ಸಂಘ ಶಿಕ್ಷಾ ವರ್ಗ ಮುಗಿಯಿತು. ಈಗ ಡಾಕ್ಟರ್‌ಜಿಯವರ ಸೇವೆಯಲ್ಲಿ ಹೆಚ್ಚಿನ ಕಾರ್ಯಕರ್ತರೆಲ್ಲ ತೊಡಗಿದರು. ವೈದ್ಯರ ಸಲಹೆಯಂತೆ ಉಪಚಾರ ಸಾಗಿತ್ತು. ಅನ್ಯ ಊರುಗಳಿಂದಲೂ ಸ್ವಯಂಸೇವಕರು ಡಾಕ್ಟರ್‌ಜಿಯವರನ್ನು ನೋಡಲು ಬರುತ್ತಿದ್ದರು. "ನಮ್ಮೂರಿಗೆ ಬನ್ನಿ, ಅಲ್ಲಿನ ವಾತಾವರಣ, ನೀರು ಚೆನ್ನಾಗಿವೆ. ಉತ್ತಮ ವೈದ್ಯರೂ ಇದ್ದಾರೆ. ಚೆನ್ನಾದ ವ್ಯವಸ್ಥೆ ಕೂಡಾ ಮಾಡುತ್ತೇವೆ. ನಿಮ್ಮ ಆರೋಗ್ಯ ನಿಶ್ಚಯವಾಗಿ ಸುಧಾರಿಸುತ್ತದೆ" ಎನ್ನುತ್ತಿದ್ದವರು ಅನೇಕ. ಆದರೆ ಡಾಕ್ಟರ್‌ಜಿ ಎಲ್ಲೂ ಹೋಗುವಂತಿರಲಿಲ್ಲ. ವಿಧಿಯ ಯೋಜನೆ ಇದ್ದುದ್ದೇ ಬೇರೆ.
ಅವರ ಆರೋಗ್ಯ ದಿನದಿನಕ್ಕೂ ಕುಸಿಯತೊಡಗಿತು. ನಾಗಪುರದ ತಜ್ಞ ವೈದ್ಯರಿಂದ ಚಿಕಿತ್ಸೆ ಆರಂಭಗೊಂಡಿತು. ಆದರೆ ಆರೋಗ್ಯ ಒಂದಿನಿತೂ ಸುಧಾರಿಸಲಿಲ್ಲ. ೧೯೪೦ ಜೂನ್ ೧೫ ರಂದು ಅವರನ್ನು ಮೇಯೋ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಸಮಗ್ರ ತಪಾಸಣೆ ನಡೆಯಿತು. ಆದರೂ ವ್ಯಾಧಿ ಏನೆಂದು ತಿಳಿಯದು. ಬೆನ್ನು ನೋವು ಅಸಹನೀಯವಾಗಿತ್ತು, ಅವರಿಗೆ. ನಿತ್ಯ ಏರುತ್ತಿದ್ದ ಜ್ವರ, ತೀರಾ ನಿಶ್ಶಕ್ತಿ. ಮನದ ತುಂಬ ನೂರೆಂಟು ವಿಧ ಯೋಚನೆಗಳು. ಆಸ್ಪತ್ರೆಯ ವಾತಾವರಣ ಅವರಿಗೆ ಹಿತಕರ ಎನಿಸಲಿಲ್ಲ. ನಾಗಪುರ ನಗರ ಸಂಘಚಾಲಕ ಶ್ರೀ ಬಾಬಾಸಾಹೇಬ ಘಾಟಾಟೆಯವರ ಮನೆಗೆ ಅವರನ್ನು ಕರೆದೊಯ್ಯಲಾಯಿತು.
