Friday, 30 June 2017

ಬದುಕಲೊಂದು ಸ್ಪೂರ್ತಿ ಬೇಕು !

ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು..

ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು..

ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.

ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..
ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...

ಮಂತ್ರಿ ಹೇಳಿದ *‘ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ    ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ ..... ‘*

*ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು...*

*ಪ್ರೀತಿ ಅಷ್ಟೇ ಸಾಕು....... ಬದುಕಲು, ಬದುಕಿಸಲು, ಬದುಕನ್ನ ಬದುಕಿಸಲು.*
.🙏🙏🙏🙏🙏👏👏👏👏🙏

Thursday, 29 June 2017

ಸ್ವಯಂಸೇವಕನ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ



   ಒಮ್ಮೆ ಜವಹರಲಾಲ ನೆಹರುರವರು ಪ್ರಧಾನಮಂತ್ರಿಯಾಗಿದ್ದಾಗ,  ಒಬ್ಬ ಸ್ವಯಂಸೇವಕ ಐ.ಎ.ಎಸ್. ಅಧಿಕಾರಿಯಾಗಲು ಪರೀಕ್ಷೆ ಬರೆದ. ಅದರಲ್ಲಿ ಪಾಸಾದ. ಆ ಪರೀಕ್ಷೆಯ ಕೊನೆಯಲ್ಲಿ ಸಂದರ್ಶನವಿರುತ್ತದೆ. ಆ ಸಂದರ್ಶನದಲ್ಲಿ ಅವನು ಅರ್.ಎಸ್.ಎಸ್ ಸ್ವಯಂಸೇವಕ ಎನ್ನುವುದು ಎಲ್ಲರಿಗೂ ಗೊತ್ತಾಯಿತು. ಆ ಸಮಯದಲ್ಲಿ ಅರ್.ಎಸ್.ಎಸ್.ನವರು ಗಾಂಧಿ ಹತ್ಯೆ ಮಾಡಿದವರು ಎನ್ನುವ ಆರೋಪವಿತ್ತು. ಆ ಕಾರಣದಿಂದ ಅವನ್ನು ಐ.ಎ.ಎಸ್.ಗೆ ಆಯ್ಕೆ ಮಾಡಲಿಲ್ಲ. ಈ ಸ್ವಯಂಸೇವಕನ ದೂರದ ಸಂಬಂಧಿಯೊಬ್ಬರು ಕಾಂಗ್ರೆಸ್‍ನಲ್ಲಿದ್ದರು. ಅವರು ಲೋಕಸಭೆಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಈ ವಿಷಯ ಗೊತ್ತಾಯಿತು. ಅವರು ಈ ಸ್ವಯಂಸೇವಕನನ್ನು ಕರೆದು ವಿಚಾರಿಸಿದರು. ಹೀಗಾಗಿರುವುದು ಸರಿಯಲ್ಲ ಎಂದು ಭಾವಿಸಿ ಅವರು ಅವನಿಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲು ಸಲಹೆಕೊಟ್ಟರು.

    ಆ ಕಾಲದಲ್ಲಿ ಈಗಿನ ರೀತಿ ಅಷ್ಟು ಸೆಕ್ಯೂರಿಟಿಯ ಕಷ್ಟವಿರಲಿಲ್ಲ. ಎಷ್ಟಾದರೂ ಲೋಕಸಭಾ ಉಪಾಧ್ಯಕ್ಷರು ಹೇಳಿಕಳಿಸಿದ್ದ ವ್ಯಕ್ತಿ ಎನ್ನುವ ಕಾರಣಕ್ಕಾಗಿ ನೆಹರುರವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಈ ಸ್ವಯಂಸೇವಕ ನೆಹರುರವರನ್ನು ಹೋಗಿ ಭೇಟಿ ಮಾಡಿದ. ಅವನ ಸಂಬಂಧಿಯಾದ ಲೋಕಸಭಾ ಉಪಾಧ್ಯಕ್ಷರೂ ನೆಹರುರವರ ಜೊತೆಯಲ್ಲಿ ಕುಳಿತಿದ್ದರು. ಆಗ ನೆಹರುರವರು ಕೇಳಿದರು ’ಈಗ ನಾನು ನಿನ್ನನ್ನು ಐ.ಎ.ಎಸ್.ಗೆ ಆಯ್ಕೆ ಮಾಡದೇ ಇದ್ದರೆ ಏನಾಗುತ್ತದೆ?’ ಎಂದು ಕೇಳಿದರು. ಆಗ ಈ ಸ್ವಯಂಸೇವಕ ಹೇಳಿದ 'The Government of India will lose an honest officer(ಸರ್ಕಾರವು ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಳ್ಳುತ್ತದೆ)'. ಒಬ್ಬ ೨೨ ವರ್ಷದ ಯುವಕ ದೇಶದ ಪ್ರಧಾನಮಂತ್ರಿಯ ಎದುರು ಎಷ್ಟು ಧೈರ್ಯದಿಂದ ಹೇಳಿದ! ಅವನಿಗೆ ಎಂಥ ನಂಬಿಕೆ! ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ, ಎರಡೂ ಅವನಲ್ಲಿತ್ತು. ನೆಹರುರವರು ಅವನ ಮಾತನ್ನು ಕೇಳಿ ಅವನನ್ನು ಐ.ಎ.ಎಸ್. ಅಧಿಕಾರಿಯಾಗಿ ನೇಮಿಸಿದರು ಮತ್ತು ಐ. ಮಹಾದೇವನ್ ಎನ್ನುವ ಈ ಸ್ವಯಂಸೇವಕರು ಐ.ಎ.ಎಸ್. ಅಧಿಕಾರಿಯಾಗಿ ಕೆಲಸ ಮಾಡಿದರು.

ತುರ್ತು ಪರಿಸ್ಥಿತಿಯಲ್ಲಿ ಸ್ವಯಂಸೇವಕರ ಕರ್ತವ್ಯ


   ತುರ್ತು ಪರಿಸ್ಥಿತಿಯ ಸಮಯ. ಅನೇಕ ಪ್ರಚಾರಕರು, ಸ್ವಯಂಸೇವಕರು ಭೂಗತರಾಗಿದ್ದರು. ಒಬ್ಬ ಸ್ವಯಂಸೇವಕರು ಮಂಗಳೂರಿನವರು. ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿ. ಅವರು ಮೂರು ತಿಂಗಳಿನಿಂದ ಬ್ಯಾಂಕಿಗೆ ಹೋಗಿರಲಿಲ್ಲ. ಕಾರಣ? ಅವರನ್ನು ಹಿಡಿದು ಪ್ರಶ್ನೆಗಳನ್ನು ಕೇಳಬೇಕೆಂದು ಪೊಲೀಸರು ಹುಡುಕುತ್ತಿದ್ದರು. ಮೂರು ತಿಂಗಳ ನಂತರ ಬ್ಯಾಂಕಿನಿಂದ ನೋಟಿಸ್ ಬಂತು - ’ನೀವು ಇನ್ನೊಂದು ವಾರದಲ್ಲಿ ಕೆಲಸಕ್ಕೆ ಬರದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತೇವೆ’ ಎಂದು. ಆಗ ಅವರು ಪ್ರಚಾರಕರೊಡನೆ ಸಮಾಲೋಚಿಸಿದರು. ಪ್ರಚಾರಕರು ಸಲಹೆ ಕೊಟ್ಟರು - ಅವರು ಬ್ಯಾಂಕಿಗೆ ಹೋಗಬೇಕು, ಪೊಲೀಸರು ಅವರನ್ನು ಬಂಧಿಸುತ್ತಾರೆ, ಇವರು ಜೈಲಿಗೆ ಹೋಗುತ್ತಾರೆ, ಆದರೆ ಅವರ ಕೆಲಸವಾದರೂ ಉಳಿಯುತ್ತದೆ.

    ಸರಿ, ಅವರು ಕೆಲಸಕ್ಕೆ ಹೋದರು. ಮೊದಲನೇ ದಿನವೇ ಪೊಲೀಸರು ಬಂದು ಅವರನ್ನು ಬಂಧಿಸಿ ಕರೆದುಕೊಂಡು ಹೋದರು. ಬಂದರು ಪೊಲೀಸ್ ಸ್ಟೇಷನ್‍ಗೆ ಕರೆದುಕೊಂಡು ಹೋದರು. ಇನ್ನಿಲ್ಲದ ಚಿತ್ರ ಹಿಂಸೆ ಕೊಟ್ಟು ಅರ್ಧ ಜೀವ ಮಾಡಿದರು. ’ಲೋಕ ಸಂಘ ಸಮಿತಿಗೆ ಹಣ ಎಲ್ಲಿಂದ ಬರುತ್ತದೆ, ಆ ಪ್ರಚಾರಕರು ಎಲ್ಲಿ ಉಳಿದುಕೊಳ್ಳುತ್ತಾರೆ? ಈ ಪ್ರಚಾರಕರು ಎಲ್ಲಿರುತ್ತಾರೆ?’ ಈ ಪ್ರಶ್ನೆಗಳನ್ನು ಕೇಳಿದರು. ಈ ನಮ್ಮ ಸ್ವಯಂಸೇವಕರು ತಮಗೆ ಒಂದು ಲೋಟ ನೀರು ಕೊಟ್ಟರೆ ಎಲ್ಲವನ್ನೂ ಹೇಳುತ್ತೇನೆಂದರು. ಪೊಲೀಸರು ನೀರು ಕೊಟ್ಟರು. ಇವರು ಹತ್ತಿರದಲ್ಲಿದ್ದ ಕಿಟಕಿ ನೋಡಿದರು. ಇವರಿದ್ದುದು ಮೊದಲನೆ ಮಹಡಿಯ ಮೇಲೆ. ಪೊಲೀಸರು ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲೇ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಿಟಕಿ ಮೂಲಕ ಹಾರಿದರು. ಪುಣ್ಯಕ್ಕೆ ತಲೆಗೆ ಏಟು ಬೀಳದೆ ಕಾಲುಗಳ ಮೇಲಿ ಬಿದ್ದು ಪ್ರಾಣ ಉಳಿಯಿತು. ಆದರೆ ಕಾಲುಗಳೂ ಪುಡಿಪುಡಿಯಾದವು. ಇಂದಿಗೂ ಅವರಿಗೆ ಸರಿಯಾಗಿ ನಡೆಯಲಾಗುವುದಿಲ್ಲ.

    ಈ ರೀತಿ ಸಾವಿರಾರು ಜನರು ನಷ್ಟ ಕಷ್ಟ ಅನುಭವಿಸಿದರು. ಅನೇಕರ ತಂದೆ, ತಾಯಿಗಳು ತೀರಿಕೊಂಡರೂ ಅವರನ್ನು ಮನೆಗೆ ಬಿಡದೆ ಜೈಲಿನಲ್ಲೇ ಇಟ್ಟಿದ್ದರು. ಒಂದೂವರೆ ಲಕ್ಷ ಜನ ಸತ್ಯಾಗ್ರಹ ಮಾಡಿದರು. ತುರ್ತು ಪರಿಸ್ಥಿತಿ ಕಳೆಯಿತು. ಈವತ್ತಿನವರೆಗೆ ಯಾರೂ ತಾವು ಮಾಡಿದ ಈ ಹೋರಾಟಕ್ಕೆ ತಮಗೆ ಪರಿಹಾರ ಬೇಕೆಂದು ಕೇಳಲಿಲ್ಲ. ಹೊರಗಿನವರು ಅವರ ಕಾರ್ಯವನ್ನು ತ್ಯಾಗವೆಂದು ಭಾವಿಸುತ್ತಾರಾದರೂ ಸ್ವಯಂಸೇವಕರು ತಾವು ದೇಶಕ್ಕಾಗಿ ಹೋರಾಟ ಮಾಡಿದೆವು, ಅದು ತಮ್ಮ ಕರ್ತವ್ಯ, ತ್ಯಾಗವಲ್ಲ ಎಂದು ಭಾವಿಸಿದರು.

ದೇಶವೂ ನಮ್ಮದೇ, ಸರಕಾರವೂ ನಮ್ಮದೇ



   ಗಾಂಧಿ ಹತ್ಯೆಯ ನಂತರ ಶ್ರೀ ಗುರೂಜಿಯವರನ್ನು ಜೈಲಿನಲ್ಲಿಟ್ಟರು. ಗಾಂಧೀ ಹತ್ಯೆಯ ಆರೋಪವನ್ನು ಅವರ ಮೇಲೆ ಮಾಡಲಾಯಿತು. ೫-೬ ತಿಂಗಳ ನಂತರ ಶ್ರೀ ಗುರೂಜಿಯವರು ಸರಕಾರಕ್ಕೆ ಒಂದು ಪತ್ರವನ್ನು ಬರೆದರು. ’ನಾನೇನಾದರು ಗಾಂಧಿ ಹತ್ಯೆಯಂತಹ ಗಂಭೀರ ತಪ್ಪು ಮಾಡಿದ್ದರೆ ನನ್ನ ಮೇಲೆ ಮೊಕದ್ದಮೆ ಹಾಕಿ. ಕೋರ್ಟಿನಲ್ಲಿ ವಿಚಾರಣೆ ಮಾಡಿ. ಆದರೆ ಕೋರ್ಟಿನಲ್ಲಿ ಮೊಕದ್ದಮೆ ಹೂಡದೆ, ವಿಚಾರಣೆ ಮಾಡದೆ ನನ್ನನ್ನು ಜೈಲಿನಲ್ಲಿಟ್ಟಿರುತ್ತೀರಿ. ಇದು ಸರಿಯಲ್ಲ’ ಎಂದರು.

    ಎಂಟು ತಿಂಗಳ ನಂತರವೂ ಯಾವುದೇ ಮೊಕದ್ದಮೆ ಹಾಕದಿದ್ದ ಮೇಲೆ, ಶ್ರೀ ಗುರೂಜಿಯವರು ಸತ್ಯಾಗ್ರಹದ ಕರೆ ಕೊಟ್ಟರು. ಆ ಸತ್ಯಾಗ್ರಹದಲ್ಲಿ ತೋರಿದ ಸಂಘದ ಶಕ್ತಿಯನ್ನು ನೋಡಿ ಸಂಘದ ಮೇಲಿದ್ದಂತಹ ನಿರ್ಬಂಧ ತೆಗೆದು ಹಾಕಲಾಯಿತು. ೯೦ ವರ್ಷಗಳ ಕಾಲ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯಿತು - ೧೮೫೭ ರಿಂದ ೧೯೪೭ ವರೆಗೆ. ಆ ತೊಂಭತ್ತು ವರ್ಷಗಳಲ್ಲಿ ಸುಮಾರು ೩೫ ಸಾವಿರ ಜನ ಜೈಲಿಗೆ ಹೋಗಿದ್ದರು. ಆದರೆ ಸಂಘದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ನಡೆಸಿದ ಸತ್ಯಾಗ್ರಹದಲ್ಲಿ ೭೬ ಸಾವಿರ ಜನ ಜೈಲಿಗೆ ಹೋಗಿದ್ದರು. ಸ್ವಯಂಸೇವಕರು ಸಂಘಟನೆಯ ಶಕ್ತಿಯನ್ನು ತೋರಿಸಿದ್ದರು.

    ಶ್ರೀ ಗುರೂಜಿಯವರು ಜೈಲಿನಿಂದ ಬಿಡುಗಡೆಯಾದ ನಂತರ ಎಲ್ಲೆಲ್ಲೂ ಪೂರ್ವಪ್ರಕಟವಾದಂತಹ ಕಾರ್ಯಕ್ರಮಗಳು ನಡೆದವು. ಅಲ್ಲಿ ಮಾತನಾಡಿದ ಭಾಷಣದಲ್ಲಿ ಒಂದು ಶಬ್ದವೂ ಸರಕಾರದ ವಿರುದ್ಧ ಇರಲಿಲ್ಲ. ಆಗ ಸ್ವಯಂಸೇವಕರು ಶ್ರೀ ಗುರೂಜಿಯವರನ್ನು ಅದನ್ನು ಪ್ರಶ್ನಿಸುತ್ತಾರೆ. ಶ್ರೀ ಗುರೂಜಿಯವರು ’ಈ ಸರಕಾರವೂ ನಮ್ಮದು, ದೇಶವೂ ನಮ್ಮದು. ನಾವು ಹಿಂದು ಸಮಾಜದ ಒಳಗಡೆ ಸಂಘಟನೆ ಕಟ್ಟುತ್ತಿಲ್ಲ. ಹಿಂದು ಸಮಾಜದ ಸಂಘಟನೆ ಕಟ್ಟುತ್ತಿದ್ದೇವೆ. ಕೆಲವೊಮ್ಮೆ ಊಟ ಮಾಡುವಾಗ ನಾಲಗೆಯನ್ನು ಹಲ್ಲು ಕಚ್ಚುತ್ತದೆ. ಆಗ ಹಲ್ಲನ್ನು ಕಲ್ಲಿನಿಂದ ಜಜ್ಜಿ ಕಿತ್ತು ಹಾಕುವುದಿಲ್ಲ. ಹಲ್ಲೂ ನಮ್ಮದೆ, ನಾಲಗೆಯನ್ನು ಕಚ್ಚಿದೆ, ಇನ್ನು ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತೇವೆ ಅಷ್ಟೇ. ಈಗ ತಪ್ಪನ್ನು ಸರಿಪಡಿಸಿಕೊಂಡಿದ್ದೇವೆ. ದ್ವೇಷ ಬೇಡ’ ಎಂದರು.

ಜಾತಿ



    ವ್ಯಕ್ತಿಯನ್ನು ಜೋಡಿಸಬೇಕಾದರೆ ಏನೇನು ಕಷ್ಟಗಳನ್ನು ಅನುಭವಿಸಬೇಕಾಗುವುದು ಎನ್ನುವುದಕ್ಕೆ ಒಂದು ಉದಾಹರಣೆ. ಪ್ರಚಾರಕರಾಗಿದ್ದ ನ. ಕೃಷ್ಣಪ್ಪನವರು ಕಪ್ಪಗಿದ್ದರು. ಅವರ ಜೊತೆಯಲ್ಲಿ ರಮಾನಾಥ ರೈ ಎನ್ನುವ ಇನ್ನೊಬ್ಬ ಪ್ರಚಾರಕರು. ಅವರು ಬೆಳ್ಳಗಿದ್ದರು. ಎಲ್ಲರಿಗೂ ರಮಾನಾಥರು ಬ್ರಾಹ್ಮಣ ಎನ್ನುವ ಕಲ್ಪನೆ, ಕೃಷ್ಣಪ್ಪನವರು ಬ್ರಾಹ್ಮಣರಲ್ಲ ಎನ್ನುವ ಅನಿಸಿಕೆ. ಕೃಷ್ಣಪ್ಪನವರಿಗೆ ಯಾವಾಗಲೂ ಮನೆಯ ಹೊರಗಡೆ ಊಟ. ರಮಾನಾಥ ರೈ ಅವರಿಗೆ ಮನೆ ಒಳಗಡೆ ಊಟ. ಎಂದೂ ರಮಾನಾಥ ರೈಗಳು ತಾವು ಬ್ರಾಹ್ಮಣ ಅಲ್ಲ ಎಂದು ಹೇಳಿಕೊಳ್ಳಲಿಲ್ಲ ಅಥವಾ ಕೃಷ್ಣಪ್ಪನವರು ತಾವು ಬ್ರಾಹ್ಮಣ ಎಂದು ಹೇಳಿಕೊಳ್ಳಲಿಲ್ಲ.

Wednesday, 28 June 2017

ಏಕಂ (ಒಂದು), ದಶಂ (ಹತ್ತು), ಶತಂ (ನೂರು)

ಎಕಂ,ದಶಂ,ಶತಂ,ಸಹಸ್ರ,ದಶಸಹಸ್ರ,ಲಕ್ಷ,ದಶಲಕ್ಷ,ಕೋಟಿ,ದಶಕೋಟಿ . .  . . . . . .  . ಮುಂದೆ?

ನೆನಪಿದೆಯೇ ಸ್ನೇಹಿತರೆ
ಕನ್ನಡ ಶಾಲೆಯಲ್ಲಿ ಕಲಿತ ಅಂಕಿಅಂಶಗಳ ವಿವರ

ಅಷ್ಟಕ್ಕೂ ಇದರ ಅಂತಿಮ ಹಂತ ಎಲ್ಲಿಯವರೆಗೆ?

ನೋಡಿ ತಿಳಿಯಿರಿ

ಕನ್ನಡದಲ್ಲಿ ಅಂಕಿ ಅಂಶಗಳ ಪ್ರಕಾರ ಹೀಗಿದೆ;-

ಏಕಂ (ಒಂದು),
ದಶಂ (ಹತ್ತು),
ಶತಂ (ನೂರು),
ಸಹಸ್ರ (ಸಾವಿರ),
ದಶಸಹಸ್ರ (ಹತ್ತು ಸಾವಿರ),
ಲಕ್ಷ,
ದಶಲಕ್ಷ (ಹತ್ತು ಲಕ್ಷ),
ಕೋಟಿ,
ದಶಕೋಟಿ,
ಅಬ್ಜ (ನೂರು ಕೋಟಿ),
ದಶ ಅಬ್ಜ,
ಖರ್ವ,
ದಶಖರ್ವ,
ಪದ್ಮ,
ದಶಪದ್ಮ,
ನೀಲ,
ದಶನೀಲ,
ಶಂಖ,
ದಶಶಂಖ,
ಕ್ಷಿತಿ,
ದಶಕ್ಷಿತಿ,
ಕ್ಷೋಭ,
ದಶಕ್ಷೋಭ,
ಋದ್ಧಿ,
ದಶಋದ್ಧಿ,
ಸಿದ್ಧಿ,
ದಶಸಿದ್ಧಿ,
ನಿಧಿ,
ದಶನಿಧಿ,
ಕ್ಷೋಣಿ,
ದಶಕ್ಷೋಣಿ.
ಕಲ್ಪ,
ದಶಕಲ್ಪ,
ತ್ರಾಹಿ,
ದಶತ್ರಾಹಿ,
ಬ್ರಹಮಾಂಡ,
ದಶಬ್ರಹಮಾಂಡ,
ರುದ್ರ,
ದಶರುದ್ರ,
ತಾಲ,
ದಶತಾಲ,
ಭಾರ,
ದಶಭಾರ,
ಬುರುಜ,
ದಶಬುರುಜ,
ಘಂಟಾ,
ದಶಘಂಟಾ,
ಮೀಲ,
ದಶಮೀಲ,
ಪಚೂರ,
ದಶಪಚೂರ,
ಲಯ,
ದಶಲಯ,
ಫಾರ,
ದಶಫಾರ,
ಅಷಾರ,
ದಶಅಷಾರ,
ವಟ,
ದಶವಟ,
ಗಿರಿ,
ದಶಗಿರಿ,
ಮನ,
ದಶಮನ,
ವವ,
ದಶವವ,
ಶಂಕು,
ದಶಶಂಕು,
ಬಾಪ,
ದಶಬಾಪ,
ಬಲ,
ದಶಬಲ,
ಝಾರ,
ದಶಝಾರ,
ಭೀರ,
ದಶಭೀರ,
ವಜ್ರ,
ದಶವಜ್ರ,
ಲೋಟ,
ದಶಲೋಟ,
ನಜೆ,
ದಶನಜೆ,
ಪಟ,
ದಶಪಟ,
ತಮೆ,
ದಶತಮೆ,
ಡಂಭ,
ದಶಡಂಭ,
ಕೈಕ,
ದಶಕೈಕ,
ಅಮಿತ,
ದಶಅಮಿತ,
ಗೋಲ,
ದಶಗೋಲ,
ಪರಿಮಿತ,
ದಶಪರಿಮಿತ,
ಅನಂತ,
ದಶಅನಂತ.
ದಶಅನಂತಕ್ಕೆ ಒಂದರ ಮುಂದೆ ೯೬(96) ಶೂನ್ಯವನ್ನ ಸೇರಿಸಬೇಕಾಗುತ್ತೆ.{೧೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦} =ದಶಅನಂತ.

ಮಿತ್ರರೇ,.
ಪ್ರಾಚೀನ ಭಾರತದ ಮಹಿಮೆ ನಮಗೆಲ್ಲರಿಗೂ ತಿಳಿಯದಷ್ಟು ಅಪಾರವಾಗಿದೆ.

Thursday, 22 June 2017

ಸಂಘ ಮತ್ತು ಕಮ್ಯೂನಿಸಂ



   ಎಪ್ಪತ್ತರ ದಶಕದಲ್ಲಿ ಸಂಘದ ಮೂರನೆಯ ಸರಸಂಘಚಾಲರಾಗಿದ್ದ ಬಾಳಾಸಾಹೇಬ ದೇವರಸ್‍ರವರು ’ಆರ್.ಎಸ್.ಎಸ್ ಕೆಟ್ಟದ್ದು, ಅದು ಹೇಳುವ ಹಿಂದುತ್ವ ಕೆಟ್ಟದ್ದು ಎಂದು ತುಂಬಾ ಜನ ಹೇಳುತ್ತಾರೆ. ಆದರೆ ಆರ್.ಎಸ್.ಎಸ್. ಸ್ವಯಂಸೇವಕರು ತುಂಬಾ ಒಳ್ಳೆಯವರು ಎಂದು ಎಲ್ಲರೂ ಹೇಳುತ್ತಾರೆ. ಹಾಗೆಯೇ ಕಮ್ಯೂನಿಸಂ ಒಳ್ಳೆಯದು ಆದರೆ ಕಮ್ಯೂನಿಸ್ಟರು ಕೆಟ್ಟವರು ಎನ್ನುವ ಅಭಿಪ್ರಾಯವೂ ಅದೇ ರೀತಿ ಜನರಲ್ಲಿದೆ. ಕಮ್ಯೂನಿಸಂ ಎಂದರೆ ಇಡೀ ಜಗತ್ತನೇ ಒಂದು ಮಾಡಲು ಹೊರಟಿದೆ, ಆದರೆ ಈ ಹಿಂದುತ್ವವೆಂದರೆ ಸಂಕುಚಿತ ಎನ್ನುವ ಅಭಿಪ್ರಾಯವೂ ಇದೆ. ಯಾವಾಗ ಅದೇ ಜನ ನಮ್ಮ ಸ್ವಯಂಸೇವಕರನ್ನು ಒಪ್ಪಿಕೊಳ್ಳುತ್ತಾರೋ ಆಗ ನಮ್ಮ ಕಾರ್ಯಪದ್ಧತಿಯನ್ನೂ ಮತ್ತು ನಮ್ಮ ಕಾರ್ಯವು ಸರಿಯಿದೇ ಎನ್ನುವುದನ್ನೂ ಒಪ್ಪಿಕೊಳ್ಳಬೇಕು’.

    ’ಸ್ವಯಂಸೇವಕನು ಚೆನ್ನಾಗಿದ್ದಾನೆ ಎಂದರೆ ಅದನ್ನು ತಯಾರು ಮಾಡುವ ಶಾಖೆಯೂ ಚೆನ್ನಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಮತ್ತು ಶಾಖೆಯನ್ನು ಶುರು ಮಾಡಿದ ಸಂಘದ ವಿಚಾರವೂ ಸರಿಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ಕಮ್ಯೂನಿಸ್ಟರು ಕೆಟ್ಟವರಾದ್ದರಿಂದ, ಕಮ್ಯೂನಿಸಂ ಕೂಡ ಕೆಟ್ಟದೆಂದು ಅವರು ತಿಳಿಯಬೇಕು. ಮತ್ತು ಕಮ್ಯೂನಿಸ್ಟ್ ಸಿದ್ಧಾಂತವೂ ಸರಿಯಿಲ್ಲವೆಂದು ಒಪ್ಪಿಕೊಳ್ಳಬೇಕು. ವಿಚಾರ ಮತ್ತು ಕಾರ್ಯಪದ್ಧತಿಗಳಿಂದ ತಯಾರಾಗುವವನೇ ಕಾರ್ಯಕರ್ತ. ಸಂಘದ ಕಾರ್ಯಕರ್ತನನ್ನು ಮೆಚ್ಚಿಕೊಂಡಿದ್ದರಿಂದ ಸಂಘದ ಕಾರ್ಯಪದ್ಧತಿಯೂ ಸರಿಯಿದೆ, ಸಂಘದ ವಿಚಾರವೂ ಸರಿಯಿದೆ ಎನ್ನುವುದು ಸಾಬೀತಾಗುತ್ತದೆ’ ಎಂದು ಹೇಳುತ್ತಿದ್ದರು.

ಜಯಪ್ರಕಾಶ ನಾರಾಯಣರ ಕಣ್ಣಲ್ಲಿ ಸಂಘ



   ೧೯೭೫ನೇ ಇಸವಿಗೆ ಮುಂಚೆ ಜಯಪ್ರಕಾಶ್ ನಾರಾಯಣ ಹೇಗಿದ್ದರು? ೧೯೪೮ನೇ ಇಸವಿಯಲ್ಲಿ ಅವರು ಹೇಳಿದ್ದು ’ನನ್ನ ಜೀವನದ ಏಕಮಾತ್ರ ಧ್ಯೇಯವೆಂದರೆ ಆರ್.ಎಸ್.ಎಸ್.ನ ನಾಶ’ ಎಂದು. ಸುಮಾರು ೫ ಸಾವಿರ ಜನರನ್ನು ಕರೆದುಕೊಂಡು ದೆಹಲಿಯ ಆಗಿನ ಸಂಘಚಾಲಕಾರಿಗಿದ್ದ ಲಾಲಾ ಹಂಸರಾಜ ಗುಪ್ತರವರ ಮನೆಗೆ ಬೆಂಕಿ ಇಡಲು ಬಂದಿದ್ದರು. ಮುಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಹೋರಾಟ ಅವರ ನೇತೃತ್ವದಲ್ಲೇ ಸಮಗ್ರ ಕ್ರಾಂತಿ ಅಥವಾ ಲೋಕಸಂಘ ಸಮಿತಿ ಹೆಸರಿನಲ್ಲಿ ನಡೆಯಿತು. ಅವರು ಜೈಲು ಸೇರಿದಾಗ ಅವರು ಹೇಳಿದ್ದು ’ಈಗ ಆರ್.ಎಸ್.ಎಸ್ ಬಿಟ್ಟರೆ ಇನ್ಯಾರೂ ಈ ದೇಶಕ್ಕೆ ಗತಿ ಇಲ್ಲ. ಈ ದೇಶವು ಈ ಸ್ಥಿತಿಯಿಂದ ಪಾರಾಗಬೇಕಾದರೆ ಅದು ಸಂಘದಿಂದ ಮಾತ್ರ ಸಾಧ್ಯ’ ಎಂದು! ತುರ್ತು ಪರಿಸ್ಥಿತಿಯ ನಂತರ ಅವರು ’ಆರ್.ಎಸ್.ಎಸ್ ಅನ್ನು ಯಾರಾದರೂ ಫ್ಯಾಸಿಸ್ಟ್ ಎಂದು ಕರೆದರೆ, ನನ್ನನ್ನೂ ಫ್ಯಾಸಿಸ್ಟ್ ಎಂದು ಕರೆಯಿರಿ’ ಎಂದರು.

    ಹಾಗೆಯೇ, ಆಚಾರ್ಯ ವಿನೋಬಾ ಭಾವೆಯವರು ’ನಾನೂ ಒಬ್ಬ ಸಂಘದ ಅನೌಪಚಾರಿಕ ಸ್ವಯಂಸೇವಕನೇ’ ಎಂದಿದ್ದರು. ಇನ್ನೊಬ್ಬ ಸರ್ವೋದಯದ ಕಾರ್ಯಕರ್ತರು ’ಆರ್.ಎಸ್.ಎಸ್ ಎಂದರೆ 'Ready for Selfless Service' ಎಂದು ಹೇಳಿದ್ದರು.

ಸಂಘಕ್ಕೆ ಹೆಸರು



   ಪ್ರಾರಂಭವಾದಾಗ ಸಂಘಕ್ಕೆ ಹೆಸರೂ ಇರಲಿಲ್ಲ. ಆದರೆ ಸಂಘಕ್ಕೆ ಹೆಸರು ಇಡಬೇಕು ಎನ್ನುವುದು ಮತ್ತು ಯಾವ ಹೆಸರು ಇಡಬೇಕು ಎನ್ನುವ ಕಲ್ಪನೆ ಡಾಕ್ಟರ್‌ಜಿಯವರಿಗಿತ್ತು. ಸಂಘದ ಎಲ್ಲ ನಿರ್ಣಯಗಳ ಒಂದು ಪುಸ್ತಕವಿದೆ. ಅದರಲ್ಲಿ ೧೯೨೭ರಿಂದ ತೆಗೆದುಕೊಂಡ ಎಲ್ಲ ನಿರ್ಣಯಗಳ ವಿವರಗಳಿವೆ. ಮೊಟ್ಟಮೊದಲ ನಿರ್ಣಯವನ್ನು ಮರಾಠಿಯಲ್ಲಿ ಬರೆಯಲಾಗಿದೆ. ಪಾಂಡೆ ಎನ್ನುವ ಒಬ್ಬ ಕಾರ್ಯದರ್ಶಿಗಳು ಅದನ್ನು ಬರೆದಿದ್ದಾರೆ.

    ಸಂಘದ ಹೆಸರು ಏನಿರಬೇಕೆಂದು ಒಂದು ಬೈಠಕ್‍ನಲ್ಲಿ ಚರ್ಚೆಯಾಯಿತು. ಅದರಲ್ಲಿ ೨೭ ಜನ ಸ್ವಯಂಸೇವಕರು ಭಾಗವಹಿಸಿದ್ದರು. ಆ ಸಭೆಯಲ್ಲಿ ಮೂರು ಹೆಸರುಗಳನ್ನು ಸೂಚಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಚರೀ ಪಡಕಾ ಸಂಘ ಮತ್ತು ಇನ್ನೊಂದು ಹೆಸರು. ಮತದಾನ ಹಾಕಲಾಯಿತು. ಬಂದವರಲ್ಲಿ ಇಬ್ಬರು ಮತದಾನದಲ್ಲಿ ಭಾಗವಹಿಸದೆ ಹೊರಗುಳಿದರು. ಉಳಿದ ೨೫ ಜನ ಮೂರೂ ಹೆಸರುಗಳನ್ನು ಮುಂದಿಟ್ಟುಕೊಂಡು ಮತ ಹಾಕಿದರು.

    ಅದರಲ್ಲಿ ೧೮ ಮತಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ ಹೆಸರಿನ ಪರವಾಗಿ ಬಂದದ್ದರಿಂದ ಸಂಘದ ಹೆಸರನ್ನು ಅದೇ ರೀತಿಯೇ ತೀರ್ಮಾನಿಸಿದರೆಂದು ಬರೆದು ಪಾಂಡೆಯವರು ಸಹಿ ಹಾಕಿದ್ದಾರೆ. ಡಾಕ್ಟರ್‌ಜಿಯವರು ಅದೇ ಹೆಸರಿಡಬೇಕೆಂದು ಅಂದುಕೊಂಡಿದ್ದರು. ಅದನ್ನು ಅವರೇ ಹೇಳಿದ್ದರೆ ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು. ಆದರೆ ಡಾಕ್ಟರ್‌ಜಿಯವರಿಗೆ ಎನಿಸಿತು ’ಇಲ್ಲಿ ಯಾರಿಗೂ ಇದು ತನ್ನ ಅಭಿಪ್ರಾಯ ನಡೆಯುತ್ತದೆ ಎಂದು ಎನಿಸಬಾರದು. ನಾವು ಎನ್ನುವ ಭಾವ ಬೆಳೆಯಬೇಕು. ಎಲ್ಲರಿಗೂ ತಮ್ಮ ಆಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಇರಬೇಕು. ಅದನ್ನು ಅವರು ಪ್ರತಿಪಾದನೆಯನ್ನೂ ಮಾಡಬೇಕು. ಆದರೆ ಕೊನೆಯಲ್ಲಿ ಏನು ನಿರ್ಣಯವಾಗುತ್ತದೆಯೋ ಅದನ್ನು ಎಲ್ಲರೂ ಪಾಲಿಸಬೇಕು. ಅನುಶಾಸನವೂ ಇರಬೇಕು, ಅಭಿಪ್ರಾಯ ಸ್ವಾತಂತ್ರ್ಯವೂ ಇರಬೇಕು’.

ರಾಷ್ಟ್ರಹಿತವೇ ಮಿಗಿಲು



   ದೇವ ದಾನವರ ನಡುವೆ ಯಾವಾಗಲೂ ಯುದ್ಧವಾಗುತ್ತಲೇ ಇತ್ತು. ದೇವತೆಗಳಿಗೇ ಬಹುತೇಕ ಜಯವಾಗುತ್ತಿತ್ತು. ಆಗ ದಾನವಗುರು ಶುಕ್ರಾಚಾರ್ಯರು ತಪಸ್ಸು ಮಾಡು ಸಂಜೀವಿನಿ ವಿದ್ಯೆ ಸಂಪಾದಿಸಿದರು. ಇದರಿಂದ ಸತ್ತ ದಾನವರನ್ನು ಅವರು ಮತ್ತೆ ಬದುಕಿಸುತ್ತಿದ್ದರು.

