೧೯೨೨ರಲ್ಲಿ ಡಾಕ್ಟರ್‌ಜಿ ಸೆರೆಮನೆಯಿಂದ ಹೊರಬಂದರು. ಮೊದಲಿನಂತೆಯೇ ಪುನಃ ಅವರ ವಿವಿಧ ಚಟುವಟಿಕೆಗಳಲ್ಲಿ ತೊಡಗಿದರು. ತಮ್ಮ ಮನದ ಮೂಸೆಯಲ್ಲಿ ಸಿದ್ಧವಾದ ವಿಚಾರಕ್ಕೆ ಹೊಂದುವ ತರುಣರ ಶೋಧನೆಯಲ್ಲಿ ಈಗ ಅವರಿಗೆ ಆಸಕ್ತಿ. ಹಲವರೊಡ ನಿರಂತರ ಸಂಪರ್ಕ. ಒಂದಿಲ್ಲೊಂದು ನೆವದಿಂದ ಅವರನ್ನೆಲ್ಲ ಒಂದೆಡೆ ಸೇರಿಸುವ ಪ್ರಯತ್ನ. ಅಲ್ಲಿ ಹತ್ತು ಹಲವು ತರದ ಚರ್ಚೆ, ವಿಚಾರ ಮಂಥನ. ೧೯೨೫ರ ವಿಜಯದಶಮಿಯಂದು (ಸೆಪ್ಟೆಂಬರ್ ೨೭, ಭಾನುವಾರ) ಅವರು ’ರಾಷ್ಟ್ರೀಯ ಸ್ವಯಂಸೇವಕ ಸಂಘ’ವನ್ನು ಸ್ಥಾಪಿಸಿದರು. ನಾಗಪುರದಲ್ಲಿ ಮಹಾಲ್ ಒಂದು ಮೊಹಲ್ಲ. ಅಲ್ಲಿ ಸರದಾರ ಮೋಹಿತೆಯವರ ಸಣ್ಣದೊಂದು ಮುರುಕು ವಾಡೆ. ಒಂದು ಕಾಲದಲ್ಲಿ ಭವ್ಯ ಪ್ರಾಸಾದವಾಗಿದ್ದ ಲಕ್ಷಣ ಇನ್ನೂ ಉಳಿದಿದ್ದವು. ಅಲ್ಲಿಯೇ ಡಾಕ್ಟರ್‌ಜಿಯವರ ಸಂಗಡಿಗರ ನೆರವಿ ನೆರೆಯುತ್ತಿತ್ತು.
ಪ್ರಾರಂಭದಲ್ಲಿ ವಾರಕ್ಕೊಮ್ಮೆ, ನಂತರ ದಿನನಿತ್ಯ ಸೇರತೊಡಗಿದರು. ಚರ್ಚೆ, ವಾದ, ವಿವಾದ ಬಿರುಸಿನಿಂದ ನಡೆಯುತ್ತಿದ್ದವು. ಹಲವು ತೆರನ ಪ್ರಶ್ನೆಗಳು, ಅವಕ್ಕೆಲ್ಲ ಡಾಕ್ಟರ್‌ಜಿಯವರ ಉತ್ತರ, ಹೊಸ ಹೊಸ ವಿಷಯ, ನವೀನ ವಿಚಾರಗಳು. ಆದರೆ ಡಾಕ್ಟರ್‌ಜಿ ತಾವು ಮಾತ್ರ ಕಡಿಮೆ ಮಾತನಾಡುವರು. ಉಳಿದವರಿಗೇ ಹೆಚ್ಚು ಅವಕಾಶ. ಡಾಕ್ಟರ್‌ಜಿ ಆಡಿದ ಪ್ರತಿ ಮಾತುಗಳೂ ಇತರರ ಮೇಲೆ ಗಹನ ಪ್ರಭಾವ ಬೀರುತ್ತಿದ್ದವು. ಅವರ ಮಾತುಗಳು ಎಲ್ಲರಿಗೂ ಒಪ್ಪಿಗಯಾಗುವಂತಹವು.
ಒಂದು ದಿನ ಓರ್ವ ಯುವಕನೆಂದ - "ನಾವು ನಿತ್ಯ ಸೇರುತ್ತೇವೆ. ಮಾತನಾಡುತ್ತೇವೆ - ಇದರೊಡನೆ ಏನಾದರೂ ಕಾರ್ಯಕ್ರಮ ಮಾಡೋಣ".