ತಜ್ಞ ವೈದ್ಯರ ಔಷಧೋಪಚಾರ ನಡೆಯುತ್ತಿತ್ತು. ತಮ್ಮ ಸರ್ವ ಪ್ರಯತ್ನ ಸುರಿದು ಅವರು ಚಿಕಿತ್ಸೆಗೆ ತೊಡಗಿದ್ದರು. ಕಾರ್ಯಕರ್ತರೂ ತತ್ಪರತೆಯಿಂದ ಸೇವೆ ಮಾಡುತ್ತಿದ್ದರು. "ಹೇ ಭಗವಂತ, ನಮ್ಮ ಪ್ರಿಯ ನಾಯಕನನ್ನು ಬದುಕಿಸು" ಎಂದು ಅವರು ಸದಾ ಭಗವಂತನಲ್ಲಿ ಮೊರೆಯಿಡುತ್ತಿದ್ದರು. ಸಹಸ್ರಾರು ಸ್ವಯಂಸೇವಕರ ಪ್ರಾರ್ಥನೆ ಅಂತೂ ನಿತ್ಯ ನಡೆದೇ ಇತ್ತು. ಆದರೂ ಡಾಕ್ಟರ್‌ಜಿಯವರ ಆರೋಗ್ಯ ದಿನ ಕಳೆದಂತೆ ಹೆಚ್ಚೆಚ್ಚು ಆತಂಕಕಾರಿಗೊಳ್ಳುತ್ತಲೇ ಕುಸಿಯುತ್ತಿತ್ತು.
ತಾನು ಇನ್ನು ಹೆಚ್ಚು ದಿನ ಬದುಕಲಾರೆನೆಂದು ಡಾಕ್ಟರ್‌ಜಿಯವರಿಗೂ ಅನಿಸಿತ್ತು. ಆ ದಿನಗಳಲ್ಲಿ ಸದಾ ಅವರ ಹತ್ತಿರ ಇರುತ್ತಿದ್ದವರು ಯಾದವರಾವ್ ಜೋಶಿ. ಅವರು ಭಾವನಾಶೀಲ ಯುವಕರು. ಡಾಕ್ಟರ್‌ಜಿಯವರ ಕುರಿತು ಅಪಾರ ಶ್ರದ್ಧೆ. ಒಂದು ದಿನ "ಯಾದವ, ಸಂಘದ ಹಿರಿಯ ಅಧಿಕಾರಿ ಮೃತನಾದಲ್ಲಿ ಅಂತ್ಯಯಾತ್ರೆ ಹೇಗೆ ನಡೆಸುವೆ?" ಎಂದು ಪ್ರಶ್ನಿಸಿದರು ಡಾಕ್ಟರ್‌ಜಿ.
ಪ್ರಶ್ನೆ ಕೇಳಿ ಒಂದು ಕ್ಷಣ ತಬ್ಬಿಬ್ಬಾದರು ಯಾದವರಾವ್‍ಜಿ. ಒತ್ತಿ ಬರುತ್ತಿದ್ದ ಕಣ್ಣೀರನ್ನು ತಡೆದುಕೊಂಡು, ಆ ಪ್ರಶ್ನೆಯನ್ನೇ ಮರೆಸಲು ವಿಷಯಾಂತರ ಮಾಡುತ್ತಾ "ಈಗ ಔಷಧಿ ಕೊಡುವ ಸಮಯ ಆಗಿದೆ. ನನಗೆ ನೆನಪೇ ಇಲ್ಲ" ಎನ್ನುತ್ತಾ ಮೇಲೆದ್ದರು. ಔಷದಿ ಕುಡಿಸಿದರು. ಡಾಕ್ಟರ್‌ಜಿ ಸಹ ಮರುಮಾತಾಡದೇ ಔಷಧಿ ಕುಡಿದರು. ಡಾಕ್ಟರ್‌ಜಿ ಆ ಕಟು ವಿಷಯ ಮರೆತರೆಂದೇ ಯಾದವರಾವ್‍ಜಿ ಭಾವಿಸಿದರು.