    ಇದಕ್ಕೆ ಏನಾದರೂ ಪರಿಹಾರ ಹುಡುಕಿರೆಂದು ದೇವಗುರು ಬೃಹಸ್ಪತಿಯವರಲ್ಲಿ ದೇವತೆಗಳು ಬೇಡಿಕೊಂಡರು. ಸಂಜೀವಿನೀ ವಿದ್ಯೆ ಕಲಿತುಕೊಂಡು ಬರುವಂತೆ ದೇವಗುರುಗಳು ತೇಜಸ್ವೀ ಯುವಕ ಕಚನನ್ನು ಶುಕ್ರರ ಬಳಿ ಕಳುಹಿಸಿದರು.

    ಕಚ ಶುಕ್ರಾಚಾರ್ಯರ ಆಶ್ರಮ ತಲುಪಿದ. ಅವರ ಶಿಷ್ಯನಾದ. ವಿದ್ಯ ಕಲಿಯತೊಡಗಿದ. ಶುಕ್ರಾಚಾರ್ಯರ ಮಗಳು ದೇವಯಾನಿಯ ಮನಸ್ಸನ್ನೂ ಗೆದ್ದ.

    ಸಂಜೀವಿನೀ ವಿದ್ಯ ಸಂಪದಿಸಲೆಂದೇ ಕಚನು ಶುಕ್ರಾಚಾರ್ಯರ ಬಳಿ ಬಂದುದು ದಾನವರಿಗೆ ತಿಳಿಯಿತು. ಅವನನ್ನು ಮುಗಿಸಿಬಿಡಲು ಹಲವು ತಂತ್ರ ಹೆಣೆದರು. ಪ್ರತಿ ಬಾರಿ ಕಚನನ್ನು ದಾನವರು ಕೊಂದಾಗಲೂ ದೇವಯಾನಿ ಅವನ್ನು ಬದುಕಿಸಿಕೊಡಲು ತಂದೆಗೆ ದಂಬಾಲು ಬೀಳುತ್ತಿದ್ದಳು. ಶುಕ್ರಾಚಾರ್ಯರ ಸಂಜೀವಿನಿ ಮಂತ್ರದಿಂದ ಕಚ ಬದುಕಿ ಬರುತ್ತಿದ್ದ.

    ಈ ಬಾರಿ ದಾನವರು ಉಪಾಯದಿಂದ ಕಚನ್ನು ಕೊಂದು ಸುಟ್ಟುಬಿಟ್ಟರು. ಆ ಬೂದಿಯನ್ನು ಸೋಮರಸದಲ್ಲಿ ಸೇರಿಸಿ ಆಚಾರ್ಯ ಶುಕ್ರರಿಗೆ ಕುಡಿಸಿದರು. ಎಂದಿನಂತೆ ಕಚನ್ನು ಬದುಕಿಸಿಕೊಡಿರೆಂದು ದೇವಯಾನಿ ಬೇಡಿದಳು. ಕಚ ತನ್ನ ಹೊಟ್ಟೆಯಲ್ಲಿರುವುದನ್ನು ತಿಳಿದ ಆಚಾರ್ಯರು ಅವನಿಗೆ ಸಂಜೀವಿನಿಯನ್ನು ಉಪದೇಶಿಸಿ ಅದೇ ಮಂತ್ರದಿಂದ ಜೀವ ನೀಡಿದರು. ಕಚ ಶುಕ್ರಾಚಾರ್ಯರ ಹೊಟ್ಟೆ ಸೀಳಿ ಹೊರಬಂದ. ತಾನು ಪಡೆದಿದ್ದ ಸಂಜೀವಿನಿ ಮಂತ್ರಬಲದಿಂದ ಆಚಾರ್ಯರನ್ನೂ ಬದುಕಿಸಿದ.

    ಸಂಜೀವಿನಿ ವಿದ್ಯೆ ಕಲಿತು ತನ್ನ ಕರ್ತವ್ಯ ಪೂರೈಸಿದ್ದ ಕಚ ಗುರುವಿಗೆ ವಂದಿಸಿ ದೇವಲೋಕಕ್ಕೆ ಹೊರಟು ನಿಂತ. ಆಗ ತನ್ನನ್ನು ಮದುವೆ ಆಗೆಂದು ದೇವಯಾನಿ ಕಚನಲ್ಲಿ ಹಟ ಹಿಡಿದಳು. ’ಗುರುಪುತ್ರಿಯಾದ ನೀನು ನನಗೆ ಸೋದರಿ ಸಮಾನ. ಆದ್ದರಿಂದ ಈ ವಿವಾಹ ಸಾಧ್ಯವಿಲ್ಲ’ ಎಂದುಬಿಟ್ಟ ಕಚ. ಸಿಟ್ಟಾದ ದೇವಯಾನಿ ’ಶುಕ್ರಾಚಾರ್ಯರಿಂದ ನೀನು ಕಲಿತ ಯಾವ ವಿದ್ಯೆಯೂ ನಿನ್ನ ಉಪಯೋಗಕ್ಕೆ ಬಾರದಿರಲಿ’ ಎಂದು ಶಾಪ ಕೊಟ್ಟಳು. ಅವಳ ಶಾಪವನ್ನು ಸಂತೋಷದಿಂದ ಸ್ವೀಕರಿಸಿ ’ನನಗೆ ಉಪಯೋಗಕ್ಕೆ ಬಾರದಿದ್ದರೇನಂತೆ, ನಾನು ಈ ವಿದ್ಯೆಯನ್ನು ಬೇರೆಯವರಿಗೆ ಕಲಿಸುತ್ತೇನೆ’ ಎಂದು ನುಡಿದು ಆತ ದೇವಲೋಕಕ್ಕೆ ನಡೆದುಬಿಟ್ಟ.

    ಕಚನಿಗೆ ಸಂತ ಸುಖಕ್ಕಿಂತ ದೇವಲೋಕದ ಹಿತವೇ ಮಿಗಿಲೆನಿಸಿತ್ತು. ಸಂಜೀವಿನಿ ವಿದ್ಯೆಯನ್ನು ಆತ ಇತರ ದೇವತೆಗಳಿಗೆ ಕಲಿಸಿದ. ಸಂಜೀವಿನಿ ವಿದ್ಯೆಯ ಬಲದಿಂದ ದೇವತೆಗಳು ದಾನವರ ಭಯದಿಂದ ಪಾರಾದರು.

ಅವಮಾನವೂ ನೈವೇದ್ಯವೇ



   ಹತ್ತಿರದ ಒಂದು ಊರಿನಲ್ಲಿ ಒಬ್ಬ ಪ್ರಸಿದ್ಧ ವಕೀಲರಿದ್ದರು. ಡಾ|| ಮೂಂಜೆಯವರಿಗೆ ಅವರ ಪರಿಚಯವಿತ್ತು. ’ನಾನು ಅವರಿಗೆ ಫೋನ್ ಮಾಡಿರುತ್ತೇನೆ. ನಿನ್ನ ಬಳಿಯಲ್ಲಿ ಒಂದು ಚೀಟಿಯನ್ನೂ ಕೊಡುತ್ತೇನೆ. ಅವರ ಮನೆಯಲ್ಲೇ ಉಳಿದುಕೋ. ಅಲ್ಲಿ ಒಂದು ಶಾಖೆ ಶುರು ಮಾಡಬಹುದು’ ಎಂದು ಹೇಳಿ ಡಾಕ್ಟರ್‌ಜಿಯವರನ್ನು ಕಳಿಸಿದರು. ಡಾಕ್ಟರ್‌ಜಿಯವರು ರೈಲಿನಲ್ಲಿ ಅಲ್ಲಿಗೆ ಹೋದರು. ತಾವು ಆ ರೈಲಿನಲ್ಲಿ ಬರುವುದಾಗಿ ಮೊದಲೇ ತಿಳಿಸಿದ್ದರು. ಆದರೆ ಅವರನ್ನು ಕರೆದುಕೊಂಡು ಬರಲು ಯಾರು ರೈಲು ನಿಲ್ದಾಣಕ್ಕೆ ಬಂದಿರಲಿಲ್ಲ. ಡಾಕ್ಟರ್‌ಜಿಯವರು ನಡೆದೇ ಆ ವಕೀಲರ ಮನೆಗೆ ಹೋದರು.

    ಆ ವಕೀಲರದು ತುಂಬಾ ದೊಡ್ಡ ಮನೆ. ೮-೧೦ ಮೆಟ್ಟಿಲು ಹತ್ತಿ ಮನೆಯ ಒಳಗೆ ಹೋಗಬೇಕು. ವಿಶಾಲವಾದ ಅರಮನೆಯಂತಹ ಮನೆ. ಹೊರಗೆ ವಿಶಾಲವಾದ ಹೂತೋಟ. ಹತ್ತಾರು ಜನ ಆ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊರ ಗೇಟು ಮುಚ್ಚಿದೆ. ಒಬ್ಬ ಕಾವಲು ಕಾಯುತ್ತಿದ್ದಾನೆ. ಡಾಕ್ಟರ್‌ಜಿಯವರು ಒಂದು ಚೀಟಿಯಲ್ಲಿ ತಮ್ಮ ಪರಿಚಯವನ್ನು ಬರೆದು ಒಳಗೆ ಕಳುಹಿಸಿಕೊಟ್ಟರು. ಒಳಗೆ ಬರಲು ಸೂಚನೆ ಬಂದಿತು.

    ಒಳಗೆ ಬಂದಾಗ ಅ ವಕೀಲರು ಕಾಲ ಮೇಲೆ ಕಾಲು ಹಾಕಿಕೊಂಡು ತನ್ನ ಶ್ರೀಮಂತಿಕೆಯ ಅಹಂಕಾರವನ್ನು ತೋರಿಸುತ್ತಾ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದರು. ಡಾಕ್ಟರ್‌ಜಿಯವರನ್ನು ನೋಡಿ ಕುಳಿತುಕೊಳ್ಳಲೂ ಹೇಳದೆ ಒದುತ್ತಲೇ ಇದ್ದರು. ಡಾಕ್ಟರ್‌ಜಿಯವರು ವೈದ್ಯರಾಗಿದ್ದವರು. ಸ್ವಾಭಿಮಾನಿಗಳಾಗಿದ್ದವರು. ಕುಳಿತುಕೊಳ್ಳಲು ಹೇಳದಿದ್ದರಿಂದ ನಿಂತೇ ಇದ್ದರು. ಸುಮಾರು ೮-೧೦ ನಿಮಿಷ ಆ ವಕೀಲರು ಡಾಕ್ಟರ್‌ಜಿಯವರ ಕಡೆ ನೋಡಲಿಲ್ಲ, ಮಾತನಾಡಿಸಲೂ ಇಲ್ಲ. ಒಮ್ಮೆ ಕಿರುನೋಟದಲ್ಲಿ ಡಾಕ್ಟರ್‌ಜಿಯವರ ಕಡೆ ನೋಡುವುದು, ಮತ್ತೆ ಓದುವ ಹಾಗೆ ಮಾಡುವುದು. ಹೀಗೆಯೇ ನಡೆದಿತ್ತು.

    ಡಾಕ್ಟರ್‌ಜಿಯವರಿಗೆ ಗೊತ್ತಾಯಿತು. ತಾವು ಬಂದಿರುವುದೂ ಗೊತ್ತಿದ್ದೂ, ನಿಂತಿರುವುದು ಅರಿವಿದ್ದೂ, ತಾನು ತುಂಬಾ ವ್ಯವಧಾನವಿಲ್ಲದವನು ಎಂದು ತೋರಿಸಲು ವಕೀಲರು ನಾಟಕವಾಡುತ್ತಿದ್ದಾರೆ ಎಂದು. ಆದರೆ ಡಾಕ್ಟರ್‌ಜಿಯವರಿಗೆ ಆ ವ್ಯಕ್ತಿಯನ್ನು ಗೆಲ್ಲಬೇಕಾಗಿತ್ತು. ಎಷ್ಟೇ ಆಗಲಿ ಸಂಘಟನ ಕುಶಲರು. ವಕೀಲರು ಓದುತ್ತಿದ್ದ ಪುಸ್ತಕವನ್ನು ನೋಡಿದರು. ಅದು ಹೋಮಿಯೋಪತಿ ಬಗೆಗಿನ ಪುಸ್ತಕವಾಗಿತ್ತು. ಡಾಕ್ಟರ್‌ಜಿಯವರು ಅಲೋಪತಿ ವೈದ್ಯರಾದರೂ, ಹೋಮಿಯೋಪತಿಯ ಬಗ್ಗೆ ತಿಳಿದಿದ್ದರು. ನಿಂತಲ್ಲೇ ಡಾಕ್ಟರ್‌ಜಿಯವರು ಹೋಮಿಯೋಪತಿಯ ಬಗ್ಗೆ ಮಾತನಾಡಲು ಶುರು ಮಾಡಿದರು.

    ’ಎಂಥ ಅದ್ಭುತ ವೈದ್ಯ ಪದ್ಧತಿ ಅದು! ನೋಡುವುದಕ್ಕೆ ಒಂದು ಸಣ್ಣ ಸಕ್ಕರೆ ಗುಳಿಗೆ ರೀತಿಯಲ್ಲಿ ಇರುತ್ತದೆ. ಎಂಥೆಂತಹ ಖಾಯಿಲೆಗಳನ್ನು ವಾಸಿ ಮಾಡಬಲ್ಲದು ಅದು!’ ಎಂದು ಹೇಳಿದರು. ಅದನ್ನು ಕೇಳಿ ವಕೀಲರು ಓದುವುದನ್ನು ನಿಲ್ಲಿಸಿ ಪುಸ್ತಕವನ್ನು ಮುಚ್ಚಿಟ್ಟು ಡಾಕ್ಟರ್‌ಜಿಯವರು ಹೇಳುತ್ತಿದ್ದನ್ನು ಕೇಳಲು ಶುರು ಮಾಡಿದರು. ಒಂದಾದ ನಂತರ ಸಂಭಾಷಣೆ ಪ್ರಾರಂಭವಾಯಿತು. ವಕೀಲರು ಇದ್ದಕ್ಕಿದ್ದಂತೆ ಗಮನಿಸಿದಂತೆ ’ಅರೆ, ನಿಂತೇ ಇದ್ದೀರಲ್ಲಾ. ಕುಳಿತುಕೊಳ್ಳಿ’ ಎಂದರು. ಕೆಲಸದವನನ್ನು ಕರೆದು ’ಅವರು ಬಂದು ಇಷ್ಟು ಹೊತ್ತಾಗಿದೆ. ಚಹ ಕೊಡಲು ಗೊತ್ತಾಗುವುದಿಲ್ಲವೇ? ಹೋಗು, ಚಹ ತಾ’ ಎಂದು ಕಳಿಸಿದರು.

    ಕೆಲಸದವನು ಚಹ ತರಲು, ಡಾಕ್ಟರ್‌ಜಿಯವರು ಮನಸ್ಸಿನಲ್ಲೇ ನಿಶ್ಚಯ ಮಾಡಿದರು ’ಇವರಿಗೆ ಅಹಂಕಾರ ಇದೆ. ಆದರೆ ಅವರಿಗೆ ಪ್ರಭಾವವೂ ಇದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ಇವರನ್ನು ಬಿಡಬಾರದು’ ಎಂದು. ಡಾಕ್ಟರ್‌ಜಿ ಆ ಮನೆಯಲ್ಲಿ ತಮ್ಮ ಸಾಮಾನನ್ನು ಇಟ್ಟು ಹೊರಗೆ ಸಂಪರ್ಕಕ್ಕೆ ಹೋಗುತ್ತಿದ್ದರು. ರಾತ್ರಿ ಬಂದು ಉಳಿದುಕೊಳ್ಳುತ್ತಿದ್ದರು. ಅಲ್ಲಿ ಒಮ್ಮೆಯೂ ಊಟ, ತಿಂಡಿ ಮಾಡುತ್ತಿರಲಿಲ್ಲ.

    ೭-೮ ದಿನಗಳ ನಂತರ ಆ ವಕೀಲರ ಹತ್ತಿರ ಬಂದು ’ಇಲ್ಲಿ ಸಂಘದ ಶಾಖೆ ಪ್ರಾರಂಭ ಮಾಡಬೇಕಾಗಿದೆ. ಅದಕ್ಕಾಗಿ ನಿಮ್ಮ ಮನೆಯಲ್ಲಿ ಒಂದು ಬೈಠಕ್ ಕರೆಯಲು ಯೋಚಿಸಿದ್ದೇನೆ’ ಎಂದರು. ಅದಕ್ಕೆ ವಕೀಲರು ’ಇದೊಂದು ಸುಡುಗಾಡು ಊರು. ಇಲ್ಲಿ ನಾಲ್ಕು ಜನ ಎಂದೂ ಸೇರುವುದಿಲ್ಲ. ಸಂಘಟನೆಯೆಂದರೆ ಯಾರು ಬರುವುದಿಲ್ಲ’ ಎಂದರು. ಆಗ ಡಾಕ್ಟರ್‌ಜಿ ’ಇಲ್ಲಿ ನಿಮಗೆ ಒಳ್ಳೆ ಹೆಸರಿದೆ. ನಿಮ್ಮ ಹೆಸರು ಹೇಳಿದರೆ ಸಾಕಷ್ಟು ಜನ ಬರುತ್ತಾರೆ’ ಎಂದು ಹೊಗಳಿ ಒಪ್ಪಿಸಿದರು.

    ಸುಮಾರು ಒಂದು ನೂರುಕ್ಕೂ ಹೆಚ್ಚು ಜನ ಆ ಬೈಠಕ್‍ಗೆ ಬಂದರು. ಡಾಕ್ಟರ್‌ಜಿ ಎಲ್ಲರಿಗೂ ಸಂಘದ ಬಗ್ಗೆ, ಶಾಖೆಯ ಬಗ್ಗೆ ಹೇಳಿ ಆ ವಕೀಲರನ್ನೇ ಸಂಘಚಾಲಕರೆಂದು ಘೋಷಣೆ ಮಾಡಿದರು. ಓಡಾಡಿದ್ದು, ನೂರಾರು ಜನರನ್ನು ಪರಿಶ್ರಮ ವಹಿಸಿ ಸೇರಿಸಿದ್ದು ಡಾಕ್ಟರ್‌ಜಿಯವರಾದರೂ ವಕೀಲರ ಮನೆಯಲ್ಲಿ ಒಮ್ಮೆ ಊಟವನ್ನು ಮಾಡದಿದ್ದರೂ ಅವರನ್ನೇ ಸಂಘಚಾಲಕರನ್ನಾಗಿ ಘೋಷಣೆ ಮಾಡಿದ್ದರು.

ಶ್ರದ್ಧೆ ಮತ್ತು ನಂಬಿಕೆ



   ಭೀಕರ ಬರಗಾಲದಿಂದ ಆ ಹಳ್ಳಿ ತತ್ತರಿಸಿತ್ತು. ಕಂಗಾಲಾದ ಹಳ್ಳಿಗರು ದಾರಿಗಾಣದೇ ಋಷಿಯೊಬ್ಬರ ಮೊರೆ ಹೋದರು. ಶ್ರದ್ಧೆ, ನಂಬಿಕೆಗಳಿಂದ ಒಂದು ಯಜ್ಞ ಮಾಡಿದರೆ ಮಳೆ ಬಂದು ಇಳೆ ತಣಿಯುವುದೆಂದು ಋಷಿಗಳು ಸಲಹೆ ನೀಡಿದರು. ಹಳ್ಳಿಗರು ಅದರ ತಯಾರಿ ನಡೆಸಿದರು.

    ಯಜ್ಞದ ದಿನ ಪೂರ್ಣಾಹುತಿಯ ಸಮಯ ಸನ್ನಿಹಿತವಾಯಿತು. ಹಳ್ಳಿಗರೆಲ್ಲ ಪೂಜಾ ಸಾಮಗ್ರಿ ಸಹಿತ ಬಂದಿದ್ದರು. ಪುಟ್ಟ ಹುಡುಗಿಯೊಬ್ಬಳು ಮಾತ್ರ ಕೊಡೆಯನ್ನು ತಂದಿದ್ದಳು. ’ಬರಗಾಲ, ಬಿರುಬಿಸಿಲು. ಆದರೂ ಕೊಡೆಯನ್ನು ಏಕೆ ತಂದಿರುವೆ?’ ಎಂದು ಆಕೆಯನ್ನು ಎಲ್ಲರೂ ಕೇಳುವವರೇ!

    "ಋಷಿಗಳ ಮಾತು ಎಂದೂ ಸುಳ್ಳಾಗದು. ಶ್ರದ್ಧೆ, ನಂಬಿಕೆಗಳಿಂದ ಯಜ್ಞ ಮಾಡುತ್ತೀವಲ್ಲ, ಹಾಗಾಗಿ ಮಳೆ ಖಂಡಿತಾ ಬಂದೇ ಬರುತ್ತದೆ. ಆಗ ಮನೆಗೆ ಹೋಗಲು ಕೊಡೆ ಬೇಕಲ್ಲ!" ಹುಡುಗಿಯ ಈ ದಿಟ್ಟ ನಂಬಿಕೆಯ ಮಾತು ಕೇಳಿ ಹಲವರು ಮುಗುಳ್ನಕ್ಕರು.

    ಗ್ರಾಮವಾಸಿಗಳೆಲ್ಲ ಒಬ್ಬೊಬ್ಬರಾಗಿ ಪೂರ್ಣಹುತಿ ನೀಡಿದರು. ಆದರೆ ಆ ಹುಡುಗಿ ಭಕ್ತಿಯಿಂದ ಪ್ರಾರ್ಥಿಸಿ ಆಹುತಿ ಅರ್ಪಿಸುತ್ತಿದ್ದಂತೆಯೇ ಜೋರಾಗಿ ಮಳೆ ಸುರಿಯತೊಡಗಿತು. ಹುಡುಗಿ ನಗುತ್ತಲೇ ಕೊಡೆ ಬಿಡಿಸಿ ಮನೆಯ ಕಡೆ ಹೊರಟಳು.

    "ಈ ಹುಡುಗಿಯ ಕಾರಣದಿಂದಲೇ ಮಳೆ ಬಂತು. ನಿಮ್ಮೆಲ್ಲರ ಪೂಜೆ ವ್ಯರ್ಥ. ಏಕೆಂದರೆ ಅದರ ಹಿಂದೆ ಶ್ರದ್ಧೆ ಮತ್ತು ನಂಬಿಕೆ ಇರಲಿಲ್ಲ". ಯಜ್ಞ್ದ ನೇತೃತ್ವ ವಹಿಸಿದ್ದ ಋಷಿಗಳ ಈ ಮಾತು ಕೇಳಿ ಎಲ್ಲರೂ ತಲೆತಗ್ಗಿಸಿದರು.

ಸ್ವದೇಶಾಭಿಮಾನ

ಪಂಡಿತ ವಿಷ್ಣುದಿಗಂಬರ ಪಲುಸ್ಕರ್ ಓರ್ವ ಸುಪ್ರಸಿದ್ಧ ಸಂಗೀತ ವಿದ್ವಾಂಸರು. ಗಂಧರ್ವ ಮಹಾವಿಶ್ವವಿದ್ಯಾಲಯದ ಸ್ಥಾಪಕರು. ೧೯೧೬ರಿಂದಲೇ ಪ್ರತಿವರ್ಷ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದರು. ಅಧಿವೇಶನದ ಆರಂಭದಲ್ಲಿ ಮೊದಲು ರಾಷ್ಟ್ರಗೀತೆ ಹಾಡುವುದನ್ನು ರೂಪಿಸಿದ್ದರು.

    ೧೯೨೩ರ ಕಾಕಿನಾಡಾ ಅಧಿವೇಶನದ ಅಧ್ಯಕ್ಷರು ಮೌಲಾನಾ ಮಹಮದ್ ಅಲಿ. ಪಲುಸ್ಕರ್ ಪದ್ಧತಿಯಂತೆ ವಂದೇ ಮಾತರಂ ಹಾಡಲು ತೊಡಗಿದಾಗ ಅಲಿ ಅದಕ್ಕೆ ಅಡ್ಡಿ ಪಡಿಸುತ್ತಾ ಹಾಡು, ವಾದ್ಯಗಳು ತಮ್ಮ ಸಂಪ್ರದಾಯಕ್ಕ ವಿರುದ್ಧವೆಂದರು. ಗಾಂಧೀಜಿ ಸಹಿತ ಅಲ್ಲಿದ್ದ ನಾಯಕರೆಲ್ಲಾ ಸ್ತಂಭಿತರಾದರು. ಪಲುಸ್ಕರರಿಗೆ ತಡೆಯಲಾಗಲಿಲ್ಲ. "ಸಂಗೀತ ಬೇಡವೆನ್ನಲು ಇದು ಮಸೀದಿಯಲ್ಲ. ರಾಷ್ಟ್ರೀಯ ವೇದಿಕೆ" ಎಂದು ಹೇಳುತ್ತಾ ಅಧ್ಯಕ್ಷರಿಗೆ ಮರುಮಾತಿಗೆ ಅವಕಾಶ ನೀಡದೆ ವಂದೇ ಮಾತರಂ ಹಾಡಲು ತೊಡಗಿದರು. ಮಹಮದ್ ಅಲಿ ತಮ್ಮ ಪೀಠ ಬಿಟ್ಟು ಹೊರನಡೆದರು. ಪಲುಸ್ಕರರು ವಂದೇ ಮಾತರಂ ಪೂರ್ತಿ ಹಾಡಿದರು.

    ಅವರ ದೇಶಾಭಿಮಾನ ಮತ್ತು ತಾಯಿನಾಡಿನ ಕುರಿತು ಭಕ್ತಿ ದೇಶವಾಸಿಗಳ ಆದರಕ್ಕೆ ಕಾರಣವಾದವು. ಜನರು ಅವರನ್ನು ಮುಕ್ತಕಂಠದಿಂದ ಹೊಗಳಿದರು.

ಪಾಣಿನಿಯ ಪ್ರತಿಜ್ಞೆ

ಪಾಣಿನಿಯ ಪ್ರತಿಜ್ಞೆ

   ಇಂದಿನ ಪಾಠವನ್ನು ಮರುದಿನ ಪುನಃಸ್ಮರಣೆ ಮಾಡಲು ಗುರುಗಳು ಶಿಷ್ಯರಿಗೆ ಹೇಳಿದ್ದರು. ಮರುದಿನ ಕೆಲವರಿಂದ ಇದು ಸಾಧ್ಯವಾಗಲಿಲ್ಲ. ಗುರುಗಳು ಬೆತ್ತದಿಂದ ಏಟು ಕೊಡತೊಡಗಿದರು.

    ಒಬ್ಬ ಹುಡುಗ ಏಟಿಗಾಗಿ ಕೈ ಚಾಚಿದ. ಅವನ ಕೈಯನ್ನು ನೋಡಿ "ಏಯ್! ನಿನ್ನ ಕೈಯಲ್ಲಿ ವಿದ್ಯಾರೇಖೆಯೇ ಇಲ್ಲ. ನೀನು ಪಾಠ ಕಲಿತು ಹೇಳುವುದೆಂದರೇನು? ಕುಳಿತುಕೋ" ಎಂದ ಗುರುಗಳು ಅವನಿಗೆ ಹೊಡೆಯಲಿಲ್ಲ. ಆತ ಇದರಿಂದ ಅವಮಾನಿತನಾದ. ಒಂದು ಕ್ಷಣ ಏನು ಮಾಡುವುದೆಂದು ತಿಳಿಯದೆ ಚಡಪಡಿಸಿದ. "ನನ್ನ ಕೈಯಲ್ಲಿ ವಿದ್ಯಾರೇಖೆಯನ್ನು ಕೊರೆಯುತ್ತೇನೆ" ಎಂದು ಮನದಲ್ಲೇ ಪ್ರತಿಜ್ಞೆ ಮಾಡಿದ. ಕಠೋರ ಪರಿಶ್ರಮದಿಂದ ವಿದ್ಯಾಭ್ಯಾಸ ಆರಂಭಿಸಿದ.

    ಸತತ ಅಧ್ಯಯನದಿಂದ ಮುಂದೆ ಆತ ’ವ್ಯಾಕರಣಾಚಾರ್ಯ ಪಾಣಿನಿ’ ಎಂದು ಪ್ರಖ್ಯಾತನಾದ.

ಸ್ವಾವಲಂಬಿಯಾಗಿ

  ಬಂಗಾಲದ ಒಂದು ಪುಟ್ಟ ರೈಲು ನಿಲ್ದಾಣ. ಆಧುನಿಕ ಪಾಶ್ಚಾತ್ಯ ವೇಷ ಭೂಷಣಗಳನ್ನು ಧರಿಸಿದ್ದ ಯುವಕ ರೈಲಿನಿಂದಿಳಿದ. ’ಕೂಲಿ, ಕೂಲಿ’ ಎಂದು ಕೂಗಿದ. ಆ ಪುಟ್ಟ ನಿಲ್ದಾಣದಲ್ಲಿ ಕೂಲಿಯೆಲ್ಲಿಂದ ಬರಬೇಕು? ಸಾಧಾರಣ ಉಡುಪಿನ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ. ಈ ಯುವಕ ಆತನನ್ನು ಕೂಲಿಯೆಂದು ಭಾವಿಸಿ ಸಾಮಾನು ಹೊತ್ತು ನಡೆಯಲು ಹೇಳಿದ.

    ಆ ವ್ಯಕ್ತಿ ಯುವಕನ ಹಿಂದೆ ಪೆಟ್ಟಿಗೆ ಹೊತ್ತು ನಡೆಯತೊಡಗಿದ. ಮನೆ ತಲುಪಿದ ಕೂಡಲೇ ಯುವಕ ಕೂಲಿ ಕೊಡಲು ಬಂದ. ಆತ ಅದನ್ನು ನಯವಾಗಿ ತಿರಸ್ಕರಿಸಿದ.

    ಅದೇ ವೇಳೆಗೆ ಯುವಕನ ಹಿರಿಯಣ್ಣ ಮನೆಯಿಂದ ಹೊರಬಂದವನೇ ಆ ಹಿರಿಯರ ಕಾಲಿಗೆ ಎರಗಿದ. ತನ್ನ ತಮ್ಮನನ್ನುದ್ದೇಶಿಸಿ "ಗೊತ್ತಾಗುತ್ತಿಲ್ಲವೇ? ಬಂಗಾಳದ ಹೆಮ್ಮೆಯ ಪುತ್ರ ಈಶ್ವರಚಂದ್ರ ವಿದ್ಯಾಸಾಗರ" ಎಂದ.

    ಯುವಕ ಲಜ್ಜಿತನಾಗಿ ಅವರ ಕಾಲಿಗೆರಗಿದ.

ಭಗವೆಗೆ ಒಂದು ಇಂಚೂ ಕೊಡುವುದಿಲ್ಲ



   ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ ನೆಹರೂ ಒಮ್ಮೆ ವಿಶ್ರಾಂತಿಗೆಂದು ಕಾಶ್ಮೀರಕ್ಕೆ ಹೋಗಿದ್ದರು. ಡಿಸೆಂಬರ್ ತಿಂಗಳಿನ ಒಂದು ಬೆಳಿಗ್ಗೆ. ಹೊರಗೆ ಓಡಾಡುತ್ತಿದ್ದಾಗ ಒಂದು ಭಗವಾಧ್ವಜ ಕಾಣಿಸಿತು.

    ಅದನ್ನು ನೋಡಿ ಹತ್ತಿರ ಹೋಗಿ ವಿಚಾರಿಸಿದಾಗ ಅಲ್ಲಿ ಸಂಘದ ಶಾಖೆ ನಡೆಯುತ್ತಿದೆ ಎಂದು ತಿಳಿಯಿತು.

    ಆಗ ಕೆಂಡಮಂಡಲವಾದ ನೆಹರು ಕೋಪದಿಂದ "ಈ ಧ್ವಜಕ್ಕೆ ನಾನು ಒಂದು ಇಂಚೂ ಜಾಗ ಕೊಡುವುದಿಲ್ಲ. ಹಾಗೆ ಮಾಡಲು ನಾನು ಎಲ್ಲ ಶಕ್ತಿಯನ್ನೂ ಹಾಕುತ್ತೇನೆ. ಅದೂ ಸಾಲದಿದ್ದರೆ ಪ್ರಪಂಚದ ಶಕ್ತಿಯನ್ನು ತಂದು ಅದನ್ನು ನಾಶ ಮಾಡುತ್ತೇನೆ" ಎಂದು ಕೂಗಾಡಿದರು.

    ಆದೇ ನೆಹರು ಮುಂದೆ ೧೯೬೨ರ ಚೀನಾ ಯುದ್ಧದ ಸಮಯದಲ್ಲಿ ಸಂಘದ ನೆರವನ್ನು ಪಡೆಯಬೇಕಾದ ಪರಿಸ್ಥಿತಿ ಬಂದಿತು. ಸ್ವಯಂಸೇವಕರು ಆ ಯುದ್ಧದಲ್ಲಿ ಮಾಡಿದ ದೇಶಸೇವೆಯನ್ನು ಗುರುತಿಸಿ ನೆಹರೂ ೧೯೬೩ ಜನವರಿ ೨೩ರ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಸಂಘದ ಸ್ವಯಂಸೇವಕರನ್ನು ಆಹ್ವಾನಿಸಿದರು.

ತಲೆ ಬಾಗೀತು ಪೇಟವಲ್ಲ

"ದರ್ಬಾರಿನ ರೀತಿ ನೀತಿ ನಿನಗೆ ತಿಳಿಯದೇನು? ಅದೂ ನೀನು ರಜಪೂತ. ಮೇಲಾಗಿ ಚಾರಣ ವಂಶದವ. ಆ ವಂಶಜರೆಲ್ಲಾ ತುಂಬಾ ಬುದ್ಧಿವಂತರೆಂದು ಬಲ್ಲೆ. ಆದರೂ ದರ್ಬಾರಿಗೆ ಬಂದ ನೀನು ವಂದಿಸಲಿಲ್ಲ. ಶಿಷ್ಟಾಚಾರ ಪಾಲಿಸಲಿಲ್ಲ. ಹಾಗಾಗಿ ನೀನೆಲ್ಲೋ ಓದು ಬಾರದ ಮೂರ್ಖನಿರಬೇಕು". ಹೀಗೆಂದು ಮೂದಲಿಸಿದವನು ಅಕಬರ್ ಬಾದಷಹ.

    "ನನ್ನನ್ನು ಮನ್ನಿಸಿ. ನಾನು ರಜಪೂಜ ಚಾರಣ ವಂಶಜ, ನಿಜ. ನಿಮಗೆ ವಂದಿಸಬಾರದು ಎಂದಲ್ಲ. ನನ್ನ ತಲೆಯ ಮೇಲೆ ಇರುವ ಪೇಟವು ಮಹಾರಾಜ ಪ್ರತಾಪಸಿಂಹನ ಉಡುಗೊರೆ. ಆತನೆಂದೂ ಶತ್ರುವಿನೆದುರು ತಲೆತಗ್ಗಿಸಿದವನಲ್ಲ. ಹಾಗಿರುವಾಗ ಆತ ನೀಡಿದ ಪೇಟವನ್ನು ತಮ್ಮೆದುರು ಬಾಗಿಸುವ ಅಧಿಕಾರ ನನಗೆಲ್ಲಿದೆ. ನೀವೇ ಹೇಳಿ" ದಿಟ್ಟತನದಿಂದ ಉತ್ತರಿಸಿದ ಮಹಾರಾಣಾ ಪ್ರತಾಪನ ಆಪ್ತ ಶೀತಲ್ ಎಂಬ ಯುವಕ.

    "ಹಾಗೆಂದೇ ನಾನು ನಿಮ್ಮೆದುರು ತಲೆಬಾಗಲಿಲ್ಲ" ಎಂದವನೇ ಆತ ಪೇಟವನ್ನು ಕೈಯಲ್ಲಿ ಹಿಡಿದುಕೊಂಡು ವಂದಿಸಿದ. ಆದರೆ ’ರಾಜಸ್ಥಾನದ ರಜಪೂತ ಪೇಟ ಎಂದೂ ಬಾಗದು’ ಎಂಬ ಸಂದೇಶವನ್ನೂ ನೀಡಿದ.

    ಆತನೆ ತಲೆ ಬಾಗಿದ್ದರೂ ಮನಸ್ಸು ಬಾಗಿರಲಿಲ್ಲ! ಶತ್ರುವಿನ ಗುಹೆಗೇ ಹೋಗಿ ಆತನನ್ನು ತಿವಿದು ಹೂಂಕರಿಸುವುದು ಅಷ್ಟು ಸುಲಭವಲ್ಲ. ಓರ್ವ ದೇಶಭಕ್ತ ಮಾಡಬೇಕಾದುದನ್ನೇ ಶೀತಲ್ ಮಾಡಿದ್ದ.

