ ಹೃದಯಗಳು ||೩||
No comments:
Post a Comment