ಆದರೆ ಸ್ವಲ್ಪ ಸಮಯ ಮಾತ್ರ. ಪುನಃ ಡಾಕ್ಟರ್‌ಜಿ ಶಾಂತ, ಗಂಭೀರ ಸ್ವರದಲ್ಲಿ ಮಾತನಾಡತೊಡಗಿದರು. "ನಮ್ಮ ಸಂಘ ಒಂದು ಕುಟುಂಬದಂತೆ. ಇಲ್ಲಿ ಆಡಂಬರ, ಪ್ರದರ್ಶನಗಳಿಗೆ ಅವಕಾಶವಿಲ್ಲ. ಸಂಘದ ಯಾವುದೇ ಅಧಿಕಾರಿ ತೀರಿಕೊಂಡಲ್ಲಿ ಅವರ ಅಂತ್ಯಕ್ರಿಯೆ ಸರಳವಾಗಿರಬೇಕು. ಯಾವುದೇ ಆಡಂಬರವಾಗಲೀ, ಸೈನಿಕ ಪದ್ಧತಿಯಾಗಲೀ ಇರಬಾರದು."
ಇನ್ನೊಂದು ದಿನ ಮಧ್ಯಾಹ್ನ ಯಾದವರಾವ್‍ಜಿ, ಡಾಕ್ಟರ್‌ಜಿ ಅವರಿಗಾಗಿ ಚಹ ತಂದರು. "ಎಲ್ಲರನ್ನೂ ಕರೆಯಿರಿ. ಎಲ್ಲರೊಂದಿಗೆ ನಾನು ಚಹ ಕುಡಿಯುವೆ" ಡಾಕ್ಟರ್‌ಜಿ ಎಂದರು.
ಆದರೆ ಅನಗತ್ಯವಾಗಿ ತಡವಾಗುವುದೆಂದು ಯಾದವರಾವ್‍ಜಿ ವಿಧವಿಧವಾಗಿ ಅವರಿಗೆ ಅವಸರಪಡಿಸಿದರು. ಡಾಕ್ಟರ್‌ಜಿಯವರದು ಚಿಕ್ಕ ಮಕ್ಕಳಂತೆ ಒಂದೇ ಹಠ. ಅವರು ಚಹ ಕುಡಿಯಲು ನಿರಾಕರಿಸಿದರು. ಯಾದವರಾವ್‍ಜಿ ಏನು ಮಾಡಬೇಕೆಂಬುದೇ ತಿಳಿಯದಾಯಿತು.
ಅದೇ ಹೊತ್ತಿಗೆ ಶ್ರೀ ಗುರೂಜಿ ಅಲ್ಲಿಗೆ ತಲುಪಿದರು. ಅವರಿಗೆ ವಿಷಯವೆಲ್ಲ ತಿಳಿಯಿತು. ಅವರು ಸ್ವಯಂಸೇವಕರನ್ನು ಕಳಿಸಿ ಪ್ರಮುಖ ಕಾರ್ಯಕರ್ತರನ್ನೆಲ್ಲ ಸೇರಿಸಿದರು. ಇನ್ನು ಹದಿನೈದಿಪ್ಪತ್ತು ಲೋಟ ಚಹವೂ ಬಂತು. ಡಾಕ್ಟರ್‌ಜಿಯವರನ್ನು ಗಾದಿಗೆ ಒರಗಿಸಿ ಕುಳ್ಳಿರಿಸಿದರು. ತುಂಬ ಪ್ರೀತಿಯಿಂದ ಡಾಕ್ಟರ್‌ಜಿ ಎಲ್ಲರೊಡನೆ ಚಹ ಕುಡಿದರು.
ಯೇಸುಕ್ರಿಸ್ತ ತನ್ನ ಮಹಾಪ್ರಸ್ಥಾನಕ್ಕೆ ಮೊದಲು ತನ್ನೆಲ್ಲ ಶಿಷ್ಯರಿಗೆ ಪ್ರೀತಿಯಿಂದ ಊಟ ಮಾಡಿಸಿದ್ದ. ಸ್ವಾಮಿ ವಿವೇಕಾನಂದರು ಸಹ ತಮ್ಮ ಗುರು ಬಂಧುಗಳು ಹಾಗೂ ಶಿಷ್ಯರೊಡನೆ ಕೂಡಿ ಇದೇರೀತಿ ಊಟ ಮಾಡಿದ್ದರು.
No comments:
Post a Comment