ಏಕಾಗ್ರತೆಯ ಅಭ್ಯಾಸ



   ಅಮೇರಿಕಾದ ಕೀಲ್‍ನಗರ. ಸ್ವಾಮಿ ವಿವೇಕಾನಂದರು ಅಲ್ಲಿನ ಪ್ರಾಧ್ಯಾಪಕ ಡೈಸನ್ ಜತೆ ಮಾತನಾಡುತ್ತಿದ್ದ ಸಂದರ್ಭ. ಸ್ವಾಮೀಜಿ ಕಾವ್ಯವನ್ನು ಓದುತ್ತಿದ್ದರು. ಆಗ ನಡುವೆ ಡೈಸನ್ ಕೇಳಿದ ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಉತ್ತರಿಸಲಿಲ್ಲ. ಆದ್ದರಿಂದ ಆ ಪ್ರಾಧ್ಯಾಪಕ ಸಿಟ್ಟಾದ. ಅದನ್ನರಿತ ಸ್ವಾಮೀಜಿ, ’ಕ್ಷಮಿಸಿ, ಕಾವ್ಯ ಓದುವುದರಲ್ಲಿ ಮಗ್ನನಾಗಿದ್ದೆ. ನಿಮ್ಮ ಪ್ರಶ್ನೆಯನ್ನು ಗ್ರಹಿಸಲಾಗಲಿಲ್ಲ’ ಎಂದರು.

    ಡೈಸನ್‍ಗೆ ಉತ್ತರದಿಂದ ತೃಪ್ತಿಯಾಗಲಿಲ್ಲ. ಅದನ್ನು ಗಮನಿಸಿದ ಸ್ವಾಮೀಜಿ ತಾವು ಓದಿದ ಕಾವ್ಯಭಾಗವನ್ನು ಹಾಗೆಯೇ ಹೇಳಿದರು. ಆ ಕಾವ್ಯಭಾಗ ಅವರಿಗೆ ಕಂಠಪಾಠವಾಗಿದ್ದನ್ನು ಡೈಸನ್ ಗಮನಿಸಿದ. "ಪರಕೀಯ ಭಾಷೆಯ ಕಾವ್ಯವು ಒಂದೇ ಓದಿನಲ್ಲಿ ಕಂಠಪಾಠವಾಗುವುದು ಹೇಗೆ ಸಾಧ್ಯ?" ಎಂಬುದು ಆ ಪ್ರಾಧ್ಯಾಪಕನ ಪ್ರಶ್ನೆ. ಅತನಿಗಿದು ಅಚ್ಚರಿ!

    "ಇದರಲ್ಲಿ ಅಚ್ಚರಿಯೇನು ಬಂತು? ಏಕಾಗ್ರತೆಯಿಂದ ಓದಿದ್ದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಯೋಗಸಾಧನೆ ಏಕಾಗ್ರತೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆಮೇಲೆ ಒಂದೇ ಕ್ಷಣದಲ್ಲಿ ಒಂದು ಶಬ್ದವನ್ನು ಓದತೊಡಗುತ್ತದೆ. ನೀವು ಒಂದು ಕ್ಷಣದಲ್ಲಿ ಒಂದು ಸಾಲನ್ನೇ ಓದಬಲ್ಲಿರಿ. ಏಕಾಗ್ರತೆಯ ಅಭ್ಯಾಸದಿಂದ ನಾನು ಒಂದೇ ನೋಟದಲ್ಲಿ ಇಡೀ ಒಂದು ಪುಟವನ್ನೇ ಓದಬಲ್ಲೆ. ಅಧ್ಯಯನದ ವೇಳೆ ನಾನು ಮೈಮರೆಯುತ್ತೇನೆ. ಮೈಮೇಲೆ ಬೆಂಕಿಕಿಡಿಯಿಟ್ಟರೂ ಆಗ ನನಗೆ ತಿಳಿಯುವುದಿಲ್ಲ". ಸ್ವಾಮೀಜಿಯವರ ಮಾತು ಮಾರ್ಮಿಕವಾಗಿತ್ತು.

ಗುರೂಜಿ ಹೇಗೆ ಊಟ ಮಾಡುತ್ತಾರೆ?



    ಶ್ರೀ ಗುರೂಜಿ ಒಮ್ಮೆ ಕೇರಳದ ಪ್ರವಾಸದಲ್ಲಿದ್ದರು. ಒಂದು ಊರಿನಿಂದ ಇನ್ನೊಂದು ಊರಿಗೆ ರೈಲಿನಲ್ಲಿ ಹೊರಟಿದ್ದರು. ಮಧ್ಯ ಮಾರ್ಗದಲ್ಲಿ ಒಂದು ಊರಿನಲ್ಲಿ ಅವರಿಗೆ ಭೋಜನವನ್ನು ತಲುಪಿಸುವ ಏರ್ಪಾಡಾಗಿತ್ತು.

    ಅವರಿಗೆ ಭೋಜನವನ್ನು ತಲುಪಿಸಲು ಅಲ್ಲಿನ ಒಬ್ಬ ಸ್ವಯಂಸೇವಕರನ್ನು ನೇಮಿಸಲಾಗಿತ್ತು. ಅವರು ತಮ್ಮ ಮಗಳ ಸಮೇತ ರೈಲು ನಿಲ್ದಾಣಕ್ಕೆ ಬಂದಿದ್ದರು. ರೈಲು ಬಂತು. ಊಟದ ಡಬ್ಬವನ್ನು ಕೊಟ್ಟು ಆ ಸ್ವಯಂಸೇವಕರು ಶ್ರೀ ಗುರೂಜಿಯವರೊಡನೆ ಮಾತನಾಡುತ್ತಿದ್ದರು. ಜೊತೆಯಲ್ಲಿ ಬಂದಿದ್ದ ಅವರ ಮಗಳು ತಂದೆಯ ಬಟ್ಟೆಯನ್ನು ಜಗ್ಗುತ್ತಾ ಏನೋ ಕೇಳುತ್ತಿದ್ದಳು. ಆ ಸ್ವಯಂಸೇವಕರು ಅವಳನ್ನು ಸಮಾಧನಪಡಿಸುತ್ತಲೇ ಮಾತು ಮುಂದುವರೆಸಿದ್ದರು.

    ಹುಡುಗಿಯು ಏನೋ ಕೇಳುತ್ತಿದ್ದುದನ್ನು ಗಮನಿಸಿದ ಶ್ರೀ ಗುರೂಜಿಯವರು ಆ ಸ್ವಯಂಸೇವಕರನ್ನು ವಿಚಾರಿಸಿದರು. ಮುಜುಗರಪಡುತ್ತಲೇ ಅವರು ಹೇಳಿದರು "ಹುಡುಗಿ ಕೇಳುತ್ತಿದ್ದಾಳೆ, ’ಗುರೂಜಿಯವರ ಮುಖದ ತುಂಬಾ ಕೂದಲೇ ಇದೆಯಲ್ಲಾ, ಅವರು ಊಟ ಹೇಗೆ ತಿನ್ನುತ್ತಾರೆ?’".

    ಆ ಮಾತನ್ನು ಕೇಳುತ್ತಲೇ ಶ್ರೀ ಗುರೂಜಿಯವರು ಹೊಟ್ಟೆ ತುಂಬಾ ನಕ್ಕು ಆನಂದಪಟ್ಟರು.

    ಅನೇಕ ವರ್ಷಗಳು ಕಳೆದವು. ಶ್ರೀ ಗುರೂಜಿಯವರು ಕೇರಳದ ಸಂಘಚಾಲಕರ ಮಗಳ ಮದುವೆ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಮದುವೆ ಕಾರ್ಯಕ್ರಮದ ನಂತರ ಎಲ್ಲರೂ ಊಟಕ್ಕೆ ಕುಳಿತರು. ತಮ್ಮ ಎಲೆಯ ಬಳಿ ಬಡಿಸಲು ಬಂದ ಸಂಘಚಾಲಕರ ಸೊಸೆಯನ್ನು ನೋಡಿ ಶ್ರೀ ಗುರೂಜಿ ನಗುತ್ತಾ ಕೇಳಿದರು "ಈಗ ಗೊತ್ತಾಯಿತೇ ನಾನು ಹೇಗೆ ಊಟ ಮಾಡುತ್ತೇನೆ ಎಂದು?"

    ಶ್ರೀ ಗುರೂಜಿ ಏಕೆ ಆ ರೀತಿ ಹೇಳಿದರೆಂದು ಜೊತೆಯಲ್ಲಿ ಊಟಕ್ಕೆ ಕುಳಿತಿದ್ದ ಎಲ್ಲರಿಗೂ ಆಶ್ಚರ್ಯವಾಯಿತು.

    ಆಗ ಶ್ರೀ ಗುರೂಜಿ ಎಲ್ಲರಿಗೂ ಹಿಂದೆ ನಡೆದ ರೈಲಿನ ಘಟನೆ ಹೇಳಿ, ತಮಗೆ ಅಡಿಗೆ ಬಡಿಸುತ್ತಿದ್ದ ಸಂಘಚಾಲಕರ ಸೊಸೆಯೇ ಆ ಹುಡುಗಿ ಎಂದು ಹೇಳಿದರು. ಆಷ್ಟು ವರ್ಷ ನಂತರವೂ ಆ ಹುಡುಗಿಯನ್ನು ಗುರುತಿಸಬಲ್ಲರಾದ ಶ್ರೀ ಗುರೂಜಿಯವರ ನೆನಪಿನ ಶಕ್ತಿಯು ಎಲ್ಲರನ್ನು ವಿಸ್ಮಯಗೊಳಿಸಿತ್ತು.

ಕೊನೆಯ ಹಿಂದುವನ್ನೂ ರಕ್ಷಿಸಿ



   ೧೯೪೭ರ ದೇಶ ವಿಭಜನೆ ಸಂಘದ ಸ್ವಯಂಸೇವಕರಿಗೆ ಮತ್ತು ಇತರ ದೇಶ ಪ್ರೇಮಿಗಳಿಗೆ ಅತ್ಯಂತ ದುಃಖದ ವಿಷಯ.

    ವಿಭಜನೆಯ ಸ್ವಲ್ಪ ಸಮಯದ ಮುಂಚೆ ಒಂದು ಸಂಘ ಶಿಕ್ಷಾ ವರ್ಗ ಈಗಿನ ಪಾಕಿಸ್ಥಾನದ ಭಾಗದಲ್ಲಿ ನಡೆಯುತ್ತಿತ್ತು. ಸುಮಾರು ೨೦೦ ಸ್ವಯಂಸೇವಕರು ಭಾಗವಹಿಸಿದ್ದರು. ಮುಂದಿನ ಸಂಘರ್ಷದ ಸಮಯದಲ್ಲಿ ನಡೆಯಬಹುದಾದ ಘಟನೆಗಳ ಬಗ್ಗೆ ಮೊದಲೇ ಕಲ್ಪನೆಯಿದ್ದ ಶ್ರೀ ಗುರೂಜಿ ಎಲ್ಲ ಶಿಕ್ಷಾರ್ಥಿಗಳನ್ನು ಕುರಿತು "ಈ ಕಡೆಯಿಂದ ಲಕ್ಷಾಂತರ ಜನ ವಲಸೆ ಹೋಗಲಿದ್ದಾರೆ. ಅವರ ಮೇಲೆ ನಾನಾ ರೀತಿಯ ಅತ್ಯಾಚಾರಗಳು ನಡೆಯುವ ಸಂಭವವಿದೆ. ಪ್ರತಿಯೊಬ್ಬ ಹಿಂದುವನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿ. ಕಟ್ಟಕಡೆಯ ಹಿಂದು ಸುರಕ್ಷಿತವಾಗಿ ಭಾರತವನ್ನು ತಲುಪದ ತನಕ ನೀವು ಇಲ್ಲಿಂದ ಹೊರಡಬಾರದು" ಎಂದು ನುಡಿದರು.

    ಮುಂದಿನ ದಿನಗಳಲ್ಲಿ ಶ್ರೀ ಗುರೂಜಿಯವರು ನುಡಿದಿದ್ದ ರೀತಿಯಲ್ಲೇ, ವಲಸೆ ಹೊರಟಿದ್ದ ಲಕ್ಷಾಂತರ ಹಿಂದುಗಳನ್ನು ಕೊಲ್ಲಲಾಯಿತು. ಹಿಂದು ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೊಳಿಸಿ ಮತಾಂತರಗೊಳಿಸಲಾಯಿತು. ಆದರೆ ಆ ಶಿಕ್ಷಾವರ್ಗದಲ್ಲಿದ್ದ ಎಲ್ಲ ೨೦೦ ಸ್ವಯಂಸೇವಸೇವಕರೂ ಅಂತಹ ಹಿಂದುಗಳ ರಕ್ಷಣೆಗೆ ನಿಂತರು. ಸಾವಿರಾರು ಹಿಂದುಗಳನ್ನು ಕಾಪಾಡಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿದರು.

    ಆದರೆ ಆ ೨೦೦ ಸ್ವಯಂಸೇವಕರ ಬಲಿಯಾಯಿತು.

ನಿಮಗೆ ಧರ್ಮ ಬೇಡ


   ಒಮ್ಮೆ ಲಯನ್ಸ್ ಕ್ಲಬ್‍ನ ಒಂದು ಕಾರ್ಯಕ್ರಮಕ್ಕೆ ಶ್ರೀ ಗುರೂಜಿಯವರನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಒಂದು ಭಾಷಣ ಮಾಡುವ ಯೋಜನೆ ಇತ್ತು.

    ಶ್ರೀ ಗುರೂಜಿಯವರ ಬಗ್ಗೆ ಮತ್ತು ಸಂಘದ ಬಗ್ಗೆ ಗೊತ್ತಿದ್ದ ಕ್ಲಬ್‍ನ ಗವರ್ನರ್ ಶ್ರೀ ಗುರೂಜಿಯವರ ಬಳಿ ಬಂದು "ಈ ಸಮಾರಂಭಕ್ಕೆ ಎಲ್ಲ ರೀತಿಯ ಜನರು ಬಂದಿರುತ್ತಾರೆ. ಆದ್ದರಿಂದ ನೀವು ಧರ್ಮದ ಬಗ್ಗೆ ಮಾತನಾಡದಿರುವುದು ಒಳ್ಳೆಯದು" ಎಂದು ಕೇಳಿಕೊಳ್ಳುತ್ತಾರೆ.

    ಆಗ ಶ್ರೀ ಗುರೂಜಿಯವರು "ಧರ್ಮೇಭಿ ಹೀನಃ ಪಶುಭಿಃ ಸಮಾನಃ" ಎಂಬ ಸಂಸ್ಕೃತದ ಒಂದು ಶ್ಲೋಕವನ್ನು ಹೇಳುತ್ತಾ "ನೀವು ಲಯನ್ಸ್ ಕ್ಲಬ್‍ನವರು. ನಿಮಗೆ ಧರ್ಮ ಬೇಡ ಎಂದು ಅನಿಸುತ್ತೆ" ಎಂದರು.

ನಿಜವಾದ ಸಂತೋಷ



   ದಿಲ್ಲಿಯ ರಣರಣ ಬಿಸಿಲು. ಆ ದಿನ ದಿಲ್ಲಿ ಬಂದ್ ಬೇರೆ. ತಾಯಿಯೊಬ್ಬಳು ಮನೆಗೆ ಹೋಗಲು ರಿಕ್ಷಾ ಹಿಡಿಯುವುದು ಅನಿವಾರ್ಯವಾಗಿತ್ತು. ಐದೇ ರೂಪಾಯಿ ಕೈಯಲ್ಲಿದ್ದದ್ದು. ಒಂದು ಸೈಕಲ್ ರಿಕ್ಷಾವನ್ನು ಬಾಡಿಗೆಗೆ ಗೊತ್ತು ಮಾಡಿದರು. ಬಡಪಾಯಿ ಸೈಕಲ್ ರಿಕ್ಷಾವಾಲ ಕಷ್ಟಪಟ್ಟು ತುಳಿಯುತ್ತಿದ್ದ. ಒಮ್ಮೆಲೇ ರಿಕ್ಷಾ ನಿಲ್ಲಿಸಿ "ಅಮ್ಮಾ ನಾನೀಗಲೇ ಬಂದೆ" ಎಂದು ಇಳಿದು ಹೋದ.

    ಸ್ವಲ್ಪ ಹೊತ್ತಾಯಿತು. ಆತ ಬರಲಿಲ್ಲ. "ಎಲ್ಲಿ ಹೋದನೋ ಗೊತ್ತಿಲ್ಲ. ಬರುವಾಗ ಗೂಂಡಾಗಳನ್ನು ಕರೆದುಕೊಂಡು ಬಂದರೆ...? ಈ ರಿಕ್ಷಾವಾಲಾಗಳನ್ನು ನಂಬುವುದು ಹೇಗೆ..?" ಹೀಗೆ ಆ ತಾಯಿ ಗಾಬರಿಗೊಂಡು ಯೋಚಿಸತ್ತಿರುವಾಗಲೇ ಆತ ಬಂದ. ಆತನ ಮುಖದಲ್ಲಿ ತೃಪ್ತಿಯ ಮಂದಹಾಸವಿತ್ತು.  ಬಂದವನೇ "ಅಮ್ಮ ಧನ್ಯವಾದ" ಎಂದ. "ನನಗೇಕೆ ಧನ್ಯವಾದ?" ಎಂದು ಆಕೆ ಆಶ್ಚರ್ಯದಿಂದ ಕೇಳಿದಳು.

    "ಅಮ್ಮಾ ನೀವು ನನಗೆ ಐದು ರೂಪಾಯಿ ಕೊಟ್ಟಿರಿ. ಪಕ್ಕದ ಗುಡಿಗೆ ಹೋಗಿ ಎರಡು ರೂಪಾಯಿ ಹುಂಡಿಗೆ ಹಾಕಿ ನನ್ನ ಕುಟುಂಬಕ್ಕೆ ಒಳಿತಾಗಲೆಂದು, ಇನ್ನೊಂದು ರೂಪಾಯಿ ಹುಂಡಿ ಹಾಕಿ ನಿಮಗೆ ಒಳಿತಾಗಲೆಂದು ಪ್ರಾರ್ಥಿಸಿದೆ. ಏಕೆ ಗೊತ್ತೆ? ಬೆಳಗ್ಗಿನಿಂದ ಏನೂ ತಿಂದಿರಲಿಲ್ಲ. ಕೈಯಲ್ಲಿ ಕಾಸಿರಲಿಲ್ಲ. ನೀವು ನನ್ನ ಪಾಲಿನ ದೇವರಂತೆ ಬಂದು ಐದು ರೂಪಾಯಿ ಕೊಟ್ಟಿರಿ. ಈಗ ಉಳಿದ ಹಣದಲ್ಲಿ ಚಹ ಬಿಸ್ಕತ್ತಿನಿಂದ ನನ್ನ ಹಸಿವು ಹಿಂಗಿಸಿಕೊಳ್ಳುವೆ. ನಿಮ್ಮಂತಹವರನ್ನು ದೇವರು ಬದುಕಿನುದ್ದಕ್ಕೂ ಚೆನ್ನಾಗಿಟ್ಟರೆ ನಮ್ಮಂತಹವರ ಮುಖದಲ್ಲಿ ಮಂದಹಾಸ ಮಿನುಗುವಂತೆ ಮಾಡಬಲ್ಲಿರಿ".

    ಆತನ ಮಾತು ಕೇಳಿ ಆ ತಾಯಿಗೆ ಹೃದಯ ತುಂಬಿಬಂತು.

ಇದ್ದಲಿನ ಅಂಗಡಿ ತೆರೆಯೋಣ



   ೧೯೪೮ರ ಗಾಂಧೀಜಿ ಹತ್ಯೆಯ ನಂತರ ಸಂಘದ ಮೇಲೆ ನಿರ್ಬಂಧ ಹಾಕಲಾಯಿತು. ದೇಶಾದಾದ್ಯಂತ ಸ್ವಯಂಸೇವಕರ ಮೇಲೆ ಹಲ್ಲೆ ನಡೆಯಿತು. ಸ್ವಯಂಸೇವಕರ ಆಸ್ತಿಪಾಸ್ತಿಯನ್ನು ನಷ್ಟಗೊಳಿಸಲಾಯಿತು. ಅನೇಕರು ವಿಧವಿಧವಾದ ಕಷ್ಟಕ್ಕೊಳಪಟ್ಟರು.

    ಆ ಸಮಯದಲ್ಲಿ ಕೊಲ್ಹಾಪುರದ ಸಂಘಚಾಲಕರಾಗಿದ್ದವರು ಮಾ. ಪೆಂಡಾರ್ಕರ್‌ಜಿ. ಒಂದು ಸಿನಿಮಾ ಸ್ಟುಡಿಯೋದ ಮಾಲಿಕರು. ಡಾಕ್ಟರ್‌ಜಿಯವರ ಏಕೈಕ ಚಲನಚಿತ್ರವನ್ನು ಚಿತ್ರೀಕರಿಸಿದವರು ಅವರೇ.

    ಗಾಂಧೀಜಿ ಹತ್ಯೆಯ ಕೋಪಕ್ಕೆ ಪೆಂಡಾರ್ಕರ್‌ರವರ ಸ್ಟುಡಿಯೋ ಬಲಿಯಾಯಿತು. ಸುದ್ದಿ ತಿಳಿದು ಪೆಂಡಾರ್ಕರ್ ಮತ್ತು ಅವರ ಹೆಂಡತಿ ಸ್ಟುಡಿಯೋಗೆ ಬಂದು ನೋಡಿದರೆ ದುರುಳರು ಅದಕ್ಕೆ ಬೆಂಕಿ ಹಚ್ಚಿ ಬೂದಿಗೊಳಿಸಿದ್ದರು. ಆ ದೃಶ್ಯವನ್ನು ನೋಡಿದ ಪೆಂಡಾರ್ಕರ್‌ರವರ ಹೆಂಡತಿ ಅಳತೊಡಗಿದರು. ಆದರೆ ಪೆಂಡಾರ್ಕರ್‌ರವರು ಮಾತ್ರ ಸುಮ್ಮನೆ ಉರಿಯುತ್ತಿದ್ದ ಸ್ಟುಡಿಯೋ ಕಡೆ ನೋಡುತ್ತಾ ನಿಂತಿದ್ದರು.

    ಅವರ ಹೆಂಡತಿಯು "ನಿಮಗೇನೂ ಅನ್ನಿಸುತ್ತಲೇ ಇಲ್ಲವೇನು? ನಮ್ಮ ಸ್ಟುಡಿಯೋವನ್ನು ಸುಟ್ಟು ಹಾಕಿದ್ದರೂ ನಿಮಗೆ ದುಃಖ, ಕೋಪ ಬರುತ್ತಿಲ್ಲವೇ?" ಎಂದು ಕೇಳಿದರು.

    ಪೆಂಡಾರ್ಕರ್‌ರವರು ಶಾಂತವಾಗಿ "ಹೋಗಲಿ ಬಿಡು, ಸ್ಟುಡಿಯೋ ಸುಟ್ಟು ಆರಿದ ನಂತರ ಇದ್ದಲಿನ ಅಂಗಡಿಯನ್ನು ತೆರೆದರಾಯಿತು" ಎಂದರು.

ಡಾಕ್ಟರ್‌ಜಿಯವರ ಸಮಾಧಾನ

ಜನಸಂಘದ ಸಂಸ್ಥಾಪಕರೂ ಹಾಗೂ ಅದರ ಮೊದಲ ಅಧ್ಯಕ್ಷರೂ ಆಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರಿಗೆ ಒಮ್ಮೆ ಯಾವುದೋ ಒಂದು ವಿಷಯದ ಬಗ್ಗೆ ಗೊಂದಲವಾಯಿತು. ಸಮಸ್ಯೆಯ ಪರಿಹಾರ ಕಂಡುಕೊಳ್ಳಲು ಡಾಕ್ಟರ್‌ಜಿಯವರ ಬಳಿ ಹೋಗಿ ಮಾತನಾಡಲು ನಿಶ್ಚಿಯಿಸಿದರು. ಆ ಸಮಯದಲ್ಲಿ ಡಾಕ್ಟರ್‌ಜಿಯವರ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ.

    ಆ ಸಮಯದಲ್ಲಿ ಶ್ರೀ ಗುರೂಜಿಯವರು ಡಾಕ್ಟರ್‌ಜಿಯವರ ಶುಶ್ರೂಷೆಗೆ ಸ್ವತಃ ತಾವೇ ನಿಂತಿದ್ದರು. ಮುಖರ್ಜಿಯವರು ಡಾಕ್ಟರ್‌ಜಿಯವರನ್ನು ಭೇಟಿ ಮಾಡುವ ಸಲುವಾಗಿ ಬಂದಾಗ ಶ್ರೀ ಗುರೂಜಿಯವರಿಗೆ ಕೊಂಚ ಕಸಿವಿಸಿಯಾಯಿತು. ಮೊದಲೇ ಡಾಕ್ಟರ್‌ಜಿಯವರ ಆರೋಗ್ಯ ಸರಿಯಾಗಿಲ್ಲ, ಇನ್ನು ಸಮಾಲೋಚನೆಗೆ ಹೇಗೆ ಅವಕಾಶ ಕೊಡುವುದು? ಇದು ಗುರೂಜಿಯವರಿಗಿದ್ದ ಸಮಸ್ಯೆ.

    ಡಾಕ್ಟರ್‌ಜಿಯವರ ಜೊತೆ ಚರ್ಚಿಸಬೇಕಾದ ವಿಷಯವನ್ನು ಮುಖರ್ಜಿಯವರಲ್ಲಿ ಕೇಳಿದರು. ಆ ಸಮಸ್ಯೆಯನ್ನು ಕೇಳಿ ಶ್ರೀ ಗುರೂಜಿಯವರಿಗೆ ತಾನೇ ಅದಕ್ಕೆ ಉತ್ತರ ಕೊಡಬಲ್ಲೆನೆಂಬ ಅಭಿಪ್ರಾಯ ಉಂಟಾಯಿತು. ಕೆಲವು ಗಂಟೆಗಳ ಮಾತುಕತೆ ನಡೆಯಿತು. ಆದರೂ ಗುರೂಜಿಯವರು ಹೇಳಿದ ಯಾವ ಪರಿಹಾರವೂ ಮುಖರ್ಜಿಯವರಿಗೆ ಸಮಾಧಾನಕರವಾಗಿ ತೋರಲಿಲ್ಲ. ಕೊನೆಗೆ ವಿಧಿ ಇಲ್ಲದೆ ಮುಖರ್ಜಿಯವರಿಗೆ ಡಾಕ್ಟರ್‌ಜಿಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟರು.

    ವಿಷಯವನ್ನು ಕೇಳಿದ ಡಾಕ್ಟರ್‌ಜಿ, ಕೆಲವೇ ನಿಮಿಷಗಳಲ್ಲಿ ಮುಖರ್ಜಿಯವರಿಗೆ ಸಮಾಧಾನ ಹೇಳಿ ಒಪ್ಪಿಸಿ ಕಳಿಸಿದರು. ಗುರೂಜಿಯವರಿಗೆ ಆಶ್ಚರ್ಯವಾಯಿತು. ತಾವು ಹೇಳಿದ ಪರಿಹಾಕ್ಕೂ ಡಾಕ್ಟರ್‌ಜಿ ತಿಳಿಸಿದ ಸಮಾಧಾನಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ಆದರೆ ಮುಖರ್ಜಿಯವರು ಡಾಕ್ಟರ್‌ಜಿಯವರು ಹೇಳಿದ ಮಾತ್ರಕ್ಕೆ ಒಪ್ಪಿಕೊಂಡಿದ್ದರು. ಡಾಕ್ಟರ್‌ಜಿಯವರಿಗೆ ಇನ್ನೊಬ್ಬರನ್ನು ಒಪ್ಪಿಸುವ ಸಾಮರ್ಥ್ಯವು ಹಾಗಿತ್ತು. ನಂತರದ ದಿನಗಳಲ್ಲಿ ಶ್ರೀ ಗುರೂಜಿಯವರು ಈ ಸಂದರ್ಭವನ್ನು ನೆನೆಸಿಕೊಂಡು, ಆ ಘಟನೆ ತಮಗಿದ್ದ ಅಹಂಕಾರವನ್ನು ಸುಟ್ಟುಹಾಕಿತು ಎನ್ನುತ್ತಾರೆ.

ಸಂಘ ಕಲಿಸಿದ ತ್ಯಾಗ



   ಹರಿಯಾಣದ ಒಂದು ಚಿಕ್ಕ ಊರು. ಅಲ್ಲಿನ ನಗರ ಕಾರ್ಯವಾಹ ಒಂದು ದಿನ ತನ್ನ ಸೈಕಲ್ಲಿನಲ್ಲಿ ಹೋಗುತ್ತಿದ್ದ. ಸ್ವಲ್ಪ ದೂರದ ನಂತರ ಆಕಾಶಕ್ಕೆ ಚಿಮ್ಮುತ್ತಿದ್ದ ಬೆಂಕಿ ಹೊಗೆಯನ್ನು ಕಂಡ. ವ್ಯಾಕುಲಗೊಂಡು ಸೈಕಲ್ಲನ್ನು ಜೋರಾಗಿ ತುಳಿದುಕೊಂಡು ಹತ್ತಿರ ಹೋಗಿ ನೋಡುತ್ತಾನೆ.

    ಅದು ಒಂದು ಶಾಲೆ. ಅಂದು ಆ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ. ಹಾಕಿದ್ದ ಪೆಂಡಾಲಿಗೆ ಅಕಸ್ಮಾತ್ ಬೆಂಕಿ ಬಿದ್ದು ಉರಿಯತೊಡಗಿತ್ತು.

    ನೋಡ ನೋಡುತ್ತಿದ್ದಂತೇ ಬೆಂಕಿ ಇಡೀ ಸಭಾಂಗಣವನ್ನೇ ಮುತ್ತಿತು. ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಹೊರಗೆ ಓಡತೊಡಗಿದರು. ಕೆಲವು ಮಕ್ಕಳು ಇತರರ ಕಾಲ್ತುಳಿತಕ್ಕೆ ಸಿಲುಕಿ ಬಿದ್ದರು. ಬೆಂಕಿ ಇನ್ನೂ ಹೆಚ್ಚಾಗತೊಡಗಿತ್ತು. ಹೊರಗೆ ಓಡಿದ್ದ ಎಲ್ಲರೂ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಮಕ್ಕಳ ಬಗ್ಗೆ ಕೂಗಿಕೊಳ್ಳತೊಡಗಿದರು.

    ಆ ದೃಶ್ಯ ನೋಡಿದ ಆ ಕಾರ್ಯವಾಹ ತನ್ನ ಸೈಕಲ್ಲನ್ನು ಅಲ್ಲಿಯೇ ಎಸೆದು ಎಲ್ಲರೂ ನೋಡುತ್ತಿದ್ದಂತೆಯೇ ಆ ಪೆಂಡಾಲಿನ ಒಳಗೆ ನುಗ್ಗಿದ. ಒಳಗೆ ಬೆಂಕಿಯ ಮಧ್ಯದಲ್ಲಿ ಸಿಕ್ಕಿಕೊಂಡಿದ್ದ ಮಕ್ಕಳನ್ನು ಎತ್ತಿಕೊಂಡು ಹೊರಗೆ ತಂದು ಬಿಡತೊಡಗಿದ. ಬೆಂಕಿ ಇನ್ನೂ ಜೋರಾಗತೊಡಗಿತು.

    ಒಳಗಿದ್ದ ೧೩ ಮಕ್ಕಳನ್ನು ಉಳಿಸಿ ಮತ್ತೆ ಒಳಗೆ ಹೋದವನು ಮತ್ತೆ ಹೊರ ಬರಲಾಗದೆ ಒಳಗೆ ಬೆಂಕಿಯಲ್ಲಿ ಸಿಕ್ಕಿ ಸಾವಿಗೀಡಾಗುತ್ತಾನೆ.

    ಆ ಸಮಯದಲ್ಲಿ ಅವನ ಹೆಂಡತಿ ತುಂಬು ಗರ್ಭಿಣಿ. ಯಾರೋ ಹೇಳಿದ ವಾರ್ತೆ ಕೇಳಿ ಗಂಡನನ್ನು ಹುಡುಕಿಕೊಂಡು ಬರುತ್ತಾಳೆ. ಪೂರ್ತಿ ಬೆಂದು ಹೋದ ಅವನ ದೇಹವನ್ನು ಗುರುತಿಸಲು ಅವಳಿಗೆ ಸಾಧ್ಯವಾಗಿದ್ದು ಅವನು ಹಾಕಿಕೊಂಡಿದ್ದ ಉಂಗುರದ ಸಹಾಯದಿಂದ.

ಧರ್ಮವು ಪ್ರಾಣಕ್ಕಿಂತ ಮಿಗಿಲು



   ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ರಾಜರು, ಸಾಮಂತರು, ಸಂಸ್ಥಾನಗಳು ಪಾಲ್ಗೊಂಡಿದ್ದವು. ವೀರ ಸೈನಿಕರು, ಸೇನಾಪತಿಗಳು, ರಾಜ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಡಿದರು. ದುರದೃಷ್ಟವಶಾತ್ ಕೆಲವೇ ಕೆಲವರ ಮೋಸದಿಂದಾಗಿ, ಭಾರತದಿಂದ ಸೈನ್ಯ ಸೋತು ಬ್ರಿಟಿಷರನ್ನು ಓಡಸಬಹುದಾಗಿದ್ದ ಅವಕಾಶ ತಪ್ಪಿಹೋಯಿತು.

    ಯುದ್ಧ ಮುಗಿದ ನಂತರ ಬ್ರಿಟಿಷರು ತಮ್ಮ ಸೈನ್ಯದ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದ ಎಲ್ಲರನ್ನೂ ಹಿಡಿದು ಸೆರೆಮನೆಯಲ್ಲಿ ಹಾಕಿಯೋ ಅಥವಾ ಮರಣದಂಡನೆ ನೀಡಿಯೋ ತಮ್ಮ ಸೇಡನ್ನು ತೀರಿಸಿಕೊಳ್ಳತೊಡಗಿದರು. ಮುಂದೆಂದೂ ಬ್ರಿಟಿಷರ ವಿರುದ್ಧ ಆ ರೀತಿಯ ಸಂಗ್ರಾಮ ನಡೆಯಬಾರದೆಂಬ ಉದ್ದೇಶದಿಂದ ತಮ್ಮ ವಿರೋಧಿಗಳೆಲ್ಲರನ್ನೂ ಸದೆ ಬಡಿಯಲು ಆರಂಭಿಸಿದರು.

    ಹಾಗೆ ಸೆರೆಸಿಕ್ಕವರಲ್ಲಿ ಒಂದು ಚಿಕ್ಕ ಸಂಸ್ಥಾನದ ಒಬ್ಬ ಸೈನಿಕ. ಇನ್ನೂ ೧೭-೧೮ರ ವಯಸ್ಸು. ಸೆರೆಯಾದರೂ ಯಾವುದೇ ಭಯವಿಲ್ಲದೇ ಧೈರ್ಯದಿಂದಲೇ ಇದ್ದ. ಬ್ರಿಟಿಷ ಅಧಿಕಾರಿಯೊಬ್ಬ ಸೋಗಿನ ವಿಚಾರಣೆ ನಡೆಸಿ ಅವನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ. ಮರಣ ದಂಡನೆಯ ದಿನ ಅವನನ್ನು ಒಂದು ಮೈದಾನಕ್ಕೆ ಕರೆದುಕೊಂಡು ಬರಲಾಯಿತು.

    ಬೇಡಿಯ ಸಹಿತ ಬಂದ ಅವನನ್ನು ಕುರಿತು ಬ್ರಿಟಿಷ್ ಅಧಿಕಾರಿಯು ಹೇಳಿದ "ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದ ನಿನಗೆ ಮರಣ ದಂಡನೆ ವಿಧಿಸಲಾಗಿದೆ. ನಿನಗೋ ಇನ್ನೂ ಎಳೆ ವಯಸ್ಸು. ಆದ್ದರಿಂದ ನಿನಗೆ ಬದುಕಲು ಒಂದು ಅವಕಾಶ ಕೊಡುತ್ತೇನೆ. ನೀನು ನಿನ್ನ ಹಿಂದು ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಆಗಿ ಮತಾಂತರಗೊಂಡರೆ, ನಿನಗೆ ಪ್ರಾಣ ಭಿಕ್ಷೆ ಕೊಟ್ಟು ನಿನ್ನನ್ನು ಬ್ರಿಟಿಷ್ ಸೈನ್ಯದಲ್ಲೂ ಸೇರಿಸಿಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಇಂದೇ ತೋಪಿಗೆ ಕಟ್ಟಿ ಉಡಾಯಿಸಲಾಗುವುದು".

    ಅವನ ಮಾತನ್ನು ಕೇಳಿ ಆ ಹುಡುಗ ನಕ್ಕು "ನನಗೆ ನನ್ನ ಜೀವಕ್ಕಿಂತ ನನ್ನ ರಾಷ್ಟ್ರ ಮತ್ತು ನನ್ನ ಹಿಂದು ಧರ್ಮವೇ ಮೇಲು. ನಿಮ್ಮ ಪಾಡಿಗೆ ನಿಮ್ಮ ತೋಪಿಗೆ ಕೆಲಸ ಕೊಡಿ" ಎಂದ.

    ಅವನ ಮಾತಿನ್ನು ಕೇಳಿ ಆ ಬ್ರಿಟಿಷ್ ಅಧಿಕಾರಿಯು ತನ್ನ ಆಮಿಷವು ಕೆಲಸ ಮಾಡದೆಂದು ತಿಳಿದು ಅವನನ್ನು ತೋಪಿಗೆ ಕಟ್ಟಲು ಹೇಳಿದ. ಆ ಹುಡುಗನು ನಗುನಗುತ್ತಲೇ ತನ್ನ ಪ್ರಾಣವನ್ನು ಅರ್ಪಿಸಿದ.