ಆಗ ಆರಂಭವಾಯಿತು ಚರ್ಚೆ. ಕಾರ್ಯಕ್ರಮ ಏನು, ಹೇಗೆ ಇತ್ಯಾದಿ. ಈ ಸಲಹೆ ಡಾಕ್ಟರ್‌ಜಿಗೆ ಯೋಗ್ಯ ಎನಿಸಿತು. ಅದಕ್ಕೊಂದು ಯೋಗ್ಯ ದಿಕ್ಕು ತೋರಿಸಿದರು.
ಆಟ, ವ್ಯಾಯಾಮ, ಲಾಠಿ, ಖಡ್ಗ ಮೊದಲಾದ ವೀರ್ಯವತ್ತಾದ ಕಾರ್ಯಕ್ರಮ ನಡೆಯತೊಡಗಿದವು.
ಮರುದಿನ ಯುವಕರೆಲ್ಲ ಮೈದಾನಕ್ಕೆ ಬಂದರು. ಅವರು ಬರುವ ಮೊದಲೇ ಕ್ರೀಡಾಂಗಣ ಅವರ ಸ್ವಾಗತಕ್ಕೆ ಸಿದ್ಧ. ಎಲ್ಲೂ ಕಸ ಇಲ್ಲ. ಮುಳ್ಳು ಕಲ್ಲು ಒಂದಿನಿತೂ ಇಲ್ಲ. ನೀರು ಚಿಮುಕಿಸಿದೆ. ಕಬಡ್ಡಿ ಆಡಲು ಗೆರೆ ಸಹ ಎಳೆದಿದೆ.
"ಯಾರು ಮೊದಲು ಬಂದವರು? "ಇದನ್ನೆಲ್ಲ ಮಾಡಿದವರು ಯಾರು?" ಒಬ್ಬರು ಮತ್ತೊಬ್ಬರನ್ನು ಪ್ರಶ್ನಿಸಿದರು. ಉತ್ತರ ಮಾತ್ರ ಎಲ್ಲರದೂ ಒಂದೇ. ’ನಾನಲ್ಲ, ನನಗೆ ತಿಳಿದಿಲ್ಲ’. ಡಾಕ್ಟರ್‌ಜಿ ಮಾತ್ರ ಮೌನ. ಕೊನೆಗೆ ಅವರೇ ಇದನ್ನೆಲ್ಲಾ ಮಾಡಿದವರೆಂದು ತಿಳಿಯಿತು. ಇದು ಡಾಕ್ಟರ್‌ಜಿಯವರು ಕೆಲಸ ಕಲಿಸುತ್ತಿದ್ದ ಶೈಲಿ. ಮೊದಲು ಸ್ವತಃ ಮಾಡು. ಹೇಳುವುದಕ್ಕಿಂತ ಮಾಡುವುದೇ ಒಳಿತು.
ಯಾರೂ ಯಾರಿಗೂ ಹೇಳಲಿಲ್ಲ. ಆದರೆ ಮರುದಿನ ಇನ್ನೂ ಕೆಲವು ಯುವಕರು ಮೊದಲೇ ಬಂದರು. ಒಬ್ಬ ಕಸ ತೆಗೆದ. ಮತ್ತೊಬ್ಬ ನೀರು ಚಿಮುಕಿಸಿದ. ನಿರ್ಧಾರಿತ ಸಮಯಕ್ಕೆ ಸೀಟಿ ಆಯಿತು. ಕಾರ್ಯಕ್ರಮ ಆರಂಭಗೊಂಡಿತು.
ಅಲ್ಲಿನ ಆಟಗಳಲ್ಲಿ ಎಂಥ ಆನಂದ! ಯುವಕರು ತಮ್ಮನ್ನು ತಾವು ಮರೆಯುತ್ತಿದ್ದರು. ಮೊದಲ ದಿನ ಎಂಟು ಹತ್ತು ಯುವಕರು. ಮರುದಿನ ಇಪ್ಪತ್ತು. ಮತ್ತೆ ಐವತ್ತು ಆಯಿತು. ನಿಯಮಿತ ಸಮಯಕ್ಕೆ ಎಲ್ಲರೂ ಬರುವರು. ಒಂದಿನಿತೂ ತಡವಿಲ್ಲ. ನಿತ್ಯವೂ ಹೀಗೆ. ಎಲ್ಲರೂ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದರು.
ಒಂದು ದಿನ ಪ್ರಾಥಮಿಕ ಸಮತಾ ಕಾರ್ಯಕ್ರಮ ಸಹ ಆರಂಭವಾಯಿತು. ತಂತಮ್ಮ ಖರ್ಚಿನಲ್ಲಿಯೇ ಗಣವೇಷ ಸಹ ಮಾಡಿಕೊಂಡರು ಎಲ್ಲರೂ.
No comments:
Post a Comment