ವಾತ್ಸಲ್ಯಮಯಿ ನೀಡಿದ ಶಿಕ್ಷಣ



   ಆಚಾರ್ಯ ವಿನೋಬಾ ಭಾವೆಯವರ ತಾಯಿ ಸಹೃದಯಿ ಮತ್ರವಲ್ಲ ದಯಾಳುವೂ ಹೌದು. ಒಮ್ಮೆ ಅವರ ಪಕ್ಕದ ಮನೆಯಾಕೆ ಬೇರಾವುದೋ ಊರಿಗೆ ಹೋಗಬೇಕಾಗಿತ್ತು. ಆಕೆಗೊಬ್ಬ ಮಗನಿದ್ದ. ಆತ ವಿನೋಬಾ ಓರಗೆಯವನೇ. ಆದರೆ ಆತನನ್ನು ತನ್ನೊಡನೆ ಕರೆದೊಯ್ಯುವುದು ಆಕೆ ಕಷ್ಟವಾಗಿತ್ತು. ಎಲ್ಲಿ ಬಿಟ್ಟುಹೋಗುವುದೆಂಬ ಚಿಂತೆ ಕಾಡತೊಡಗಿತು. ಇದನ್ನು ತಿಳಿದ ವಿನೋಬಾನ ತಾಯಿ, ತಮ್ಮಲ್ಲೇ ಬಿಟ್ಟುಹೋಗಲು ಹೇಳಿದರು. ನೆರೆಮನೆಯಾಕೆ ಅವರ ಬಳಿ ಮಗುವನ್ನು ಬಿಟ್ಟು ನಿಶ್ಚಿಂತೆಯಿಂದೆ ಊರಿಗೆ ಹೋದಳು.

    ಮಕ್ಕಳಿಬ್ಬರೂ ಆನಂದದಿಂದ ಆಡತೊಡಗಿದರು. ತಾಯಿಯ ವಾತ್ಸಲ್ಯದಲ್ಲಿ ಮಿಂದೆದ್ದ ಮಕ್ಕಳು ತಣಿದರು.

    ಊಟದ ಸಮಯವಾದಾಗ ತಾಯಿ ಪ್ರೀತಿಯಿಂದ ಮಕ್ಕಳಿಬ್ಬರನ್ನೂ ಊಟಕ್ಕೆ ಕರೆದರು. ಊಟ ಬಡಿಸುವಾಗ ತನ್ನ ತಾಯಿ ತಾರತಮ್ಯ ಮಾಡುತ್ತಿರುವುದನ್ನು ಬಾಲಕ ವಿನೋಬಾ ಗಮನಿಸಿದ. ತನಗೆ ಒಣರೊಟ್ಟಿ ಮಾತ್ರ. ಆ ಮಗುವಿಗಾದರೋ ತುಪ್ಪ ಹಾಕಿದ ರೊಟ್ಟಿ! ಮಾತ್ರವಲ್ಲ ತನ್ನಮ್ಮನೇ ಆತನಿಗೆ ಕೈಯಾರೆ ತಿನ್ನಿಸುತ್ತಿರುವುದನ್ನು ಕಂಡು "ಹೀಗೇಕೆ ಮಾಡುತ್ತಿರುವೆಯಮ್ಮ?" ಎಂದು ಅಮ್ಮನನ್ನು ಕೇಳಿಯೇ ಬಿಟ್ಟ.

    ಅಮ್ಮನಿಗೆ ಮಗನ ಮನಸ್ಸು ಅರ್ಥವಾಯಿತು. "ನೋಡು ಮಗೂ, ನಿಮ್ಮಿಬ್ಬರಿಗೂ ಆಗುವಷ್ಟು ತುಪ್ಪ ಮನೆಯಲ್ಲಿಲ್ಲ. ನೀನಂತು ನನ್ನ ಮಗ ತಾನೇ? ಆದರೆ ಇವನು ನೆರೆಮನೆಯವನು. ಅತಿಥಿಯೆಂದರೆ ದೇವರಿಗೆ ಸಮಾನ. ನಾವು ಕಷ್ಟಪಟ್ಟಾದರೂ ಅತಿಥಿಗಳಿಗೆ ಆನಂದ ನೀಡಬೇಕು" ಎಂದರು ಆ ತಾಯಿ.

    ಹೀಗೆ ವಿನೋಬಾ ಬಾಲ್ಯದಿಂದಲೇ ತಾಯಿಯಿಂದ ಸತ್ಸಂಸ್ಕಾರ ಪಡೆದರು. ಆದ್ದರಿಂದಲೇ ಅವರು ಶ್ರೇಷ್ಠರೆನಿಸಿದರು.

ಪರಿವರ್ತನೆ



   ನಾಲ್ವಡಿ ಕೃಷ್ಣರಾಜ ಓಡೆಯರ್ ಒಮ್ಮೆ ಪ್ರವಾಸದಿಂದ ಹಿಂದಿರುಗುತ್ತಿರುವಾಗ ಒಂದು ವನವಾಸಿಗಳ ಗ್ರಾಮಕ್ಕೆ ಹೋದರು. ಅಲ್ಲಿನ ಜನರ ಹೀನ ಪರಿಸ್ಥಿತಿಯನ್ನು ನೋಡಿ ಅಲ್ಲಿ ಒಂದು ವಸತಿಗೃಹ ಹಾಗೂ ಶಾಲೆ ತೆರೆಯಲು ನಿರ್ಧಾರ ಮಾಡಿದರು. ಮೈಸೂರಿಗೆ ಮರಳಿದ ನಂತರ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಅವಶ್ಯಕವಾದ ವ್ಯವಸ್ಥೆಗೆ ಆದೇಶ ಮಾಡಿದರು. ಅಲ್ಲಿನ ಶಾಲೆಗೆ ಒಬ್ಬ ಪಂಡಿತರನ್ನೂ ಕಳಿಸಿದರು. ಆ ಪಂಡಿತರ ಹೆಸರು ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಎಂದು.

    ಕೆಲವು ವರ್ಷಗಳ ನಂತರ ಮಹಾರಾಜರು ಅದೇ ದಾರಿಯಲ್ಲಿ ಬರುವ ಅವಕಾಶವಾಯಿತು. ಹಿಂದಿನ ಸಂಗತಿಗಳನ್ನು ನೆನಪಿಸಿಕೊಂಡು ಮತ್ತೆ ಅದೇ ಗ್ರಾಮಕ್ಕೆ ಹೋದರು. ಆದರೆ ಅವರ ಆಶ್ಚರ್ಯಕ್ಕೆ ಅಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಜನರ ಮತ್ತು ಗ್ರಾಮದ ಪರಿಸ್ಥಿತಿ ಹಿಂದಿನಂತೆಯೇ ಇತ್ತು.

    ಮಹಾರಾಜರನ್ನು ನೋಡಲು ಹಳ್ಳಿಯ ಒಂದು ದೊಡ್ಡ ಗುಂಪೇ ಸೇರಿತು. ತಾವು ಕಳಿಸಿದ್ದ ಶಾಸ್ತ್ರಿಗಳ ನೆನಪಾಗಿ ಆ ಗುಂಪಿನಲ್ಲಿ ಶಾಸ್ತ್ರಿಗಳನ್ನು ಹುಡುಕಲು ಪ್ರಯತ್ನಿಸಿದರು. ಶಾಸ್ತ್ರಿಗಳು ಕಾಣದಿದ್ದಾಗ ಅವರನ್ನು ಕರೆತರಲು ಮಹರಾಜರು ಹೇಳಿದರು. ತಕ್ಷಣವೇ ಆ ಗುಂಪಿನಿಂದ ಒಂದು ಧ್ವನಿ ಬಂದಿತು "ನಾನೇ ಚಾಮಿ ಕುಕ್ಕೆ ಚುಬ್ಬ".

    ಬದಲಾವಣೆಯನ್ನು ತರಬೇಕಾಗಿದ್ದ ಶಾಸ್ತ್ರಿಗಳೇ ವನವಾಸಿಗಳ ರೀತಿ, ಭಾಷೆಗಳಿಗೆ ಬದಲಾಗಿ ಬಿಟ್ಟಿದ್ದರು.

ಶ್ರದ್ಧೆ



   ಸಮರ್ಥ ರಾಮದಾಸರ ಅನೇಕ ಶಿಷ್ಯರಲ್ಲಿ ಕಲ್ಯಾಣ ಎನ್ನುವವನೂ ಒಬ್ಬ. ಅವನೊಬ್ಬ ಶತ ಮೂರ್ಖ ಎಂಬ ಪ್ರತೀತಿಯಿತ್ತು. ಅವನ ಮೂರ್ಖತನ ಉಳಿದ ಎಲ್ಲಾ ಶಿಷ್ಯರಿಗೂ ತಮಾಷೆಯ ವಿಷಯವಾಗಿತ್ತು. ಯಾವುದೇ ಸಂದರ್ಭ ಸಿಕ್ಕರೂ ಕಲ್ಯಾಣನ ಮೂರ್ಖತನವನ್ನು ಎತ್ತಿ ಹಾಸ್ಯ ಮಾಡುವುದು ಆ ಶಿಷ್ಯರ ಸ್ವಭಾವವಾಗಿತ್ತು. ಆದರೆ ಕಲ್ಯಾಣನಿಗೆ ಸಮರ್ಥ ರಾಮದಾಸರ ಬಗ್ಗೆ ಅಪಾರವಾದ ಶ್ರದ್ಧೆ ಇತ್ತು.

    ಒಮ್ಮೆ ಬಾವಿಯ ಮೇಲೆ ಬೆಳೆದಿದ್ದ ಮರದ ಟೊಂಗೆಯನ್ನು ಕಡಿಯಲು ಇತರ ಶಿಷ್ಯರು ಕಲ್ಯಾಣನನ್ನು ಕಳಿಸುತ್ತಾರೆ. ಕಲ್ಯಾಣ ಮರದ ಟೊಂಗೆಯ ತುದಿಯ ಭಾಗದ ಕಡೆ ಕುಳಿತು ಟೊಂಗೆಯನ್ನು ಕಡಿಯಲು ತೊಡಗುತ್ತಾನೆ. ಕೊನೆಗೆ ಟೊಂಗೆಯ ತುಂಡು ಕಡಿದು, ಕಲ್ಯಾಣ ಬಾವಿಯಲ್ಲಿ ಬೀಳುತ್ತಾನೆ. ಉಳಿದ ಶಿಷ್ಯರು ಅವನ ಪಾಡನ್ನು ನೋಡಿ ಹೊಟ್ಟೆ ತುಂಬಾ ನಗುತ್ತಾರೆ. ರಾಮದಾಸರಿಗೆ ಈ ವಿಷಯ ತಿಳಿಯುತ್ತದೆ.

    ಒಮ್ಮೆ ಸಮರ್ಥ ರಾಮದಾಸರಿಗೆ ಗುಣವಾಗದ ಒಂದು ರೋಗ ತಗಲುತ್ತದೆ. ಅವರ ಕಾಲು ಬಾತುಕೊಂಡು ಕೀವು ಬರಲು ಪ್ರಾರಂಭವಾಗುತ್ತದೆ. ಅವರು ತಮ್ಮ ಶಿಷ್ಯರನ್ನು ಕರೆದು "ನನಗೆ ಒಂದು ಮೂಲಿಕೆ ದೊರೆತಿದೆ. ಅದನ್ನು ಗಾಯಕ್ಕೆ ಹಾಕಿದರೆ ಸಂಪೂರ್ಣ ಗುಣವಾಗುತ್ತದೆ. ಆದರೆ ಅದಕ್ಕೆ ಮುಂಚೆ ಗಾಯದಿಂದ ಕೀವನ್ನು ಸಂಪೂರ್ಣ ತೆರೆಯಬೇಕು. ಸ್ವಲ್ಪ ಕೀವು ಇದ್ದರೂ ಗುಣವಾಗದು. ನಿಮ್ಮಲ್ಲಿ ಯಾರಾದರೂ ನಿಮ್ಮ ಬಾಯಿಯಿಂದ ಕೀವು ತೆಗೆದರೆ ನಾನು ಮೂಲಿಕ ಹಚ್ಚಬಹುದು" ಎನ್ನುತ್ತಾರೆ.

    ಎಲ್ಲ ಶಿಷ್ಯರು ಕಾಲಿನ ಗಾಯದ ಕೀವು ತೆಗೆಯುವುದನ್ನು ನೆನೆಸಿಕೊಂಡು ಅಸಹ್ಯ ಪಟ್ಟುಕೊಂಡು ಮುಂದೆ ಬರದೆ ಹಿಂಜರಿಯುತ್ತಾರೆ. ಆದರೆ ರಾಮದಾಸರ ಮೂರ್ಖ ಶಿಷ್ಯನಾದ ಕಲ್ಯಾಣ ಒಂದಿನಿತೂ ಯೋಚಿಸದೆ ರಾಮದಾಸರ ಕಾಲನ್ನು ಬಾಯಿಯಿಂದ ಹೀರಲು ಪ್ರಾರಂಭಿಸುತ್ತಾನೆ. ಆಶ್ಚರ್ಯಕರವಾಗಿ ಆ ಕೀವು ಮಾವಿನ ಹಣ್ಣಿನ ರೂಪವಾಗಿ ಪರಿವರ್ತಿತವಾಗುತ್ತದೆ. ಸಮರ್ಥ ರಾಮದಾಸರು ಶಿಷ್ಯನ ಗುಣಗಾನ ಮಾಡುತ್ತಾರೆ.

    ಮುಂದೆ ರಾಮದಾಸರ ಅದೇ ಮೂರ್ಖ ಶಿಷ್ಯ ಬೆಳೆದು ದೊಡ್ಡ ತತ್ವಜ್ಞಾನಿಯಾಗುತ್ತಾನೆ. ಇಂದಿಗೂ ಸಜ್ಜನಗಡದಲ್ಲಿ ಸಮರ್ಥ ರಾಮದಾಸರ ಸಮಾಧಿಯ ಪಕ್ಕದಲ್ಲೇ ಕಲ್ಯಾಣನ ಸಮಾಧಿಯೂ ಕಾಣಸಿಗುತ್ತದೆ.

ನಂಬಿಕೆ



   ಒಮ್ಮೆ ರಜ್ಜೂ ಭೈಯ್ಯಾಜಿ ಗುರೂಜಿಯವರ ಒಂದು ಕಾರ್ಯಕ್ರಮಕ್ಕೆ ಲಾಲ ಬಹದ್ದೂರ್ ಶಾಸ್ತ್ರಿಯವರನ್ನು ಕರೆಯಲು ಅವರ ಬಳಿ ಹೋದರು. ವಿಚಾರ ವಿನಿಮಯ ಆದ ನಂತರ, ರಜ್ಜೂ ಭೈಯ್ಯಾಜಿ ಬಂದ ಕಾರಣ ತಿಳಿಸಿದರು. ಒಮ್ಮೆ ಯೋಚನೆ ಮಾಡಿದ ಶಾಸ್ತ್ರಿಯವರು ಕಾರ್ಯಕ್ರಮಕ್ಕೆ ಬರಲು ನಿರಾಕರಿಸಿದರು. ರಜ್ಜೂ ಭೈಯ್ಯಾಜಿ ಕಾರಣ ಕೇಳಿದರು.

    "ನಾನು ನಿಮ್ಮ ಕಾರ್ಯಕ್ರಮಕ್ಕೆ ಬಂದರೆ ಕಾಂಗ್ರಸ್‍ನವರಿಗೆ ನಾನು ಆರ್.ಎಸ್.ಎಸ್. ಸೇರುತ್ತಿದ್ದೇನೆ ಎನ್ನುವ ಸಂದೇಹ ಬರುತ್ತದೆ. ಆದರೆ ನೀವು ಬಂದದ್ದನ್ನು ನೋಡಿದರೆ, ನೀವು ಕಾಂಗ್ರೆಸ್ ಸೇರಲು ಬಂದಿದ್ದೀರ ಎಂದು ಯಾರೂ ತಿಳಿಯುವುದಿಲ್ಲ" ಎಂದು ಶಾಸ್ತ್ರಿಯವರು ಉತ್ತರಿಸಿದರು.

ಸಂಘಕ್ಕೇಕೆ ತರುಣರು ಬರುತ್ತಾರೆ


   ಒಮ್ಮೆ ಗದಗದ ತೋಂಟಾರಾಧ್ಯರನ್ನು ನೋಡಲು ಅವರ ಮಠಕ್ಕೆ ಮಂಗೇಶ ಭೇಂಡೆಜಿ ಹೋಗಿದ್ದರು. ಅದೇ ಸಮಯದಲ್ಲಿ ಸ್ವಾಮೀಜಿಯವರನ್ನು ನೋಡಲು ಇನ್ನಿತರ ಇಬ್ಬರು ಬಂದಿದ್ದರು. ಎಲ್ಲರ ಪರಿಚಯದ ಆಯಿತು. ಅವರಲ್ಲಿ ಒಬ್ಬರು ಮಠದ ಶಾಲೆಯಲ್ಲಿ ನಡೆಸುವ ಸ್ಕೌಟ್ಸ್ ತಂಡಕ್ಕೆ ತರುಣರು ಏಕ ಬರುತ್ತಿಲ್ಲ ಎಂದು ಸಂಶೋಧನೆ ಮಾಡಲು ಬಂದಿದ್ದರು. ಇನ್ನೊಬ್ಬರು ಕೂಡ ಅವರದೇ ಶಾಲೆಯ ಮೇಲ್ವಿಚಾರಕರು.

    ಸ್ವಾಮೀಜಿ ಕೇಳಿದರು "ತರುಣರು ಸ್ಕೌಟ್ಸ್‍ಗೆ ಬರುತ್ತಿಲ್ಲ ಎಂದು ಹೇಳುತ್ತಿರುವಿರಿ. ಅವರಿಗೆ ಇಂಥ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲ ಎಂದು ಬೇರೆ ಹೇಳುತ್ತಿದ್ದೀರಿ. ಆದರೆ ಅದೇ ತರುಣರು ಆರ್.ಎಸ್.ಎಸ್. ನಡೆಸುವ ಶಾಖೆಗಳಿಗೆ ಹೋಗುತ್ತಿರುವವರಲ್ಲ?"

    "ಅವರ ಶಾಖೆಗೆ ಕೇವಲ ಉಚ್ಛ ಜಾತಿಯವರು ಮಾತ್ರ ಹೋಗುತ್ತಾರೆ" ಎಂದು ಶಾಲಾ ಮೇಲ್ವಿಚಾರಕರು ಹೇಳಿದರು.

    ತಟ್ಟನೆ ಸ್ವಾಮೀಜಿಯವರು "ಹಾಗಿಲ್ರಿ, ಅವರ ರಾಜ್ಯಾಧ್ಯಕ್ಷ ಬೇರೆ ಜಾತಿಯವರಿದ್ದಾರಲ್ಲ?"

    ಆಗ ಬಂದಿದ್ದ ಅವರಿಬ್ಬರೂ ಏನೂ ಹೇಳಲಾಗದೆ ಹೋದರು.

ಎಮೆರ್ಜೆನ್ಸಿಯಲ್ಲಿ ಜೈಲ್ ಭರೋ



   ದೇಶದಲ್ಲಿ ಎಮೆರ್ಜೆನ್ಸಿ ಹಾಕಲಾಗಿದ್ದ ಸಮಯ. ದೇಶದಾದ್ಯಂತ ಸರಕಾರದ ಎಲ್ಲಾ ವಿರೋಧಿಗಳನ್ನು ಜೈಲಿಗೆ ಅಟ್ಟುಲಾಗುತ್ತಿತ್ತು. ಸರಕಾರದ ವಿರುದ್ಧ ಯಾರೇ ಏನು ಮಾತನಾಡಿದರೂ, ಕೆಲಸ ಮಾಡಿದರೂ, ಅಂಥಹವರಿಗೆ ಜೈಲುವಾಸ ನಿಶ್ಚಿತ ಎನ್ನುವ ಪರಿಸ್ಥಿತಿ ಇತ್ತು.

    ಆ ಸಂದರ್ಭದಲ್ಲಿ ಸರಕಾರದ ವಿರುದ್ಧ ಕೆಲಸ ಮಾಡುತ್ತಿದ್ದ ಎಲ್ಲ ಸಂಘಟನೆಗಳು ಸೇರಿ ಒಂದು ಸಭೆ ನಡೆಸಿದವು. ಅದರಲ್ಲಿ ಸಂಘದ ಸದಸ್ಯರು, ಕಮ್ಯೂನಿಸ್ಟ್ ಪಕ್ಷದ ಸದಸ್ಯರು ಹಾಗೂ ಇನ್ನಿತರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬಹಳಷ್ಟು ವಿಚಾರಗಳನ್ನು ಚರ್ಚಿಸಿದ ನಂತರ ಯಾವುದೋ ಒಂದು ನಿರ್ಧಾರಿತ ದಿನ ಆಖಿಲ ಭಾರತ ಸ್ತರದಲ್ಲಿ ಎಲ್ಲ ಸಂಘಟನೆಯ ಸದಸ್ಯರು ’ಜೈಲ್ ಭರೋ’ ಆಂದೋಲನವನ್ನು ಹಮ್ಮಿಕೊಳ್ಳಬೇಕೆಂದು ನಿರ್ಧರಿಸಲಾಯಿತು.

    ಎಲ್ಲರೂ ತಮ್ಮ ತಮ್ಮ ಸಂಘಟನೆಯ ಎಷ್ಟು ಸಂಖ್ಯೆಯ ಸದಸ್ಯರು ಇದರಲ್ಲಿ ಭಾಗವಹಿಸಬಹುದು ಎಂದು ಕೇಳಲಾಯಿತು. ಕಮ್ಯೂನಿಸ್ಟ್ ಪಕ್ಷದ ಪ್ರತಿನಿಧಿಯಾಗಿ ಬಂದಿದ್ದ ಎ.ಕೆ. ಗೋಪಾಲನ್‍ರವರು ತಮ್ಮ ಪಕ್ಷದ ೨೦ ಸಾವಿರ ಸದಸ್ಯರು ಅಂದು ಜೈಲ್ ಭರೋ ಅಭಿಯಾನದಲ್ಲಿ ಭಾಗವಹಿಸುವರು ಎಂದು ಹೇಳಿದರು.

    ಸಂಘದ ಪ್ರತಿನಿಧಿಯಾಗಿದ್ದ ಮಾಧವರಾವ್ ಮೂಳೆಯವರ ಸರದಿ ಬಂದಾಗ ಅವರು ಸಂಘದ ೧ ಲಕ್ಷ ಸ್ವಯಂಸೇವಕರು ಬಂಧನಕ್ಕೊಳಗಾಗುವರು ಎಂದು ಹೇಳಿದರು.

    ಆಗ ಕಮ್ಯೂನಿಸ್ಟ್ ಸಹಿತ ಅನೇಕ ಇತರ ಪ್ರತಿನಿಧಿಗಳ ಮುಖದಲ್ಲಿ ಹಾಸ್ಯ ಭಾವನೆ ತೇಲಾಡಿತು. ಸಂಘವು ಆ ಸಮಯದಲ್ಲಿ ನಿರ್ಬಂಧನಕ್ಕೊಳಪಟ್ಟಿತ್ತು. ಸಂಘದ ಯಾವುದೇ ಕಾರ್ಯ ನಡೆಸುವಹಾಗಿರಲಿಲ್ಲ. ಅಷ್ಟೇ ಏಕೆ, ತಾವು ಸಂಘದ ಸ್ವಯಂಸೇವಕರು ಎಂದು ಹೇಳಿಕೊಂಡವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಲಾಗುತ್ತಿತ್ತು. ಸಂಘದ ಸ್ವಯಂಸೇವಕರು ಒಬ್ಬರೊನ್ನೊಬ್ಬರು ಭೇಟಿ ಮಾಡಲೂ ಸಾಧ್ಯವಿರಲಿಲ್ಲ. ಇಂಥ ಸಂದರ್ಭದಲ್ಲಿ ಒಂದು ಲಕ್ಷ ಸ್ವಯಂಸೇವಕರು ಬಂಧನಕ್ಕೊಳಗಾಗುವ ಯೋಚನೆಯೇ ಅನೇಕರಿಗೆ ಹಾಸ್ಯಾಸ್ಪದವೆನಿಸಿತ್ತು.

    ನಂತರದ ದಿನಗಳಲ್ಲಿ ಅಂದುಕೊಂಡ ಹಾಗೆಯೇ ಜೈಲ್ ಭರೋ ಚಳುವಳಿ ನಡೆಯಿತು. ಲೆಕ್ಕ ತೆಗೆದುಕೊಂಡಾಗ, ಸಂಘದ ೧.೨೫ ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಜೈಲಿಗೆ ಹೋಗಿದ್ದರು. ಆದರೆ ಕಮ್ಯೂನಿಸ್ಟರ ೨೦೦೦ ದಷ್ಟು ಮಂದಿ ಮಾತ್ರ ಜೈಲು ಪಾಡಾಗಿದ್ದರು. ಎ.ಕೆ. ಗೋಪಾಲನ್‍ರವರು "ನಾನು ನನ್ನ ಪಡೆಗೆ ಕೇವಲ ಸ್ವಾರ್ಥ ಹೇಳಿಕೊಟ್ಟಿದ್ದೆ. ತ್ಯಾಗ ಹೇಳಿಕೊಡಲಿಲ್ಲ" ಉದ್ಗರಿಸಿದರು !

ಡಾಕ್ಟರ್‌ಜಿಯವರ ಪ್ರಭಾವ



   ೧೯೬೬-೬೭ರ ಘಟನೆ. ದತ್ತೋಪಂತ ಠೇಂಗಡಿ ರಾಜ್ಯಸಭಾ ಸದಸ್ಯರಾಗಿದ್ದರು. ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಒಬ್ಬ ಕಮ್ಯೂನಿಸ್ಟ್ ಅವರೊಡನೆ ಮಾತನಾಡಲು ಕುಳಿತಿದ್ದರು. ಇನ್ನೊಬ್ಬ ಕಮ್ಯೂನಿಸ್ಟ್ ಬಾಲಚಂದ್ರ ಮೆನನ್‍ರವರು ಕೂಡ ಇದ್ದರು. ಆ ಮೊದಲ ಕಮ್ಯೂನಿಸ್ಟರು ಠೇಂಗಡಿಯರನ್ನು ಕುಚೇಷ್ಟೆ ಮಾಡುತ್ತಾ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ಠೇಂಗಡಿಯವರು ಅವರ ಕುತಂತ್ರ ಅರ್ಥವಾದರೂ, ಶಾಂತವಾಗಿ ಉತ್ತರಿಸುತ್ತಿದ್ದರು.

    ಹೀಗೆ ಸ್ವಲ್ಪ ಹೊತ್ತು ನಡೆಯಿತು. ಇವರಿಬ್ಬರ ಮಾತುಕತೆಯನ್ನು ಕೇಳುತ್ತಿದ್ದ ಮೆನನ್‍ರಿಗೆ ಸಹಿಸಲಸಾಧ್ಯವಾಯಿತು. ಅವರು ಆ ಕಮ್ಯೂನಿಸ್ಟ್ ಸ್ನೇಹಿತರಿಗೆ "ದೊಡ್ಡವರ ಬಗ್ಗೆ ಕುಚೇಷ್ಟೆ ಮಾಡಬಾರದು" ಎಂದು ಕಿವಿಮಾತು ಹೇಳಿದರು.

    ಆದರೂ ಆ ಮನುಷ್ಯ ಬಿಡದೆ ಮತ್ತೆ ಮತ್ತೆ ಅಂತಹುದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಡಾಕ್ಟರ್‌ಜಿಯವರನ್ನು ನೆಹರುರವರ ಜೊತೆ ತಾಳೆ ಮಾಡುತ್ತ ಕೆಲವೊಮ್ಮೊ ಕಟುವಾಗಿ, ಕೆಲವೊಮ್ಮೆ ಕುಹಕವಾಗಿ ಮಾತನಾಡುತ್ತಿದ್ದರು. ಆಗ ಮೆನನ್ ಅವರನ್ನು ಕೇಳಿದರು "ನೆಹರೂ ಕಾಲವಾಗಿ ಎಷ್ಟು ವರ್ಷವಾಯಿತು?".

    "ಎರಡೂ ಎರಡೂವರೆ ವರ್ಷವಾಗಿದೆ" ಆ ಕಮ್ಯೂನಿಸ್ಟರ ಉತ್ತರ.

    "ನೆಹರೂ ತೀರಿಹೋದಾಗ ಅವರ ಬಗ್ಗೆ ಎಷ್ಟು ಜನಕ್ಕೆ ಗೊತ್ತಿತ್ತು?" ಮತ್ತೊಂದು ಪ್ರಶ್ನೆ ಮೆನನ್‍ರಿಂದ.

    "ಇಡೀ ಭಾರತಕ್ಕೇ ತಿಳಿದಿತ್ತು. ಅಷ್ಟೇ ಅಲ್ಲ, ಪ್ರಪಂಚದ ಅನೇಕ ದೇಶಗಳ ಜನರಿಗೂ ಅವರ ಬಗ್ಗೆ ಗೊತ್ತಿತ್ತು".

    ಆಗ ಮೆನನ್ ಠೇಂಗಡಿಯವರ ಕಡೆ ತಿರುಗಿ "ಡಾಕ್ಟರ್‌ಜಿ ಸತ್ತು ಎಷ್ಟು ವರ್ಷವಾಯಿತು?"

    "ಸುಮಾರು ೨೬-೨೭ ವರ್ಷವಾಯಿತು" ಠೇಂಗಡಿಯವರು ಉತ್ತರಿಸಿದರು.

    "ಡಾಕ್ಟರ್‌ಜಿ ಸತ್ತಾಗ ಅವರ ಬಗ್ಗೆ ಎಷ್ಟು ಜನಕ್ಕೆ ತಿಳಿದಿತ್ತು?" ಮತ್ತೆ ಮೆನನ್ ಪ್ರಶ್ನೆ ಮಾಡಿದರು.

    "ಭಾರತದ ಮಧ್ಯಭಾಗದ ಕೆಲವು ಸಾವಿರ ಜನಕ್ಕೆ ತಿಳಿದಿತ್ತು" ಠೇಂಗಡಿ ಹೇಳಿದರು.

    ಆಗ ಮೆನನ್‍ರವರು ಆ ಕಮ್ಯೂನಿಸ್ಟರನ್ನು ಕುರಿತು "ಹಾಗಾದರೆ ನೆಹರೂ ವಿಚಾರಕ್ಕೆ ಪ್ರಾಣ ಕೊಡುವ ಎಷ್ಟು ಜನ ಇದ್ದಾರೆ? ಮತ್ತು ಡಾಕ್ಟರ್‌ಜಿಯವರ ವಿಚಾರಧಾರೆಯ ಅನುಷ್ಟಾನಕ್ಕಾಗಿ ಪ್ರಾಣವನ್ನೇ ಪಣವನ್ನಾಗಿಟ್ಟು ಕೆಲಸ ಮಾಡುವ ಎಷ್ಟು ಜನ ಇದ್ದಾರೆ?"

    ಮೆನನ್‍ರವರ ತೀಕ್ಷ್ಣವಾದ ಆ ಪ್ರಶ್ನೆಗೆ ಉತ್ತರಿಸಲಾಗದೆ ಆ ಕಮ್ಯೂನಿಸ್ಟ್ ಸ್ನೇಹಿತರು ಸುಮ್ಮನಾದರು.

    ಮಾತನ್ನು ಮುಂದುವರೆಸುತ್ತಾ ಮೆನನ್‍ರವರು "ಒಬ್ಬ ವ್ಯಕ್ತಿ ಸತ್ತಾಗ ಅವನು ಎಷ್ಟು ಉದ್ದದ ನೆರಳನ್ನು ಬಿಡುತ್ತಾನೆ ಎಂಬುದರ ಮೇಲೆ ಅವನು ಎಷ್ಟು ಪ್ರಭಾವಿ ಎಂದು ನಿರ್ಧಾರವಾಗುತ್ತದೆ" ಎಂದರು.

ಉಪಯೋಗಕ್ಕೆ ಬಾರದ್ದು ಯಾವುದೂ ಇಲ್ಲ


    ಒಮ್ಮೆ ಈಶ್ವರಚಂದ್ರ ವಿದ್ಯಾಸಾಗರರನ್ನು ಕಾಣಲು ಅವರ ಗೆಳೆಯರೊಬ್ಬರು ಬಂದರು. ಕ್ಷೇಮ ಸಮಾಚಾರಗಳನ್ನು ಕೇಳಿದ ಬಳಿಕ ಈಶ್ವರಚಂದ್ರರು ಕಿತ್ತಳೆ ಹಣ್ಣನ್ನು ತಿನ್ನಲು ನೀಡಿದರು. ಇಬ್ಬರೂ ಕಿತ್ತಳೆ ಹಣ್ನನ್ನು ತಿನ್ನತೊಡಗಿದರು. ಈಶ್ವರಚಂದ್ರರು ಚರಟವನ್ನೆಲ್ಲ ಒಂದು ತಟ್ಟೆಯಲ್ಲಿಡುತ್ತಿದ್ದರು. ಆದರೆ ಅವರ ಗೆಳೆಯರು ಮಾತ್ರ ಅವನ್ನೆಲ್ಲ ದೂರ ಎಸೆಯುತ್ತಿದ್ದರು. ಅದನ್ನು ಕಂಡ ವಿದ್ಯಾಸಾಗರರು ’ಹಾಗೇಕೆ ಅವನ್ನು ಕಸ ಎಸೆದಂತೆ ಎಸೆಯುವಿರಿ? ಹಾಗೆಯೇ ಇಟ್ಟರೆ ಯಾರಿಗಾದರೂ ಉಪಯೋಗಕ್ಕೆ ಬಂದೀತು’ ಎಂದರು.

    ’ರಸವೆಲ್ಲ ಹೀರಿದ ಕಿತ್ತಳೆ ತೊಳೆಗಳಲ್ಲವೇ ಇವು? ಇದ್ಯಾರ ಉಪಯೋಗಕ್ಕೆ ಬಂದೀತು?’ ಎಂದು ಪ್ರಶ್ನಿಸಿದರು ಗೆಳೆಯರು.

    ’ಹೊರಗಿರುವ ಕಟ್ಟೆಯ ಮೇಲಿಟ್ಟು ನೋಡಿ, ಆಗ ತಿಳಿಯುತ್ತೆ’ ಎಂದು ನಗುತ್ತಲೇ ಉತ್ತರಿಸಿದರು ಈಶ್ವರಚಂದ್ರರು.

    ಕಟ್ಟೆಯ ಮೇಲೆ ಜಗಿದ ಕಿತ್ತಳೆ ತೊಳೆಗಳ ಚರಟ ಇಟ್ಟ ಕೂಡಲೇ ಕಾಗೆಗಳ ಹಿಂಡು ಹಾರಿಬಂತು. ನೋಡ ನೋಡುತ್ತಿದ್ದಂತೆಯೇ ಅಲ್ಲಿದ್ದ ಕಿತ್ತಳೆ ಚರಟವನ್ನೆಲ್ಲ ಕಚ್ಚಿಕೊಂಡು ಕಾಗೆಗಳು ಹಾರಿಹೋದವು.

    ’ನೋದಿದಿರಾ, ಈ ಕೆಲಸಕ್ಕೆ ಬಾರದ ಕಿತ್ತಳೆ ಚರಟಗಳು ಆ ಕಾಗೆಗಳ ಉಪಯೋಗಕ್ಕೆ ಬಂದ ಪರಿ? ಯಾವ ವಸ್ತುವೂ ಅನುಪಯೋಗಿ ಅಲ್ಲ. ನಾವು ಅನುಪಯೋಗಿ ಎಂದು ಎಸೆದದ್ದು ಬೇರಾರೊ ವ್ಯಕ್ತಿ, ಪ್ರಾಣಿ, ಪಕ್ಷಿಗಳ ಉಪಯೋಗಕ್ಕೆ ಬಂದೇ ಬರುತ್ತದೆ’ ಎಂದು ಗಂಭೀರವಾಗಿ ನುಡಿದರು ಈಶ್ವರಚಂದ್ರ ವಿದ್ಯಾಸಾಗರರು.

ಹಗಲಿರುಳು ಒಂದೇ ಜಪ


    ಆಗ ಸ್ವಾತಂತ್ರ್ಯ ಹೋರಾಟದ ಕಾಲ ಕಾಕೋರಿ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಕ್ರಾಂತಿಕಾರಿ ರೋಶನ್ ಸಿಂಹನಿಗೆ ಮರಣದಂಡನೆ ವಿಧಿಸಲಾಗಿತ್ತು. ಆತನ ಬಲಿದಾನವಾಯಿತು. ಆ ಕುಟುಂಬದ ಮೇಲೆ ಸಂಕಟಗಳ ಸರಮಾಲೆಗಳೇ ಬಂದೆರಗಿದವು.

    ತುಂಬಾ ಕಷ್ಟಗಳ ಮಧ್ಯೆಯೂ ಆತನ ಮಗಳ ಮದುವೆ ನಿಶ್ಚಯವಾಯಿತು. ಆದರೆ ಅವರಿಗಾಗದ ಪೊಲೀಸ್ ಇನ್ಸ್‍ಪೆಕ್ಟರನೊಬ್ಬ ’ಕ್ರಾಂತಿಕಾರಿಗಳ ಮನೆಯ ಹುಡುಗಿಯನ್ನು ಮದುವೆ ಆಗುವುದೆಂದರೆ ಅಪರಾಧ, ರಾಜದ್ರೋಹ. ಅದಕ್ಕೆ ಶಿಕ್ಷೆಯೂ ಆಗಬಹುದು’ ಎಂದು ವರನ ಮನೆಯವರನ್ನು ಬೆದರಿಸಿದ.

    ಇದನ್ನೆಲ್ಲ ಲೆಕ್ಕಿಸದ ವರನ ಮನೆಯವರು ’ಭಾರತಮಾತೆಯ ಬಿಡುಗಡೆಗಾಗಿ ಬಲಿದನಗೈದವರ ಮನೆಯ ಮಗಳು ನಮ್ಮ ಮನೆಯ ಸೊಸೆಯಾಗಿ ಬರುವುದೇ ದೊಡ್ಡ ಸೌಭಾಗ್ಯ. ನಿಮ್ಮ ಬೆದರಿಕೆಗೆಲ್ಲಾ ನಾವು ಜಗ್ಗುವರಲ್ಲ’ ಎಂದರು. ಆ ಇನ್ಸ್‍ಪೆಕ್ಟರ್ ತೆಪ್ಪಗಾದ. ಆದರೂ ಆ ಮದುವೆಯನ್ನು ಮುರಿಯುವ ಹುನ್ನಾರವನ್ನೇ ಮುಂದುವರೆಸಿದ.

    ಈ ಸಂಗತಿ ಪತ್ರಿಕಾ ಸಂಪಾದಕರೊಬ್ಬರಿಗೆ ತಿಳಿಯಿತು. ಅವರ ರಕ್ತ ಕುದಿಯಿತು. ತಕ್ಷಣ ಆ ಇನ್ಸ್‍ಪೆಕ್ಟರನನ್ನು ಕಂಡರು. ’ಏಯ್! ಎಂಥಾ ಮನುಷ್ಯನಯ್ಯ ನೀನು! ಸ್ವಲ್ಪವಾದರೂ ಮಾನವೀಯತೆ ಬೇಡವೇನು? ಕೆಟ್ಟದ್ದನ್ನೇ ಮಾಡುವುದರಲ್ಲಿ ಧನ್ಯತೆ ಕಾಣುವ ನೀಚತನ ನಿನ್ನದಾಯಿತಲ್ಲ? ವಿಷಬೀಜ ಬಿತ್ತಿದರೆ ಅದನ್ನೇ ಉಣ್ಣಬೇಕಾಗುತ್ತದೆ. ನಿನ್ನ ಭವಿಷ್ಯದ ಮೇಲೆ ನೀನೇ ಕಲ್ಲು ಹಾಕಿಕೊಂಡಂತಾಗುತ್ತದೆ’ ಎಂದು ಕಟುವಾಗಿ ನುಡಿದರು.

    ಸಂಪಾದಕರ ಈ ಮಾತು ಕೇಳಿ ಇನ್ಸ್‍ಪೆಕ್ಟರನ ಕಣ್ಣು ತೆರೆಯಿತು. ತನ್ನ ತಪ್ಪಿನ ಅರಿವಾಗಿ ರೋಶನ್ ಸಿಂಹರ ಹೆಂಡತಿಯ ಕ್ಷಮೆ ಕೇಳಿದ. ಮಾತ್ರವಲ್ಲ, ಮದುವೆಯ ಖರ್ಚೆಲ್ಲವನ್ನು ತಾನೇ ಕೊಡುವನೆಂದ.

ದೇವರಿಗಿಂತ ದೇಶ ಮೊದಲು



    ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವಕವಿ ರವೀಂದ್ರನಾಥ ಠಾಕೂರರು ಜಪಾನ್ ಪ್ರವಾಸದಲ್ಲಿದ್ದರು. ಒಮ್ಮೆ ಅಲ್ಲಿನ ಶಾಲೆಯೊಂದರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗ ಗುರುದೇವ ರವೀಂದ್ರರು "ನೀವು ಯಾವ ಮತವನ್ನು ಆಚರಿಸುತ್ತೀರಿ?" ಎಂದು ಕೇಳಿದರು.

    "ಬೌದ್ಧ ಮತ" ವಿದ್ಯಾರ್ಥಿಗಳ ಉತ್ತರ.

    "ಬೌದ್ಧ ಮತ ಸ್ಥಾಪಿಸಿದ ಭಗವಾನ್ ಬುದ್ಧ ಭಾರತದಲ್ಲಿ ಹುಟ್ಟಿದವರೆಂದು ನಿಮಗೆ ಗೊತ್ತಿರಬೇಕಲ್ಲವೇ?" ಗುರುದೇವರ ಪ್ರಶ್ನೆ.

    "ಹೌದು ನಮಗದು ಚೆನ್ನಾಗಿ ಗೊತ್ತು" ಬಾಲಕರೆಂದರು.

    "ಭಗವಾನ್ ಬುದ್ಧನ ನಾಯಕತ್ವದಲ್ಲಿ ಸೈನ್ಯವೊಂದು ನಿಮ್ಮ ದೇಶದ ಮೇಲೆ ಆಕ್ರಮಣಕ್ಕಾಗಿ ಬಂದಿದೆ ಎಂದು ಕಲ್ಪಿಸಿಕೊಳ್ಳಿ. ಆಗ ನೀವೇನು ಮಾಡುವಿರಿ?" ಗುರುದೇವರ ಪ್ರಶ್ನೆ ಸ್ವಲ್ಪ ಜಟಿಲವಾಗಿತ್ತು.

    "ನಾವು ಬುದ್ಧನನ್ನು ಎದುರಿಸುತ್ತೇವೆ. ನಮ್ಮ ದೇಶದಲ್ಲಿರುವ ಭಗವಾನ್ ಬುದ್ಧನ ಮೂರ್ತಿಗಳನ್ನೆಲ್ಲಾ ಕರಗಿಸಿ ಮದ್ದು ಗುಂಡುಗಳನ್ನು ತಯಾರಿಸುತ್ತೇವೆ. ಬುದ್ಧನನ್ನು ಮಾತ್ರವಲ್ಲ, ಆತನೊಡನೆ ಬಂದ ಸೈನವನ್ನೆಲ್ಲಾ ಸುಟ್ಟು ಬೂದಿ ಮಾಡುತ್ತೇವೆ" ಬಾಲ ವಿದ್ಯಾರ್ಥಿಯೊಬ್ಬ ರೋಷದಿಂದ ಗುಡುಗಿದ.

    ಬಾಲಕನ ಆ ಉತ್ತರದಲ್ಲಿ ಗುರುದೇವರು ಜಪಾನಿನ ಉಜ್ವಲ ಭವಿಷ್ಯವನ್ನು ಕಾಣುತ್ತಾ ಅವರ ದೇಶಭಕ್ತಿಯೆದುರು ನತಮಸ್ತಕರಾದರು.

ಮೂರ್ತಿ ಪೂಜೆ



    ರಾಜಸ್ಥಾನದ ರಾಜ ಜಯಸಿಂಹ ದೇವರನ್ನು ನಂಬದ ಒಬ್ಬ ನಾಸ್ತಿಕ. ಭೋಗ ವಿಲಾಸದ ಜೀವನದಲ್ಲೇ ನಂಬಿಕೆಯಿಟ್ಟಿದವನು. ಒಮ್ಮೆ ಸ್ವಾಮಿ ವಿವೇಕಾನಂದರು ಅವನ ಅರಮನೆಗೆ ಅತಿಥಿಯಾಗಿ ಹೋಗುತ್ತಾರೆ. ಮಾತು ಚರ್ಚೆಗೆ ತಿರುಗಿ, ಮೂರ್ತಿ ಪೂಜೆಯ ವಿಷಯಕ್ಕೆ ಬರುತ್ತದೆ. ಇಬ್ಬರೂ ತಮ್ಮ ತಮ್ಮ ವಿಚಾರವನ್ನು ಹೇಳುತ್ತಾ ಸಾಗುತ್ತಾರೆ.

    ಕೊನೆಗೆ ಸ್ವಾಮಿ ವಿವೇಕಾನಂದರು ರಾಜನ ತಂದೆಯ ಭಾವಚಿತ್ರವನ್ನು ತೋರಿಸಿ ಅದಕ್ಕೆ ಉಗುಳಲು ಹೇಳುತ್ತಾರೆ. ಸ್ವಾಮಿ ವಿವೇಕಾನಂದರಿಂದ ಈ ರೀತಿಯಾದ ಮಾತು ಕೇಳಿ ರಾಜ ಆಶ್ಚರ್ಯ ಪಡುತ್ತಾನೆ. ಆಗ ಸ್ವಾಮಿ ವಿವೇಕನಂದರೇ ವಿವರಿಸುತ್ತಾ "ಈ ಭಾವಚಿತ್ರವು ಕಾಗದದ ಮೇಲೆ ಬಿಡಿಸಿರುವಂತಹುದು. ಅದು ನಿಮ್ಮ ತಂದೆಯ ಭಾವಚಿತ್ರ. ನಿಮ್ಮ ತಂದೆ ಸ್ವರ್ಗಸ್ಥರಾದ ನಂತರವೂ ನೀವು ಅವರ ಭಾವಚಿತ್ರವಕ್ಕೆ ಅವರ ಜೀವಿತ ಅವಧಿಯಲ್ಲಿ ಅವರಿಗೆ ಕೊಟ್ಟಷ್ಟೇ ಗೌರವವನ್ನು ಕೊಡುತ್ತಿದ್ದೀರಿ. ಅದನ್ನು ಕಾಗದ ಎಂದು ಭಾವಿಸದೆ ಅದರಲ್ಲಿ ನಿಮ್ಮ ತಂದೆಯವರನ್ನೇ ಕಾಣುತ್ತಿದ್ದೀರಿ. ಅದೇ ರೀತಿ ನಾವು ಕಲ್ಲನ್ನು ಪೂಜಿಸುವುದಿಲ್ಲ; ಬದಲಾಗಿ ಕಲ್ಲಲ್ಲಿರುವ ದೇವರನ್ನು ಪೂಜಿಸುತ್ತೇವೆ" ಎಂದರು. ತನ್ನ ತಪ್ಪಿನ ಅರಿವಾಗಿ ರಾಜ ಬದಲಾಗಿ ತನ್ನ ನಾಸ್ತಿಕತೆಯನ್ನು ಬಿಡುತ್ತಾನೆ.

ತಲೆಯ ಮೇಲೆ ಸದಾ ಭಾರತ



    ಸ್ವಾಮಿ ರಾಮತೀರ್ಥರು ಎರಡೂವರೆ ವರ್ಷ ಅಮೇರಿಕಾ ಪ್ರವಾಸದಲ್ಲಿದ್ದರು. ಅಪಾರ ಸಂಪತ್ತು, ಅಮೂಲ್ಯ ವಸ್ತುಗಳು ಅವರಿಗೆ ಉಡುಗೊರೆಯಾಗಿ ದೊರೆತಿತ್ತು. ಅವೆಲ್ಲವನ್ನು ಬಡವರಿಗಾಗಿ ಕೊಟ್ಟು ಬಿಟ್ಟರು. ಅಮೆರಿಕನ್ನರು ಕೊಟ್ಟಿದ್ದ ಉಡುಗೆ ಮಾತ್ರ ಅವರ ಬಳಿ ಉಳಿದಿತ್ತು.

    ಭಾರತದಲ್ಲಿ ಒಮ್ಮೆ ಅವರು ಅದೇ ಉಡುಗೆಯನ್ನು ತೊಡುತ್ತಿದ್ದರು. ಕೋಟು ಪ್ಯಾಂಟನ್ನು ಹೆಗಲ ಮೇಲೆ ಹಾಕಿಕೊಂಡು ಮೊದಲು ಅಮೇರಿಕದ ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡರು. ತಮ್ಮ ಬೋಳು ತಲೆಯ ಮೇಲೆ ಅಮೆರಿಕದ ಬೆಲೆಬಾಳುವ ಹ್ಯಾಟಿನ ಬದಲು ಇಲ್ಲಿಯ ಸರಳ ಪೇಟವನ್ನು  ಸುತ್ತಿಕೊಂಡರು.

    ’ತುಂಬಾ ಬೆಲೆಬಾಳುವ ಈ ಸುಂದರ ಹ್ಯಾಟನ್ನೇ ಹಾಕಿಕೊಳ್ಳಬಹುದಾಗಿತ್ತಲ್ಲಾ?’ ಎಂದು ಯಾರೋ ಕೇಳಿದರು.

    ’ಈ ರಾಮನ ತಲೆಯ ಮೇಲೆ ಯಾವಾಗಲೂ ಭಾರತವೇ ಇರುತ್ತದೆ. ಅಮೇರಿಕಾ ಕಾಲಲ್ಲಿರಬಹುದು’. ಎಂದುತ್ತರಿಸಿದ ಸ್ವಾಮಿ ರಾಮತೀರ್ಥರು ನೆಲಕ್ಕೆ ಬಾಗಿ ಹಿಡಿ ಮಣ್ಣನ್ನು ತೆಗೆದು ಹಣೆಗೆ ಹಚ್ಚಿಕೊಂಡರು.

ವಿದೇಶಗಳಲ್ಲಿ ಸಂಘ



    ೧೯೪೭ರಲ್ಲಿ ಪಂಜಾಬಿನ ಜಗದೀಶಚಂದ್ರ ಎನ್ನುವ ಸ್ವಯಂಸೇವಕ ಹಡಗಿನಲ್ಲಿ ಕೆನ್ಯಾಗೆ ಹೊರಟಿದ್ದರು. ಸಂಜೆ ಆಗುತ್ತಾ ಶಾಖೆಯ ನೆನಪಾಯಿತು. ಅಗ ಅವರು ಹಡಗಿನ ಮೇಲೆ ಬಂದು ಪ್ರಾರ್ಥನೆ ಪ್ರಾರಂಬಿಸಿದರು. ಅದು ಮುಗಿಯುವ ಹೊತ್ತಿಗೆ ಮಾಣಿಕಚಂದ್ ಎನ್ನುವ ಇನ್ನೊಬ್ಬ ಸ್ವಯಂಸೇವಕ ಅವರ ಜೊತೆ ಸೇರಿದ್ದರು.

    ನಂತರ ಕೆನ್ಯಾದ ಇತರ ಸ್ವಯಂಸೇವಕರನ್ನು ಮತ್ತು ಹಿಂದುಗಳನ್ನು ಸೇರಿಸಿ ೧೯೪೭ರ ಸಂಕ್ರಾಂತಿಯಂದು ಶಾಖೆ ಪ್ರಾರಂಭಿಸಿದರು. ೧೯೬೭ರಲ್ಲಿ ಇಂಗ್ಲೆಂಡಿನಲ್ಲಿ ಭಾರತೀಯ ಕಾಫೀ ಬೋರ್ಡಿನಿಂದ ಅಲ್ಲಿಗೆ ಹೋದ ಸತ್ಯನಾರಾಯಣ ರಾವ್ ಅಲ್ಲಿ ಶಾಖೆ ಪ್ರಾರಂಭಿಸಿದರು.

    ಹೀಗೆ ವಿದೇಶದಲ್ಲಿ ಅನೇಕ ಹೆಸರಿನಲ್ಲಿ ಸಂಘ ಕಾರ್ಯವು ಪ್ರಾರಂಭವಾಯಿತು. ಮಾರಿಷಸ್ ಸ್ವಯಂಸೇವಕ ಸಂಘ, ಭಾರತೀಯ ಸ್ವಯಂಸೇವಕ ಸಂಘ, ಹಿಂದು ಸ್ವಯಂಸೇವಕ ಸಂಘ ಮುಂತಾದ ಹೆಸರುಗಳಿಂದ ಸಂಘಟನೆಯ ಕೆಲಸ ಪ್ರಾರಂಭವಾಯಿತು. ಸುಮಾರು ೩೨ ದೇಶಗಳಲ್ಲಿ ೫೨೮ಕ್ಕೂ ಹೆಚ್ಚು ಶಾಖೆಗಳು ನಡೆಯುತ್ತಿವೆ.

    ಅಮೆರಿಕಾದ ಬುಶ್ ಸರಕಾರ ಪಾಕಿಸ್ಥಾನಕ್ಕೆ F16 ಯುದ್ಧ ವಿಮಾನವನ್ನು ಮಾರುವ ನಿರ್ಧಾರ ತೆಗೆದುಕೊಂಡಾಗ, ಅಲ್ಲಿಯ ಹಿಂದೂ ಸ್ವಯಂಸೇವಕ ಸಂಘದ ಸ್ವಯಂಸೇವಕರು ಆ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ಸರಕಾರಕ್ಕೆ ಪತ್ರ, ಫಾಕ್ಸ್ ಮುಖೇನ ಒತ್ತಡ ಹಾಕಿದರು. ಆ ಕಾರಣ ಅಮೇರಿಕಾ ಸರಕಾರವು ಆ ನಿರ್ಧಾರವನ್ನು ತಡೆಹಿಡಿದು, ಯುದ್ಧ ವಿಮಾನವನ್ನು ಮಾರವುದನ್ನು ಮುಂದೂಡಿತು.

ಸಿನಿಮಾ



    ನಾಗಪುರದ ಒಂದು ಶಾಖೆಯ ಕೆಲವು ಮಕ್ಕಳು ನಿತ್ಯವೂ ಶಾಖೆಗೆ ಬರುತ್ತಿದ್ದವರು, ಇದ್ದಕ್ಕಿದ್ದಂತೆಯೇ ಬರುವುದನ್ನು ನಿಲ್ಲಿಸಿದ್ದರು. ಡಾಕ್ಟರ್‌ಜಿ ವಿಚಾರಿಸಲು ನಿಜವಾದ ಕಾರಣ ತಿಳಿಯಿತು. ಆ ಮಕ್ಕಳೆಲ್ಲರೂ ಶಾಖೆ ತಪ್ಪಿಸಿ ನಿತ್ಯವೂ ಊರಿಗೆ ಬಂದಿದ್ದ ಹೊಸ ಸಿನಿಮಾ ನೋಡುಲು ಹೋಗುತ್ತಿದ್ದರು. ಡಾಕ್ಟರ್‌ಜಿಯವರು ಆ ಮಕ್ಕಳನ್ನು ಸೇರಿಸಿ, ಅವರ ಜೊತೆ ತಾವೂ ಸಿನಿಮಾ ನೋಡಲು ಬರುವುದಾಗಿ ತಿಳಿಸಿದರು. ಮಕ್ಕಳಿಗೆ ಆನಂದವೋ ಆನಂದ. ಡಾಕ್ಟರ್‌ಜಿ ತಮ್ಮ ಜೊತೆ ಸಿನಿಮಾ ನೋಡಲು ಬರುವುದೆಂದರೇನು ಸುಮ್ಮನೆಯೇ?

    ಡಾಕ್ಟರ್‌ಜಿ ಎಲ್ಲರಿಗೂ ಕೂಡಿ ತಮ್ಮ ಮನೆಗೆ ಬರಲು ತಿಳಿಸಿದರು. ಆ ಸಂಜೆ ಮಕ್ಕಳೆಲ್ಲರೂ ಒಟ್ಟಿಗೆ ಡಾಕ್ಟರ್‌ಜಿ ಮನೆಗೆ ಬಂದರು. ಆ ಸಮಯದಲ್ಲಿ ಡಾಕ್ಟರ್‌ಜಿ ಯಾರೊಡನೆಯೋ ಮಾತನಾಡುತ್ತಾ ಊಟ ಮಾಡುತ್ತಿದ್ದರು. ಅವರ ಊಟ ಮುಗಿದು ಎಲ್ಲರೂ ಸಿನಿಮಾ ಮಂದಿರಕ್ಕೆ ಬರುವ ಹೊತ್ತಿಗೆ, ಸಿನಿಮಾ ಪ್ರಾರಂಭವಾಗಿ ಚಿತ್ರಮಂದಿರ ಭರ್ತಿಯಾಗಿತ್ತು.

    ನಿರಾಸೆಗೊಂಡ ಹುಡುಗರನ್ನು ಕರೆದುಕೊಂಡು ಡಾಕ್ಟರ್‌ಜಿ ಪಕ್ಕದ ಒಂದು ಉದ್ಯಾನವನಕ್ಕೆ ಬಂದರು. ಸಿನಿಮಾಗೆಂದು ತಂದಿದ್ದ ಹಣವನ್ನು ತೆಗೆದುಕೊಂಡು ಪುರಿಕಡಲೆ ಇತ್ಯಾದಿ ಕೊಂಡು ಹುಡುಗರನ್ನೆಲ್ಲಾ ಸುತ್ತ ಕೂರಿಸಿಕೊಂಡು ಹರಟೆ ಹೊಡೆಯಲು ಪ್ರಾರಂಭಿಸಿದರು. ಮಕ್ಕಳೂಂದಿಗೆ ಮಕ್ಕಳಾಗಿ ಡಾಕ್ಟರ್‌ಜಿ ಆ ಸಂಜೆ ಪೂರ್ತಿ ಅವರೊಡನೆ ನಕ್ಕು ನಲಿದರು.

    ಆ ಆತ್ಮೀಯತೆಯೇ ಆ ಮಕ್ಕಳನ್ನು ಮತ್ತೆ ಶಾಖೆಗೆ ಕರೆತಂದಿತು. ಡಾಕ್ಟರ್‌ಜಿ ಮಕ್ಕಳ ಜೊತೆ ಈ ರೀತಿ ಬಾಂಧವ್ಯವನ್ನು ಬೆಳೆಸಿ ಅವರಿಗೆ ಸಂಘ ಕಾರ್ಯದಲ್ಲಿ ರುಚಿ ಹಚ್ಚಿಸುತ್ತಿದ್ದರು.

ಪ್ರತಿಭಟನೆಯಲ್ಲೂ ವಿನೂತನ ಶೈಲಿ



    ಡಾಕ್ಟರ್‌ಜಿ ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಪೂರೈಸಿದ ನಂತರೂ, ಅವರ ಪದವಿಗೆ ಅಂದಿನ ಬ್ರಿಟಿಷ್ ಸರಕಾರದಿಂದ ಮಾನ್ಯತ ಸಿಕ್ಕಿರಲಿಲ್ಲ. ವಿದ್ಯಾರ್ಥಿಗಳೆಲ್ಲರೂ ಸೇರಿ ಸರಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರೂ ಏನೂ ಪ್ರಯೋಜನವಾಗಲ್ಲಿಲ್ಲ. ಎಲ್ಲ ವಿದ್ಯಾರ್ಥಿಗಳೂ ಹತಾಶರಾಗಿ ಪದವಿ ಪಡೆಯುವ ಆಸೆಯನ್ನೇ ಬಿಟ್ಟಿದ್ದರು.

    ಆದರೆ ಡಾಕ್ಟರ್‌ಜಿ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಅವರು ಪ್ರತಿದಿನ ಪತ್ರಿಕೆಗಳಿಗೆ ಪತ್ರವನ್ನು ಬರೆದು, ಸರಕಾರದ ಈ ನೀತಿಯ ವಿರುದ್ಧವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಎಂದು ತಿಳಿಸುತ್ತಿದ್ದರು. ಹೀಗೆ ವರದಿಗಳು ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುವುದನ್ನು ನೋಡಿದ ಸರಕಾರವು, ಈ ಪ್ರತಿಭಟನೆಗಳನ್ನು ಯಾರು ನಡೆಸುತ್ತಿರುವವರು, ಅದು ಎಲ್ಲಿ ನಡೆಯುತ್ತಿದೆ ಎಂದು ವಿಚಾರಿಸಲು ಕೇವಲ ಗೊಂದಲ ಉತ್ತರಗಳೇ ಸಿಗುತ್ತಿದ್ದವು.

    ನಿಜವಾಗಿ ಅಂತಹ ಯಾವುದೇ ಪ್ರತಿಭಟನೆಗಳು ನಡೆದಿರಲಿಲ್ಲ. ಡಾಕ್ಟರ್‌ಜಿ ಸರಕಾರದ ಮೇಲೆ ಒತ್ತಡ ತರಲು ಈ ಯೋಜನೆಯನ್ನು ಹಾಕಿ ಕಾರ್ಯಗತಗೊಳಿಸಿದ್ದರು. ಕೊನೆಗೆ ಸರಕಾರವು ಜನರಿಂದ ಬಂದ ಒತ್ತಡದ ಕಾರಣದಿಂದ ವಿದ್ಯಾರ್ಥಿಗಳ ವೈದ್ಯಕೀಯ ಪದವಿಗೆ ಮಾನ್ಯತೆ ನೀಡಿತು.

ಅಮರ ಡಾಕ್ಟರ್ ಹೆಡಗೆವಾರ್



    ಡಾಕ್ಟರ್‌ಜಿಯವರ ಜೀವನವೇ ಕಷ್ಟ ಮತ್ತು ತ್ಯಾಗಗಳಿಗೆ ಇನ್ನೊಂದು ಹೆಸರು. ಬಾಲ್ಯದಿಂದಲೇ ದೇಶಭಕ್ತಿಯ ವ್ರತ ಸ್ವೀಕರಿಸಿದ್ದವರು ಅವರು. ಅತ್ಯಂತ ಶ್ರದ್ಧೆಯಿಂದ ಜೀವನವಿಡೀ ಅದನ್ನು ನಡೆಸಿಯೂ ನಡೆಸಿದರು. ಸ್ಫಟಿಕದಂತಹ ಶುದ್ಧ ಚಾರಿತ್ರ್ಯ ಅವರದು.

    ಆಕಾರದಲ್ಲಿ ಭವ್ಯ, ಆಜಾನುಬಾಹು. ಮುಖದಲ್ಲಿ ಸಿಡುಬಿನ ಕಲೆ. ಶ್ಯಾಮ ವರ್ಣ. ಕಣ್ಣುಗಳಲ್ಲಿ ತುಳುಕಿ ಚಿಮ್ಮುತ್ತಿದ್ದ ಅಲೌಕಿಕ ತೇಜಸ್ಸು, ದೊಡ್ಡದಾದ ಮೀಸೆ, ಆದರೂ ತುಂಬ ಶಾಂತ ಸ್ವಭಾವ, ಸೌಮ್ಯ ನಡವಳಿಕೆ, ಮಾತುಗಳೆಂದರೆ ಪ್ರೇಮದ ಹೊಳೆ.

    ಸದಾ ಪ್ರಸನ್ನಚಿತ್ತರು ಅವರು. ಹಗಲು ರಾತ್ರಿ ಬಿಡುವಿಲ್ಲದೆ ಕ್ರಿಯಾಶಾಲಿ. ಸಂಘಕಾರ್ಯದ ಕುರಿತಾಗಿಯೇ ಸದಾ ಆಲೋಚನೆ. ಕೈಯಲ್ಲಿ ಕಾಸಿಲ್ಲ. ಸಾಧನಗಳೂ ಇಲ್ಲ. ನಿತ್ಯ ನೂರಾರು ವಿಧ ಸಂಕಟ, ತೊಂದರೆಗಳು. ಇಷ್ಟಾದರೂ ಅವರ ಪ್ರಸನ್ನತೆಗೆ ಎಂದು ಭಂಗವಿರಲಿಲ್ಲ. ತಮ್ಮ ಸುತ್ತ ಇಂತಹ ಪ್ರಸನ್ನತೆಯ ಕಂಪು ಹರಡುತ್ತಿದ್ದರು. ಭಾಷಣ, ಮಾತುಕತೆಯ ಅವರ ಶೈಲಿ ಸಹ ತೀರ ಸರಳ, ಅಹಂಕಾರದ ಲವಲೇಶವೂ ಅದರಲ್ಲಿ ಇರುತ್ತಿರಲಿಲ್ಲ. ಕೋಪವನ್ನು ನಿಯಂತ್ರಿಸಿದ್ದರು. ಲೋಭ, ಮೋಹಗಳನ್ನು ಬಾಲ್ಯದಲ್ಲಿಯೇ ದೂರಗೊಳಿಸಿದ್ದರು. ಅವರ ಉಡುಪು ಸರಳ, ಜೀವನವೂ ಸರಳ.

    ಡಾಕ್ಟರ್ ಹೆಡಗೆವಾರ್ ಅವರು ನಿಧನರಾದರೆನ್ನುವುದೇನೋ ನಿಜ. ಆದರೆ ಒಮ್ಮೊಮ್ಮೆ ಯೋಚಿಸಿದಾಗ ಅದೂ ಅಸತ್ಯವೇನೋ ಎನ್ನಿಸುತ್ತದೆ. ಅವರು ಇನ್ನೂ ಜೀವಂತ ಇದ್ದಾರೆ ಎನ್ನುವುದೇ ಹೆಚ್ಚು ಸರಿ. ಕಾರಣ ಡಾಕ್ಟರ್‌ಜಿ ಹಾಗೂ ಸಂಘ ಇವೆರಡೂ ಅಭಿನ್ನ. ಸಂಘ ಇರುವಾಗ ಡಾಕ್ಟರ್‌ಜಿ ಇಲ್ಲವಾಗುವುದು ಹೇಗೆ ಸಾಧ್ಯ? ಪ್ರತಿಯೊಂದು ಸಂಘಸ್ಥಾನದಲ್ಲಿ ಪ್ರತಿಯೊಬ್ಬ ಸ್ವಯಂಸೇವಕನ ಹೃದಯಮಂದಿರದಲ್ಲಿ ಅವರು ವಿರಾಜಿತರು.

    ನಿತ್ಯ ಶಾಖೆಗೆ ಹೋಗಬೇಕು. ಅಲ್ಲಿನ ಕಾರ್ಯಕ್ರಮಗಳಲ್ಲಿ ಒಂದಾಗಿ ಪಾಲ್ಗೊಳ್ಳಬೇಕು. ಸಂಘ ಕಾರ್ಯವನ್ನು ತನುಮನಧನಗಳಿಂದ ಅತ್ಯಂತ ಶ್ರದ್ಧೆ ವಹಿಸಿ ಮಾಡಬೇಕು. ಹಾಗಾದಾಗ ನಮ್ಮ ಹೃದಯದೊಳಗೂ ಡಾಕ್ಟರ್‌ಜಿಯವರ ಶಾಶ್ವತ ಆವಾಸ ಆಗಿಯೇ ಆಗುವುದು.

ಮಹಾಪ್ರಯಾಣ



    ಡಾಕ್ಟರ್‌ಜಿಯವರ ಮಹಾನಿರ್ವಾಣದ ಸುದ್ದಿ ಎಲ್ಲೆಡೆ ಹರಡಿತು. ತಂತಿ, ದೂರವಾಣಿ ಮೂಲಕ ದೂರದೂರದವರೆಗೆ ಸುದ್ದಿ ಹೋಯಿತು. ತಂಡ ತಂಡವಾಗಿ ಜನ ಬರತೊಡಗಿದರು. ಸೈಕಲ್ಲು, ಕಾರು, ಬಸ್ಸುಗಳಲ್ಲಿ, ಸಿಕ್ಕಿದ ಯಾವುದೇ ವಾಹನದಲ್ಲಿ ಸ್ವಯಂಸೇವಕರ, ಅಭಿಮಾನಿಗಳ ಮಹಾಪೂರವೇ ನಾಗಪುರದತ್ತ ಹರಿಯತೊಡಗಿತು. ನಾಗಪುರ ನಗರ ಸಂಘಚಾಲಕ ಘಟಾಟೆಯವರ ಮನೆಯಲ್ಲಿ ಸ್ವಯಂಸೇವಕರಲ್ಲದೆ ಸಹಸ್ರಾರು ಮಂದಿ ಬಂದು ಕೂಡಿದ್ದರು. ತಮ್ಮ ಪ್ರಾಣ ಪ್ರಿಯ ನಾಯಕನ ಅಂತ್ಯದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದ ಅನೇಕರಿಗೆ ತಡೆದಷ್ಟೂ ಉಮ್ಮಳಿಸಿ ಬರುತ್ತಿದ್ದ ದುಃಖ, ಕಣ್ಣುಗಳಲ್ಲಿ ಧಾರಾಕಾರ ನೀರು. ಇನ್ನೂ ಕೆಲವರದು ಮೂಕರೋದನ ಮಾತ್ರ.

    ೧೯೪೦ ಜೂನ್ ೨೧ರ ಸಂಜೆ ೫ ಗಂಟೆಗೆ ನಾಗಪುರದಲ್ಲಿ ಡಾಕ್ಟರ್‌ಜಿಯವರ ವಿರಾಟ್ ಶವಯಾತ್ರೆ. ಸಹಸ್ರಾವಧಿ ಸ್ವಯಂಸೇವಕರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು. ಹಿಂದೆಂದೂ ಕಂಡಿರದಷ್ಟು ಉದ್ದದ ಸಾಲು. ಎಲ್ಲವೂ ಶಾಂತ ಸಹಜ ಅನುಶಾಸನ ಬದ್ಧ.

    ಮಾರ್ಗದುದ್ದಕ್ಕೂ ಎಲ್ಲಿ ನೋಡಿದರಲ್ಲಿ ಜನಸಂದಣಿ. ಜಾತಿ, ಪಕ್ಷ, ಪಂಥಗಳ ಭೇದ ಮರೆತು ಎಲ್ಲರಿಂದ ಡಾಕ್ಟರ್‌ಜಿಯವರ ಕಳೇಬರಕ್ಕೆ ಹಾರ, ಪುಷ್ಪಗುಚ್ಛ ಸಮರ್ಪಣೆ, ಹೂವಿನ ಮಳೆ. ’ರೇಶಿಂಬಾಗ್’ ಮೈದಾನಕ್ಕೆ ೯ ಗಂಟೆಗೆ ಶವಯಾತ್ರೆ ತಲುಪಿತು.

    ರೇಶಿಂಬಾಗ್ ಅವರ ಕರ್ಮಭೂಮಿ. ಆ ಮೈದಾನವನ್ನು ತಾವೇ ಹಣ ಕೂಡಿಸಿ ಸಂಘಕ್ಕಾಗಿ ಕೊಂಡಿದ್ದರು. ಅದೆಷ್ಟು ಸಂಘ ಶಿಕ್ಷಾ ವರ್ಗಗಳು, ಉತ್ಸವಗಳು ಅಲ್ಲಿ ನಡೆದಿದ್ದವೋ? ಆ ನೆಲದ ಕಣ ಕಣವೂ ಡಾಕ್ಟರ್‌ಜಿಯವರ ನಡೆದಾಟ, ಬೆವರಿನಿಂದ ಪವಿತ್ರ. ಡಾಕ್ಟರ್‌ಜಿಯವರ ಧ್ವನಿಯಿಂದ ಅಲ್ಲಿನ ವಾತಾವರಣವೆಲ್ಲ ಅನುರಣಿತ, ಅದೇ ಪವಿತ್ರ ಸ್ಥಾನದಲ್ಲಿ ಈಗ ಡಾಕ್ಟರ್‌ಜಿಯವರ ಪಾರ್ಥಿವ ದೇಹವೂ ಅಗ್ನಿಗರ್ಪಿತವಾಯಿತು. ಧ್ಯೇಯಾಗ್ನಿಯಿಂದ ಪ್ರಜ್ವಲಿಸುತ್ತಿದ್ದ ಆ ದೇಹ ಧಗಧಗಿಸುವ ಅಗ್ನಿ ನಾರಾಯಣನಲ್ಲಿ ಒಂದಾಯಿತು. ಎಲ್ಲೆಲ್ಲೂ ದುಃಖದ ಛಾಯೆ ಆವರಿಸಿತು.

ಉತ್ತರಾಧಿಕಾರಿ



     ಡಾಕ್ಟರ್‌ಜಿಯವರ ಕಾಯಿಲೆ ಮತ್ತಷ್ಟು ಉಲ್ಬಣಿಸಿತು. ಲಂಬರ್ ಪಂಕ್ಚರ್ ಚಿಕಿತ್ಸೆ ಮಾಡುವ ನಿರ್ಧಾರ ಕೈಗೊಂಡರು ವೈದ್ಯರು. ಇದು ಡಾಕ್ಟರ್‌ಜಿಯವರಿಗೆ ತಿಳಿಯಿತು. ಅವರು ಶ್ರೀ ಗುರೂಜಿ, ಮಾ|| ಬಾಬಾಜಿ ಪಾಧ್ಯೆ, ಬಾಳಾಸಾಹೆಬ ದೇವರಸ್, ಕೃಷ್ಣರಾವ್ ಮೊಹರೀಲ್ ಮೊದಲಾದ ಪ್ರಮುಖ ಕಾರ್ಯಕರ್ತರನ್ನು ಬಳಿ ಕರೆದರು.

    ಚಿಂತೆ ತುಂಬಿ ಮೌನ ಕವಿದ ವಾತಾವರಣ. ಎಲ್ಲರ ಕಣ್ಣುಗಳು ಡಾಕ್ಟರ್‌ಜಿಯವರ ಮೇಲೆ. ನಡು ನಡುವೆ ತಮ್ಮ ಮನದಲ್ಲಿ ಏಳುತ್ತಿದ್ದ ಭಾವನೆಗಳ ಆವೇಗವನ್ನು ಹತ್ತಿಕ್ಕುವ ವಿಫಲ ಪ್ರಯತ್ನ ಅವರೆಲ್ಲ ನಡೆಸಿದರು. ಡಾಕ್ಟರ್‌ಜಿಯವರೆ ಕೊನೆಯಲ್ಲಿ ಮೌನ ಮುರಿದರು. "ಈಗ ಲಂಬರ್ ಪಂಕ್ಚರ್ ಮಾಡುವರು. ಪ್ರಾಯಶಃ ಇದೇ ಕೊನೆಯ ಉಪಾಯ ಉಳಿದಿರಬಹುದು. ಯಶಸ್ವಿಯಾದಲ್ಲಿ ಸಂತೋಷ. ಆದರೆ ಆಗದೆ ಹೋದಲ್ಲಿ ಸಂಘ ಕಾರ್ಯದ ಪೂರ್ತಿ ಹೊಣೆ ನಿಮ್ಮ ಮೇಲೆಯೇ ಎಂದು ನೀವು ತಿಳಿಯಿರಿ" ಗುರೂಜಿಯವರಿಗೆ ಅವರು ತಿಳಿಸಿದರು.

    "ಡಾಕ್ಟರ್‌ಜಿ ಹಾಗೇಕೆ ಮಾತನಾಡುವಿರಿ? ಎಲ್ಲವೂ ಸರಿಯಾಗುವುದು" ಎಂದರು ಶ್ರೀ ಗುರೂಜಿ.

    ಡಾಕ್ಟರ್‌ಜಿ ಮುಗುಳ್ನಗುತ್ತಾ "ಮನುಷ್ಯನಾದವನು ಯಾವಾಗಲೂ ಒಳ್ಳೆಯ ಭರವಸೆ ಇಟ್ಟುಕೊಳ್ಳಬೇಕೆಂಬುದನ್ನು ನಾನೂ ಒಪ್ಪುವೆ. ಜೊತೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಿದ್ಧನಾಗಿಯೂ ಇರುವುದು ಅಗತ್ಯ. ಸದ್ಯ ನಾನು ಹೇಳಿದಷ್ಟು ಮಾಡಿ" ಎಂದರು.

    ಈಗ ಡಾಕ್ಟರ್‌ಜಿ ನಿಶ್ಚಿಂತರು. "ಇನ್ನು ಬೇಕಾದಲ್ಲಿ ಲಂಬರ್ ಪಂಕ್ಚರ್ ಮಾಡಿರಿ" ವೈದ್ಯರಿಗೆ ಅವರು ತಮ್ಮ ಅನುಮತಿ ತಿಳಿಸಿದರು.

    ವೈದ್ಯರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು, ಸಂಜೆ ಚಿಕಿತ್ಸೆ ಮಾಡಲು ನಿರ್ಧರಿಸಿದರು. ಆ ದಿನ ಡಾಕ್ಟರ್‌ಜಿಯವರಿಗೆ ಅಸಹನೀಯ ವೇದನೆ. ಮಾನಸಿಕವಾಗಿಯೂ ಅಪಾರ ನೋವಿನ ಅನುಭವ. ತಮ್ಮ ಜೀವಿತ ಕಾಲದಲ್ಲಿಯೇ ಸುಸಂಘಟಿತ ಸಮೃದ್ಧ ಹಿಂದು ರಾಷ್ಟ್ರವನ್ನು ಅವರು ಕಾಣಬಯಸಿದ್ದರು. ಆದರೆ ಆರೋಗ್ಯ ಕೆಟ್ಟು ಶರೀರವೇ ಕುಸಿಯುತ್ತಿದೆ. "ನನ್ನ ಪ್ರಿಯ ಸ್ವಯಂಸೇವಕ ಬಂಧುಗಳೇ, ನನ್ನ ಆರಾಧ್ಯ ದೇವತೆಗಳೇ, ಸಂಘ ಕಾರ್ಯ ಬೆಳೆಸಲು ಮುಂದೆ ನೀವೆಷ್ಟು ಕಷ್ಟಗಳನ್ನು ಅನುಭವಿಸಬೇಕಾಗುವುದೋ..." ಎಂಬೆಲ್ಲ ಯೋಚನೆ. ಆ ಚಿಂತೆಯೇ ಅವರ ಮನಸ್ಸನ್ನು ಕಾಡುತ್ತಿತ್ತು. ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲನೆ ಚಡಪಡಿಸುತ್ತಿದ್ದರು. ಅವರಿಗೆ ನಿದ್ರೆ ಬರುತ್ತಿರಲಿಲ್ಲ. ಆಗಾಗ್ಗೆ ಮಗ್ಗಲು ಬದಲಿಸುತ್ತಿದ್ದರು. ಒಮ್ಮೊಮ್ಮೆ ಏಳುವರು. ಪುನಃ ಕುಳಿತುಕೊಳ್ಳುವರು; ವಿಚಾರಮಗ್ಯರಾಗಿ ಅತ್ತಿಂದಿತ್ತ ಓಡಾಡುವರು. ಶ್ರೀ ಗುರೂಜಿಯವರಿಗೆ ಸಂಘ ಕಾರ್ಯದ ಹೊಣೆ ಒಪ್ಪಿಸಿದ ಮೇಲಷ್ಟೇ ಮನಸ್ಸು ತುಸು ಶಾಂತವಾಯಿತು.

    ಸಾಯಂಕಾಲ ಚಿಕಿತ್ಸೆ ನಡೆಯಿತು. ಬೆನ್ನು ಹುರಿಯಿಂದ ನೀರು ಧಾರಾಕಾರವಾಗಿ ಹರಿಯಿತು. ಅಷ್ಟಾದರು ನೋವು ಮಾತ್ರ ಕಡಿಮೆಯಾಗಲೇ ಇಲ್ಲ.

    ಮಧ್ಯರಾತ್ರಿಯ ನಂತರ ಅವರು ಪ್ರಜ್ಞಾಶೂನ್ಯರಾದರು. ಬೆಳಗಾಗುತ್ತಿದ್ದಂತೆಯೇ ಅವರ ಜ್ವರ ೧೦೬ ಡಿಗ್ರಿಗೆ ಏರಿತು. ನಾಗಪುರದ ಗಣ್ಯ ವೈದ್ಯರೆಲ್ಲಾ ಸೇರಿದರು. ಸಾಕಷ್ಟು ವಿಚಾರ ವಿನಿಮಯ ನಡೆಯಿತು. ತರ ತರದ ಚಿಕಿತ್ಸೆಗಳಾದವು. ಆದರೂ ಯಾರಿಗೂ ಏನೂ ಹೊಳೆಯದು.

    ಡಾಕ್ಟರ್‌ಜಿಯವರ ಆರೋಕ್ಯ ಹದಗೆಟ್ಟ ಸುದ್ದಿ ನಾಗಪುರದಲ್ಲೆಲ್ಲಾ ಹರಡಿತು. ಸಹಸ್ರಾರು ಸ್ವಯಂಸೇವಕರು ಸೇರಿದರು. ಎಲ್ಲರಿಗೂ ಆತಂಕ, ಉದ್ವೇಗ. ಮನದಲ್ಲಿ ಭಗವಂತನಿಗೆ ಮೊರೆ. ಆದರೆ ಕಲನೆದುರಲ್ಲಿ ಯಾರ ಇಚ್ಛೆಯೂ ನಡೆಯದು.

    ೧೯೪೦ ಜೂನ್ ೨೧ ಶುಕ್ರವಾರ ಬೆಳಿಗ್ಗೆ ೯.೨೭ಕ್ಕೆ ಡಾಕ್ಟರ್‌ಜಿ ಇಹ ಲೋಕದ ಯಾತ್ರೆ ಮುಗಿಸಿದರು. ಸಹಸ್ರಾರು ಸ್ವಯಂಸೇವಕರ ಜೀವನದ ಆದರ್ಶ ಚೇತನ ಕಣ್ಮರೆಯಾಯಿತು. ಸಹಸ್ರಾವಧಿ ಕಾರ್ಯಕರ್ತರ ಪ್ರೇರಣಾ ಸ್ಥಾನ ಇಲ್ಲವಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಲ್ಪಿ, ಆದ್ಯ ಸರಸಂಘಚಾಲಕ ಪರಮ ಪೂಜನೀಯ ಡಾಕ್ಟರ್ ಹೆಡಗೆವಾರ್‌ಜಿ ಕಾಲದೊಂದಿಗೆ ಲೀನವಾದರು.

ನಾನು ಬಂಗಾಲಕ್ಕೆ ಬರಬೇಕೆಂದಿರುವೆ



    ೧೯೪೦ ಜೂನ್ ೧೯ರ ಸಾಯಂಕಾಲ. ಬಂಗಾಲದ ಓರ್ವ ವ್ಯಕ್ತಿ ಡಾಕ್ಟರ್‌ಜಿಯವರನ್ನು ಕಾಣಲು ಬಂದರು. ಮೊದಲು ಕ್ರಾಂತಿಕಾರಿಗಳಾಗಿದ್ದವರು ಅವರು. ಡಾಕ್ಟರ್‌ಜಿಯವರ ಆಪ್ತ ಮಿತ್ರ ಹಾಗೂ ಸಹಕಾರಿ. ಪರಸ್ಪರ ಕಾಣುತ್ತಲೇ ಅವರೀರ್ವರ ಕಣ್ಣುಗಳಲ್ಲಿ ಸಂತೋಷ ಮಿಂಚಿತು. ಪ್ರೀತಿಯಿಂದ ಆಲಂಗಿಸಿಕೊಂಡರು. ಡಾಕ್ಟರ್‌ಜಿ ಜೊತೆ ಅವರ ಮಾತುಕತೆ ಆರಂಭವಾಯಿತು. ಹಳೆಯ ನೆನಪುಗಳೆಲ್ಲ ಮತ್ತೆ ಹಸಿರಾದವು. "ನಾನು ವಾಸಿಯಾದ ಕೂಡಲೇ ಬಂಗಾಲಕ್ಕೆ ಬರುವೆ. ಹಳೆಯ ಗೆಳೆಯರನ್ನೆಲ್ಲ ಇನ್ನೊಮ್ಮೆ ಭೇಟಿ ಮಾಡುವೆ" ಡಾಕ್ಟರ್‌ಜಿಯವರೆಂದರು. ಮಾತು ಮುಂದುವರೆಸುತ್ತಾ "ನಮ್ಮ ದೇಶದ ಈಗಿನ ಸ್ಥಿತಿಯಲ್ಲಿ ಸಂಘ ಕಾರ್ಯ ಎಷ್ಟು ಮಹತ್ವದ್ದೆಂದು ಅವರಿಗೆ ತಿಳಿಸುವೆ. ಅವರೆಲ್ಲ ಕಾರ್ಯಕ್ಕಿಳಿದಲ್ಲಿ ನಮ್ಮ ದೇಶದ ಪರಿಸ್ಥಿತಿ ಶೀಘ್ರವೇ ಸುಧಾರಿಸಬಹುದು. ಚಿತ್ರವೇ ಬದಲಾಗಬಹುದು" ಎಂದರು.

    "ನಾಳೆ ನಾಗಪುರಕ್ಕೆ ಶ್ರೀ ಸುಭಾಷಚಂದ್ರ ಬೋಸರು ಬರುವವರಿದ್ದಾರೆ. ನಿಮ್ಮನ್ನು ಭೇಟಿ ಮಾಡುವ ಇಚ್ಛೆ ಅವರಿಗಿದೆ. ಅದನ್ನು ತಿಳಿಸಲೆಂದೇ ನಾನು ಬಂದಿರುವೆ. ಅವರು ತುಂಬ ಅಪೇಕ್ಷೆಪಟ್ಟಿದ್ದಾರೆ". ಬಂಗಾಲದಿಂದ ಬಂದ ವ್ಯಕ್ತಿ ನುಡಿದರು.

    ಅದರಂತೆ ಮರುದಿನ ಶ್ರೀ ಬೋಸರು ಶ್ರೀ ಘಟಾಟೆಯವರ ಮನೆಗೆ ಬಂದರು. ಆಗ ಡಾಕ್ಟರ್‌ಜಿ ಜ್ವರದಿಂದ ತೀರ ನಿತ್ರಾಣರಾಗಿದ್ದರು. ಕಣ್ಣುಗಳೂ ಮುಚ್ಚಿದ್ದವು. ಅರೆ ಎಚ್ಚರ ಅವರಿಗೆ. ಹಾಗಾಗಿ ಸುಭಾಷ್ ಚಂದ್ರರಿಗೆ ಅವರನ್ನು ಭೇಟಿ ಮಾಡಲು ಆಗಲಿಲ್ಲ. ಅವರಿಗೂ ಡಾಕ್ಟರ್‌ಜಿಯವರ ಸ್ಥಿತಿ ಅರ್ಥವಾಯಿತು. ಸ್ವಯಂಸೇವಕರು ಅವರನ್ನು ಎಬ್ಬಿಸಲು ಯೋಚಿಸಿದರು. ಆದರೆ ಸುಭಾಷ್‍ಚಂದ್ರರೇ ಅವರನ್ನು ತಡೆದರು. "ಬೇಡ ಈಗ ಎಬ್ಬಿಸಬೇಡಿ. ಸರಿಯಲ್ಲ ಅದು. ನಾನು ಪುನಃ ಬರುವೆ" ಎಂದರು. ಕೆಲವು ಕ್ಷಣ ಅಲ್ಲಿಯೇ ನಿಂತು, ಡಾಕ್ಟರ್‌ಜಿಯವರನ್ನು ಎವೆಯಿಕ್ಕದೇ ನೋಡಿದರು. ಕೊನೆಯಲ್ಲಿ ಮೌನವಾಗಿ ಪ್ರಣಾಮ ಸಲ್ಲಿಸಿ ಹೊರಬಂದರು.

ಜೀವನ ಮರಣಗಳ ತೂಗುಯ್ಯಾಲೆ


    ಸಂಘ ಶಿಕ್ಷಾ ವರ್ಗ ಮುಗಿಯಿತು. ಈಗ ಡಾಕ್ಟರ್‌ಜಿಯವರ ಸೇವೆಯಲ್ಲಿ ಹೆಚ್ಚಿನ ಕಾರ್ಯಕರ್ತರೆಲ್ಲ ತೊಡಗಿದರು. ವೈದ್ಯರ ಸಲಹೆಯಂತೆ ಉಪಚಾರ ಸಾಗಿತ್ತು. ಅನ್ಯ ಊರುಗಳಿಂದಲೂ ಸ್ವಯಂಸೇವಕರು ಡಾಕ್ಟರ್‌ಜಿಯವರನ್ನು ನೋಡಲು ಬರುತ್ತಿದ್ದರು. "ನಮ್ಮೂರಿಗೆ ಬನ್ನಿ, ಅಲ್ಲಿನ ವಾತಾವರಣ, ನೀರು ಚೆನ್ನಾಗಿವೆ. ಉತ್ತಮ ವೈದ್ಯರೂ ಇದ್ದಾರೆ. ಚೆನ್ನಾದ ವ್ಯವಸ್ಥೆ ಕೂಡಾ ಮಾಡುತ್ತೇವೆ. ನಿಮ್ಮ ಆರೋಗ್ಯ ನಿಶ್ಚಯವಾಗಿ ಸುಧಾರಿಸುತ್ತದೆ" ಎನ್ನುತ್ತಿದ್ದವರು ಅನೇಕ. ಆದರೆ ಡಾಕ್ಟರ್‌ಜಿ ಎಲ್ಲೂ ಹೋಗುವಂತಿರಲಿಲ್ಲ. ವಿಧಿಯ ಯೋಜನೆ ಇದ್ದುದ್ದೇ ಬೇರೆ.

    ಅವರ ಆರೋಗ್ಯ ದಿನದಿನಕ್ಕೂ ಕುಸಿಯತೊಡಗಿತು. ನಾಗಪುರದ ತಜ್ಞ ವೈದ್ಯರಿಂದ ಚಿಕಿತ್ಸೆ ಆರಂಭಗೊಂಡಿತು. ಆದರೆ ಆರೋಗ್ಯ ಒಂದಿನಿತೂ ಸುಧಾರಿಸಲಿಲ್ಲ. ೧೯೪೦ ಜೂನ್ ೧೫ ರಂದು ಅವರನ್ನು ಮೇಯೋ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಸಮಗ್ರ ತಪಾಸಣೆ ನಡೆಯಿತು. ಆದರೂ ವ್ಯಾಧಿ ಏನೆಂದು ತಿಳಿಯದು. ಬೆನ್ನು ನೋವು ಅಸಹನೀಯವಾಗಿತ್ತು, ಅವರಿಗೆ. ನಿತ್ಯ ಏರುತ್ತಿದ್ದ ಜ್ವರ, ತೀರಾ ನಿಶ್ಶಕ್ತಿ. ಮನದ ತುಂಬ ನೂರೆಂಟು ವಿಧ ಯೋಚನೆಗಳು. ಆಸ್ಪತ್ರೆಯ ವಾತಾವರಣ ಅವರಿಗೆ ಹಿತಕರ ಎನಿಸಲಿಲ್ಲ. ನಾಗಪುರ ನಗರ ಸಂಘಚಾಲಕ ಶ್ರೀ ಬಾಬಾಸಾಹೇಬ ಘಾಟಾಟೆಯವರ ಮನೆಗೆ ಅವರನ್ನು ಕರೆದೊಯ್ಯಲಾಯಿತು.

    ತಜ್ಞ ವೈದ್ಯರ ಔಷಧೋಪಚಾರ ನಡೆಯುತ್ತಿತ್ತು. ತಮ್ಮ ಸರ್ವ ಪ್ರಯತ್ನ ಸುರಿದು ಅವರು ಚಿಕಿತ್ಸೆಗೆ ತೊಡಗಿದ್ದರು. ಕಾರ್ಯಕರ್ತರೂ ತತ್ಪರತೆಯಿಂದ ಸೇವೆ ಮಾಡುತ್ತಿದ್ದರು. "ಹೇ ಭಗವಂತ, ನಮ್ಮ ಪ್ರಿಯ ನಾಯಕನನ್ನು ಬದುಕಿಸು" ಎಂದು ಅವರು ಸದಾ ಭಗವಂತನಲ್ಲಿ ಮೊರೆಯಿಡುತ್ತಿದ್ದರು. ಸಹಸ್ರಾರು ಸ್ವಯಂಸೇವಕರ ಪ್ರಾರ್ಥನೆ ಅಂತೂ ನಿತ್ಯ ನಡೆದೇ ಇತ್ತು. ಆದರೂ ಡಾಕ್ಟರ್‌ಜಿಯವರ ಆರೋಗ್ಯ ದಿನ ಕಳೆದಂತೆ ಹೆಚ್ಚೆಚ್ಚು ಆತಂಕಕಾರಿಗೊಳ್ಳುತ್ತಲೇ ಕುಸಿಯುತ್ತಿತ್ತು.

    ತಾನು ಇನ್ನು ಹೆಚ್ಚು ದಿನ ಬದುಕಲಾರೆನೆಂದು ಡಾಕ್ಟರ್‌ಜಿಯವರಿಗೂ ಅನಿಸಿತ್ತು. ಆ ದಿನಗಳಲ್ಲಿ ಸದಾ ಅವರ ಹತ್ತಿರ ಇರುತ್ತಿದ್ದವರು ಯಾದವರಾವ್ ಜೋಶಿ. ಅವರು ಭಾವನಾಶೀಲ ಯುವಕರು. ಡಾಕ್ಟರ್‌ಜಿಯವರ ಕುರಿತು ಅಪಾರ ಶ್ರದ್ಧೆ. ಒಂದು ದಿನ "ಯಾದವ, ಸಂಘದ ಹಿರಿಯ ಅಧಿಕಾರಿ ಮೃತನಾದಲ್ಲಿ ಅಂತ್ಯಯಾತ್ರೆ ಹೇಗೆ ನಡೆಸುವೆ?" ಎಂದು ಪ್ರಶ್ನಿಸಿದರು ಡಾಕ್ಟರ್‌ಜಿ.

    ಪ್ರಶ್ನೆ ಕೇಳಿ ಒಂದು ಕ್ಷಣ ತಬ್ಬಿಬ್ಬಾದರು ಯಾದವರಾವ್‍ಜಿ. ಒತ್ತಿ ಬರುತ್ತಿದ್ದ ಕಣ್ಣೀರನ್ನು ತಡೆದುಕೊಂಡು, ಆ ಪ್ರಶ್ನೆಯನ್ನೇ ಮರೆಸಲು ವಿಷಯಾಂತರ ಮಾಡುತ್ತಾ "ಈಗ ಔಷಧಿ ಕೊಡುವ ಸಮಯ ಆಗಿದೆ. ನನಗೆ ನೆನಪೇ ಇಲ್ಲ" ಎನ್ನುತ್ತಾ ಮೇಲೆದ್ದರು. ಔಷದಿ ಕುಡಿಸಿದರು. ಡಾಕ್ಟರ್‌ಜಿ ಸಹ ಮರುಮಾತಾಡದೇ ಔಷಧಿ ಕುಡಿದರು. ಡಾಕ್ಟರ್‌ಜಿ ಆ ಕಟು ವಿಷಯ ಮರೆತರೆಂದೇ ಯಾದವರಾವ್‍ಜಿ ಭಾವಿಸಿದರು.

    ಆದರೆ ಸ್ವಲ್ಪ ಸಮಯ ಮಾತ್ರ. ಪುನಃ ಡಾಕ್ಟರ್‌ಜಿ ಶಾಂತ, ಗಂಭೀರ ಸ್ವರದಲ್ಲಿ ಮಾತನಾಡತೊಡಗಿದರು. "ನಮ್ಮ ಸಂಘ ಒಂದು ಕುಟುಂಬದಂತೆ. ಇಲ್ಲಿ ಆಡಂಬರ, ಪ್ರದರ್ಶನಗಳಿಗೆ ಅವಕಾಶವಿಲ್ಲ. ಸಂಘದ ಯಾವುದೇ ಅಧಿಕಾರಿ ತೀರಿಕೊಂಡಲ್ಲಿ ಅವರ ಅಂತ್ಯಕ್ರಿಯೆ ಸರಳವಾಗಿರಬೇಕು. ಯಾವುದೇ ಆಡಂಬರವಾಗಲೀ, ಸೈನಿಕ ಪದ್ಧತಿಯಾಗಲೀ ಇರಬಾರದು."

    ಇನ್ನೊಂದು ದಿನ ಮಧ್ಯಾಹ್ನ ಯಾದವರಾವ್‍ಜಿ, ಡಾಕ್ಟರ್‌ಜಿ ಅವರಿಗಾಗಿ ಚಹ ತಂದರು. "ಎಲ್ಲರನ್ನೂ ಕರೆಯಿರಿ. ಎಲ್ಲರೊಂದಿಗೆ ನಾನು ಚಹ ಕುಡಿಯುವೆ" ಡಾಕ್ಟರ್‌ಜಿ ಎಂದರು.

    ಆದರೆ ಅನಗತ್ಯವಾಗಿ ತಡವಾಗುವುದೆಂದು ಯಾದವರಾವ್‍ಜಿ ವಿಧವಿಧವಾಗಿ ಅವರಿಗೆ ಅವಸರಪಡಿಸಿದರು. ಡಾಕ್ಟರ್‌ಜಿಯವರದು ಚಿಕ್ಕ ಮಕ್ಕಳಂತೆ ಒಂದೇ ಹಠ. ಅವರು ಚಹ ಕುಡಿಯಲು ನಿರಾಕರಿಸಿದರು. ಯಾದವರಾವ್‍ಜಿ ಏನು ಮಾಡಬೇಕೆಂಬುದೇ ತಿಳಿಯದಾಯಿತು.

    ಅದೇ ಹೊತ್ತಿಗೆ ಶ್ರೀ ಗುರೂಜಿ ಅಲ್ಲಿಗೆ ತಲುಪಿದರು. ಅವರಿಗೆ ವಿಷಯವೆಲ್ಲ ತಿಳಿಯಿತು. ಅವರು ಸ್ವಯಂಸೇವಕರನ್ನು ಕಳಿಸಿ ಪ್ರಮುಖ ಕಾರ್ಯಕರ್ತರನ್ನೆಲ್ಲ ಸೇರಿಸಿದರು. ಇನ್ನು ಹದಿನೈದಿಪ್ಪತ್ತು ಲೋಟ ಚಹವೂ ಬಂತು. ಡಾಕ್ಟರ್‌ಜಿಯವರನ್ನು ಗಾದಿಗೆ ಒರಗಿಸಿ ಕುಳ್ಳಿರಿಸಿದರು. ತುಂಬ ಪ್ರೀತಿಯಿಂದ ಡಾಕ್ಟರ್‌ಜಿ ಎಲ್ಲರೊಡನೆ ಚಹ ಕುಡಿದರು.

    ಯೇಸುಕ್ರಿಸ್ತ ತನ್ನ ಮಹಾಪ್ರಸ್ಥಾನಕ್ಕೆ ಮೊದಲು ತನ್ನೆಲ್ಲ ಶಿಷ್ಯರಿಗೆ ಪ್ರೀತಿಯಿಂದ ಊಟ ಮಾಡಿಸಿದ್ದ. ಸ್ವಾಮಿ ವಿವೇಕಾನಂದರು ಸಹ ತಮ್ಮ ಗುರು ಬಂಧುಗಳು ಹಾಗೂ ಶಿಷ್ಯರೊಡನೆ ಕೂಡಿ ಇದೇರೀತಿ ಊಟ ಮಾಡಿದ್ದರು.

ಕುಶಪಥಕ



    ಮೊದ ಮೊದಲು ಸಂಘ ಶಾಖೆಗೆ ಬರುತ್ತಿದ್ದವರು ಕೇವಲ ತರುಣರು ಮಾತ್ರ. ಕ್ರಮೇಣ ಅವರ ತಮ್ಮಂದಿರೂ ಬರತೊಡಗಿದರು. ಕಿಶೋರ ಸ್ವಯಂಸೇವಕರ ಒಂದು ಗಣವೇ ತಯಾರಾಯಿತು. ಡಾಕ್ಟರ್‌ಜಿ ಅದಕ್ಕೆ ’ಕುಶಪಥಕ’ ಎಂದು ಹೆಸರಿಟ್ಟರು.

    ಲವ, ಕುಶರು ಶ್ರೀರಾಮನ ಮಕ್ಕಳು. ತಮ್ಮ ತಾಯಿ ಸೀತೆಯೊಂದಿಗೆ ಅವರಿಬ್ಬರೂ ದಟ್ಟ ಕಾಡಿನಲ್ಲಿದ್ದರು. ರಾಜನ ಮಕ್ಕಳಾದರೂ ಪರ್ಣಕುಟೀರದಲ್ಲಿ ವಾಸ, ಒಣ ರೊಟ್ಟಿ ಆಹಾರ. ತುಂಬ ಶ್ರದ್ಧೆಯಿಂದ ವಾಲ್ಮೀಕಿ ಮುನಿಗಳ ಬಳಿ ವಿವಿಧ ವಿದ್ಯೆಗಳನ್ನು ಕಲಿತರು. ಚಕ್ರವರ್ತಿ ಶ್ರೀರಾಮಚಂದ್ರನ ಪತ್ನಿಯಾದರೂ ವನದಲ್ಲಿ ವಾಸ ಮಾಡುತ್ತಾ ಅನೇಕ ವಿಧ ಕಷ್ಟ ಸಹಿಸುತ್ತಿದ್ದವಳು ಸೀತೆ. ಶಾಖೆಗೆ ಬರುತ್ತಿದ್ದ ಆ ಕಿಶೋರರ ಮನದಲ್ಲೂ ಇದೇ ಭಾವನೆಯನ್ನು ಪ್ರತಿಬಿಂಬಿಸುವ ಸಲುವಾಗಿ ಡಾಕ್ಟರ್‌ಜಿ ಅವರ ಗುಂಪಿಗೆ ’ಕುಶಪಥಕ’ ಎಂದು ಹೆಸರಿಟ್ಟರು. ನಮ್ಮ ಗತ ಇತಿಹಾಸ ವೈಭವಪೂರ್ಣವಾದುದು. ಆದರೆ ಭಾರತಮಾತೆ ಮಾತ್ರ ಪರತಂತ್ರಳು. ಆಕೆ ದುಃಖಿನಿ. ನಾವು ಆಕೆಯ ಮಕ್ಕಳು. ಸರ್ವಸ್ವವನ್ನೂ ಪಣಕ್ಕಿಟ್ಟು ಆಕೆಯ ದುಃಖವನ್ನು ದೂರಗೊಳಿಸುವುದು ನಮ್ಮ ಪರಮ ಕರ್ತವ್ಯ. ಈ ನಿಲುವು ಕುಶಪಥಕದ ಎಲ್ಲ ಸ್ವಯಂಸೇವಕರದಾಯಿತು.

    ಅದೇ ಕಿಶೋರರು ಬೆಳೆದು ದೊಡ್ಡವರಾದರು. ಶಾಲೆ ಕಾಲೇಜುಗಳಲ್ಲಿ ನಿರ್ಭೀತರಾಗಿ ಆತ್ಮವಿಶ್ವಾಸದಿಂದ ಕಾರ್ಯ ಮಾಡತೊಡಗಿದರು. ಅವರಲ್ಲಿ ಅನೇಕರು ಬೇರೆ ಪ್ರಾಂತಗಳಿಗೆ ಪ್ರಚಾರಕರಾಗಿ ಸಹ ಹೊರಟರು. ಇವರನ್ನು ಕಂಡು ಉನ್ನತ ಶಿಕ್ಷಣ ಪಡೆದ ಇತರ ತರುಣರೂ ತಮ್ಮ ಮನೆ ಮಠಗಳನ್ನು ತೊರೆದು ಸಂಘ ಕಾರ್ಯದ ವಿಸ್ತಾರಕ್ಕಾಗಿ ಹೊರಟರು. ತಾವು ತಲುಪಿದಲ್ಲೆಲ್ಲ ಉತ್ತಮ ಶಾಖೆಗಳನ್ನು ಆರಂಭಿಸಿ ಕ್ರಮೇಣ ಅಲ್ಲಿನವರೇ ಆದರು. ಅಲ್ಲಿನ ಭಾಷೆ, ಅಲ್ಲಿನ ವ್ಯವಹಾರದ ರೀತಿ ನೀತಿ ಇತ್ಯಾದಿ ತಮ್ಮದಾಗಿಸಿಕೊಂಡು ಅಲ್ಲಿನ ಜನರ ವಿಶ್ವಾಸ ಗಳಿಸಿದರು. ಈ ದೇಶವೇ ನನ್ನದು, ಇಲ್ಲಿನ ಜನ, ಭಾಷೆಗಳು, ಹಳ್ಳಿಗಳು ಎಲ್ಲವೂ ನನ್ನವೇ ಎಂಬ ಭಾವನೆ ಅವರಲ್ಲಿ ದೃಢಗೊಂಡಿತು.

    ಬ್ರಾಹ್ಮಣ-ಅಬ್ರಾಹ್ಮಣ, ಬಡವ-ಬಲ್ಲಿದ, ಓದಿದ-ಓದದ ಯಾರೇ ಆಗಲಿ, ಯಾವುದೇ ಪಂಥ, ಸಂಪ್ರದಾಯ ಆಗಿರಲಿ, ನಾವೆಲ್ಲರೂ ಒಂದೇ. ಒಬ್ಬಳೇ ತಾಯಿಯ ಮಕ್ಕಳ ನಾವು ಎಂಬ ಸಂಘದ ವಿಚಾರ ಎಲ್ಲೆಡೆ ಬೇರೂರತೊಡಗಿತು. ಪ್ರತ್ಯಕ್ಷ ಆಚರಣೆಯಲ್ಲಿಯೂ ಅದು ಕಾಣಲಾರಂಭಿಸಿತು.

    ಹಿಂದೊಮ್ಮೆ ಭಗೀರಥ ಪಾಪನಾಶಿನಿ ಗಂಗೆಯನ್ನು ಭೂಮಿಗೆ ಕರೆತಂದಿದ್ದು. ಅಂತೆಯೇ ಹೀನ ಭಾವನೆಯನ್ನು ನಾಶಗೊಳಿಸುವ ಸಂಘ ಗಂಗೆಯನ್ನು ಡಾಕ್ಟರ್‌ಜಿ ದೇಶದ ತುಂಬಾ ಹರಿಸಿ ಆಧುನಿಕ ಕಾಲದ ಭಗೀರಥರಾದರು.

    ಮುಂದೆ ಸರಸಂಘಚಾಲಕರಾದ ಬಾಳಾಸಾಹೇಬ ದೇವರಸರು ಸಹ ಇದೇ ಕುಶಪಥಕದ ಸ್ವಯಂಸೇವಕರು. ಶಿಕ್ಷಕರೂ ಆಗಿದ್ದವರು. ಈ ಪಥಕ ಅನೇಕ ಹಿರಿಯ ಕಾರ್ಯಕರ್ತರನ್ನು ಸಂಘಕ್ಕೆ ನೀಡಿದೆ.

ಅವಿರತ ಪರಿಶ್ರಮ



    ಸಂಘ ಕಾರ್ಯದಲ್ಲಿ ಹಲವಾರು ವರ್ಷಗಳಿಂದ ಕಠಿಣ ಪರಿಶ್ರಮ ನಿರ್ವಹಿಸುತ್ತಿದ್ದ ಡಾಕ್ಟರ್‌ಜಿಯವರಲ್ಲಿ ಕಾಲಕ್ರಮೇಣ ಅನಾರೋಗ್ಯ ಕಾಣತೊಡಗಿತು. ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಅವರನ್ನು ನಾಸಿಕ್‍ಗೆ ಕರೆದೊಯ್ಯಲಾಯಿತು.

    ಅವರು ನಾಸಿಕಕ್ಕೆ ಹೋದುದು ವಿಶ್ರಾಂತಿಗಾಗಿ. ಆದರೆ ಅಲ್ಲಿ ಅವರು ಪ್ರತ್ಯಕ್ಷ ನಡೆಸಿದುದು ಹೊಸ ಶಾಖೆ ಆರಂಭಿಸುವ ಯತ್ನವೇ. ಸ್ವಯಂಸೇವಕರು ಅವರನ್ನು ನೋಡಲು ಬರುತ್ತಿದ್ದರು. ಅವರೊಂದಿಗೆ ಗಂಟೆಗಳವರೆಗೆ ಮಾತುಕತೆ ನಡೆಯುತ್ತಿತ್ತು. ವೈದ್ಯರು ’ಅವರಿಗೆ ಕಡ್ಡಾಯವಾಗಿ ವಿಶ್ರಾಂತಿ ಬೇಕಾಗಿದೆ, ರಾತ್ರಿ ೧೦ ಗಂಟೆಗೆ ಅವರು ಮಲಗಲೇಬೇಕು’ ಎನ್ನುತ್ತಿದ್ದರು. ಆದರೆ ಡಾಕ್ಟರ್‌ಜಿಯವರ ಬೈಠಕ್ ರಾತ್ರಿ ೨-೩ ಗಂಟೆಯವರೆಗೂ ಮುಗಿಯುತ್ತಿರಲಿಲ್ಲ. ಎಲ್ಲ ಸ್ವಯಂಸೇವಕರೂ ಮಂತ್ರಮುಗ್ಧರಾಗಿ ಕೇಳುತ್ತಾ ಇರುವಷ್ಟು ಮೋಡಿ ಆ ಮಾತುಕತೆಗಳಲ್ಲಿ. ಎಲ್ಲರಿಗೂ ಈ ಪ್ರಪಂಚವೇ ಮರೆಯುತ್ತಿತ್ತು. ಅವರನ್ನು ಮಲಗಿಸುವುದು ಎಷ್ಟು ಕಷ್ಟ ಎಂದು ವೈದ್ಯರಿಗೆ ಕಾರ್ಯಕರ್ತರು ಹೇಳಿದರು. ವೈದ್ಯರು "ನಾನೇ ಸ್ವತಃ ಇದ್ದು ೯.೪೫ಕ್ಕೇ ನೆನಪಿಸುವೆ. ೧೦ ಘಂಟೆಗೆ ಸರಿಯಾಗಿ ಅವರನ್ನು ಮಲಗಿಸುವೆ" ಎಂದರು.

    ರಾತ್ರಿ ೯ ಘಂಟೆಗೇ ಆ ವೈದ್ಯರು ಡಾಕ್ಟರ್‌ಜಿ ಇದ್ದಲ್ಲಿಗೆ ಬಂದರು. ಅವರಿಗೂ ಕ್ರಮೇಣ ಡಾಕ್ಟರ್‌ಜಿ ಅವರ ಮಾತಿನ ರುಚಿ ಹತ್ತತೊಡಗಿತು. ಒಂದಾದ ಮೇಲೊಂದು ವಿಷಯ ಹರಿದುಬರುತ್ತಿತ್ತು. ಡಾಕ್ಟರ್‌ಜಿ ತಮ್ಮದೇ ಆಕರ್ಷಕ ಶೈಲಿಯಲ್ಲಿ ನಾನಾ ವಿಷಯಗಳ ಮೇಲೆ ರಸವತ್ತಾಗಿ ಮಾತನಾಡುತ್ತಿದ್ದರು. ಈ ವೈದ್ಯರೂ ಮಾತುಕತೆಗಳಲ್ಲಿ ತಲ್ಲೀನರಾಗಿದ್ದರು. ಅವರಿಗೂ ತಾವೂ ಬಂದ ಉದ್ದೇಶವೇ ಮರೆತುಹೋಯಿತು. ತುಂಬ ತಡವಾಗಿ ತಮ್ಮ ಗಡಿಯಾರ ನೋಡಿದಾಗ ಅದು ಗಂಟೆ ೧.೩೦ ತೋರಿಸುತ್ತಿತ್ತು. "ಛೇ, ಛೇ ಅವರನ್ನು ಮಲಗಿಸಲು ಬಂದ ನಾನೇ ಹೀಗಾದೆನಲ್ಲಾ" ಎಂದು ಅವರೂ ತಮ್ಮ ಸೋಲು ಒಪ್ಪಿಕೊಂಡರು.

    ಡಾಕ್ಟರ್‌ಜಿಯವರ ಮಾತು ಎಷ್ಟು ಆಕರ್ಷಕ; ಅದಕ್ಕೆ ಕಾರಣವೂ ಇದೆ. ಅದರಲ್ಲಿ ಕೃತ್ರಿಮತೆ ಲವಲೇಶವೂ ಇರುತ್ತಿರಲಿಲ್ಲ. ಮಾತ್ರವಲ್ಲ ಅವರ ಒಂದೊಂದು ಶಬ್ದದಲ್ಲಿಯೂ ಅವರ ತಪಶ್ಚರ್ಯೆ ಹೊಮ್ಮಿ ಹರಿಯುತ್ತಿತ್ತು.

ಬಂಧುತ್ವದ ಬೆಸುಗೆ



    ಸಂಘ ಶಾಖೆಗೆ ಬರುವಂತಹವರು ತಮ್ಮೊಳಗಿನ ಭೇದಗಳನ್ನು ಮರೆಯುತ್ತಾರೆ. ಅವರಲ್ಲಿ ಬಂಧುಭಾವನೆ ತಾನಾಗಿ ಬೆಳೆಯುತ್ತದೆ. ಅನೇಕರಿಗೆ ಇದು ಆಶ್ಚರ್ಯಕರ ಎನಿಸುವಂತಹುದು. ಡಾಕ್ಟರ್‌ಜಿಯವರ ಬಳಿ ಕೆಲವರು ಪ್ರಶ್ನೆ ಸಹ ಮಾಡುತ್ತಿದ್ದರು. "ಇದರಲ್ಲೇನೂ ಜಾದೂ ಇಲ್ಲ. ಅದೊಂದು ದೊಡ್ಡ ರಹಸ್ಯವೂ ಇಲ್ಲ. ಅತ್ಯಂತ ನೇರ ಸರಳ ಸಂಗತಿ ಇದು. ಸಾಧಿಸಬೇಕಾದ ಧ್ಯೇಯದ ಮೇಲೆ ಗಮನ ಕೇಂದ್ರೀಕರಿಸಿ. ಕೆಟ್ಟದಾಗಿರುವುದನ್ನು ನೆನಪಿಸಲೂ ಸಹ ಬೇಡಿ. ಆಗ ಮನಸ್ಸುಗಳು ತಾವಾಗಿ ಒಂದುಗೂಡುತ್ತವೆ. ಜನರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಾಗ ಅವರ ಧ್ಯೇಯ ಕೇವಲ ಪುಸ್ತಕ ಅಥವಾ ಭಾಷಣಗಳಲ್ಲಿ ಮಾತ್ರ ಉಳಿಯುತ್ತದೆ" ಡಾಕ್ಟರ್‌ಜಿಯವರು ತಿಳಿಯಾಗಿ ವಿವರಿಸುತ್ತಿದ್ದ ರೀತಿ ಇದು.

    ೧೯೩೪ರ ಡಿಸೆಂಬರ್. ವರ್ಧಾದಲ್ಲಿ ಜಮುನಾಲಾಲಜಿ ಬಜಾಜರ ತೋಟದ ಸಮೀಪದಲ್ಲಿ ಸಂಘದ ಶಿಬಿರ. ಆ ದಿನಗಳಲ್ಲಿ ಮಹಾತ್ಮಾ ಗಾಂಧಿಯವರು ಅಲ್ಲೇ ವಾಸವಿರುತ್ತಿದ್ದರು. ಶಿಬಿರದ ವ್ಯವಸ್ಥೆ, ಅನುಶಾಸನ, ಸ್ವಯಂಸೇವಕರ ಪರಿಶ್ರಮಶೀಲತೆ, ಸ್ವಂತ ಖರ್ಚಿನಲ್ಲಿ ಗಣವೇಶ ಸಹಿತ ಶಿಬಿರಕ್ಕೆ ಬಂದಿರುವುದು ಇತ್ಯಾದಿ ಸುದ್ದಿ ಅವರಿಗೆ ತಿಳಿಯಿತು. ಅವರೂ ತುಂಬ ಉತ್ಸುಕತೆಯಿಂದ ಬೆಳಿಗ್ಗೆ ೬ ಘಂಟೆಗೆ ಶಿಬಿರದ ಸಂದರ್ಶನಕ್ಕೆ ಬಂದರು. ಎಲ್ಲೆಡೆ ಸ್ವತಃ ಓಡಾಡಿ ಶಿಬಿರದ ವ್ಯವಸ್ಥೆಗಳನ್ನು ನೋಡಿದರು.

    ಸ್ವಯಂಸೇವಕರ ವ್ಯಾಯಾಮ ಯೋಗ ಕಾರ್ಯಕ್ರಮವನ್ನು ಅವರು ಕಂಡರು. ನೂರಾರು ಸ್ವಯಂಸೇವಕರು ಒಟ್ಟಿಗೆ, ಉತ್ಸಾಹ ಹಾಗೂ ಅನುಶಾಸನದಿಂದ ಕೂಡಿ ಮಾಡಿದ ವ್ಯಾಯಾಮ ಕಂಡು ಅವರು ತುಂಬ ಪ್ರಭಾವಿತರಾದರು. ಸ್ವಯಂಸೇವರೊಡನೆ ಅವರ ಪ್ರಶ್ನೋತ್ತರ ಸಹ ನಡೆಯಿತು.

    "ಈ ಗಣವೇಶವನ್ನು ನಿನಗ್ಯಾರು ಕೊಟ್ಟರು?" ಮಹಾತ್ಮಾಜಿ ಸ್ವಯಂಸೇವಕನೊಬ್ಬನನ್ನು ಪ್ರಶ್ನಿಸಿದರು.

    "ಇದು ನನ್ನದೇ. ನಾನೇ ನನಗಾಗಿ ಹೊಲಿಸಿಕೊಂಡೆ" ಆತ ಉತ್ತರಿಸಿದ.

    "ಅದನ್ನು ಹೊಲಿಸಲು ಹಣ ಕೊಟ್ಟವರು ಯಾರು?" ಮತ್ತೆ ಬಂದಿತು ಪ್ರಶ್ನೆ.

    "ನಮ್ಮ ತಂದೆ-ತಾಯಿಗಳು. ಬರೀ ಗಣವೇಶದ್ದೇನು? ಇಲ್ಲಿ ಊಟ ವಸತಿಯ ಸಲುವಾಗಿ ತಗಲುವ ಖರ್ಚನ್ನೂ ಪ್ರತಿ ಸ್ವಯಂಸೇವಕ ತಾನೇ ಕೊಡುವನು. ದೂರ ದೂರದ ಹಳ್ಳಿಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿಯೇ ಅವರು ಇಲ್ಲಿಗೆ ಬಂದಿದ್ದಾರೆ. ಸಂಘದ ನಿಯಮವೇ ಹಾಗೆ" ನೇರವಾಗಿ ಉತ್ತರ ಬಂತು.

    "ಪ್ರಯಾಣ, ಗಣವೇಶ, ಊಟ ಇದಕ್ಕೆಲ್ಲ ಸಂತ ಹಣ ಖರ್ಚು ಮಾಡಿ ಬಂದು ಇಲ್ಲಿ ಸೇರುವುದರಿಂದ ನಿಮಗಾಗುವ ಲಾಭವೇನು? ಅಂತಹ ಯಾವ ಆಕರ್ಷಣೆ ಇಲ್ಲಿದೆ?" ಮಾಹಾತ್ಮಾಜಿ ಪುನಃ ಪ್ರಶ್ನೆ ಮುಂದುವರಿಸಿದರು.

    "ಇದಕ್ಕಾಗಿ ನಿಶ್ಚಿತವಾಗಿ ಉತ್ತರ ಹೇಳಲು ನಾವು ಅಸಮರ್ಥರು. ಆದರೂ ದಿನನಿತ್ಯ ಒಟ್ಟಿಗೆ ಏಳುವುದು, ಕುಳಿತುಕೊಳ್ಳುವುದು, ಆಟ, ಊಟ, ನಿದ್ದೆ ಇತ್ಯಾದಿ ಎಲ್ಲದರಲ್ಲೂ ನಾವು ಒಂದು. ಮಾತ್ರವಲ್ಲ ಇವೆಲ್ಲವೂ ನಮ್ಮ ದೇಶಕ್ಕಾಗಿ ನಾವು ಮಾಡುತ್ತಿದ್ದೇವೆ ಎಂಬ ಭಾವನೆ ನಮ್ಮಲ್ಲಿದೆ. ಇದೇ ನಮಗೆ ಬಹಳ ಸಂತೋಷ ಕೊಡುತ್ತದೆ" - ಸ್ವಯಂಸೇವಕನೊಬ್ಬ ಉತ್ತರಿಸಿದ.

    ಮತ್ತ ಪ್ರಶ್ನೆ ’ನೀನು ಯಾರು? ಯಾವ ಜಾತಿ?’

    ’ನಾನು ಒಬ್ಬ ವಿದ್ಯಾರ್ಥಿ. ಹಿಂದು’ ಆತ ಉತ್ತರಿಸಿದ.

    ’ನೀನು ಯಾರು?’ ಮತ್ತೊಬ್ಬನಿಗೆ ಪ್ರಶ್ನೆ.

    ’ನಾನು ಒಬ್ಬ ವ್ಯಾಪಾರಿ. ಹಿಂದು’.

    ’ನೀನು’ ಮಗದೊಬ್ಬನಿಗೆ ಪ್ರಶ್ನೆ.

    ’ನಾನು ಹೊಲದಲ್ಲಿ ಕೂಲಿ ಮಾಡುವವನು. ಹಿಂದು’ ಆತ ಉತ್ತರಿಸಿದ. ಗಾಂಧೀಜಿ ಎಲ್ಲರನ್ನೂ ಕೇಳುತ್ತಾ ಹೊರಟರು. ಚಮ್ಮಾರ, ಕಮ್ಮಾರ, ಕ್ಷತ್ರಿಯ, ಸೊನೆಗಾರ ಹೀಗೆ ಹತ್ತು ಹಲವು ಕಸುಬು, ಜಾತಿಯವರು ಅಲ್ಲಿದ್ದರು. ಮಹಾತ್ಮಾಜಿ ಪ್ರಶ್ನಿಸಿದರು. "ನೀವು ಅಸ್ಪೃಶ್ಯರೊಡನೆ ಇರುವುದಲ್ಲದೇ ಊಟ ಸಹ ಮಾಡುವಿರಾ?"

    ಸಂಘದಲ್ಲಿ ಆ ಭೇದಭಾವವೇ ಇಲ್ಲ. ನಮಗೆ ಇನ್ನೊಬ್ಬನ ಜಾತಿ ಸಹ ಗೊತ್ತಿರುವುದಿಲ್ಲ. ನಮಗದು ಬೇಕಾಗಿಯೂ ಇಲ್ಲ. ನಾವೆಲ್ಲ ಹಿಂದುಗಳು. ಭಾರತ ಮಾತೆಯ ಮಕ್ಕಳು. ನಾವು ಪರಸ್ಪರ ಸಹೋದರರು. ಸಂಘ ನಮಗೆ ಈ ಶಿಕ್ಷಣ ಕೊಟ್ಟಿದೆ. ಆದ್ದರಿಂದ ಮೇಲು ಕೀಳು ಎಂಬ ಭೇದ ನಮ್ಮ ಮನದಲ್ಲಿ ಎಂದೂ ಏಳದು" ಸ್ವಯಂಸೇವಕರ ಬಿಚ್ಚುನುಡಿ ಸ್ಪಷ್ಟವಾಗಿತ್ತು.

    ಉತ್ತರ ಕೇಳಿ ಮಹಾತ್ಮಾಜಿ ತುಂಬ ಸಂತಸಗೊಂಡರು. ಈ ಶಿಬಿರ ನೋಡಿ ಡಾಕ್ಟರ್‌ಜಿ ಅವರನ್ನು ಭೇಟಿ ಮಾಡಿ ಅವರು ಪ್ರಸನ್ನರಾದುದಷ್ಟೇ ಅಲ್ಲ. ಪ್ರಭಾವಿತರೂ ಆದರು.

    ಈ ರೀತಿ ಎಲ್ಲೆಡೆ ತನ್ನ ಕಾರ್ಯಕ್ರಮಗಳಿಂದ ಸಂಘ ಎಲ್ಲರಿಗೂ ಪ್ರಿಯವಾಗತೊಡಗಿತು. ಹಿಂದು ಸಮಾಜದಲ್ಲಿ ಬಂಧುಭಾವನೆ ಬೇರೂರಲಾರಂಭಿಸಿತು.

ನಮ್ಮ ಡಾಕ್ಟರ್‌ಜಿ



    ಡಾಕ್ಟರ್‌ಜಿಯವರದು ಸಂಘಕಾರ್ಯಕ್ಕಾಗಿ ನಿತ್ಯ ಪ್ರವಾಸ. ಕಾಲ್ನಡಿಗೆ, ಸೈಕಲ್, ಬಸ್ಸು, ರೈಲು ಹೀಗೆ ಹಲವು ವಿಧದಲ್ಲಿ ಸಾವಿರಾರು ಮೈಲುಗಳ ನಿರಂತರ ಪ್ರವಾಸ. ಹೊಸ ಹೊಸ ಗ್ರಾಮಗಳಿಗೆ ಹೋಗುವರು. ಯುವಕರನ್ನೆಲ್ಲ ಒಂದು ಕಡೆ ಸೇರಿಸುವರು. ಸಂಘದ ವಿಚಾರ ತಿಳಿಸಿ, ಪ್ರತಿಜ್ಞೆ ಕೊಟ್ಟು ಸ್ವಯಂಸೇವಕರನ್ನಾಗಿಸುವರು. ಪ್ರತ್ಯಕ್ಷ ಶಾಖೆಯ ಕೆಲಸದಲ್ಲಿ ಅವರನ್ನು ತೊಡಗಿಸುವರು. ಈ ರೀತಿ ಕಾರ್ಯಚಕ್ರ ಹಗಲೂರಾತ್ರಿ ಉರುಳುತ್ತಿತ್ತು.

    ಪಂಜಾಬಿಗೆ ಹೋದಾಗ ಅವರಿಗೆ ಅಲ್ಲಿ ಅದ್ದೂರಿಯ ಸ್ವಾಗತ. ’ಇಂದು ನಮ್ಮ ಶಾಖೆಗೆ ಡಾಕ್ಟರ್‌ಜಿ ಬಂದಿದ್ದಾರೆ. ನೀವೂ ಖಂಡಿತ ಶಾಖೆಗೆ ಬನ್ನಿ’ ಎಂದು ಒಬ್ಬರನ್ನೊಬ್ಬರು ಕರೆಯುತ್ತಿರುವುದು ಕಾಣುತ್ತಿತ್ತು. ಲಾಹೋರ್, ಅಮೃತಸರ, ಲೂಧಿಯಾನಗಳಲ್ಲಿ ಡಾಕ್ಟರ್‌ಜಿಯವರನ್ನು ನೋಡಲು ನೂರಾರು ಸ್ವಯಂಸೇವಕರು ಬಂದರು. ಡಾಕ್ಟರ್‌ಜಿ ಅವರೊಂದಿಗೆ ಮಾತನಾಡುತ್ತಾ, "ನೂರಾರು ಮೈಲು ದೂರದಿಂದ ನಿಮ್ಮನ್ನು ನೋಡಲು ಬಂದಿರುವೆ. ನೀವೂ ಸಹ ನನ್ನನ್ನು ನೋಡಲು ಉತ್ಸುಕತೆಯಿಂದಲೇ ಬಂದಿದ್ದೀರಿ. ಕಾರಣ ನಾವೆಲ್ಲ ದೂರ ದೂರ ಇದ್ದರೂ ಪ್ರತ್ಯಕ್ಷದಲ್ಲಿ ಸೋದರರೇ ಆಗಿದ್ದೇವೆ. ನಮ್ಮ ಮನಸ್ಸುಗಳು ಹತ್ತಿರವಿದೆ. ನಾವು ಒಂದೇ ತಾಯಿಯ ಮಕ್ಕಳು. ಇದನ್ನು ನೆನಪು ಮಾಡುವ ಕೆಲಸವನ್ನೇ ಸಂಘ ಮಾಡುತ್ತಿದೆ. ಇಡೀ ಸಮಾಜದಲ್ಲಿ ಸೋದರ ಭಾವವನ್ನು ರೂಪಿಸಲು ಸಂಘವು ಪ್ರಯತ್ನಿಸುತ್ತಿದೆ. ಸಂಘ ಕಾರ್ಯವೇನೋ ಸರಳವೇ. ಆದರೆ ಅದು ಪ್ರತ್ಯಕ್ಷ ವ್ಯವಹಾರದಲ್ಲಿ ಕಾಣುವುದು ಅಗತ್ಯವಿದೆ. ಈ ಮಹತ್ವಪೂರ್ಣ ಕಾರ್ಯವನ್ನು ಪೂರ್ತಿ ಗಮನವಹಿಸಿ ನಾವು ಮಾಡಬೇಕು" ಎಂದರು. ಆವರೆಗೆ ಪಂಜಾಬಿನ ಸ್ವಯಂಸೇವಕರು ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯುವ ಭಾರೀ ಗರ್ಜಿಸುವ ತುಂಬ ರೋಷದಿಂದ ಎಗರಾಡುವ ಅನೇಕ ಮಂದಿಯನ್ನು ನೋಡಿದ್ದರು. ಆದರೆ ಶಾಂತ ರೀತಿಯಿಂದ ಕೆಲವೇ ತೂಕದ ಸರಳ ನೇರ ಶಬ್ದಗಳಲ್ಲಿ ಮಾತನಾಡುವ, ಕೇಳುಗರ ಹೃದಯಗಳಲ್ಲಿ ಅಚ್ಚಳಿಯದ ಪರಿಣಾಮ ಬೀರುವ ಭಾಷಣಕಾರರನ್ನು ಅವರು ನೋಡಿರುವುದು ಇದೇ ಮೊದಲ ಬಾರಿ. ಆ ಮಾತುಗಳು ಕೇವಲ ಶಬ್ದಗಳಷೇ ಆಗಿರಲಿಲ್ಲ. ಅವುಗಳಲ್ಲಿ ಡಾಕ್ಟರ್‌ಜಿಯವರ ನಡವಳಿಕೆಯ ಮೆರಗು ಸಹ ಇತ್ತು. ಇದರಿಂದಾಗಿ ಪಂಜಾಬದಲ್ಲಿ ಸಂಘ ಕಾರ್ಯ ಚೆನ್ನಾಗಿಯೇ ಬೆಳೆಯಿತು.

    ಡಾಕ್ಟರ್‌ಜಿ ಬಂಗಾಲ ತಲಪಿದರು. ಅಲ್ಲಿ ಸಂಘಕಾರ್ಯ ಇನ್ನೂ ಹೊಸದು. ಆದರೆ ಅಲ್ಲಿಯೂ ಅದೇ ಆತ್ಮೀಯತೆ. ಡಾಕ್ಟರ್‌ಜಿ ಅಲ್ಲಿಯವರೊಡನೆ ಬಂಗಾಲಿಯಲ್ಲೇ ಮಾತನಾಡತೊಡಗಿದಾಗ ಅವರೆಲ್ಲರಿಗೂ ಆಶ್ಚರ್ಯ. ಕಲ್ಕತ್ತೆಯ ಅನೇಕ ಗಣ್ಯರನ್ನು ಡಾಕ್ಟರ್‌ಜಿ ಭೇಟಿ ಮಾಡಿದರು. ಸಂಘದ ನೇರ ಹಾಗೂ ಸರಳ ಕಾರ್ಯವಿಧಾನ ನೋಡಿದ ಅವರಲ್ಲನೇಕರು "ಇದೆಂಥಾ ದೇಶ ಕಾರ್ಯ? ಬಾಂಬು ಮಾಡುವುದಿಲ್ಲ. ಪಿಸ್ತೂಲು ಉಪಯೋಗಿಸುವುದಿಲ್ಲ. ಭಾಷಣ ಇಲ್ಲ. ಪತ್ರಿಕೆ ಇಲ್ಲ. ಆಂಗ್ಲರನ್ನು ಬೈಯ್ಯುವುದೂ ಇಲ್ಲ. ಇದೆಂತಹ ದೇಶಭಕ್ತಿಯ ಕಾರ್ಯ?" ಎಂದು ಕೇಳಿದರು.

    ಡಾಕ್ಟರ್‌ಜಿ ಅವರಿಗೆ ಸಂಘದ ವಿಶೇಷತೆಯನ್ನು ವಿವರಿಸಿದರು. "ಬಂಧುಗಳೇ, ಸ್ವರಾಜ್ಯ ಪಡೆಯುವುದೇನೋ ಸುಲಭ. ಆದರೆ ಅದನ್ನು ಉಳಿಸಿಕೊಂಡು ಸ್ವರಾಜ್ಯವನ್ನು ರೂಪಿಸುವುದು ಹೆಚ್ಚಿನ ಮಹತ್ವವುಳ್ಳದ್ದು. ಈ ಪ್ರಪಂಚದಲ್ಲಿ ಯೋಗ್ಯತೆ ಗಳಿಸಿದಲ್ಲಿ ಉನ್ನತ ಸ್ಥಾನ ತನ್ನಿಂತನೇ ಬರುತ್ತದೆ. ನಿಸರ್ಗದ ನಿಯಮ ಅದು. ನಮ್ಮಲ್ಲಿ ದುರ್ಗುಣಗಳು ನುಸುಳಿ ನಾವು ಅಯೋಗ್ಯರಾದೆವು. ಅದಕ್ಕಾಗಿ ಬೇರೆಯವರ ದಾಸರಾದೆವು. ನಮ್ಮ ದುರ್ಗುಣಗಳನ್ನೆಲ್ಲ ಬಿಟ್ಟು ನಾವು ಸದ್ಗುಣಿಗಳಾದರೆ ನಮ್ಮೆಲ್ಲ ಸಮಸ್ಯೆಗಳೂ ಕೊನೆಗೊಳ್ಳುವುವು. ಸ್ವರಾಜ್ಯ ಸಹ ಸಿಕ್ಕುವುದು, ನಮ್ಮ ಗತವೈಭವವು ತಾನಾಗಿ ಮರಳುವುದು. ನಾವು ಎಲ್ಲಾ ದೃಷ್ಟಿಯಿಂದಲೂ ಯೋಗ್ಯರಾಗಬೇಕೆಂದು ಸಂಘವು ಶಿಕ್ಷಣ ನೀಡುತ್ತಿದೆ. ಇದಕ್ಕಾಗಿಯೇ ಸಂಘದ ಶಾಖೆಗಳು. ಇಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಘದ ಧ್ಯೇಯವೇ ಇದು. ಆದ್ದರಿಂದ ಬೇರೆ ಎಲ್ಲ ಕೆಲಸಗಳನ್ನು ಗೌಣವೆಂದು ಭಾವಿಸಿ ಸಂಘ ಕಾರ್ಯಕ್ಕೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡಬೇಕಾಗಿದೆ".

    ಡಾಕ್ಟರ್‌ಜಿ ಒಮ್ಮೆ ಪೂನಾಕ್ಕೆ ಹೋಗಿದ್ದರು. ಅಲ್ಲಿ ಸಂಘಚಾಲಕರೊಡನೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಅವರ ಮುಂದೆ ಇಬ್ಬರು ಬಾಲಕರು ಬರುತ್ತಿದ್ದರು. ಡಾಕ್ಟರ್‌ಜಿಯವರನ್ನು ನೋಡಿ ಆ ಹುಡುಗರು ಮುಗುಳ್ನಕ್ಕರು. ಡಾಕ್ಟರ್‌ಜಿ ಸಹ ಮುಗುಳ್ನಕ್ಕರು. ಆಗ ಸಂಘಚಾಲಕರು ’ಇವರ್ಯಾರು? ನಿಮಗೆ ಇವರು ಹೇಗೆ ಗುರುತು?’ ಎಂದು ಕೇಳಿದರು. "ಇವರು ನಮ್ಮ ಸ್ವಯಂಸೇವಕರು" ಡಾಕ್ಟರ್‌ಜಿ ಉತ್ತರಿಸಿದರು.

    ಸಂಘಚಾಲಕರು ಪುನಃ ಕೇಳಿದರು - "ಇವರೇನೂ ಗಣವೇಶ ಹಾಕಿಲ್ಲ. ಬೇರಾವುದೇ ಬಾಹ್ಯಚಿಹ್ನೆ ಇವರಲ್ಲಿ ಕಾಣಿಸದು. ಆದರೂ ಹೇಗೆ ತಿಳಿಯಿತು?"

    "ಮನಸ್ಸಿನ ಗುರುತು ಎಲ್ಲಕ್ಕಿಂತ ದೊಡ್ಡದು. ಮನಸ್ಸನ್ನು ಸಂಸ್ಕರಿಸುವುದು, ಅವುಗಳನ್ನು ಒಂದುಗೂಡಿಸುವುದು ಇದೇ ಸಂಘದ ಕೆಲಸ. ಮನಸ್ಸಿನಿಂದಲೇ ಮನುಷ್ಯ ಒಳ್ಳೆಯನಾಗುವನು" ಎಂದು ಡಾಕ್ಟರ್‌ಜಿ ಉತ್ತರಿಸಿದರು.

    ಪ್ರತಿಯೊಂದು ಶಾಖೆಯ ಎಲ್ಲಾ ಸ್ವಯಂಸೇವಕರಿಗೂ ಡಾಕ್ಟರ್‌ಜಿಯವರು ತಮ್ಮವರೇ ಎನಿಸುತ್ತಿತ್ತು. ಡಾಕ್ಟರ್‌ಜಿ ಅವರು ಸಹ ಸ್ವಯಂಸೇವಕರನ್ನು ನೋಡುತ್ತಿದ್ದುದು ಅದೇ ರೀತಿ.

ಪ್ರೇರಕ ಶಕ್ತಿ



    ಯಾರ ಮಾತನ್ನೂ ಕೇಳದ ಹುಡುಗರಿಗೆ ಡಾಕ್ಟರ್‌ಜಿಯವರ ಮಾತೆಂದರೆ ಮೀರಲಾಗದ ಆಣತಿಯಂತೆ. ಆಲಸಿಗಳು ಅವರ ಮಾತಿನಿಂದ ಕ್ರಿಯಾಶೀಲರಾಗುತ್ತಿದ್ದರು. ಸೋಮಾರಿಗಳು ಚುರುಕುಗೊಳ್ಳುತ್ತಿದ್ದರು. ನಾಜೂಕು ಆರೋಗ್ಯದವರು ದೃಢಕಾಯರಾಗುತ್ತಿದ್ದರು. ನೂರಾರು ಯುವಕರಿಗೆ ತಾವು ದೇಶದ ಸಲುವಾಗಿ ಮಾಡಲೇಬೇಕೆಂಬುದು ಮನದಲ್ಲಿ ಬಲಗೊಂಡಿತು. ಹಿಂದು ಸಂಘಟನೆ ಒಂದು ಮಹತ್ವದ ಕಾರ್ಯ. ಅದಕ್ಕಾಗಿ ವೈಯಕ್ತಿಕ ಸುಖ ತ್ಯಜಿಸಲೇಬೇಕು ಎಂಬ ಸಂಕಲ್ಪ ಬೇರೂರಿತು.

    ಶ್ರೀಮಂತ ಕುಲದ ಓರ್ವ ತರುಣ ಕಾನೂನು ಪದವಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ. ತಂದೆ ತುಂಬಾ ಸಂತಸಗೊಂಡಿದ್ದರು. ಆಗಲೇ ಮಗನಿಗಾಗಿ ಒಂದು ಒಳ್ಳೆಯ ನೌಕರಿ ಹಾಗೂ ವರದಕ್ಷಿಣೆ ತರುವ ಹುಡುಗಿಯನ್ನೂ ನೋಡಿಟ್ಟಿದ್ದರು. ಒಂದು ದಿನ ತಮ್ಮ ಮಗನೊಡನೆ "ನಡೆ, ದೊಡ್ಡ ಅಧಿಕಾರಿಯೊಬ್ಬರನ್ನು ನೋಡಬೇಕಾಗಿದೆ" ಎಂದರು.

    "ಯಾಕಾಗಿ?" ಮಗನ ಪ್ರಶ್ನೆ. "ನಾನವರ ಹತ್ತಿರ ಮಾತನಾಡಿದ್ದೇನೆ. ತಮ್ಮ ವಿಭಾಗದಲ್ಲಿ ಒಂದು ಉತ್ತಮ ಕೆಲಸ ಕೊಡುವಂತೆ" ತಂದೆ ಉತ್ತರಿಸಿದರು.

    "ನನಗಾವುದೇ ನೌಕರಿ ಬೇಕಿಲ್ಲ" ಮಗ ತನ್ನ ನಿರ್ಧಾರ ತಿಳಿಸಿದ.

    "ವಕೀಲಿ ಮಾಡುವುದೇ ಆದರೂ ಅವರೊಡನೆ ಸಂಪರ್ಕ ಇರಿಸಿಕೊಳ್ಳುವುದು ಉಚಿತ" - ತಂದೆ ಸಲಹೆ ನೀಡಿದರು.

    "ನಾನು ವಕೀಲಿ ಸಹ ಮಾಡುವವನಲ್ಲ" - ಮಗ ನಿರ್ಧಾರದ ಧ್ವನಿಯಲ್ಲಿ ನುಡಿದ. ತಂದೆ ಬಿರುಸಿನಿಂದ ಕೇಳಿದರು - "ಹೆಣ್ಣಿನ ತಂದೆ ನಿನ್ನ ಕೆಲಸದ ಬಗ್ಗೆ ಕೇಳುತ್ತಾರೆ. ನಾನೇನು ಹೇಳಲಿ?"

    "ನೀವು ಯಾರೊಡನೆ ಭೇಟಿ ಮಾಡಿದರೂ ನನಗೆ ಚಿಂತೆಯೇನಿಲ್ಲ. ಆದರೆ ನಾನು ಮಾತ್ರ ಜೀವನಪರ್ಯಂತ ಸಂಘ ಕಾರ್ಯ ಮಾಡುವವನು ಎಂಬುದು ನಿಮಗೆ ತಿಳಿದಿರಲಿ. ನಾನು ನೌಕರಿ, ವಕೀಲಿ ಏನೂ ಮಾಡಲಾರೆ. ವಿವಾಹವೂ ಬೇಡ. ನಿಮ್ಮ ನಾಲ್ಕು ಮಕ್ಕಳಲ್ಲಿ ಒಬ್ಬನನ್ನು ದೇಶಕ್ಕಾಗಿ ಕೊಟ್ಟಿರುವುದಾಗಿ ತಿಳಿಯಿರಿ. ಡಾಕ್ಟರ್‌ಜಿ ಕಳಿಸಿದಲ್ಲಿಗೆ ಹೋಗಿ ನಾನು ಅಲ್ಲಿ ಸಂಘ ಕಾರ್ಯ ಮಾಡುವೆನು" - ಮಗ ತನ್ನ ಖಚಿತ ನಿರ್ಧಾರ ತಿಲಿಸಿದ.

    ತಂದೆ ಕೋಪದಿಂದ ಕಿಡಿಕಿಡಿಯಾದರು. ತಾಯಿ ಅತ್ತರು. ಅಷ್ಟಾದರೂ ಮಗ ತನ್ನ ನಿರ್ಧಾರ ಬದಲಿಸಲಿಲ್ಲ.

    ಅನೇಕ ಮನೆಗಳಲ್ಲಿ ಇಂಥವೇ ಪ್ರಸಂಗಗಳು. ಉನ್ನತ ಶಿಕ್ಷಣ ಪಡೆದ, ಪದವೀಧರರು, ಒಳ್ಳೆಯ ಕುಟುಂಬದ ಶೀಲವಂತರಾದ ತರುಣರು ತಮ್ಮ ಮನೆ ಮಠಗಳನ್ನು ತೊರೆದು ಸಂಘ ಕಾರ್ಯಕ್ಕಾಗಿ ಡಾಕ್ಟರ್‌ಜಿ ಕಳಿಸಿದಲ್ಲಿಗೆ ಹೋಗತೊಡಗಿದರು. ನೂರಾರು, ಸಾವಿರಾರು ಮೈಲು ದೂರದ ಅಪರಿಚಿತ ಸ್ಥಳಗಳಿಗೆ ಹೋಗಿ ಅಲ್ಲಿ ಸಂಘಶಾಖೆ ಆರಂಭಿಸಿದರು.

    ಹಲವು ಬಾರಿ ಕೋಪೋದ್ರಿಕ್ತರಾದ ತಂದೆ ತಾಯಿಗಳು ಡಾಕ್ಟರ್‌ಜಿಯವರ ಬಳಿ ಹೋಗಿ ಅವರನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದುದು ಉಂಟು. ಡಾಕ್ಟರ್‌ಜಿ ಶಾಂತವಾಗಿಯೇ ಅವರ ಮಾತುಗಳನ್ನೆಲ್ಲ ಕೇಳಿ ಕೊನೆಯಲ್ಲಿ ಅವರಿಗೆ ಸಂಘ ಕಾರ್ಯದ ಮಹತ್ವವನ್ನು ತಿಳಿಯಪಡಿಸುತ್ತಿದ್ದರು. ಅವರೆಂದಿಗೂ ಯಾರನ್ನೂ ಅಪಮಾನ ಮಾಡಿದವರಲ್ಲ.

ಆಯಸ್ಕಾಂತೀಯ ವ್ಯಕ್ತಿತ್ವ



    ನಾಗಪುರ ನಗರದಲ್ಲಿ ಸಂಘ ಶಾಖೆಗಳು ಹಬ್ಬತೊಡಗಿದವು. ಮೊದಲು ಇದ್ದ ಒಂದೇ ಶಾಖೆ ಕ್ರಮೇಣ ಎರಡಾಗಿ, ನಾಲ್ಕಾಗಿ, ಮುಂದೆ ಇಪ್ಪತ್ತರವರೆಗೆ ಹೆಚ್ಚಿದವು. ಡಾಕ್ಟರ್‌ಜಿ ಅವರ ಮನೆಗಂತೂ ತರುಣ ಬಾಲ ಸ್ವಯಂಸೇವಕರಿಗೆಲ್ಲ ನಿತ್ಯ ಯಾತ್ರೆ. ಹಳೆಯ ಸ್ವಯಂಸೇವಕರು ತಮ್ಮ ಜೊತೆಯಲ್ಲಿ ಹೊಸ ಹೊಸಬರನ್ನು ಕರೆತರುತ್ತಿದ್ದುದು ಸರ್ವೇ ಸಾಮಾನ್ಯ. ಬಂದಂತಹ ಪ್ರತಿಯೊಬ್ಬರನ್ನೂ ಗಮನಿಸಿ ಡಾಕ್ಟರ್‌ಜಿ ಅವರ ಪರಿಚಯ ಮಾಡಿಕೊಳ್ಳುತ್ತಿದ್ದರು. ಅವರ ನಿಷ್ಕಪಟ ಅಕ್ಕರೆಯ ಮಾತುಗಳಿಂದ ಪ್ರಭಾವಿತರಾದ ಪ್ರತಿಯೊಬ್ಬನಿಗೂ ತನ್ನ ಬಗ್ಗೆ ಡಾಕ್ಟರ್‌ಜಿಗೆ ವಿಶೇಷ ಆಸೆ ಎನಿಸುತ್ತಿತ್ತು.

    ತಮ್ಮ ಆಯಸ್ಕಾಂತೀಯ ವ್ಯಕ್ತಿತ್ವದಿಂದ ನಾಗಪುರದಲ್ಲಿನ ಹೊಸ ಪೀಳಿಗೆಯ ನೂರಾರು ತರುಣರನ್ನು ಡಾಕ್ಟರ್‌ಜಿ ತಮ್ಮ ಕಡೆಗೆ ಆಕರ್ಷಿಸುತ್ತಿದ್ದರು. ದಿನದಲ್ಲೊಮ್ಮೆ ಅವರ ಮನೆಗೆ ಹೋಗಿ ಅಲ್ಲಿ ಹದಿನೈದು ಇಪ್ಪತ್ತು ನಿಮಿಷಗಳ ಕಾಲ ಇರುವುದನ್ನು ಒಂದು ನಿಯಮ ಮಾಡಿಕೊಂಡತಹರು ನೂರಾರು ಮಂದಿ. ಅದರಲ್ಲಿ ದೊರಕುತ್ತಿದ್ದಂತಹ ಸಮಾಧಾನ, ಆನಂದ ಜಗತ್ತಿನಲ್ಲಿ ಇನ್ನೇನು ಕೊಟ್ಟರೂ ಸಿಗದು ಎನ್ನುವುದು ಅವರಿಗೆಲ್ಲರಿಗೂ ಸಮಾನ ಅನುಭವ, ಪತ್ರಿಕೆಗಳಲ್ಲಿ ಅವರ ಹೆಸರಿಲ್ಲ, ಭಾವಚಿತ್ರವಿಲ್ಲ. ಆದರೂ ಡಾಕ್ಟರ್‌ಜಿ ಸಾವಿರಾರು ತರುಣರಿಗೆ ಪರಿಚಿತರು. ಆಪ್ತರು ಅಷ್ಟೇ ಅಲ್ಲ ತುಂಬ ಅಚ್ಚುಮೆಚ್ಚಿನ ನಾಯಕರು ಸಹ.

    ಒಮ್ಮೆ ನಾಗಪುರದ ಓರ್ವ ಗೌರವಾನ್ವಿತ ಶ್ರೀಮಂತರ ಮನೆಯಲ್ಲೊಂದು ವಿವಾಹ ಸಮಾರಂಭ. ಡಾಕ್ಟರ್‌ಜಿ ಜತೆ ಸಹ ಅವರಿಗೆ ಗಾಢ ಸ್ನೇಹವಿತ್ತು. ವಿವಾಹದ ನಿಮಿತ್ತ ಅವರ ಮನೆಯಲ್ಲಿ ಭಾರೀ ಸೊಗಸಾದ ಚಪ್ಪರ ಹಾಕಲಾಗಿತ್ತು. ಬರುವ ಅತಿಥಿಗಳಿಗಾಗಿ ಅದರೊಳಗೆಲ್ಲ ಮೆತ್ತನೆಯ ಗಾದಿಗಳು ಹಾಸಿಗೆ, ದಿಂಬುಗಳು ಪನ್ನೀರ ಪಾತ್ರೆಗಳು, ಇನ್ನೂ ಅನೇಕ ರೀತಿಯ ಸತ್ಕಾರ ಪರಿಕರಗಳು. ಎಲ್ಲವೂ ಅಚ್ಚುಕಟ್ಟು. ಒಬ್ಬೊಬ್ಬರಾಗಿ ಬರುತ್ತಿದ್ದ ಪ್ರತಿಷ್ಠಿತ ನಾಗರಿಕರು ತಮಗೆ ಯೋಗ್ಯವೆನಿಸುವ ಸ್ಥಾನಗಳಲ್ಲಿ ಆಸೀನರಾಗಿದ್ದರು. ಯಾರೋ ಒಬ್ಬ ಶ್ರೀಮಂತ ಬಂದನೆಂದರೆ ಅವರ ಪರಿಚಿತರೆಲ್ಲ ಅಂತಹವರನ್ನು ಮುತ್ತಿ ಸುತ್ತ ಕುಳಿತುಕೊಳ್ಳುವರು. ಓರ್ವ ಲೇಖಕ ಯಾ ಕವಿ ಬಂದರೆಂದರೆ ಅವರ ಅಭಿಮಾನಿಗಳು, ರಾಜಕೀಯ ಪುಢಾರಿಗಳು, ಪತ್ರಕರ್ತರು. ಹೀಗೆ ಆ ಚಪ್ಪರದಲ್ಲಿ ಸೇರಿದ್ದವರೆಲ್ಲ ಅನೇಕ ವಿಧ ಖ್ಯಾತನಾಮರೇ. ಅಂತಹರೆಲ್ಲರ ಸುತ್ತಲೂ ಅವರ ಗೆಳೆಯರು, ಚೇಲಾಗಳು. ಮಹಾರಾಷ್ಟ್ರದ ಪದ್ಧತಿಯಂತೆ ಅಲ್ಲಲ್ಲಿ ತಟ್ಟೆಗಳಲ್ಲಿ ವೀಳ್ಯ, ಸುಣ್ಣ, ಕಾಚು, ಸುಪಾರಿ ಇತ್ಯಾದಿ. ಅತ್ತರು ಹಚ್ಚುವುದೇನು, ಪನ್ನೀರಿನ ಸೇಚನವೇನು, ಭಾರೀ ವೈಭವಪೂರ್ಣ ಸಮಾರಂಭ. ಬಂದಂತಹರೆಲ್ಲರೂ ತಾಂಬೂಲ ಹಾಕುತ್ತ ಹರಟೆಯಲ್ಲಿ ಮಗ್ನರಾಗಿದ್ದರು.

    ಅಷ್ಟರಲ್ಲೆ ಅಲ್ಲಿಗೆ ಡಾಕ್ಟರ್‌ಜಿ ತಲುಪಿದರು. ತಮಗೆ ತಿಳಿದವರಿಗೆಲ್ಲ ವಂದಿಸುತ್ತ ಒಳಗೆ ಬಂದ ಡಾಕ್ಟರ್‌ಜಿ ಚಪ್ಪರದ ಮೂಲೆಯಲ್ಲೊಂದು ಕಡೆ ಕುಳಿತರು. ಅವರನ್ನು ಕಂಡುದೇ ತಡ, ಚಪ್ಪರದಲ್ಲಿನ ಹೆಚ್ಚಿನ ತರುಣರೆಲ್ಲ ಡಾಕ್ಟರ್‌ಜಿ ಸುತ್ತ ನೆರೆದರು. ಅಲ್ಲಿನವರೆಗೆ ತಮಗೆ ಬೇಕೆನಿಸಿದವರ ಬಳಿ ಸೇರಿ ಅವರೊಂದಿಗೆ ಹರಟುತ್ತಿದ್ದ ಎಲ್ಲರಿಗೂ ಡಾಕ್ಟರ್‌ಜಿ ಅವರನ್ನು ಕಂಡಾಗ ಸಹಜವಾಗಿಯೇ ಮಿಕ್ಕವರೆಲ್ಲರೂ ಮರೆತೇಹೋದರು. ಅವರೊಬ್ಬರೇ ಎಲ್ಲರಿಗೂ ಕೇಂದ್ರವಾದರು. ಸೂರ್ಯನ ಉದಯವಾದಾಗ ಅದುವರೆಗೆ ಹೊಳೆಯುತ್ತಿದ್ದ ನಕ್ಷತ್ರಗಳೆಲ್ಲ ನಿಷ್ಪ್ರಭಗೊಳ್ಳುವಂತೆ ಮೊದಲು ಬಂದ ನಾಯಕರೆಲ್ಲರದೂ ಪಾಡಾಯಿತು.

ಅವರ ವಿನಮ್ರತೆ



    ಸಂಘದ ಕಾರ್ಯದ ಮುಂದೆ ಡಾಕ್ಟರ್‌ಜಿಗೆ ತನ್ನ ಮಾನ ಅಪಮಾನಗಳು ದೊಡ್ಡದೆನಿಸುತ್ತಿರಲಿಲ್ಲ. ಅವರು ದೇಶದಾದ್ಯಂತ ಪ್ರವಾಸ ಮಾಡುತ್ತಿದ್ದರು. ಊರೂರುಗಳಲ್ಲಿ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದರು. ಸಂಘದ ಕಲ್ಪನೆಯನ್ನು ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸುತ್ತಿದ್ದರು. ಆ ದಿನಗಳಲ್ಲಂತೂ ಯಾವನೋ ಸಣ್ಣ ಮುಖಂಡನು ಸಹ ತನ್ನನ್ನು ದೊಡ್ಡವನೆಂದೇ ತಿಳಿಯುತ್ತಿದ್ದ. ತನ್ನ ವಿಚಾರವನ್ನೇ ಆಗ್ರಹಪೂರ್ವಕವಾಗಿ ಪ್ರತಿಪಾದನೆ ಮಾಡುತ್ತಿದ್ದ. ಸ್ವತಃ ತುಂಬಾ ಸ್ವಾರ್ಥಿ, ಕರ್ತೃತ್ವಶೂನ್ಯರಾಗಿದ್ದವರು ಸಹ ಡಾಕ್ಟರ್‌ಜಿಯವರಿಗೆ ಏನೇನೋ ಪ್ರಶ್ನೆ ಕೇಳುತ್ತಿದ್ದರು. ಉಪದೇಶ ನೀಡುತ್ತಿದ್ದರು.

    "ಹಿಂದುಸ್ಥಾನ ಹಿಂದುಗಳದೇ ಹೇಗೆ ಸಾಧ್ಯ?" "ಹಿಂದು ಶಬ್ದ ವೇದ, ಪುರಾಣಗಳಲ್ಲಿ ಇಲ್ಲ. ಆದ್ದರಿಂದ ಆ ಶಬ್ದದ ಕುರಿತೇಕೆ ಆಗ್ರಹ?" "ಹಿಂದು ಸಂಘಟನೆಯೇ, ಅದು ಅಸಂಭವ. ಮೊಲಕ್ಕೆ ಕೋಡು ಮೂಡಬಹುದು. ನಾಯಿಯ ಬಾಲ ನೆಟ್ಟಗಾಗಬಹುದು. ಆದರೆ ಹಿಂದುಗಳು ಮಾತ್ರ ಸಂಘಟಿತರಾಗಲಾರರು. ಈ ಕಾರ್ಯದಲ್ಲಿ ನಿಮ್ಮ ಶಕ್ತಿ ಹಾಕುವುದು ವ್ಯರ್ಥವೇ ಸರಿ" ಇತ್ಯಾದಿ ಇತ್ಯಾದಿ.

    ಅಷ್ಟೇ ಅಲ್ಲ - "ನೀವೇಕೆ ವಾರ್ಷಿಕೋತ್ಸವ ಮಾಡುವುದಿಲ್ಲ?" "ನೀವೇಕೆ ಚಂದಾ ಎತ್ತುವುದಿಲ್ಲ?" "ನಿಮ್ಮ ಸಿದ್ಧಾಂತವೇನೋ ಸರಿ. ಆದರೆ ನಿತ್ಯ ಬರಬೇಕೆನ್ನುವುದು ಕಠಿಣ". "ನಿಮ್ಮ ಲಾಠಿ, ಖಡ್ಗ ಇತ್ಯಾದಿ ಸರಿಯಲ್ಲ" ಹೀಗೆ ಉಪದೇಶಿಸುವವರಿಗೂ ಕೊರತೆಯೇ ಇರಲಿಲ್ಲ. ಯಾರೋ ಒಬ್ಬನಿಗೆ ಸಮತಾ ಒಳ್ಳೆಯದೆನಿಸಿದರೆ ಮತ್ತೊಬ್ಬನಿಗೆ ಅದು ಬಹಳ ಹಾನಿಕಾರಕ ಎನಿಸುತ್ತಿತ್ತು. "ನೀವು ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿರುವಿರಿ" ಎನ್ನುವುದು ಇನ್ನೂ ಕೆಲವರ ಆರೋಪ. "ಏನೂ ಕೆಲಸ ಮಾಡದ ಅಹಿಂಸಕರು ನೀವು" ಎನ್ನುತ್ತಿದ್ದರು ಮತ್ತೂ ಕೆಲವರು. ಕತ್ತಿ ಲಾಠಿಗಳ ಬಗ್ಗ್ಗೆ ತಿರಸ್ಕಾರವಿದ್ದವರು ಸಂಘದಲ್ಲಿ ಬಾಂಬು ಪಿಸ್ತೂಲುಗಳನ್ನು ಬಳಸುವುದಾದಲ್ಲಿ ತಾವೂ ಬರುತ್ತೇವೆ ಎನ್ನುತ್ತಿದ್ದುದೂ ಉಂಟು. ಕೆಲವರು "ಸಂಘದಲ್ಲಿ ನಿಮ್ಮ ಭಾಷಣ ನಾವು ಕೇಳಿದ್ದೇವೆ" ಎನ್ನುತ್ತಿದ್ದುದೂ ಉಂಟು. "ಆದರೆ ನೀವೆಂದೂ ಇಂಗ್ಲೀಷರಿಗಾಗಲೀ ಮುಸಲ್ಮಾನರಿಗಾಗಲಿ ಬಯ್ಯುವುದೇ ಇಲ್ಲ. ನೀವು ಬರೀ ಸಪ್ಪೆ" ಎಂದು ಅಸಮಾಧಾನ ತೋರುತ್ತಿದ್ದರು.

    ಕೆಲವರಿಗೆ ಘೋಷಣೆ ಗೊಂದಲಗಳೇ ಇಷ್ಟ. ಮತ್ತೆ ಕೆಲವರಿಗೆ ಮೆರವಣಿಗೆ ಚಳುವಳಿಯಂತಹ ಸಂಗತಿಗಳೇ ಹೆಚ್ಚು ಸಮಂಜಸ. ಸ್ವಯಂಸೇವಕರು ಪೊರಕೆ ಹಿಡಿದು ಎಲ್ಲೆಡೆ ಸ್ವಚ್ಛ ಮಾಡಬೇಕೆನ್ನುವವರು ಕೆಲವರು. ಆಸ್ಪತ್ರೆ ಆರಂಭಿಸಿ, ಔಷದಿ ಹಂಚಿ, ಹೆಣ ಸುಡುವ ಕೆಲಸ ಮಾಡಿ ಇತ್ಯಾದಿ ಉಪದೇಶಿಸುತ್ತಿದವರೂ ಧಾರಾಳ. ಕೆಲವರಂತೂ ತಂತಮ್ಮ ಬುದ್ಧಿಗನುಗುಣವಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಇತ್ಯಾದಿ ಕಾರ್ಯ ಮಾಡುವಂತೆ ಸಲಹೆ ನೀಡುತ್ತಿದ್ದರು.

    "ಯಾವುದೇ ಕೆಲಸಕ್ಕೆ ಬಾರದ ಸಂಘ ನಿಮ್ಮದು. ಇದು ಎಂದೂ ಬೆಳೆಯಲಾರದು" ಎಂದು ಕೆಲವರೆನ್ನುತ್ತಿದ್ದರು. ತಾವೇನೋ ದೊಡ್ಡವರು ಎಂದುಕೊಳ್ಳುವ ಕೆಲವರು "ಸಂಘದ ಕೆಲಸ ಚೆನ್ನಾಗಿ ನಡೆಯುತ್ತಿದೆ. ಇದೇ ರೀತಿ ನಡೆಯಲಿ" ಎಂದು ಹೇಳುತ್ತಾ ತಮ್ಮ ಗೆಳೆಯರ ಹತ್ತಿರ "ಈ ಸಂಘ ಮೂಲ ಕಲ್ಪನೆ ನನ್ನದೇ. ಕಾಲಕಾಲಕ್ಕೆ ನಾನೇ ಡಾಕ್ಟರ್‌ಜಿಗೆ ಸಲಹೆ ಕೊಡುತ್ತಿದ್ದೇನೆ. ನಾನು ಹೇಳಿದಂತೆಯೇ ಮಾಡುತ್ತಿದ್ದಾರೆ. ಹೀಗಾಗಿ ಯಶಸ್ಸು ಗಳಿಸುತ್ತಿದ್ದಾರೆ" ಎನ್ನುವರು.

    ಡಾಕ್ಟರ್‌ಜಿ ಜನರ ಸಂಪರ್ಕಕ್ಕೆ ಹೋದಾಗಲೆಲ್ಲ ಇಂಥವೇ ಅನೇಕ ಮಾತುಗಳು ಕೇಳಿಬರುತ್ತಿದ್ದವು. ಶಾಂತವಾಗಿಯೇ ಅವರು ಕೇಳುತ್ತಿದ್ದರು. ಆದರೆ ಡಾಕ್ಟರ್‌ಜಿಯವರೊಂದಿಗೆ ಇರುತ್ತಿದ್ದ ಇತರ ಸ್ವಯಂಸೇವಕರಿಗೆ ಇಂತಹ ಮಾತುಗಳನ್ನು ಕೇಳಿದಾಗ ಸಿಟ್ಟು ಉಕ್ಕುತ್ತಿತ್ತು, "ಈ ಮೂರು ಕಾಸಿನ ಜನಗಳಿಗೆ ನಮ್ಮ ಡಾಕ್ಟರ್‌ಜಿಯವರಿಗೆ ಉಪದೇಶ ಕೊಡುವಷ್ಟು ಪೊಗರು ಬಂದಿದೆಯಲ್ಲಾ" ಎಂದು ಸಿಡಿಮಿಡಿಗೊಳ್ಳುತ್ತಿದ್ದರವರು. ಆದರೆ ಡಾಕ್ಟರ್‌ಜಿ ಶಾಂತವಾಗಿ ಎಲ್ಲರ ವಿಚಾರ ಕೇಳುತ್ತಿದ್ದರು. ನಮ್ರವಾಗಿ ಎಲ್ಲರಿಗೂ ಗೌರವ ಕೊಟ್ಟು ಉತ್ತರ ಕೊಡುತ್ತಿದ್ದರು. ಆಗಾಗ ನಗು ನಗುತ್ತಾ ಪ್ರಶ್ನೆಯನ್ನು ಹಾರಿಸುತ್ತಿದ್ದುದೂ ಉಂಟು. ಆದರೆ ಎಂದೂ ವಾದ ವಿವಾದಕ್ಕೆ ಇಳಿಯುತ್ತಿರಲಿಲ್ಲ. ನಂತರ ಸ್ವಯಂಸೇವಕರನ್ನು ಕುರಿತು "ನೋಡಿ ಸಂಘ ಕೇವಲ ನನ್ನದು ಅಥವಾ ನಿಮ್ಮದಷ್ಟೇ ಅಲ್ಲ. ಇದು ಇಡೀ ಸಮಾಜದ್ದು. ಆದ್ದರಿಂದಲೇ ಸಮಾಜದ ನಮ್ಮ ಬಂಧುಗಳಿಗೆ ತಮ್ಮ ವಿಚಾರ ಹೇಳಲು ಪೂರ್ತಿ ಅಧಿಕಾರ ಇದೆ. ನಾವದನ್ನು ಆದರಪೂರಕವಾಗಿಯೇ ಕೇಳಬೇಕು. ಇಂದು ಅವರು ತಮಗಿರುವ ಶಕ್ತಿಯಷ್ಟೇ ವಿಚಾರ ಮಾಡುವರು. ನಾಳೆ ಈ ಕೆಲಸವನ್ನೂ ಅವರು ಮಾಡತೊಡಗುವರು ಎಂಬ ನಂಬಿಕೆಯಿರಿಸಿ, ಅವರೇ ನಮ್ಮೊಂದಿಗೆ ಬರುವರು" ಎನ್ನುತ್ತಿದ್ದರು.

    "ಹಾಗೆ ನೋಡುವುದೇ ಆದಲ್ಲಿ ಸಂಘದ ವಿಚಾರ ಸರಳ ಹಾಗೂ ಪ್ರಾಚೀನ. ನಾನು ಯಾವುದೇ ಹೊಸ ಸಂಗತಿ ಹೇಳುತ್ತಿಲ್ಲ. ನಮ್ಮ ಮಹಾನ್ ತತ್ವಜ್ಞಾನವನ್ನು ಪ್ರತ್ಯಕ್ಷ ವ್ಯವಹಾರದಲ್ಲಿ ತರುವ ಯತ್ನ ಮಾತ್ರ ಇದು. ಸಂಘ ಕಾರ್ಯದ ಆಧಾರ ಎನಿಸುವ ವಿಷಯಗಳಲ್ಲಿ ಯಾವುದೂ ಕಠಿಣ ಅಥವಾ ಜಟಿಲ ಅಲ್ಲಿ. ಆದರೆ ದೊಡ್ಡವರೆನಿಸಿಕೊಂಡವರಿಗೆ ಪ್ರತ್ಯಕ್ಷ ವ್ಯವಹಾರದ ಕಡೆಗೆ ಗಮನ ಕಡಿಮೆ. ಅವರದು ಕೇವಲ ಕಲ್ಪನಾ ವಿಲಾಸ ಮಾತ್ರ. ಆದ್ದರಿಂದ ಅಂತಹವರಿಗೆ ಸಂಘ ಅರ್ಥವಾಗದು. ಇನು ಕೆಲವರಿಗೆ ಬೇರೆಯವರು ಹೇಳುವುದೇ ಸರ್ವಶ್ರೇಷ್ಠ. ರಷ್ಯಾ, ಜರ್ಮನಿ, ಇಂಗ್ಲೆಂಡ್, ಅಮೆರಿಕಾ ಇತ್ಯಾದಿ ದೇಶಗಳ ಪ್ರಭಾವಕ್ಕೊಳಗಾಗಿರುವವರು ಅವರು. ನಮ್ಮ ದೇಶವೂ ಅದೇ ರೀತಿ ಆಗಬೇಕೆನ್ನುವುದು ಅವರ ಇಚ್ಛೆ. ಅವರು ನಮ್ಮದೆಲ್ಲವನೂ ನೋಡುವುದು ಅದೇ ಕನ್ನಡಕದ ಮೂಲಕ.

    ನಮ್ಮ ದೇಶದ ಇತಿಹಾಸ, ಇಲ್ಲನ ಮೂಲಭೂತ ತತ್ವಜ್ಞಾನ ಹಾಗೂ ಅದರ ಇಂದಿನ ಪರಿಸ್ಥಿತಿ ಇವುಗಳ ಸರಿಯಾದ ಕಲ್ಪನೆ ಇರುವಂತಹವರಿಗೆ ಸಂಘವನ್ನು ತಿಳಿಯುವುದು ಕಠಿಣವೇನಲ್ಲ" ಎನ್ನುತ್ತಿದ್ದರು ಡಾಕ್ಟರ್‌ಜಿ.

    ಅವರು ಹೋದಲ್ಲೆಲ್ಲಾ ಹಿರಿಯ ನಾಯಕರಿಂದ ಸಾಮಾನ್ಯ ಕಾರ್ಯಕರ್ತರವರೆಗೆ ಎಲ್ಲರನ್ನೂ ಆಸಕ್ತಿಯಿಂದ ನೋಡಿ ಮಾತನಾಡಿಸುತ್ತಿದ್ದರು. ಅದಕ್ಕಿಂತ ಮಿಗಿಲಾಗಿ ಯುವಕರು, ಬಾಲಕರೊಂದಿಗೆ ಮೈಮರೆತು ಒಂದಾಗುತ್ತಿದ್ದರು. ಅವರದು ಮಗುವಿನಂತಹ ಮನಸ್ಸು. ಹಾಗಾಗಿ ಬಾಲಕರಿಗೆ ಅವರ ಸಹವಾಸ ಬಹಳ ಇಷ್ಟವಾಗುತ್ತಿತ್ತು. ಕೆಲವೊಮ್ಮೆ ಡಾಕ್ಟರ್‌ಜಿ ವಿನೋದವಾಗಿ,

    ಎಳೆಯರ ಸಹವಾಸ ಬಾರಿಸುವುದು ಮೃದಂಗ
    ಮುದುಕರ ಸಹವಾಸ ಶಂಕೆಗಳ ಆತಂಕ
    ಎಂದು ಹಾಡುತ್ತಿದ್ದರು.

ಪ್ರಸನ್ನತೆಯ ಮೂರ್ತಿ



    ಕೆಲ ಕೆಲವು ನಾಯಕರು ಮನೋಭಾವದಲ್ಲಿ ಸ್ವಲ್ಪ ಕಟು. ಕೆಲವರ ಮುಖ ಚಹರೆ ಉಗ್ರ. ಕೆಲವರು ಅಹಂಕಾರದಿಂದ ಬೀಗಿ ಮಿಕ್ಕವರನ್ನು ತುಚ್ಛವಾಗಿ ಕಾಣುವಂತಹರು. ಇನ್ನೂ ಕೆಲವರಂತೂ ನಿತ್ಯ ಉಪದೇಶವೇ ನೀಡುವಂತಹವರು. ಆದರೆ ಡಾಕ್ಟರ್‌ಜಿಯವರ ಸ್ವಭಾವದಲ್ಲಿ ಈ ಯಾವ ಸಂಗತಿಗಳೂ ಇರಲಿಲ್ಲ.

ಅವರ ನಡವಳಿಕೆ ತುಂಬಾ ಸೌಜನ್ಯಶೀಲ. ಸ್ವಭಾವದಲ್ಲಿ ಸೌಮ್ಯ. ಮುಖದಲ್ಲಿ ಸದಾ ಪ್ರಸನ್ನತೆ. ದೇಶವೆಲ್ಲಾ ಸಂಚರಿಸಿದ್ದ ಅವರಿಗೆ ಅನೇಕ ಕಾರ್ಯಕರ್ತರೊಡನೆ ತುಂಬ ಆಪ್ತ ಸಂಬಂಧಗಳು. ಅವರ ನೆನಪು, ಅನುಭವಗಳ ಭಂಡಾರ ಸದಾ ಭರ್ತಿ. ತಮ್ಮ ಅನುಭವಗಳನ್ನು ರೋಚಕವಾಗಿ ವಿವರಿಸುವುದರಲ್ಲಿ ಅವರು ಎತ್ತಿದ ಕೈ. ಒಮ್ಮೆ ಪರಿಚಯವಾದ ವ್ಯಕ್ತಿಯನ್ನಂತೂ ಅವರು ಎಂದೂ ಮರೆಯುತ್ತಿರಲಿಲ್ಲ. ಅವರ ಮಾತಿನಲ್ಲಿ ಔಪಚಾರಿಕಗೆ ಲವಲೇಶವೂ ಇರುತ್ತಿರಲಿಲ್ಲ. ತೀಕ್ಷ್ಣ ಬುದ್ಧಿ, ಹಾಸ್ಯ ಹರಿಸುವ ಪ್ರವೃತ್ತಿ, ಪ್ರತಿ ವಿಷಯದಲ್ಲೂ ಮತ್ತೊಂದು ಮುಖ ನೋಡಬಲ್ಲ ದೃಷ್ಟಿ - ಇವೆಲ್ಲದರಲ್ಲೂ ಹೋಲಿಕೆಯೇ ಇಲ್ಲದಂತಹ ವಿಶೇಷತೆ ಅವರದು.

    ಒಮ್ಮೆ ಸ್ವಯಂಸೇವಕರೊಬ್ಬರ ಮನೆಗೆ ಮದುವೆಗಾಗಿ ಅವರು ಹೋಗಿದ್ದರು. ಅವರುಳಿದ ಕೋಣೆಗೆ ಯುವಕರ ಗುಂಪೇ ಬಂತು. ಒಂದೇ ಸಮನೆ ಮಾತುಕತೆ ನಡೆಯುತ್ತಿದ್ದವು. ಪ್ರತಿ ಹತ್ತು ಹದಿನೈದು ನಿಮಿಷಕ್ಕೊಮ್ಮೆ ಗೊಳ್ ಎಂದು ನಗು ಉಕ್ಕಿ ಹರಿಯುತ್ತಿತ್ತು. ಅದನ್ನು ಕಂಡ ಯಾರೋ ಹಿರಿಯರು "ಈ ಹುಡುಗರೇನು ಮಾಡುತ್ತಿದ್ದಾರೆ? ಅಲ್ಲಿ ಡಾಕ್ಟರ್ ಹೆಡಗೆವಾರ್ ಮಲಗಿರಬಹುದು. ಅವರಿಗೆಷ್ಟು ತೊಂದರೆಯಾಗುವುದೋ?" ಇತ್ಯಾದಿ ಯೋಚಿಸಿದರು. ಆದರೆ ಪ್ರತ್ಯಕ್ಷ ಆ ಕೋಣೆಗೆ ಹೋಗಿ ನೋಡಿದಾಗ ಅವರಿಗೆ ಆಶ್ಚರ್ಯವೋ ಆಶ್ಚರ್ಯ. ಅಲ್ಲಿ ಸ್ವತಃ ಡಾಕ್ಟರ್‌ಜಿ ಅವರೇ ವಿನೋದದ ಕೇಂದ್ರ. ಯುವಕರೆಲ್ಲ ಅವರ ಸುತ್ತಮುತ್ತ ಕುಳಿತಿದ್ದಾರೆ. ಹೊರ ಪ್ರಪಂಚವನ್ನೇ ಮರೆತು ಅವರ ಮಾತುಗಳನ್ನು ಕೇಳುತ್ತಿದ್ದಾರೆ. ಡಾಕ್ಟರ್‌ಜಿ ಯಾವುದೋ ವಿನೋದ ಹೇಳುತ್ತಿದ್ದರು. ಎಲ್ಲರೊಂದಿಗೆ ತಾವೂ ಒಂದಾಗಿ ಮುಕ್ತವಾಗಿ ನಗುತ್ತಿದ್ದರು.

ಒಂದು ಕನಸು


    ಡಾಕ್ಟರ್‌ಜಿ ಹಗಲುರಾತ್ರಿ ಸಂಘ ಕಾರ್ಯದಲ್ಲೆ ಮಗ್ನ. ಸಂಜೆ ಮುಂಜಾನೆ, ಹಗಲುರಾತ್ರಿ, ಮನೆಯೊಳಗೆ, ಹೊರಗೆ, ಎಲ್ಲೆಡೆಯೂ ಅವರು ಮಾಡುತ್ತಿದ್ದುದು ಸಂಘದ ವಿಚಾರ ಮಾತ್ರ. ಅವರು ಕಾಣುತ್ತಿದ್ದ ಕನಸುಗಳೂ ಅಂತಹವೇ.

    ನಾಗಪುರದ ಒಂದು ಶಾಖೆಯಲ್ಲಿನ ಸ್ವಯಂಸೇವಕರ ನಡುವೆ ಯಾವುದೋ ಒಂದು ವಿವಾದ ತಲೆದೋರಿತು. ಎರಡು ಗುಂಪುಗಳಾದವು. ಒಂದು ಗುಂಪು ಶಾಖೆಗೆ ಬರುವುದನ್ನು ನಿಲ್ಲಿಸಿತು. ತಾನೇ ಜಯ ಪಡೆದೆನೆಂದು ಮತ್ತೊಂದು ಗುಂಪು ಭಾವಿಸಿತು. ಡಾಕ್ಟರ್‌ಜಿಗೆ ಇದು ತಿಳಿದು ಬಹಳ ದುಃಖಪಟ್ಟರು. ಎರಡೂ ಗುಂಪಿನ ಎಲ್ಲರನ್ನೂ ವೈಯಕ್ತಿಕವಾಗಿ ಭೇಟಿಯಾದರು. ಪ್ರತಿಯೊಬ್ಬರನ್ನೂ ಸಮಾಧಾನಪಡಿಸಿದರು. ಎಲ್ಲರ ಮನಸ್ಸಿನ ಕೊಳೆ ತೊಳೆದುಬಿಟ್ಟರು. ಅವರೆಲ್ಲ ಮೊದಲಿನಂತೆಯೇ ಶಾಖೆಗೆ ಬರತೊಡಗಿದರು. ಆ ಶಾಖೆ ಮೊದಲಿನಂತೆಯೇ ನಡೆಯತೊಡಗಿತು.

    ಈ ಘಟನೆಯ ನಂತರ ಡಾಕ್ಟರ್‌ಜಿ ನಾಗಪುರದ ಸ್ವಯಂಸೇವಕರನೆಲ್ಲ ಒಂದೆಡೆ ಸೇರಿಸಿದರು. ಅವರನ್ನು ಕುರಿತು "ಪ್ರಿಯ ಸ್ವಯಂಸೇವಕ ಬಂಧುಗಳೇ! ಇತಿಹಾಸದ ಪಾಠ ಕಲಿಯುವುದು ಬುದ್ಧಿವಂತಿಕೆಯ ಲಕ್ಷಣ. ಸ್ವಲ್ಪವೇ ಆದರೂ ಅಹಂಕಾರ ಪಡುವುದು. ಅದನ್ನು ಬೆಳೆಸುವುದು, ವ್ಯಕ್ತಿಗತ ಆಸೆ ಆಕಾಂಕ್ಷೆ ಇರಿಸಿಕೊಳ್ಳುವುದು, ಗುಂಪುಗಾರಿಕೆ, ಪರಸ್ಪರ ಹೊಟ್ಟೆಕಿಚ್ಚು, ಜಗಳ, ಇವೇ ದುರ್ಗುಣಗಳಿಂದ ನಮ್ಮ ದೇಶಕ್ಕೆ ಈ ದುರ್ಗತಿ ಬಂದಿದೆ. ಈ ದುರ್ಗುಣಗಳನ್ನು ದೂರ ಮಾಡಲೆಂದೇ ಸಂಘ ಹುಟ್ಟಿದೆ. ಏನಾದರಾಗಲಿ, ನಾವು ಪರಸ್ಪರ ಕಚ್ಚಾಡೆವು ಎಂದು ನಿಶ್ಚಯ ಮಾಡೋಣ. ಸಣ್ಣ ವಿಷಯಗಳಿಗೆ ಏನೇನೋ ಯೋಚಿಸಿಕೊಂಡು ಅಥವಾ ಯಾರೋ ಬೇರೆ ಶೈಲಿಯಲ್ಲಿ ಕೆಲಸ ಮಾಡಿದನೆಂದು ಕಾರಣಕ್ಕಾಗಿ ನಾವೇಕೆ ಸಂಘಕ್ಕೆ ಬರುವುದು ನಿಲ್ಲಿಸಬೇಕು? ಇದು ಸರಿಯೇ? ಸಂಘ ಯಾರೊಬ್ಬರ ಆಸ್ತಿಯಲ್ಲ. ಸಂಘ ಕೇವಲ ನನ್ನದೂ ಸಹ ಅಲ್ಲ. ಇದು ನಮ್ಮೆಲ್ಲರದು. ಸಂಘ ಇಡೀ ಸಮಾಜದ್ದು. ಇಡೀ ಭಾರತ ದೇಶದ್ದು. ನಾವು ಸಂಘವನ್ನು ಹೇಗೆ ಬಿಡಬಲ್ಲೆವು?" ಎಂದು ನುಡಿದರು.

    "ಕಳೆದ ವಾರದ ಪರಸ್ಪರ ಜಗಳ ಕೇಳಿ ನಾನು ನೊಂದೆ. ರಾತ್ರಿಯಿಡೀ ಅದೇ ವಿಚಾರ ಮಾಡುತ್ತಿದ್ದೆ. ಅದೇ ಯೋಚನೆಯಲ್ಲಿ ನಾನೊಂದು ಕನಸು ಕಂಡೆ. ಅದರಲ್ಲಿ ನಾನು ಬಹು ಹಿಂದಿನ ಕಾಲಕ್ಕೆ ಹೋಗಿದ್ದೆ. ನಾವೆಲ್ಲ ಒಂದು ಕೋಟೆಯಲ್ಲಿದ್ದೆವು. ಯುದ್ಧದ ಸಿದ್ಧತೆ ಆಗುತ್ತಿತ್ತು. ಒಮ್ಮೆಲೇ ಶತ್ರುಗಳ ಆಕ್ರಮಣ ಆಯಿತು. ತೋಪು ಸಿಡಿಯಿತು. ಬಾಗಿಲು ಮುರಿಯಿತು. ಬಾಗಿಲಿನ ಕಲ್ಲುಗಳು ಒಳಗೆ ಬಿದ್ದವು. ನಾವೆಲ್ಲ ಕೂಡಿದೆವು. ರಾತ್ರಿಯಿಡೀ ಕಷ್ಟಪಟ್ಟು ಆ ಕಿಂಡಿ ಮುಚ್ಚಿದೆವು. ಆಗ ನಮ್ಮ ಸೇನಾಪತಿ ಹೇಳಿದ. "ನಮಗೆ ಹೊರಗಿನ ಆಕ್ರಮಕರ ಭಯ ಇಲ್ಲ. ಗೋಡೆ ಒಳಗೆ ಬಿದ್ದರೆ ಚಿಂತಿಲ್ಲ. ಗೋಡೆ ಹೊರಗಡೆ ಮಾತ್ರ ಬೀಳಬಾರದು. ಕಲ್ಲು ಇಟ್ಟಿಗೆ ಹೊರಗೆ ಬೀಳಬಾರದೆನ್ನುವುದೇ ನಮ್ಮ ಅಪೇಕ್ಷೆ."

    "ನಾನು ಈ ಮಾತು ಕೇಳಿಸಿಕೊಂಡೆ. ಆಗಲೇ ಎಚ್ಚರವಾಯಿತು. ಈ ಕನಸು ಸ್ವಯಂಸೇವಕರಿಗೊಂದು ಮಹತ್ವದ ಸಂದೇಶ ನೀಡಿದೆ. ಹೊರಗಿನ ಎಂಥದೇ ಆಕ್ರಮಣಗಳಿಂದ ಸಂಘಕ್ಕೆ ಯಾವುದೇ ಹಾನಿಯಾಗದು. ಬದಲಾಗಿ ಲಾಭವೇ ಆದೀತು. ಆದರೆ ನಮ್ಮ ಯಾವನೇ ಸ್ವಯಂಸೇವಕ ಸಂಘವನ್ನು ಮಾತ್ರ ಬಿಡದಿರಲಿ. ಗೋಡೆಯ ಇಟ್ಟಿಗೆ ಹೊರಗೇ ಬೀಳದಿರಲು".

    ಡಾಕ್ಟರ್‌ಜಿ ಆಡಿದ ಈ ಮಾತುಗಳು ಸ್ವಯಂಸೇವಕರಿಗೂ ಕಣ್ಣು ತೆರೆಸಿದವು.